ಪದ್ಯ ೧೦೭: ಸುದೇಷ್ಣೆಯು ಸೈರಂಧ್ರಿಗೆ ಏನು ಹೇಳಿದಳು?

ಅಳಲು ಕೈಮಿಗಲಾ ವಿರಾಟನ
ಲಲನೆ ಸೈರಂಧ್ರಿಯನು ಕರೆಸಿದ
ಳೆಲೆ ಮಹಾತುಮೆ ತಾಯೆ ನಿಮಗಂಜುವೆವು ಶರಣೆನುತ
ಹೊಳಲೊಳಿದ್ದರೆ ಭೀತಿ ಘನ ನೀ
ವೊಲಿದ ಠಾವಿಗೆ ಬಿಜಯ ಮಾಡುವು
ದುಳುಹ ಬೇಹುದು ತಮ್ಮನೆನಲಿಂತೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೧೦೭ ಪದ್ಯ)

ತಾತ್ಪರ್ಯ:
ಅರಮನೆಯಲ್ಲಿ ದುಃಖವು ಹೆಚ್ಚಾಗುತ್ತಿರಲು, ಸುದೇಷ್ಣೆಯು ಸೈರಂಧ್ರಿಯನ್ನು ಕರೆಸಿ, ಎಲೆ ತಾಯೆ ನೀನು ಮಹಾತ್ಮೆ, ನಿನಗೆ ನಾವು ಹೆದರುತ್ತೇವೆ, ಇದೋ ನಮ್ಮ ನಮಸ್ಕಾರ, ಈ ಪಣ್ಣಣದಲ್ಲಿದ್ದರೆ ಭೀತಿ ಹೆಚ್ಚು, ನಿನಗೆ ಬೇಕಾದ ಜಾಗಕ್ಕೆ ದಯಮಾಡಿಸು, ನಮ್ಮನ್ನುಳಿಸು ಎಂದು ಹೇಳಲು ದ್ರೌಪದಿಯು ಹೀಗೆಂದಳು…

ಅರ್ಥ:
ಅಳು: ದುಃಖಿಸು, ಗೋಳಿದು; ಕೈಮಿಗಲು: ಹೆಚ್ಚಾಗು, ಕೈಮೀರು; ಲಲನೆ: ಹೆಣ್ಣು; ಕರೆಸು: ಬರೆಮಾದು; ಮಹಾತುಮೆ: ಮಹಾತ್ಮೆ, ಶ್ರೇಷ್ಠ; ತಾಯೆ: ಮಾತೆ; ಅಂಜು: ಹೆದರು; ಶರಣು: ಆಶ್ರಯ; ಹೊಳಲು: ಪ್ರಕಾಶ, ಮರುದನಿ; ಭೀತಿ: ಭಯ; ಘನ: ಶ್ರೇಷ್ಠ; ಒಲಿ: ಒಪ್ಪು, ಸಮ್ಮತಿಸು, ಬಯಸು; ಠಾವು: ಜಾಗ; ಬಿಜಯ: ತೆರಳುವಿಕೆ; ಉಳುಹು: ಕಾಪಾಡು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ)

ಪದವಿಂಗಡಣೆ:
ಅಳಲು+ ಕೈಮಿಗಲ್+ಆ+ ವಿರಾಟನ
ಲಲನೆ+ ಸೈರಂಧ್ರಿಯನು +ಕರೆಸಿದಳ್
ಎಲೆ +ಮಹಾತುಮೆ+ ತಾಯೆ+ ನಿಮಗ್+ಅಂಜುವೆವು +ಶರಣೆನುತ
ಹೊಳಲೊಳ್+ಇದ್ದರೆ +ಭೀತಿ +ಘನ+ ನೀ
ವೊಲಿದ+ ಠಾವಿಗೆ+ ಬಿಜಯ+ ಮಾಡುವುದ್
ಉಳುಹ +ಬೇಹುದು +ತಮ್ಮನ್+ಎನಲ್+ಇಂತೆಂದಳ್+ಇಂದುಮುಖಿ

ಅಚ್ಚರಿ:
(೧) ಸೈರಂಧ್ರಿಯನ್ನು ವಿರಾಟನ ಲಲನೆ ಎಂದು ಕರೆದಿರುವುದು
(೨) ದ್ರೌಪದಿಯನ್ನು ಕರೆದ ಪರಿ – ಮಹಾತುಮೆ, ತಾಯೆ, ಇಂದುಮುಖಿ

ಪದ್ಯ ೧೦೬: ವಿರಾಟನು ಯಾವ ಆಜ್ಞೆಯನ್ನು ಮಾಡಿದನು?

ಊರೊಳಗೆ ಗುಜುಗುಜಿಸಿ ವಾರ್ತಾ
ಭಾರ ಮಸಗಿತು ನೆರೆದ ನೆರವಿಯೊ
ಳಾರ ಬಾಯ್ಗಳೊಳಾದೊಡೆಯು ಜಪವಾಯ್ತು ಜನಜನಿತ
ಭೂರಿ ಚಿಂತಾತುರ ವಿರಾಟನು
ಮಾರಿಯೋ ಸೈರಂಧ್ರಿಯೋ ಈ
ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ (ವಿರಾಟ ಪರ್ವ, ೩ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ಕೀಚಕ ವಧೆಯ ವೃತ್ತಾಂತದ ಸುದ್ದಿಯ ಪಿಸುಮಾತು ಊರನ್ನು ತುಂಬಿತು, ಯಾರ ಬಾಯಲ್ಲಿ ನೋಡಲಿ ಈ ವಾರ್ತೆಯ ಜಪ, ಚಿಮ್ತಾಕ್ರಾಂತನಾದ ವಿರಾಟನು, ಈ ಹೆಂಗಸು ಇಲ್ಲಿರುವುದು ಬೇಡ ಎಂದು ಸುದೇಷ್ಣೆಗೆ ಆಜ್ಞೆ ಮಾಡಿದನು.

ಅರ್ಥ:
ಊರು: ಪುರ; ಗುಜುಗುಜಿಸು: ಶಬ್ದಮಾಡು; ಗುಜುಗುಜು: ಬಿಸುಗುನುಡಿ; ವಾರ್ತೆ: ವಿಷಯ; ಮಸಗು: ಹರಡು; ಕೆರಳು; ನೆರೆ: ಗುಂಪು; ಜಪ: ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು; ಜನಜನಿತ: ಜನರಲ್ಲಿ ಹಬ್ಬಿರುವ ವಿಷಯ; ಭೂರಿ: ಹೆಚ್ಚು, ಅಧಿಕ; ಚಿಂತೆ: ಯೋಚನೆ; ಆತುರ: ಅವಸರ; ಮಾರಿ: ಕ್ಷುದ್ರ ದೇವತೆ; ನಾರಿ: ಹೆಣ್ಣು; ಸತಿ: ಹೆಂಡತಿ; ನೇಮಿಸು: ಆದೇಶ;

ಪದವಿಂಗಡಣೆ:
ಊರೊಳಗೆ+ ಗುಜುಗುಜಿಸಿ+ ವಾರ್ತಾ
ಭಾರ +ಮಸಗಿತು +ನೆರೆದ +ನೆರವಿಯೊಳ್
ಆರ +ಬಾಯ್ಗಳೊಳ್+ಆದೊಡೆಯು +ಜಪವಾಯ್ತು +ಜನಜನಿತ
ಭೂರಿ +ಚಿಂತ+ಆತುರ+ ವಿರಾಟನು
ಮಾರಿಯೋ +ಸೈರಂಧ್ರಿಯೋ +ಈ
ನಾರಿಯಿರಬೇಡೆಂದು +ತನ್ನಯ +ಸತಿಗೆ+ ನೇಮಿಸಿದ

ಅಚ್ಚರಿ:
(೧) ಗುಜುಗುಜು, ನೆರೆದ ನೆರವಿ, ಜನಜನಿತ – ಪದಗಳ ಬಳಕೆ

ಪದ್ಯ ೧೦೫: ದ್ರೌಪದಿಯು ಭೀಮನನ್ನು ಹೇಗೆ ಹೊಗಳಿದಳು?

ಮುಗುಳು ನಗೆಯಲಿ ಕಣ್ಣ ಕಡೆಯಲಿ
ವಿಗಡ ಭೀಮನ ನೋಡಿ ಕೈಗಳ
ಮುಗಿದೆವಾವ್ ಗಂಧರ್ವಪತಿಗೆ ನಮೋನಮೋಯೆನುತ
ಹೊಗರಿಡುವ ಹರುಷದಲಿ ರೋಮಾ
ಳಿಗಳ ಗುಡಿಯಲಿ ತನ್ನ ನಿಲಯಕೆ
ಮುಗುದೆ ಬಂದಳು ಸೂರ್ಯನಡರಿದನುದಯಪರ್ವತವ (ವಿರಾಟ ಪರ್ವ, ೩ ಸಂಧಿ, ೧೦೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಮುಗುಳ್ನಗುತ್ತಾ ಕಡೆಗಣ್ಣಿನ ನೋಟದಿಂದ ಭೀಮನನ್ನು ನೋಡುತ್ತಾ ಗಂಧರ್ವರೊಡೆಯನಿಗೆ ನಾವು ಕೈಮುಗಿದೆವು. ನಮೋ ನಮೋ ಎಂದಳು. ಅವಳ ಹರ್ಷ ಮೇರೆ ಮೀರಿತ್ತು, ರೋಮಾಂಚನಗೊಂಡಿದ್ದಳು, ಅವಳು ತನ್ನ ಮನೆಗೆ ಬಂದಳು, ಸ್ವಲ್ಪ ಹೊತ್ತಿನಲ್ಲೇ ಸೂರ್ಯೋದಯವಾಯಿತು.

ಅರ್ಥ:
ಮುಗುಳುನಗೆ: ಮಂದಸ್ಮಿತೆ; ಕಣ್ಣು: ನಯನ; ಕಡೆ: ತುದಿ; ವಿಗಡ: ಶೌರ್ಯ, ಪರಾಕ್ರಮ; ನೋಡು: ವೀಕ್ಷಿಸು; ಗಂಧರ್ವ: ಖಚರ, ದೇವತೆಗಳ ಒಂದು ವರ್ಗ; ಕೈಮುಗಿ: ನಮಸ್ಕರಿಸು; ಪತಿ: ಒಡೆಯ; ಹೊಗರು: ಕಾಂತಿ, ಪ್ರಕಾಶ; ಹರುಷ: ಸಂತಸ; ರೋಮ: ಕೂದಲು; ಗುಡಿ: ಕುಟೀರ, ಮನೆ; ನಿಳಯ: ಮನೆ; ಮುಗುದೆ: ಕಪಟವರಿಯದವಳು, ಮುಗ್ಧೆ; ಬಂದಳು: ಆಗಮಿಸು; ಸೂರ್ಯ: ರವಿ; ಅಡರು: ಮೇಲಕ್ಕೆ ಹತ್ತು; ಉದಯ: ಹುಟ್ಟು; ಪರ್ವತ: ಬೆಟ್ಟ;

ಪದವಿಂಗಡಣೆ:
ಮುಗುಳುನಗೆಯಲಿ +ಕಣ್ಣ+ ಕಡೆಯಲಿ
ವಿಗಡ+ ಭೀಮನ +ನೋಡಿ +ಕೈಗಳ
ಮುಗಿದೆವಾವ್ +ಗಂಧರ್ವಪತಿಗೆ +ನಮೋ+ನಮೋ+ಎನುತ
ಹೊಗರಿಡುವ+ ಹರುಷದಲಿ+ ರೋಮಾ
ಳಿಗಳ+ ಗುಡಿಯಲಿ +ತನ್ನ +ನಿಲಯಕೆ
ಮುಗುದೆ +ಬಂದಳು +ಸೂರ್ಯನ್+ಅಡರಿದನ್+ಉದಯ+ಪರ್ವತವ

ಅಚ್ಚರಿ:
(೧) ಸೂರ್ಯೋದಯವನ್ನು ಹೇಳುವ ಪರಿ – ಸೂರ್ಯನಡರಿದನುದಯಪರ್ವತವ

ಪದ್ಯ ೧೦೪: ಜನರು ಯಾವ ರೀತಿ ಮಾತನಾಡುತ್ತಿದ್ದರು?

ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ (ವಿರಾಟ ಪರ್ವ, ೩ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಅವಿವೇಕಿಯಾದ ಕೀಚಕನು ಇವಳಿಗಾಗಿ ಸತ್ತ ಎಂದು ಕೆಲವರೆಂದರು. ನಮಗೇಕಿದ್ದೀತು ಇದರ ಚಿಂತೆ ಶಿವ ಶಿವಾ ಎಂದು ಕೆಲವರೆಂದರು. ಕುತೂಹಲದಿಂದ ಜನರು ಬೀದಿಯ ಇಕ್ಕೆಲದಲ್ಲೂ ನಿಂತು ನೋಡುತ್ತಿರಲು ದ್ರೌಪದಿಯು ನಿಧಾನವಾಗಿ ನಡೆಯುತ್ತಾ ಬಂದು ಬಾಣಸಿನ ಮನೆಯ ಬಾಗಿಲಲ್ಲಿ ಲೋಕೈಕವೀರನಾದ ಭೀಮನನ್ನು ನೋಡಿದಳು.

ಅರ್ಥ:
ಅಳಿ: ನಾಶ, ಸಾವು; ಅಕಟ: ಅಯ್ಯೋ; ಅವಿವೇಕಿ: ವಿವೇಚನೆ ಇಲ್ಲದೆ; ಕೆಲಬರು: ಸ್ವಲ್ಪ ಜನ; ಚಿಂತೆ: ಕಳವಳ, ಯೋಚನೆ; ನೂಕು: ತಳ್ಳು; ಕವಿದು: ಆವರಿಸು; ಮಂದಿ: ಜನ; ಮಧ್ಯ: ನಡುವೆ; ಮೆಲ್ಲನೆ: ನಿಧಾನ; ಬರುತ: ಆಗಮನ; ಲೋಕ: ಜಗತ್ತು; ವೀರ: ಶೂರ; ಬಾಣಸಿಗ: ಅಡುಗೆ; ಬಾಗಿಲು: ಕದನ;

ಪದವಿಂಗಡಣೆ:
ಈಕೆಗೋಸುಗವ್+ಅಳಿದನ್+ಅಕಟ+ಅವಿ
ವೇಕಿ +ಕೀಚಕನೆಂದು+ ಕೆಲಬರ್
ಇದೇಕೆ +ನಮಗೀ +ಚಿಂತೆ +ಶಿವ +ಶಿವಯೆಂದು +ಕೆಲಕೆಲರು
ನೂಕಿ +ಕವಿದುದು +ಮಂದಿ +ಮಧ್ಯದೊಳ್
ಈಕೆ +ಮೆಲ್ಲನೆ +ಬರುತಲಾ +ಲೋ
ಕೈಕ +ವೀರನ +ಕಂಡಳಾ +ಬಾಣಸಿನ +ಬಾಗಿಲಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಲೋಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ

ಪದ್ಯ ೧೦೩: ಪುರಜನರು ದ್ರೌಪದಿಯನ್ನು ಹೇಗೆ ಕಂಡರು?

ಸುಳಿಯಲಮ್ಮದು ಪೌರಜನವಿವ
ರಳಿವ ವಚನಿಸಲಮ್ಮದೀಕೆಯ
ನಲುಕಲಮ್ಮದು ನೋಡಲಮ್ಮದು ಮಂದಿ ಗುಜುಗುಜಿಸಿ
ನಳಿನಮುಖಿ ನಸುನಗುತ ತಿಳಿಗೊಳ
ದೊಳಗೆ ಹೊಕ್ಕಳು ಮಿಂದು ಬೀದಿಗ
ಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದಖಿಳಜನ (ವಿರಾಟ ಪರ್ವ, ೩ ಸಂಧಿ, ೧೦೩ ಪದ್ಯ)

ತಾತ್ಪರ್ಯ:
ಊರ ಜನರು ಬೀದಿಗಳೊಳಗೆ ತಿರುಗಾಡುವುದನ್ನೇ ಬಿಟ್ಟರು, ಕೀಚಕರ ಮರಣದ ವಾರ್ತೆಯನ್ನು ಯಾರೂ ಬಾಯಿಬಿಟ್ಟು ಆಡಲೂ ಇಲ್ಲ. ಈಕೆಯನ್ನು ಮಾತಾಡಿಸಲೂ ಇಲ್ಲ, ನೋಡಲೂ ಬಯಸಲಿಲ್ಲ, ಜನರು ಪಿಸುಮಾತಿನಲ್ಲಿ ಮಾತನಾಡುತ್ತಿದ್ದರು. ದ್ರೌಪದಿಯು ತಿಳಿಗೊಳದಲ್ಲಿ ಸ್ನಾನಮಾಡಿ ಊರಿನ ಬೀದಿಗಳಲ್ಲಿ ಬರುತ್ತಿರಲು ಅವಳನ್ನು ಕಂಡ ಜನರು ಆಕೆಗೆ ಕೈಮುಗಿದರು.

ಅರ್ಥ:
ಸುಳಿ: ಗುಂಡಾಗಿ ಸುತ್ತು; ಪೌರಜನ: ಊರಿನ ಜನರು; ಅಳಿ: ಸಾವು; ವಚನ: ಮಾತು; ಅಲುಕು: ಅಲ್ಲಾಡಿಸು; ನೋಡು: ವೀಕ್ಷಿಸು; ಮಂದಿ: ಜನ; ಗುಜುಗುಜಿಸು:ಶಬ್ದಮಾಡು; ನಳಿನಮುಖಿ: ಕಮಲದಂತ ಮುಖವುಳ್ಳವಳು; ನಸುನಗು: ಹರ್ಷಿಸು; ತಿಳಿಗೊಳ: ಸ್ವಚ್ಛವಾದ ಕೊಳ; ಮಿಂದು: ಸ್ನಾನ ಮಾಡು; ಬೀದಿ: ಮಾರ್ಗ; ಬರುತ: ಆಗಮನ; ಕಂಡು: ನೋಡು; ಕೈಮುಗಿ: ನಮಸ್ಕರಿಸು; ಅಖಿಳ: ಎಲ್ಲಾ; ಜನ: ಮಂದಿ; ಅಮ್ಮು: ಶಕ್ತನಾಗು, ಪ್ರತಿಭಟಿಸು;

ಪದವಿಂಗಡಣೆ:
ಸುಳಿಯಲ್+ಅಮ್ಮದು+ ಪೌರಜನವ್+ಇವರ್
ಅಳಿವ +ವಚನಿಸಲ್+ಅಮ್ಮದ್+ಈಕೆಯನ್
ಅಲುಕಲ್+ಅಮ್ಮದು +ನೋಡಲ್+ಅಮ್ಮದು +ಮಂದಿ +ಗುಜುಗುಜಿಸಿ
ನಳಿನಮುಖಿ +ನಸುನಗುತ +ತಿಳಿ+ಕೊಳ
ದೊಳಗೆ +ಹೊಕ್ಕಳು +ಮಿಂದು +ಬೀದಿಗ
ಳೊಳಗೆ+ ಬರುತಿರೆ+ ಕಂಡು +ಕೈಗಳ+ ಮುಗಿದುದ್+ಅಖಿಳ+ಜನ

ಅಚ್ಚರಿ:
(೧) ತಿಳಿಕೊಳ – ತಿಳಿಯಾದ ಮನಸ್ಸನ್ನು ಸೂಚಿಸುವ ಪದ

ಪದ್ಯ ೧೦೨: ಕೀಚಕನ ತಮ್ಮಂದಿರ ಹೇಗೆ ನಾಶವಾದರು?

ತಿರುಹಿದನು ಹೆಮ್ಮರನನವದಿರ
ನರೆದು ನಿಟ್ಟೊರೆಸಿದನು ದೆಸೆದೆಸೆ
ಗೊರಲಿ ಚಿಮ್ಮುವ ಚಪಲರನು ಬೆಂಬತ್ತಿ ಬರಿಕೈದು
ಕುರಿದರಿಯ ಮಾಡಿದನು ನೂರೈ
ವರನು ಕೊಂದನು ಮರನ ಹಾಯಿಕಿ
ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸಿನ ಮನೆಯ (ವಿರಾಟ ಪರ್ವ, ೩ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಭೀಮನು ಆ ಭಾರಿಯ ಹೆಮ್ಮರವನ್ನು ಕೈಯಲ್ಲಿ ತಿರುಗಿಸುತ್ತಾ ದಿಕ್ಕು ದಿಕ್ಕಿಗೆ ಹಾರಿಹೋಗುತ್ತಿದ್ದ ಕೀಚಕನ ಸಹೋದರರನ್ನು ಸಾಲಾಗಿ ಕುರಿಗಳನ್ನು ಕೊಲ್ಲುವಂತೆ ನೂರೈವತ್ತು ಮಂದಿಯನ್ನು ಕೊಂದು ಯಾರಿಗೂ ತಿಳಿಯದಂತೆ ಮೆಲ್ಲನೆ ಬಂದು ಅಡುಗೆಯ ಮನೆಯನ್ನು ಸೇರಿದನು.

ಅರ್ಥ:
ತಿರುಹು: ವೃತ್ತಾಕಾರವಾಗಿ ಚಲಿಸು; ಹೆಮ್ಮರ: ದೊಡ್ಡ ಮರ; ಅವದಿರು: ಅವರ; ಅರೆ: ಪುಡಿ ಮಾಡು; ಒರಸು: ನಾಶಮಾಡು; ನಿಟ್ಟೊರೆಸು: ಒಟ್ಟಾಗಿ ನಾಶಮಾಡು; ದೆಸೆ: ದಿಕ್ಕು; ಒರಲು: ಅರಚು; ಚಿಮ್ಮು: ಹಾರಿಸು; ಚಪಲ: ಚಂಚಲ ಸ್ವಭಾವದವನು; ಬೆಂಬತ್ತಿ: ಬೆನ್ನುಹತ್ತು, ಹಿಂಬಾಲಿಸು; ಬರಿಕೈ: ನಾಶಮಾಡು; ಕುರಿ: ಮೇಷ; ಕೊಲ್ಲು: ನಾಶಮಾಡು, ಸಾಯಿಸು; ಹಾಯಿಕಿ: ಹಾಕು; ಮರಳಿ: ಹಿಂದಿರುಗು; ಮಿಣ್ಣನೆ: ಮೆಲ್ಲಗೆ; ಬಂದು: ಆಗಮಿಸು; ಹೊಕ್ಕು: ಸೇರು; ಬಾಣಸಿನ: ಅಡಿಗೆಯ; ಮನೆ: ಆಲಯ;

ಪದವಿಂಗಡಣೆ:
ತಿರುಹಿದನು+ ಹೆಮ್ಮರನನ್+ಅವದಿರನ್
ಅರೆದು +ನಿಟ್ಟೊರೆಸಿದನು+ ದೆಸೆದೆಸೆಗ್
ಒರಲಿ +ಚಿಮ್ಮುವ +ಚಪಲರನು+ ಬೆಂಬತ್ತಿ +ಬರಿಕೈದು
ಕುರಿದರಿಯ+ ಮಾಡಿದನು+ ನೂರೈ
ವರನು +ಕೊಂದನು +ಮರನ +ಹಾಯಿಕಿ
ಮರಳಿ +ಮಿಣ್ಣನೆ +ಬಂದು+ ಹೊಕ್ಕನು +ಬಾಣಸಿನ +ಮನೆಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕುರಿದರಿಯ ಮಾಡಿದನು
(೨) ಭೀಮನು ಕೊಂದ ಜನರ ಲೆಕ್ಕ – ನೂರೈವರನು ಕೊಂದನು ಮರನ ಹಾಯಿಕಿ