ಪದ್ಯ ೮೫: ಭೀಮನು ಕೀಚಕನಿಗೆ ಏನು ಹೇಳಿದನು?

ಎಲವೊ ಕೀಚಕ ನಿನ್ನ ಹೋಲುವ
ಚೆಲುವರಿಲ್ಲಂತಿರಲಿ ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು
ಇಳೆಯೊಳೆನಗೆಣೆಯಿಲ್ಲ ನಿನಗಾ
ನೊಲಿದು ಬಂದೆನು ತನ್ನ ಪರಿಯನು
ಬಳಿಕ ನೋಡಾ ಬೇಗ ತೋರುವೆನೆಂದನಾ ಭೀಮ (ವಿರಾಟ ಪರ್ವ, ೩ ಸಂಧಿ, ೮೫ ಪದ್ಯ)

ತಾತ್ಪರ್ಯ:
ಕತ್ತಲಲ್ಲಿ ಮಂಚದ ಮೇಲೆ ಮಲಗಿದ್ದ ಭೀಮನು, ಕೀಚಕ, ನಿನ್ನನ್ನು ಹೋಲುವ ಚೆಲುವರಿಲ್ಲ, ಅದು ಹಾಗಿರಲಿ, ನಾನು ಅಷ್ಟೇ ಈ ಲೋಕದ ಹೆಂಗಸರ ರೀತಿಯು ನನ್ನದಲ್ಲ, ನನ್ನ ರೂಪವೇ ಬೇರೆ. ಈ ಭೂಮಿಯಲ್ಲಿ ನನಗೆ ಸರಿಸಮರಿಲ್ಲ. ಅಂತಹ ನಾನು ನಿನಗೆ ಒಲಿದು ಬಂದಿದ್ದೇನೆ, ನನ್ನ ರೀತಿಯನ್ನು ಇನ್ನು ಮೇಲೆ ನೋಡುವೆಯಂತೆ, ಬೇಗ ತೋರಿಸುತ್ತೇನೆ ಎಂದು ಕೀಚಕನಿಗೆ ಭೀಮನು ಹೇಳಿದನು.

ಅರ್ಥ:
ಹೋಲು: ಎಣೆಯಾಗು, ಸದೃಶವಾಗು; ಚೆಲುವು: ಸುಂದರ; ಲೋಕ: ಜಗತ್ತು; ಲಲನೆ: ಹೆಣ್ಣು; ಪರಿ: ರೀತಿ, ಕ್ರಮ; ರೂಪು: ಆಕಾರ; ಬೇರೆ: ಅನ್ಯ; ಇಳೆ: ಲೋಕ; ಎಣೆ: ಸಮ, ಸಾಟಿ; ಒಲಿ: ಬಯಸು, ಅಪೇಕ್ಷಿಸು; ಬಂದು: ಆಗಮಿಸು; ಪರಿ: ರೀತಿ; ಬಳಿಕ: ನಂತರ; ತೋರು: ಪ್ರದರ್ಶಿಸು;

ಪದವಿಂಗಡಣೆ:
ಎಲವೊ +ಕೀಚಕ +ನಿನ್ನ +ಹೋಲುವ
ಚೆಲುವರ್+ಇಲ್ಲಂತಿರಲಿ +ಲೋಕದ
ಲಲನೆಯರ +ಪರಿಯಲ್ಲ+ ತನ್ನಯ +ರೂಪು +ಬೇರೊಂದು
ಇಳೆಯೊಳ್+ಎನಗ್+ಎಣೆಯಿಲ್ಲ +ನಿನಗ್
ಆನ್+ಒಲಿದು +ಬಂದೆನು +ತನ್ನ +ಪರಿಯನು
ಬಳಿಕ +ನೋಡಾ +ಬೇಗ +ತೋರುವೆನ್+ಎಂದನಾ +ಭೀಮ

ಅಚ್ಚರಿ:
(೧) ಸೈರಂಧ್ರಿ ತನ್ನ ರೂಪದ ಬಗ್ಗೆ ಹೇಳುವ ಪರಿ – ಇಳೆಯೊಳೆನಗೆಣೆಯಿಲ್ಲ; ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು

ಪದ್ಯ ೮೪: ಕೀಚಕನು ತನ್ನ ಸೌಂದರ್ಯದ ಬಗ್ಗೆ ಏನು ಹೇಳಿದ?

ಎನ್ನವೋಲ್ ಪುರುಷರಲಿ ಚೆಲುವರ
ಮುನ್ನ ನೀ ಕಂಡರಿದೆಯಾದಡೆ
ಯೆನ್ನ ಮೇಲಾಣೆಲೆಗೆ ಹುಸಿಯದೆ ಹೇಳು ಹೇಳೆಂದು
ಮುನ್ನ ನಿನ್ನಂತಪ್ಪ ಸತಿಯರು
ಎನ್ನನೇ ಬಯಸುವರು ನಾರಿಯ
ರೆನ್ನ ಕಂಡರೆ ಸೋಲದವರಿಲ್ಲೆಲೆಗೆ ನಿನ್ನಾಣೆ (ವಿರಾಟ ಪರ್ವ, ೩ ಸಂಧಿ, ೮೪ ಪದ್ಯ)

ತಾತ್ಪರ್ಯ:
ಎಲೆ ಸೈರಂಧ್ರಿ, ಈ ಮೊದಲು ನನ್ನಷ್ಟು ಚೆಲುವರಾದ ಗಂಡಸರನ್ನು ನೀನು ಕಂಡಿದ್ದೆ ಆದರೆ ನನ್ನ ಆಣೆಯಾಗಿ ಸುಳ್ಳು ಹೇಳದೆ ಹೇಳು, ಈ ಮೊದಲು ನಿನ್ನಂತಹ ಮತ್ತು ನಿನಗಿಂತ ಸುಂದರಿಯರು ನನ್ನನ್ನು ಬಯಸುತ್ತಿದ್ದರು. ನಿನ್ನಾಣೆಯಾಗಿ ನನಗೆ ಸೋಲದ ಹೆಂಗಸರೇ ಇಲ್ಲ ಎಂದು ಕೀಚಕನು ಹೇಳಿದನು.

ಅರ್ಥ:
ಪುರುಷ: ಗಂಡು; ಚೆಲುವು: ಅಂದ, ಸೊಬಗು; ಮುನ್ನ: ಮೊದಲು; ಕಂಡು: ನೋಡು; ಅರಿ: ತಿಳಿ; ಆಣೆ: ಪ್ರಮಾಣ; ಹುಸಿ: ಸುಳ್ಳು; ಹೇಳು: ತಿಳಿಸು; ಮುನ್ನ: ಹಿಂದೆ; ಸತಿ: ಹೆಂಡತಿ; ಬಯಸು: ಇಷ್ಟಪಡು; ನಾರಿ: ಹೆಣ್ಣು; ಸೋಲು: ಪರವಶವಾಗು;

ಪದವಿಂಗಡಣೆ:
ಎನ್ನವೋಲ್+ ಪುರುಷರಲಿ+ ಚೆಲುವರ
ಮುನ್ನ +ನೀ +ಕಂಡ್+ಅರಿದೆಯಾದಡೆ
ಎನ್ನ +ಮೇಲಾಣೆಲೆಗೆ+ ಹುಸಿಯದೆ+ ಹೇಳು +ಹೇಳೆಂದು
ಮುನ್ನ +ನಿನ್ನಂತಪ್ಪ +ಸತಿಯರು
ಎನ್ನನೇ+ ಬಯಸುವರು+ ನಾರಿಯರ್
ಎನ್ನ+ ಕಂಡರೆ +ಸೋಲದವರಿಲ್ಲೆಲೆಗೆ +ನಿನ್ನಾಣೆ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹುಸಿಯದೆ ಹೇಳು ಹೇಳೆಂದು
(೨) ಆಣೆ ಪದದ ಬಳಕೆ – ಎನ್ನಮೇಲಾಣೆ, ನಿನ್ನಾಣೆ

ಪದ್ಯ ೮೩: ಕೀಚಕನು ತನ್ನ ಸೌಂದರ್ಯದ ಬಗ್ಗೆ ಏನು ಹೇಳಿದನು?

ವನಜ ಮುಖಿ ವೀಳೆಯವನನುಲೇ
ಪನವ ಮಲ್ಲಿಗೆಯರಳ ತೊಡಿಗೆಯ
ನನುಪಮಾಂಬರವಿವೆ ಮನೋಹರವಹರೆ ಚಿತ್ತೈಸು
ನಿನಗೆ ಪಾಸಟಿಯಾನುಯೆನ್ನವೊ
ಲನಿಮಿಷರೊಳಾರುಂಟು ಚೆಲುವರು
ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳೆಂದ (ವಿರಾಟ ಪರ್ವ, ೩ ಸಂಧಿ, ೮೩ ಪದ್ಯ)

ತಾತ್ಪರ್ಯ:
ಕಮಲಮುಖಿ ಸೈರಂಧ್ರಿ, ತಾಂಬೂಲ, ಅನುಲೇಪನ, ಮಲ್ಲಿಗೆಯ ಹೂಗಳು ಹೋಲಿಕೆಯೇ ಇಲ್ಲದ ಉತ್ತಮ ವಸ್ತ್ರಗಳು ಎಲ್ಲವನ್ನೂ ತಂದಿದ್ದೇನೆ, ನಿನಗೆ ಸರಿಯೆಂದರೆ ನಾನೇ, ದೇವತೆಗಳಲ್ಲೂ ನನ್ನಂತಹ ಚೆಲುವರಿಲ್ಲ ಎಂದ ಮೇಲೆ ಮನುಷ್ಯರು ನನ್ನನ್ನು ಹೋಲುವರೇ ಎಂದು ಕೀಚಕನು ಕೇಳಿದನು.

ಅರ್ಥ:
ವನಜ: ಕಮಲ; ವನಜಮುಖಿ: ಕಮಲದಂತ ಮುಖವುಳ್ಳವಳು; ವೀಳೆಯ: ತಾಂಬೂಲ; ಅನುಲೇಪ: ಲೇಪನದ್ರವ್ಯ, ಬಳಿಯುವಿಕೆ; ಅರಳು: ಹೂವು; ತೊಡಿಗೆ: ಆಭರಣ; ಅನುಪಮ: ಉತ್ಕೃಷ್ಟವಾದುದು; ಅಂಬರ: ಆಗಸ; ಮನೋಹರ: ಸುಂದರವಾದುದು; ಚಿತ್ತೈಸು: ಗಮನವಿಟ್ಟು ಕೇಳು; ಪಾಸಟಿ: ಸಮಾನ, ಹೋಲಿಕೆ; ಅನಿಮಿಷ: ದೇವತೆ; ಚೆಲುವು: ಅಂದ; ಮನುಜ: ಮಾನವ; ಹೋಲು: ಸದೃಶವಾಗು; ಕೇಳು: ಆಲಿಸು;

ಪದವಿಂಗಡಣೆ:
ವನಜಮುಖಿ +ವೀಳೆಯವನ್+ಅನುಲೇ
ಪನವ+ ಮಲ್ಲಿಗೆ+ಅರಳ +ತೊಡಿಗೆಯನ್
ಅನುಪಮ+ಅಂಬರವಿವೆ +ಮನೋಹರವಹರೆ +ಚಿತ್ತೈಸು
ನಿನಗೆ +ಪಾಸಟಿ+ಆನು+ಎನ್ನವೊಲ್
ಅನಿಮಿಷರೊಳ್+ಆರುಂಟು +ಚೆಲುವರು
ಮನುಜರ್+ಎನ್ನನು+ ಹೋಲುವರೆ+ ಸೈರಂಧ್ರಿ +ಕೇಳೆಂದ

ಅಚ್ಚರಿ:
(೧) ಕೀಚಕನ ಸೌಂದರ್ಯದ ವರ್ಣನೆ – ಎನ್ನವೊಲನಿಮಿಷರೊಳಾರುಂಟು ಚೆಲುವರು ಮನುಜರೆನ್ನನು ಹೋಲುವರೆ

ಪದ್ಯ ೮೨: ಕೀಚಕನು ಎಲ್ಲಿಗೆ ಬಂದನು?

ಕಾಲಪಾಶದಲೆಳಸಿಕೊಂಬ ಕ
ರಾಳಮತಿ ಸುಡುಗಾಡಲೈ ತಂ
ದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ
ಮೇಲೆ ಮೇಲವಶಕುನ ಶತಕವ
ನಾಲಿಸದೆ ಸುಮ್ಮಾನದಲಿ ಕೇ
ಡಾಳಿ ಬಂದನು ಮಂಚವಿದ್ದೆಡೆಗಾಗಿ ತಡವರಿಸಿ (ವಿರಾಟ ಪರ್ವ, ೩ ಸಂಧಿ, ೮೨ ಪದ್ಯ)

ತಾತ್ಪರ್ಯ:
ಯಮಪಾಶವನ್ನು ಬಯಸುವ ದುರ್ಬುದ್ಧಿಯ ಕೀಚಕನು ಒಳದಾರಿಯಲ್ಲಿ ಸ್ಮಶಾನದೊಳಗೆ ನಡೆದುಕೊಂಡು ಬಂದು, ಯಮನ ಬಾಯನ್ನು ಹೊಗುವಂತೆ, ನಾಟ್ಯ ಮಂದಿರವನ್ನು ಹೊಕ್ಕನು. ದಾರಿಯುದ್ದಕ್ಕೂ ಹಲವಾರು ಅಪಶಕುನಗಳು ಎದುರು ಬಂದರು ಅವನ್ನು ಲೆಕ್ಕಿಸದೆ ಆ ಕೇಡಿಗನು, ಸಂತೋಷಭರದಿಂದ ಕತ್ತಲಲ್ಲಿ ತಡವರಿಸುತ್ತಾ ಮಂಚದ ಬಳಿಗೆ ಬಂದನು.

ಅರ್ಥ:
ಕಾಲ:ಯಮ; ಪಾಶ: ಬಂಧನ, ಹಗ್ಗ; ಎಳಸು: ಬಯಸು; ಕರಾಳ: ದುಷ್ಟ; ಮತಿ: ಬುದ್ಧಿ; ಸುಡುಗಾಡ: ಸ್ಮಶಾನ; ಐತಂದು: ಬರೆಮಾಡು; ಆಲಯ: ಮನೆ; ಹೊಕ್ಕು: ಸೇರು; ಕೃತಾಂತ: ಯಮ; ಬಾಯಿ: ತಿನ್ನಲು ಬಳಸುವ ಮುಖದ ಅಂಗ; ಹೊಗು: ಸೇರು; ಅವಶಕುನ: ಕೆಟ್ಟ ಸೂಚನೆ; ಶತಕ: ನೂರು; ಆಲಿಸು: ಕೇಳು; ಸುಮ್ಮಾನ: ಸಂತೋಷ, ಅಹಂಕಾರ; ಕೇಡು: ಕೆಡಕು; ಬಂದನು: ಆಗಮಿಸಿದನು; ಮಂಚ: ಪಲ್ಲಂಗ; ತಡವರಿಸು: ಹುಡುಕು, ತಡಕಾಡು;

ಪದವಿಂಗಡಣೆ:
ಕಾಲಪಾಶದಲ್+ಎಳಸಿಕೊಂಬ+ ಕ
ರಾಳಮತಿ+ ಸುಡುಗಾಡಲ್+ಐತಂದ್
ಆಲಯವ +ಹೊಕ್ಕನು +ಕೃತಾಂತನ +ಬಾಯ +ಹೊಗುವಂತೆ
ಮೇಲೆ +ಮೇಲ್+ಅವಶಕುನ +ಶತಕವನ್
ಆಲಿಸದೆ +ಸುಮ್ಮಾನದಲಿ +ಕೇ
ಡಾಳಿ +ಬಂದನು +ಮಂಚವಿದ್ದೆಡೆಗಾಗಿ+ ತಡವರಿಸಿ

ಅಚ್ಚರಿ:
(೧) ಕೀಚಕನು ಎಲ್ಲಿಗೆ ಬಂದನೆಂದು ಹೇಳುವ ಪರಿ – ಕರಾಳಮತಿ ಸುಡುಗಾಡಲೈ ತಂ
ದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ

ಪದ್ಯ ೮೧: ಕೀಚಕನು ತನ್ನ ಮನೆಯಿಂದ ಹೇಗೆ ಹೊರಟನು?

ಉರಿವ ಮಾರಿಯ ಬೇಟದಾತನು
ತುರುಗಿದನು ಮಲ್ಲಿಗೆಯ ಮೊಗ್ಗೆಯ
ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ
ಮೆರೆವ ಗಂಡುಡಿಗೆಯನು ರಚಿಸಿದ
ಸೆರಗಿನೊಯ್ಯಾರದಲಿ ಸುರಗಿಯ
ತಿರುಗುತಿರುಳೊಬ್ಬನೆ ನಿಜಾಲಯದಿಂದ ಹೊರವಂಟ (ವಿರಾಟ ಪರ್ವ, ೩ ಸಂಧಿ, ೮೧ ಪದ್ಯ)

ತಾತ್ಪರ್ಯ:
ಪ್ರಣಯದ ಜ್ವಾಲೆಯನ್ನು ಹೊತ್ತಿದ್ದ ಕೀಚಕನು ಮಲ್ಲಿಗೆಯ ಮೊಗ್ಗೆಗಳನ್ನು ಇಟ್ಟುಕೋಮ್ಡು, ಸಾದು, ಜವಾಜಿ, ಕಸ್ತೂರಿ, ಮೊದಲಾದ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಂಡನು. ಅಂದವಾದ ಗಂಡುಡುಗೆಯನ್ನು ಧರಿಸಿ ಉತ್ತರೀಯದ ಸೆರಗನ್ನು ಬೀಸುತ್ತಾ, ಕತ್ತಿಯನ್ನು ಹಿಡಿದು ತನ್ನ ಮನೆಯಿಂದ ರಾತ್ರಿಯಲ್ಲಿ ಹೊರಟನು.

ಅರ್ಥ:
ಉರಿ: ಜ್ವಾಲೆ, ಸುಡು; ಮಾರಿ: ಕ್ಷುದ್ರದೇವತೆ; ಬೇಟ: ಪ್ರಣಯ; ಆಸೆ; ತುರುಗು: ಹೆಚ್ಚಾಗು; ಮೊಗ್ಗೆ: ಪೂರ್ತಿಯಾಗಿ ಅರಳದೆ ಇರುವ ಹೂವು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಪೂಸು: ಹೊರಹೊಮ್ಮು; ಸಾದು: ಕುಂಕುಮ ಗಂಧ; ಕತ್ತುರಿ: ಕಸ್ತೂರಿ; ಮೆರೆ: ಹೊಳೆ; ಉಡಿಗೆ: ಬಟ್ಟೆ, ವಸ್ತ್ರ; ರಚಿಸು: ನಿರ್ಮಿಸು; ಸೆರಗು: ಉತ್ತರೀಯ; ಒಯ್ಯಾರ: ಅಂದ; ಸುರಗಿ: ಸಣ್ಣ ಕತ್ತಿ, ಚೂರಿ; ತಿರುಗು: ಅಲ್ಲಾಡಿಸು; ಆಲಯ: ಮನೆ; ಹೊರವಂಟ: ತೆರಳು;

ಪದವಿಂಗಡಣೆ:
ಉರಿವ +ಮಾರಿಯ +ಬೇಟದ್+ಆತನು
ತುರುಗಿದನು +ಮಲ್ಲಿಗೆಯ+ ಮೊಗ್ಗೆಯನ್
ಇರಿಕಿ+ ತಾ +ಪೂಸಿದನು +ಸಾದು +ಜವಾಜಿ +ಕತ್ತುರಿಯ
ಮೆರೆವ+ ಗಂಡ್+ಉಡಿಗೆಯನು +ರಚಿಸಿದ
ಸೆರಗಿನ್+ಒಯ್ಯಾರದಲಿ +ಸುರಗಿಯ
ತಿರುಗುತ್+ಇರುಳ್+ಒಬ್ಬನೆ +ನಿಜಾಲಯದಿಂದ+ ಹೊರವಂಟ

ಅಚ್ಚರಿ:
(೧) ಸುಗಂಧ ದ್ರವ್ಯಗಳ ಪರಿಚಯ – ಸಾದು, ಜವಾಜಿ, ಕತ್ತುರಿ

ಪದ್ಯ ೮೦: ಭೀಮನು ಎಲ್ಲಿ ಮಲಗಿದನು?

ಖಳನ ಮುರಿಯೆಂದಬಲೆ ನೊಸಲಲಿ
ತಿಲಕವನು ರಚಿಸಿದಳು ಸೇಸೆಯ
ತಳಿದಳೇರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ
ಬಲುಭುಜನ ಹರಸಿದಳು ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ನಾಟ್ಯದ
ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ (ವಿರಾಟ ಪರ್ವ, ೩ ಸಂಧಿ, ೮೦ ಪದ್ಯ)

ತಾತ್ಪರ್ಯ:
ಭೀಮನ ಕೂದಲುಗಳನ್ನು ಒಪ್ಪವಾಗಿ ಕಟ್ಟಿ, ಸುಗಂಧ ದ್ರವ್ಯಗಲನ್ನು ಲೇಪಿಸಿ, ಹಣೆಯಲ್ಲಿ ಜಯ ತಿಲಕವನ್ನಿಟ್ಟು, ಮಂಗಳಾಕ್ಷತೆಯನ್ನಿಟ್ಟು ದ್ರೌಪದಿಯು ಆ ದುಷ್ಟನನ್ನು ಸಂಹರಿಸು ಎಂದು ಹರಸಿದಳು. ಕಗ್ಗತ್ತಲು ತುಂಬಿದ ಅರಮನೆಯ ನಾಟ್ಯ ಮಂದಿರಕ್ಕೆ ಹೋಗಿ, ನದುವಿನ ಮಂಚದ ಮೇಲೆ ಭೀಮನು ಮಲಗಿದನು.

ಅರ್ಥ:
ಖಳ: ದುಷ್ಟ; ಮುರಿ: ಸೀಳು, ಸಾಯಿಸು; ಅಬಲೆ: ಹೆಣ್ಣು; ನೊಸಲು: ಹಣೆ; ತಿಲಕ: ಬೊಟ್ಟು; ರಚಿಸು: ನಿರ್ಮಿಸು; ಸೇಸೆ: ಮಂಗಳಾಕ್ಷತೆ, ಮಂತ್ರಾಕ್ಷತೆ; ತಿಗುರು: ಸುಗಂಧ ವಸ್ತು, ಪರಿಮಳದ್ರವ್ಯ; ಹಿಣಿಲು: ಹೆರಳು, ಜಡೆ; ಹೊಸ: ನವೀನ; ಪರಿ: ರೀತಿ; ಬಲು: ಶಕ್ತಿ, ಪರಾಕ್ರಮ; ಭುಜ: ತೋಳು; ಕಗ್ಗತ್ತಲೆ: ಗಾಢಾಂಧಕಾರ; ಹಬ್ಬುಗೆ: ಹರವು, ವಿಸ್ತಾರ; ನಾಟ್ಯ: ನೃತ್ಯ; ನಿಳಯ: ಮನೆ; ಮಧ್ಯ: ನಡುಭಾಗ; ಮಣಿ: ಬೆಲೆಬಾಳುವ ರತ್ನ; ಮಂಚ: ಪಲ್ಲಂಗ; ಪವಡಿಸು: ಮಲಗು;

ಪದವಿಂಗಡಣೆ:
ಖಳನ +ಮುರಿ+ಎಂದ್+ಅಬಲೆ +ನೊಸಲಲಿ
ತಿಲಕವನು+ ರಚಿಸಿದಳು+ ಸೇಸೆಯ
ತಳಿದಳ್+ಏರಿಸಿ +ತಿಗುರ +ಗೆಲಿದಳು +ಹಿಣಿಲ+ ಹೊಸ +ಪರಿಯ
ಬಲುಭುಜನ +ಹರಸಿದಳು +ಕಗ್ಗ
ತ್ತಲೆಯ +ಹಬ್ಬುಗೆಯೊಳಗೆ+ ನಾಟ್ಯದ
ನಿಳಯ +ಮಧ್ಯದ +ಮಣಿಯ +ಮಂಚದ +ಮೇಲೆ +ಪವಡಿಸಿದ

ಅಚ್ಚರಿ:
(೧) ಮ ಕಾರದ ಪದಗಳು – ಮಧ್ಯದ ಮಣಿಯ ಮಂಚದ ಮೇಲೆ