ಪದ್ಯ ೭೪: ಕೀಚಕನು ದ್ರೌಪದಿಗೆ ಏನು ಹೇಳಿದ?

ಆದಿವಸವರಮನೆಗೆ ಬರುತ ವೃ
ಕೋದರನ ವಲ್ಲಭೆಯ ಕಂಡನು
ಕೈದುಡಕಲಂಜಿದನು ಮಾತಾಡಿಸಿದನಂಗನೆಯ
ಹೋದಿರುಳ ಯುಗವಾಗಿ ನೂಕಿದೆ
ನೀ ದಯಾಂಬುಧಿ ಕುಸುಮಶರ ಯಮ
ನಾದ ನೀನೇ ಬಲ್ಲೆಯೆಂದನು ಕೀಚಕನು ನಗುತ (ವಿರಾಟ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಕೀಚಕನು ಆ ದಿನ ತನ್ನ ಅರಮನೆಗೆ ಹಿಂತಿರುಗುತ್ತಾ ದ್ರೌಪದಿಯನ್ನು ಕಂಡನು, ಅವಳನ್ನು ಮುಟ್ಟಲು ಹೆದರಿ, ನೆನ್ನೆ ರಾತ್ರಿಯನ್ನು ಒಂದು ಯುಗದಂತೆ ಕಷ್ಟಪಟ್ಟು ಕಳೆದೆ, ಸೈರಂಧ್ರೀ, ನೀನು ಕರುಣೆಯ ಸಾಗರ, ನನ್ನ ಪಾಲಿಗೆ ಮನ್ಮಥನು ಯಮನಾಗಿ ಬಿಟ್ಟ, ಅದರ ಕಾರಣವನ್ನು ನೀನೇ ಬಲ್ಲೆ ಎಂದು ಹೇಳಿದನು.

ಅರ್ಥ:
ದಿವಸ: ದಿನ; ಅರಮನೆ: ರಾಜರ ಆಲಯ; ಬರುತ: ಆಗಮಿಸು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ವಲ್ಲಭೆ: ಪ್ರಿಯತಮೆ, ಪತ್ನಿ; ಕಂಡು: ನೋಡು; ಕೈ: ಹಸ್ತ; ಕೈದುಡುಗು: ಬಲದಿಂದ ತೆಗೆದುಕೋ; ಅಂಜು: ಹೆದರು; ಮಾತು: ವಾಣಿ, ನುಡಿ; ಅಂಗನೆ: ಹೆಣ್ಣ್; ಹೋದ: ಕಳೆದ; ಇರುಳು: ರಾತ್ರಿ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ನೂಕು: ತಳ್ಳು; ದಯಾಂಬುಧಿ: ಕರುಣೆಯ ಸಾಗರ; ಕುಸುಮ: ಹೂವು; ಶರ: ಬಾಣ; ಕುಸುಮಶರ: ಮನ್ಮಥ; ಯಮ: ಮೃತ್ಯುದೇವತೆ; ಬಲ್ಲೆ: ತಿಳಿದಿರುವೆ; ನಗು: ಸಂತಸ;

ಪದವಿಂಗಡಣೆ:
ಆ+ದಿವಸವ್+ಅರಮನೆಗೆ +ಬರುತ +ವೃ
ಕೋದರನ +ವಲ್ಲಭೆಯ+ ಕಂಡನು
ಕೈದುಡಕಲ್+ಅಂಜಿದನು +ಮಾತಾಡಿಸಿದನ್+ಅಂಗನೆಯ
ಹೋದ್+ಇರುಳ+ ಯುಗವಾಗಿ +ನೂಕಿದೆ
ನೀ +ದಯಾಂಬುಧಿ +ಕುಸುಮಶರ+ ಯಮ
ನಾದ +ನೀನೇ +ಬಲ್ಲೆ+ಎಂದನು+ ಕೀಚಕನು+ ನಗುತ

ಅಚ್ಚರಿ:
(೧) ದಿವಸ, ಇರುಳು – ವಿರುದ್ಧ ಪದ
(೨) ದ್ರೌಪದಿಯನ್ನು ವೃಕೋದರನ ವಲ್ಲಭೆ, ಅಂಗನೆ, ದಯಾಂಬುಧಿ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ