ಪದ್ಯ ೭೯: ಭೀಮನು ನಾಟ್ಯ ಮಂದಿರಕ್ಕೆ ತೆರಳಲು ಹೇಗೆ ಸಿದ್ಧನಾದನು?

ಭೀಮ ನಿಂದಿರು ನಾಟ್ಯ ನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸದ ಮಾಡದಿರು ಹೂಡದಿರಲ್ಪಬುದ್ಧಿಗಳ
ಕಾಮುಕನನಡೆಗೆಡಹಿ ನಿಜಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟಿನಲಿ (ವಿರಾಟ ಪರ್ವ, ೩ ಸಂಧಿ, ೭೯ ಪದ್ಯ)

ತಾತ್ಪರ್ಯ:
ಭೀಮ ನೀನು ನಾಟ್ಯ ಮಂದಿರದಲ್ಲಿ ನಿಲ್ಲು, ನಾಟ್ಯ ನಿಲಯಕ್ಕೆ ಬಾಯೆಂದು ಆ ಮದಾಂಧನಿಗೆ ಹೇಳಿ ಬಂದಿದ್ದೇನೆ. ಸೋಮಾರಿತನ ಮಾಡಬೇಡ, ಅಲ್ಪ ಬುದ್ಧಿಗಲನ್ನು ತೀಗ್ಯಬೇಡ. ಕಾಮುಕನಾದ ಕೀಚಕನನ್ನು ಸಂಹರಿಸಿ, ನನ್ನ ಮೇಲಿರುವ ನಿನ್ನ ಪ್ರೇಮವನ್ನು ತೋರಿಸು, ಎಂದು ದ್ರೌಪದಿಯು ಹೇಳಲು, ಭೀಮನು ನಗುತ್ತಾ ಎದ್ದು ಮಲ್ಲಗಂಟಿನ ಮಡಿಕೆಯನ್ನು ಹಾಕಿ ವಸ್ತ್ರವನ್ನುಟ್ಟನು.

ಅರ್ಥ:
ನಿಲ್ಲು: ಕಾಯು, ಎದುರು ನೋಡು; ನಾಟ್ಯ: ನೃತ್ಯ; ನಿಲಯ: ಮನೆ, ಮಂದಿರ; ಮದಾಂಧ: ಗರ್ವದಿಂದ ವಿವೇಕವನ್ನು ಕಳೆದುಕೊಂಡವನು; ನುಡಿ: ಮಾತಾದು; ಬಂದೆ: ಆಗಮನ; ತಾಮಸ: ಜಾಡ್ಯ, ಮೂಢತನ; ಹೂಡು: ಅಣಿಗೊಳಿಸು; ಅಲ್ಪ: ಸಣ್ಣದಾದ; ಬುದ್ಧಿ: ತಿಳಿವು, ಅರಿವು; ಕಾಮುಕ: ಕಾಮಾಸಕ್ತನಾದವನು, ಲಂಪಟ; ಪ್ರೇಮ: ಒಲವು; ತೋರು: ಪ್ರದರ್ಶಿಸು; ನಗು: ಸಂತಸ; ಉದ್ದಾಮ: ಶ್ರೇಷ್ಠ; ಘಳಿ: ಮಡಿಕೆ, ನೆರಿಗೆ ಸೀರೆ; ಮಲ್ಲಗಂಟು: ಕಾಸಿಯನ್ನು ಕಟ್ಟುವುದು; ಕೆಡಹು: ಕೆಳಕ್ಕೆ ತಳ್ಳು, ಸೋಲಿಸು; ಅಡೆಕೆಡಹು: ಅಡ್ಡಹಾಕಿ ಸೋಲಿಸು;

ಪದವಿಂಗಡಣೆ:
ಭೀಮ+ ನಿಂದಿರು +ನಾಟ್ಯ +ನಿಲಯವ
ನಾ +ಮದಾಂಧಗೆ+ ನುಡಿದು+ ಬಂದೆನು
ತಾಮಸದ+ ಮಾಡದಿರು +ಹೂಡದಿರ್+ಅಲ್ಪಬುದ್ಧಿಗಳ
ಕಾಮುಕನನ್+ಅಡೆಗೆಡಹಿ+ ನಿಜಸು
ಪ್ರೇಮವನು +ತೋರೆನಲು +ನಗುತ್
ಉದ್ದಾಮನೆದ್ದನು+ ಫಳಿಯನುಟ್ಟನು +ಮಲ್ಲಗಂಟಿನಲಿ

ಅಚ್ಚರಿ:
(೧) ಭೀಮನು ಸಿದ್ಧನಾದ ಪರಿ – ಉದ್ದಾಮನೆದ್ದನು ಫಳಿಯನುಟ್ಟನು ಮಲ್ಲಗಂಟನಲಿ

ಪದ್ಯ ೭೮: ದ್ರೌಪದಿಯು ಸಂತಸಗೊಂಡು ಯಾರ ಮನೆಗೆ ಬಂದಳು?

ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ (ವಿರಾಟ ಪರ್ವ, ೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೀಚಕನನ್ನು ನಾಟ್ಯಮಂದಿರಕ್ಕೆ ಬರಲು ಹೇಳಲು, ಆತ ಇದು ಮಹಾಪ್ರಸಾದವೆಂದು ಭಾವಿಸಿ ಆಕೆಗೆ ಕೈಮುಗಿದು ತನ್ನ ಮನೆಗೆ ಹೋದನು. ಸೂರ್ಯನು ಮುಳುಗಿದನು, ದ್ರೌಪದಿಯು ಸಂತೋಷಭರಿತಳಾಗಿ, ಕಗ್ಗತ್ತಲೆಯಲ್ಲಿ ತನ್ನ ಕಣ್ಣ ಬೆಳಕಿನ ಸಹಾಯದಿಂದ ಅಡುಗೆಯ ಮನೆಗೆ ಬಂದಳು.

ಅರ್ಥ:
ಖಳ: ದುಷ್ಟ; ಹಸಾದ: ಪ್ರಸಾದ, ಅನುಗ್ರಹ; ಹಾಯ್ಕಿ: ಬೀಸು, ತೆಗೆ; ನಿಳಯ: ಮನೆ; ಐದು: ಬಂದು ಸೇರು; ಅಬುಜ: ಕಮಲ; ಬಾಂಧವ: ಸಂಬಂಧಿಕ; ಅಬುಜಬಾಂಧವ: ಸೂರ್ಯ, ರವಿ; ಇಳಿ: ಕೆಳಕ್ಕೆ ಹೋಗು; ಅಸ್ತಾಚಲ: ಪಡುವಣದ ಬೆಟ್ಟ; ತಪ್ಪಲು: ಬೆಟ್ಟದ ತಳಭಾಗ; ತಾವರೆ: ಕಮಲ; ಬನ: ಕಡು; ನಳಿನಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ); ನಲ: ನಲಿವು, ಸಂತೋಷ; ಏರು: ಹೆಚ್ಚಾಗು; ಕಗ್ಗತ್ತಲೆ: ಗಾಡಾಂಧಕಾರ; ಹಬ್ಬುಗೆ: ಹರಡು; ಕಂಗಳು: ಕಣ್ಣು, ನಯನ; ಬೆಳಗು: ಪ್ರಕಾಶ; ಬಟ್ಟೆ: ಹಾದಿ, ಮಾರ್ಗ; ತೋರು: ಗೋಚರಿಸು; ಬಂದು: ಆಗಮಿಸು; ಬಾಣಸಿಗ: ಅಡುಗೆಯವ; ಮನೆ: ಆಲಯ;

ಪದವಿಂಗಡಣೆ:
ಖಳ +ಹಸಾದವ +ಹಾಯ್ಕಿ +ತನ್ನಯ
ನಿಳಯಕ್+ಐದಿದನ್+ಅಬುಜಬಾಂಧವನ್
ಇಳಿದನ್+ಅಸ್ತಾಚಲದ+ ತಪ್ಪಲ +ತಾವರೆಯ +ಬನಕೆ
ನಳಿನಮುಖಿ +ನಲವೇರಿ+ ಕಗ್ಗ
ತ್ತಲೆಯ+ ಹಬ್ಬುಗೆಯೊಳಗೆ+ ಕಂಗಳ
ಬೆಳಗು +ಬಟ್ಟೆಯ +ತೋರೆ +ಬಂದಳು +ಬಾಣಸಿನ +ಮನೆಗೆ

ಅಚ್ಚರಿ:
(೧) ಸೂರ್ಯಾಸ್ತವಾಯಿತು ಎಂದು ಹೇಳಲು – ಅಬುಜಬಾಂಧವನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
(೨) ದ್ರೌಪದಿಯ ಕಣ್ಣಿನ ಪ್ರಕಾಶ – ಕಗ್ಗತ್ತಲೆಯ ಹಬ್ಬುಗೆಯೊಳಗೆ ಕಂಗಳ ಬೆಳಗು ಬಟ್ಟೆಯ ತೋರೆ

ಪದ್ಯ ೭೭: ದ್ರೌಪದಿ ಕೀಚಕನನ್ನು ಎಲ್ಲಿಗೆ ಬರಲು ಹೇಳಿದಳು?

ಅರಿದರಾದಡೆ ನಿನ್ನ ವಂಶವ
ತರಿವರೆನ್ನವರೆಲವೊ ಕೆಲಬಲ
ನರಿಯದಂದದಿ ಬಂದು ನಾಟ್ಯದ ಗರುಡಿಯೊಳಗಿಹುದು
ನೆರೆದುದಾಯುಷ ನಿನಗೆ ಕತ್ತಲೆ
ಮರೆಯೊಳಾನೈತಹೆನು ಯೆನ್ನನು
ಮರೆದು ನೀ ಬಿಡೆಯಾದುದಾಗಲಿಯೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೭೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಎಲೈ ಕೀಚಕ ಈ ವಿಷಯ ತಿಳಿದರೆ ನನ್ನ ಪತಿಗಳು ನಿನ್ನ ವಂಶವನ್ನೇ ಸಂಹಾರ ಮಾಡುತ್ತಾರೆ, ಆಗಿದ್ದಾಗಲಿ, ನೀನು ಈ ರಾತ್ರಿ ಯಾರಿಗೂ ತಿಳಿಯದಂತೆ ನಾಟ್ಯಮಂದಿರಕ್ಕೆ ಬಾ, ನಾನು ಕತ್ತಲೆಯಲ್ಲಿ ಅಲ್ಲಿಗೆ ಬರುತ್ತೇನೆ, ನಿನ್ನ ಆಯುಷ್ಯ ಮುಗಿದಿದೆ, ನನ್ನನ್ನು ನೀನು ಬಿಡುವುದಿಲ್ಲ, ಮರೆತಾದರೂ ಬಿಡಬಹುದು ಇಲ್ಲ ಏನಾಗುತ್ತೊ ಆಗಲಿ ಎಂದು ದ್ರೌಪದಿ ಕೀಚಕನಿಗೆ ಹೇಳಿದಳು.

ಅರ್ಥ:
ಅರಿ: ತಿಳಿ; ವಂಶ: ಕುಲ; ತರಿ: ಕಡಿ, ಕತ್ತರಿಸು; ಕೆಲಬಲ: ಅಕ್ಕಪಕ್ಕ; ಬಂದು: ಆಗಮಿಸು; ನಾಟ್ಯ: ನೃತ್ಯ; ಗರುಡಿ: ಆಲಯ; ನೆರೆ: ತುಂಬು ಕತ್ತಲೆ: ಅಂಧಕಾರ; ಮರೆ:ಗುಟ್ಟು, ರಹಸ್ಯ; ಐತಹೆನು: ಬಂದು ಸೇರು; ಮರೆ: ನೆನಪಿನಿಂದ ದೂರ ಮಾಡು; ಬಿಡೆ: ತೊರೆ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅರಿದರ್+ಆದಡೆ +ನಿನ್ನ +ವಂಶವ
ತರಿವರ್+ಎನ್ನವರ್+ಎಲವೊ +ಕೆಲಬಲನ್
ಅರಿಯದಂದದಿ +ಬಂದು +ನಾಟ್ಯದ +ಗರುಡಿಯೊಳಗಿಹುದು
ನೆರೆದುದ್+ಆಯುಷ +ನಿನಗೆ +ಕತ್ತಲೆ
ಮರೆಯೊಳ್+ಆನೈತಹೆನು+ ಎನ್ನನು
ಮರೆದು+ ನೀ +ಬಿಡೆ+ಆದುದಾಗಲಿ+ಎಂದಳ್+ಇಂದುಮುಖಿ

ಅಚ್ಚರಿ:
(೧) ಆಡುಭಾಷೆಯ ಪ್ರಯೋಗ – ಆದುದಾಗಲಿ
(೨) ಅರಿ, ತರಿ; ನೆರೆ, ಮರೆ – ಪ್ರಾಸ ಪದಗಳು
(೩) ಸಾಯುವೆ ಎಂದು ಹೇಳುವ ಪರಿ – ನೆರೆದುದಾಯುಷ ನಿನಗೆ

ಪದ್ಯ ೭೬: ಕೀಚಕನು ದ್ರೌಪದಿಗೆ ಯಾವಾಗ ಸೇವಕನಾಗುತ್ತಾನೆಂದು ಹೇಳಿದನು?

ಬಳಿಕ ನಿನ್ನ ಪುರಾಣ ಧರ್ಮವ
ತಿಳಿದುಕೊಂಬೆನಿದೊಮ್ಮೆ ನಿನ್ನಯ
ಲಲಿತ ಕರುಣ ಕಟಾಕ್ಷಕವಟವ ತೊಡಿಸಿ ತನ್ನೊಡಲ
ಆಳುಕದೆಸುವ ಮನೋಜನಂಬಿನ
ಹಿಳುಕ ಮುರಿ ಡಿಂಗರಿಗಳನಹೆನೆಂ
ದಳಿಮನದಲಾ ಖೂಳನಬುಜಾನನೆಗೆ ಕೈಮುಗಿದ (ವಿರಾಟ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಸೈರಂಧ್ರೀ, ನಿನ್ನ ಪುರಾತನ ಧರ್ಮವನ್ನು ಆ ಮೇಲೆ ಶ್ರವಣ ಮಾಡುತ್ತೇನೆ, ಇದೊಂದು ಬಾರಿ ನಿನ್ನ ಸುಂದರ ಕರುಣಾ ಕಟಾಕ್ಷವನ್ನು ನನ್ನತ್ತ ಬೀರಿ, ನಿರ್ಭಯದಿಂದ ನನ್ನ ಮೇಲೆ ಮನ್ಮಥನು ಬಿಡುತ್ತಿರುವ ಬಾಣಗಳ ಅಲಗಿನಿಂದ ರಕ್ಷಿಸಿದ್ದೇ ಆದರೆ, ನಾನು ನಿನ್ನ ಸೇವಕನಾಗುತ್ತೇನೆ ಎಂದು ಹೇಳಿ ಕೀಚಕನು ದ್ರೌಪದಿಗೆ ಕೈಮುಗಿದನು.

ಅರ್ಥ:
ಬಳಿಕ: ನಂತರ; ಪುರಾಣ: ಹಳೆಯ, ಪ್ರಾಚೀನವಾದ; ಧರ್ಮ: ಧಾರಣ ಮಾಡಿದುದು, ನಿಯಮ; ತಿಳಿ: ಅರ್ಥೈಸು, ಅರಿ; ಇದೊಮ್ಮೆ: ಮತ್ತೊಮ್ಮೆ; ಲಲಿತ: ಸೌಂದರ್ಯ; ಕರುಣ: ದಯೆ; ಕಟಾಕ್ಷ: ನೋಟ; ಕವಟು: ಬಾಗಿಲು; ತೊಡಿಸು: ಧರಿಸು; ಒಡಲು: ದೇಹ; ಅಳುಕು: ಹೆದರು; ಎಸು: ಬಾಣ ಪ್ರಯೋಗ ಮಾಡು; ಮನೋಜ: ಮನ್ಮಥ; ಅಂಬು: ಬಾಣ; ಹಿಳುಕು: ಬಾಣದ ಹಿಂಭಾಗ; ಮುರಿ: ಸೀಳು; ಡಿಂಗರಿಗ: ಭಕ್ತ; ಅಳಿಮನ: ಆಸೆತುಂಬಿದ ಮನಸ್ಸು, ಹಾಳು ಮಾಡುವ ಮನಸ್ಸು; ಖೂಳ: ದುಷ್ಟ; ಅಬುಜಾನನೆ: ಕಮಲದಂತ ಮುಖವುಳ್ಳವಳು; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಬಳಿಕ +ನಿನ್ನ +ಪುರಾಣ +ಧರ್ಮವ
ತಿಳಿದುಕೊಂಬೆನ್+ಇದೊಮ್ಮೆ +ನಿನ್ನಯ
ಲಲಿತ +ಕರುಣ +ಕಟಾಕ್ಷ+ಕವಟವ+ ತೊಡಿಸಿ +ತನ್ನೊಡಲ
ಆಳುಕದ್+ಎಸುವ +ಮನೋಜನ್+ಅಂಬಿನ
ಹಿಳುಕ +ಮುರಿ +ಡಿಂಗರಿಗಳನಹೆನ್+
ಎಂದ್+ಅಳಿಮನದಲಾ +ಖೂಳನ್+ಅಬುಜಾನನೆಗೆ +ಕೈಮುಗಿದ

ಅಚ್ಚರಿ:
(೧) ಕೀಚಕನು ಸೇವಕನಾಗುವೆನೆಂದು ಹೇಳುವ ಪರಿ – ಮನೋಜನಂಬಿನಹಿಳುಕ ಮುರಿ ಡಿಂಗರಿಗಳನಹೆನೆಂದ

ಪದ್ಯ ೭೫: ಎಂತಹ ಪಾಪಿಯನ್ನು ಭೂಮಿಯು ಹೊರಲಾರದು?

ಕುಸುಮಶರ ಯಮನಹನು ಅಮೃತವೆ
ವಿಷವಹುದು ಕೇಳಾಲಿಕಲುಗಳು
ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ
ಒಸೆದರೊಲ್ಲದರಹರು ಲೋಗರ
ಶಶಿವದನೆಗಳುಪಿದ ದುರಾತ್ಮನ
ವಸುಧೆ ಹೊರುವುದೆ ಪಾಪಿ ಕೀಚಕಯೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೭೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೀಚಕನ ಮಾತನ್ನು ಕೇಳಿ, ಎಲೈ ಪಾಪಿ ಕೀಚಕ ಯಾವಾಗ ನೀನು ಪರಸ್ತ್ರೀಯನ್ನು ಮೋಹಿಸಿದಾಗ ಅಂದೇ ಮನ್ಮಥನು ಯಮನಾಗುತ್ತಾನೆ, ಅಮೃತವು ವಿಷವಾಗುತ್ತದೆ, ಆಕಾಶದಿಂದ ಬೀಳುವ ಆಲಿಕಲ್ಲುಗಳು ಬಿಸಿಯಾಗುತ್ತವೆ,ಬಾಂಧವರು ವೈರಿಗಳಾಗುತ್ತಾರೆ, ಪ್ರೀತಿ ಪಾತ್ರರು ಬೇಡವಾಗುತ್ತಾರೆ ಅಂತಹ ದುರಾತ್ಮನನ್ನು ಭೂಮಿಯು ಹೊರಲಾರದು ಎಂದಳು.

ಅರ್ಥ:
ಕುಸುಮಶರ: ಮನ್ಮಥ; ಶರ: ಬಾಣ; ಕುಸುಮ: ಹೂವು; ಯಮ: ಮೃತ್ಯುದೇವತೆ; ಅಮೃತ: ಸುಧೆ; ವಿಷ: ಗರಳ; ಆಲಿಕಲು: ಮಂಜಿನ ಗಡ್ಡೆ; ಬಿಸಿ: ಶಾಕ, ತಾಪ; ಬಾಂಧವ: ಸಹೋದರ; ವೈರಿ: ಶತ್ರು; ನಿಮಿಷ: ಕ್ಷಣ
ಒಸೆ: ಪ್ರೀತಿಸು; ಒಲ್ಲ: ಬೇಡ; ಲೋಗರು: ಜನರು; ಶಶಿವದನೆ: ಚಂದ್ರನಂತ ಮುಖವುಳ್ಳವಳು; ಅಳುಪು: ಭಂಗತರು, ಬಯಕೆ; ದುರಾತ್ಮ: ದುಷ್ಟ; ವಸುಧೆ: ಭೂಮಿ; ಹೊರು: ಭಾರವನ್ನು ಎತ್ತು; ಪಾಪಿ: ದುಷ್ಟ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಕುಸುಮಶರ +ಯಮನಹನು +ಅಮೃತವೆ
ವಿಷವಹುದು +ಕೇಳ್+ಆಲಿಕಲುಗಳು
ಬಿಸಿಯಹವು+ ಬಾಂಧವರು+ ವೈರಿಗಳಹರು +ನಿಮಿಷದಲಿ
ಒಸೆದರ್+ಒಲ್ಲದರಹರು +ಲೋಗರ
ಶಶಿವದನೆಗ್+ಅಳುಪಿದ +ದುರಾತ್ಮನ
ವಸುಧೆ +ಹೊರುವುದೆ +ಪಾಪಿ +ಕೀಚಕ+ಎಂದಳ್+ಇಂದುಮುಖಿ

ಅಚ್ಚರಿ:
(೧) ವೈರುದ್ಯ ಪದಗಳ ಬಳಕೆ – ಕುಸುಮಶರ ಯಮನಹನು ಅಮೃತವೆ ವಿಷವಹುದು ಕೇಳಾಲಿಕಲುಗಳು
ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ
(೨) ಶಶಿವದನೆ, ಇಂದುಮುಖಿ – ಸಮನಾರ್ಥಕ ಪದಗಳು

ಪದ್ಯ ೭೪: ಕೀಚಕನು ದ್ರೌಪದಿಗೆ ಏನು ಹೇಳಿದ?

ಆದಿವಸವರಮನೆಗೆ ಬರುತ ವೃ
ಕೋದರನ ವಲ್ಲಭೆಯ ಕಂಡನು
ಕೈದುಡಕಲಂಜಿದನು ಮಾತಾಡಿಸಿದನಂಗನೆಯ
ಹೋದಿರುಳ ಯುಗವಾಗಿ ನೂಕಿದೆ
ನೀ ದಯಾಂಬುಧಿ ಕುಸುಮಶರ ಯಮ
ನಾದ ನೀನೇ ಬಲ್ಲೆಯೆಂದನು ಕೀಚಕನು ನಗುತ (ವಿರಾಟ ಪರ್ವ, ೩ ಸಂಧಿ, ೭೪ ಪದ್ಯ)

ತಾತ್ಪರ್ಯ:
ಕೀಚಕನು ಆ ದಿನ ತನ್ನ ಅರಮನೆಗೆ ಹಿಂತಿರುಗುತ್ತಾ ದ್ರೌಪದಿಯನ್ನು ಕಂಡನು, ಅವಳನ್ನು ಮುಟ್ಟಲು ಹೆದರಿ, ನೆನ್ನೆ ರಾತ್ರಿಯನ್ನು ಒಂದು ಯುಗದಂತೆ ಕಷ್ಟಪಟ್ಟು ಕಳೆದೆ, ಸೈರಂಧ್ರೀ, ನೀನು ಕರುಣೆಯ ಸಾಗರ, ನನ್ನ ಪಾಲಿಗೆ ಮನ್ಮಥನು ಯಮನಾಗಿ ಬಿಟ್ಟ, ಅದರ ಕಾರಣವನ್ನು ನೀನೇ ಬಲ್ಲೆ ಎಂದು ಹೇಳಿದನು.

ಅರ್ಥ:
ದಿವಸ: ದಿನ; ಅರಮನೆ: ರಾಜರ ಆಲಯ; ಬರುತ: ಆಗಮಿಸು; ವೃಕೋದರ: ತೋಳದಂತ ಹೊಟ್ಟೆಯುಳ್ಳವ (ಭೀಮ); ವಲ್ಲಭೆ: ಪ್ರಿಯತಮೆ, ಪತ್ನಿ; ಕಂಡು: ನೋಡು; ಕೈ: ಹಸ್ತ; ಕೈದುಡುಗು: ಬಲದಿಂದ ತೆಗೆದುಕೋ; ಅಂಜು: ಹೆದರು; ಮಾತು: ವಾಣಿ, ನುಡಿ; ಅಂಗನೆ: ಹೆಣ್ಣ್; ಹೋದ: ಕಳೆದ; ಇರುಳು: ರಾತ್ರಿ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ನೂಕು: ತಳ್ಳು; ದಯಾಂಬುಧಿ: ಕರುಣೆಯ ಸಾಗರ; ಕುಸುಮ: ಹೂವು; ಶರ: ಬಾಣ; ಕುಸುಮಶರ: ಮನ್ಮಥ; ಯಮ: ಮೃತ್ಯುದೇವತೆ; ಬಲ್ಲೆ: ತಿಳಿದಿರುವೆ; ನಗು: ಸಂತಸ;

ಪದವಿಂಗಡಣೆ:
ಆ+ದಿವಸವ್+ಅರಮನೆಗೆ +ಬರುತ +ವೃ
ಕೋದರನ +ವಲ್ಲಭೆಯ+ ಕಂಡನು
ಕೈದುಡಕಲ್+ಅಂಜಿದನು +ಮಾತಾಡಿಸಿದನ್+ಅಂಗನೆಯ
ಹೋದ್+ಇರುಳ+ ಯುಗವಾಗಿ +ನೂಕಿದೆ
ನೀ +ದಯಾಂಬುಧಿ +ಕುಸುಮಶರ+ ಯಮ
ನಾದ +ನೀನೇ +ಬಲ್ಲೆ+ಎಂದನು+ ಕೀಚಕನು+ ನಗುತ

ಅಚ್ಚರಿ:
(೧) ದಿವಸ, ಇರುಳು – ವಿರುದ್ಧ ಪದ
(೨) ದ್ರೌಪದಿಯನ್ನು ವೃಕೋದರನ ವಲ್ಲಭೆ, ಅಂಗನೆ, ದಯಾಂಬುಧಿ ಎಂದು ಕರೆದಿರುವುದು