ಪದ್ಯ ೫೮: ದ್ರೌಪದಿಯು ತನ್ನ ದುಃಖವನ್ನು ಹೇಗೆ ಹೊರಹಾಕಿದಳು?

ಇನ್ನು ಹುಟ್ಟದೆಯಿರಲಿ ನಾರಿಯ
ರೆನ್ನವೊಲು ಭಂಗಿತರು ಭುವನದೊ
ಳಿನ್ನು ಜನಿಸಲು ಬೇಡ ಗಂಡರು ಭೀಮ ಸನ್ನಿಭರು
ಎನ್ನವೋಲ್ ಪಾಂಡವರವೋಲ್ ಸಂ
ಪನ್ನ ದುಃಖದೊಳಾರು ನವೆದರು
ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ನನ್ನಂತೆ ಅಪಮಾನಕ್ಕೊಳಗಾದ ಹೆಂಗಸರು ಇನ್ನು ಮೇಲೆ ಹುಟ್ಟದಿರಲಿ, ಭೀಮನಂತೆ ಅಸಹಾಯಕರಾದ ಪರಮವೀರರು ಇನ್ನು ಮೇಲೆ ಹುಟ್ಟದಿರಲಿ, ನನ್ನಂತೆ ಪಾಂಡವರಂತೆ ಸಂಪೂರ್ಣ ದುಃಖದಿಂದ ಕೊರಗಿದವರು ಈ ಹಿಂದೆ ಯಾರೂ ಇರಲಾರರು ಎಂದು ದ್ರೌಪದಿಯು ದುಃಖಿಸಿದಳು.

ಅರ್ಥ:
ಹುಟ್ಟು: ಜನನ; ನಾರಿ: ಹೆಣ್ಣು; ಭಂಗ: ಕುಂದು, ದೋಷ, ನಾಶ; ಭುವನ: ಭೂಮಿ; ಜನಿಸು: ಹುಟ್ಟು; ಬೇಡ: ಸಲ್ಲದು, ಕೂಡದು; ಗಂಡ: ಪತಿ; ಸನ್ನಿಭ: ಸದೃಶ, ಸಮಾನವಾದ; ಸಂಪನ್ನ: ಸಮೃದ್ಧವಾದ; ದುಃಖ: ದುಗುಡು; ನವೆ:ದುಃಖಿಸು, ಕೊರಗು; ಮುನ್ನ: ಹಿಂದೆ; ಹಿರಿದು: ಹೆಚ್ಚು; ಹಲುಬು: ದುಃಖಿಸು;

ಪದವಿಂಗಡಣೆ:
ಇನ್ನು +ಹುಟ್ಟದೆಯಿರಲಿ+ ನಾರಿಯರ್
ಎನ್ನವೊಲು +ಭಂಗಿತರು+ ಭುವನದೊ
ಳಿನ್ನು +ಜನಿಸಲು +ಬೇಡ +ಗಂಡರು +ಭೀಮ +ಸನ್ನಿಭರು
ಎನ್ನವೋಲ್ +ಪಾಂಡವರವೋಲ್+ ಸಂ
ಪನ್ನ +ದುಃಖದೊಳಾರು+ ನವೆದರು
ಮುನ್ನಿನವರ್+ಒಳಗೆಂದು+ ದ್ರೌಪದಿ+ ಹಿರಿದು+ ಹಲುಬಿದಳು

ಅಚ್ಚರಿ:
(೧) ಹುಟ್ಟು, ಜನಿಸು – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ