ಪದ್ಯ ೩೯: ದ್ರೌಪದಿಯು ಏನು ಯೋಚಿಸುತ್ತಾ ಭೀಮನ ಬಳಿ ಬಂದಳು?

ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ
ತಬ್ಬುವುದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ (ವಿರಾಟ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಯೋಚಿಸುತ್ತಾ ಮುಂದೆ ನಡೆದಳು, ಎಬ್ಬಿಸಿದ ಕೂಡಲೇ ಭೀಮನು ಸಿಟ್ಟಾಗುವನೇ? ಅಥವಾ ಒಬ್ಬಳೇ ಏಕೆ ಬಂದೆ? ಮುಖವೇಕೆ ಕುಂದಿದೆ? ಸಮಾಧಾನ ಮಾಡುವನೇ? ನಾನು ಬಂದದ್ದು ಯಾರಿಗಾದರೂ ತಿಳಿದರೆ? ಎಂದು ಯೋಚಿಸಿದ ದ್ರೌಪದಿಯು ಎಬ್ಬಿಸಿ ನೋಡುವ ಎಂದು ನಿಶ್ಚಯಿಸಿ ಭೀಮನ ಬಳಿ ಬಂದಳು.

ಅರ್ಥ:
ಎಬ್ಬಿಸು: ಎಚ್ಚರಗೊಳಿಸು; ಭುಗಿಲ್: ಕೂಡಲೆ, ಒಂದು ಅನುಕರಣ ಶಬ್ದ; ಮೇಣ್: ಅಥವ; ಬಂದೆ: ಆಗಮಿಸು; ಮೋರೆ: ಮುಖ; ಮಬ್ಬು: ನಸುಗತ್ತಲೆ, ಮಸುಕು; ಸಂತೈಸು: ಸಮಾಧಾನ ಪಡಿಸು; ಸಾಮ: ಶಾಂತಗೊಳಿಸುವಿಕೆ; ತಬ್ಬು: ಅಪ್ಪುಗೆ, ಆಲಿಂಗನ; ನಿಬ್ಬರ: ಅತಿಶಯ, ಹೆಚ್ಚಳ; ಜನ: ಮನುಷ್ಯ; ಮನ: ಮನಸ್ಸು; ನೋಡು: ವೀಕ್ಷಿಸು; ಸಾರು: ಹತ್ತಿರಕ್ಕೆ ಬರು, ಸಮೀಪಿಸು; ವಲ್ಲಭ: ಗಂಡ, ಪತಿ;

ಪದವಿಂಗಡಣೆ:
ಎಬ್ಬಿಸಲು+ ಭುಗಿಲ್+ಎಂಬನೋ +ಮೇಣ್
ಒಬ್ಬಳೇತಕೆ +ಬಂದೆ +ಮೋರೆಯ
ಮಬ್ಬಿದೇನ್+ಎಂದೆನ್ನ+ ಸಂತೈಸುವನೊ +ಸಾಮದಲಿ
ತಬ್ಬುವುದೊ+ ತಾ +ಬಂದ +ಬರವಿದು
ನಿಬ್ಬರವಲಾ+ ಜನದ+ ಮನಕಿನ್
ಎಬ್ಬಿಸಿಯೆ +ನೋಡುವೆನ್+ಎನುತ +ಸಾರಿದಳು +ವಲ್ಲಭನ

ಅಚ್ಚರಿ:
(೧) ಎಬ್ಬಿಸು – ೧, ೬ ಸಾಲಿನ ಮೊದಲ ಪದ
(೨) ದ್ರೌಪದಿಯ ಪ್ರಶ್ನೆಗಳು – ಎಬ್ಬಿಸಲು ಭುಗಿಲೆಂಬನೋ, ಒಬ್ಬಳೇತಕೆ ಬಂದೆ, ಮೋರೆಯ ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ

ನಿಮ್ಮ ಟಿಪ್ಪಣಿ ಬರೆಯಿರಿ