ಪದ್ಯ ೪೨: ಭೀಮನೇಕೆ ಕೋಪಗೊಂಡ?

ನಿನ್ನೆ ಹಗಲರೆತಟ್ಟಿ ಕೀಚಕ
ಕುನ್ನಿಯೊದೆದನು ರಾಜಸಭೆಯಲಿ
ನಿನ್ನವಂದಿಗರಿರಲು ಪರಿಭವವುಚಿತವೇ ತನಗೆ
ಎನ್ನನವ ಬೆಂಬಳಿಯಬಿಡನಾ
ನಿನ್ನು ಬದುಕುವಳಲ್ಲ ಪಾತಕ
ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ (ವಿರಾಟ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಹಿಂದಿನ ದಿನ ಕೀಚಕನೆಂಬ ನಾಯಿಯು ರಾಜಸಭೆಯ ಎದುರಿನಲ್ಲಿ ನನ್ನನ್ನು ನೂಕಿ ಕಾಲಿನಲ್ಲಿ ಹೊಸಗಿ ಹೊಡೆದುದನ್ನು ನೀನೇ ನೋಡಿದೆ, ನಿನ್ನಂತಹವನಿರುವಾಗ ನನಗೆ ಈ ಅಪಮಾನ ಸರಿಯೇ? ಅವನು ನನ್ನ ಬೆನ್ನು ಹತ್ತದೆ ಬಿಡುವುದಿಲ್ಲ, ನಾನು ಬದುಕುವವಳಲ್ಲ ನಾನು ಸತ್ತರೆ ಆ ಪಾಪ ನಿನಗೆ ತಟ್ಟದೆ ಬಿಡುವುದಿಲ್ಲ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಹಗಲು: ದಿನ; ಅರೆಯಟ್ಟು: ಹಿಂದಕ್ಕಟ್ಟು, ಬೆನ್ನಟ್ಟು; ಕುನ್ನಿ: ನಾಯಿ; ಒದೆ: ಕಾಲಲ್ಲಿ ನೂಕು; ರಾಜಸಭೆ: ದರ್ಬಾರು; ಪರಿಭವ: ಅನಾದಾರ, ತಿರಸ್ಕಾರ; ಉಚಿತ: ಸರಿಯೇ; ಬೆಂಬಳಿ: ಹಿಂದೆ ಬೀಳು; ಬದುಕು: ಜೀವಿಸು; ಪಾತಕ: ಪಾಪಿ; ತಾಗು: ಮುಟ್ಟು; ಮಾಣು: ನಿಲ್ಲು; ಖತಿ: ಕೋಪ; ಆನು: ನಾನು;

ಪದವಿಂಗಡಣೆ:
ನಿನ್ನೆ +ಹಗಲ್+ಅರೆತಟ್ಟಿ+ ಕೀಚಕ
ಕುನ್ನಿ+ಒದೆದನು +ರಾಜಸಭೆಯಲಿ
ನಿನ್ನವಂದಿಗರ್+ಇರಲು +ಪರಿಭವ+ಉಚಿತವೇ +ತನಗೆ
ಎನ್ನನ್+ಅವ+ ಬೆಂಬಳಿಯಬಿಡನ್
ಆನಿನ್ನು +ಬದುಕುವಳಲ್ಲ+ ಪಾತಕ
ನಿನ್ನ+ ತಾಗದೆ +ಮಾಣದೆನಲ್+ಆ+ ಭೀಮ +ಖತಿಗೊಂಡ

ಅಚ್ಚರಿ:
(೧) ದ್ರೌಪದಿಯು ಭೀಮನನ್ನು ಹೆದರಿಸುವ ಪರಿ – ಪಾತಕ ನಿನ್ನ ತಾಗದೆ ಮಾಣದು
(೨) ದ್ರೌಪದಿಯು ಭೀಮನನ್ನು ಹೊಗಳುವ ಪರಿ – ನಿನ್ನವಂದಿಗರಿರಲು ಪರಿಭವವುಚಿತವೇ ತನಗೆ

ಪದ್ಯ ೪೧: ಭೀಮನು ದ್ರೌಪದಿಯನ್ನು ಏನು ಕೇಳಿದ?

ಸೈರಿಸರು ಬಾಣಸದ ಭವನದ
ನಾರಿಯರು ದುರ್ಜನರು ಖುಲ್ಲ ಕು
ಠಾರರಿವರರಮನೆಯ ನಾಯ್ಗಳು ನಾವು ದೇಶಿಗರು
ಭಾರವಿದು ಕೆಲರರಿಯದಂತಿರೆ
ನಾರಿ ನೀ ಹೇಳೆನುತ ದುಗುಡವಿ
ದಾರ ದೆಸೆಯಿಂದಾಯಿತೆನಲಿಂತೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಭೀಮನು, ದ್ರೌಪದಿ ಅಡುಗೆ ಮೆನಯ್ ಚಾಕರಿಯಲ್ಲಿರುವ ಹೆಂಗಸರು ಬಹಳ ಕೀಳು ಮನಸ್ಸಿನವರು, ಇವರು ಅರಮನೆಯ ಸಾಕು ನಾಯಿಗಳು, ನಾವು ಪರದೇಶದವರು, ಅವರಿಗೆ ತಿಳಿದರೆ ಸಹಿಸುವುದು ಕಷ್ಟ, ಬೇಗ ಹೇಳು ನಿನಗೆ ಈ ದುಃಖವು ಯಾರಿಂದಾಯಿತು ಎಂದು ಕೇಳಲು, ದ್ರೌಪದಿ ಹೀಗೆ ನುಡಿದಳು.

ಅರ್ಥ:
ಸರಿಸು: ತಾಳ್ಮೆ, ಸಮಾಧಾನ; ಬಾಣಸ: ಅಡುಗೆ; ಭವನ: ಆಲಯ; ನಾರಿ: ಹೆಣ್ಣು; ದುರ್ಜನ: ಕೆಟ್ಟವರು; ಖುಲ್ಲ: ದುಷ್ಟ; ಕುಠಾರ: ಒರಟು ವ್ಯಕ್ತಿ, ಕ್ರೂರಿ; ಅರಮನೆ: ರಾಜರ ಭವನ; ನಾಯಿ: ಶ್ವಾನ; ದೇಶಿಗ: ಪರದೇಶ; ಭಾರ: ಹೊರೆ; ಕೆಲರು: ಕೆಲವರು; ಅರಿ: ತಿಳಿ; ನಾರಿ: ಹೆಣ್ಣು; ಹೇಳು: ತಿಳಿಸು; ದುಗುಡ: ದುಃಖ; ದೆಸೆ: ಕಾರಣ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಸೈರಿಸರು +ಬಾಣಸದ +ಭವನದ
ನಾರಿಯರು +ದುರ್ಜನರು+ ಖುಲ್ಲ+ ಕು
ಠಾರರ್+ಇವರ್+ಅರಮನೆಯ +ನಾಯ್ಗಳು +ನಾವು +ದೇಶಿಗರು
ಭಾರವಿದು +ಕೆಲರ್+ಅರಿಯದಂತಿರೆ
ನಾರಿ +ನೀ +ಹೇಳೆನುತ+ ದುಗುಡವಿದ್
ಆರ+ ದೆಸೆಯಿಂದ್+ಆಯಿತ್+ಎನಲ್+ಇಂತೆಂದಳ್+ಇಂದುಮುಖಿ

ಅಚ್ಚರಿ:
(೧) ಅಡುಗೆ ಮನೆಯವರನ್ನು ಬಯ್ಯುವ ಪರಿ – ಬಾಣಸದ ಭವನದ ನಾರಿಯರು ದುರ್ಜನರು ಖುಲ್ಲ ಕು
ಠಾರರಿವರರಮನೆಯ ನಾಯ್ಗಳು

ಪದ್ಯ ೪೦: ಭೀಮನು ದ್ರೌಪದಿಯನ್ನು ಏನು ಕೇಳಿದ?

ಮೆಲ್ಲ ಮೆಲ್ಲನೆ ಮುಸುಕು ಸಡಿಲಿಸಿ
ಗಲ್ಲವನು ಹಿಡಿದಲುಗಲಪ್ರತಿ
ಮಲ್ಲನೆದ್ದನು ನೋಡಿದನು ಪಾಂಚಾಲ ನಂದನೆಯ
ವಲ್ಲಭೆಯ ಬರವೇನು ಮುಖದಲಿ
ತಲ್ಲಣವೆ ತಲೆದೋರುತಿದೆ ತಳು
ವಿಲ್ಲದುಸಿರಿರುಳೇಕೆ ಬಂದೆ ಲತಾಂಗಿ ಹೇಳೆಂದ (ವಿರಾಟ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ದ್ರೌಪದಿ ಮೆಲ್ಲ ಮೆಲ್ಲನೆ ಭೀಮನು ಹೊದ್ದಿಕೊಂಡಿದ್ದ ಮುಸುಕನ್ನು ತೆಗೆದಳು, ಗಲ್ಲವನ್ನು ಹಿಡಿದು ಅಲುಗಿಸಲು, ಭೀಮನು ಎದ್ದು ನೋಡಿದನು. ದ್ರೌಪದಿಯನ್ನು ನೋಡಿ ಸ್ವಲ್ಪ ವಿಚಲಿತನಾಗಿ ಏಕೆ ಬಂದೆ, ಮುಖದಲ್ಲಿ ಭಯೋದ್ವೇಗವೇ ಎದ್ದುಕಾಣುತ್ತಿದೆ, ಈ ರಾತ್ರಿಯಲ್ಲೇಕೆ ಬಂದೆ, ತಡಮಾಡದೆ ಹೇಳು ಎಂದು ಕೇಳಿದನು.

ಅರ್ಥ:
ಮೆಲ್ಲ: ನಿಧಾನ; ಮುಸುಕು: ಹೊದಿಕೆ; ಸಡಿಲಿಸು: ಜರುಗಿಸು; ಗಲ್ಲ: ಕೆನ್ನೆ; ಹಿಡಿದು: ಗ್ರಹಿಸು; ಅಲುಗು: ಅಲ್ಲಾಡಿಸು; ಅಪ್ರತಿಮಮಲ್ಲ: ಮಹಾವೀರ; ಎದ್ದು: ಎಚ್ಚರವಾಗು; ನೋಡು: ವೀಕ್ಷಿಸು; ನಂದನೆ: ಮಗಳು; ವಲ್ಲಭೆ: ಪ್ರಿಯೆ; ಬರವು: ಆಗಮನ; ಮುಖ: ಆನನ; ತಲ್ಲಣ: ಅಂಜಿಕೆ, ಭಯ; ತಲೆದೋರು: ಕಾಣಿಸು; ತಳುವು: ನಿಧಾನಿಸು, ತಡಮಾಡು; ಉಸಿರು: ಶ್ವಾಸ; ಇರುಳು: ರಾತ್ರಿ; ಬಂದು: ಆಗಮಿಸು; ಲತಾಂಗಿ: ಹೆಣ್ಣು, ಸುಂದರಿ, ಬಳ್ಳಿಯಂತಿರುವವಳು; ಹೇಳು: ಆಲಿಸು;

ಪದವಿಂಗಡಣೆ:
ಮೆಲ್ಲ +ಮೆಲ್ಲನೆ +ಮುಸುಕು +ಸಡಿಲಿಸಿ
ಗಲ್ಲವನು +ಹಿಡಿದ್+ಅಲುಗಲ್+ಅಪ್ರತಿ
ಮಲ್ಲನ್+ಎದ್ದನು +ನೋಡಿದನು +ಪಾಂಚಾಲ +ನಂದನೆಯ
ವಲ್ಲಭೆಯ +ಬರವೇನು +ಮುಖದಲಿ
ತಲ್ಲಣವೆ+ ತಲೆದೋರುತಿದೆ+ ತಳು
ವಿಲ್ಲದ್+ಉಸಿರ್+ಇರುಳೇಕೆ +ಬಂದೆ +ಲತಾಂಗಿ +ಹೇಳೆಂದ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೆಲ್ಲ ಮೆಲ್ಲನೆ ಮುಸುಕು
(೨) ತ ಕಾರದ ತ್ರಿವಳಿ ಪದ – ತಲ್ಲಣವೆ ತಲೆದೋರುತಿದೆ ತಳುವಿಲ್ಲದುಸಿರು
(೩) ದ್ರೌಪದಿಯನ್ನು ಕರೆದ ಪರಿ – ಪಾಂಚಾಲ ನಂದನೆ, ವಲ್ಲಭೆ, ಲತಾಂಗಿ
(೪) ಭೀಮನನ್ನು ಅಪ್ರತಿಮಮಲ್ಲ ಎಂದು ಕರೆದಿರುವುದು

ಪದ್ಯ ೩೯: ದ್ರೌಪದಿಯು ಏನು ಯೋಚಿಸುತ್ತಾ ಭೀಮನ ಬಳಿ ಬಂದಳು?

ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ
ತಬ್ಬುವುದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ (ವಿರಾಟ ಪರ್ವ, ೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದ್ರೌಪದಿಯು ಯೋಚಿಸುತ್ತಾ ಮುಂದೆ ನಡೆದಳು, ಎಬ್ಬಿಸಿದ ಕೂಡಲೇ ಭೀಮನು ಸಿಟ್ಟಾಗುವನೇ? ಅಥವಾ ಒಬ್ಬಳೇ ಏಕೆ ಬಂದೆ? ಮುಖವೇಕೆ ಕುಂದಿದೆ? ಸಮಾಧಾನ ಮಾಡುವನೇ? ನಾನು ಬಂದದ್ದು ಯಾರಿಗಾದರೂ ತಿಳಿದರೆ? ಎಂದು ಯೋಚಿಸಿದ ದ್ರೌಪದಿಯು ಎಬ್ಬಿಸಿ ನೋಡುವ ಎಂದು ನಿಶ್ಚಯಿಸಿ ಭೀಮನ ಬಳಿ ಬಂದಳು.

ಅರ್ಥ:
ಎಬ್ಬಿಸು: ಎಚ್ಚರಗೊಳಿಸು; ಭುಗಿಲ್: ಕೂಡಲೆ, ಒಂದು ಅನುಕರಣ ಶಬ್ದ; ಮೇಣ್: ಅಥವ; ಬಂದೆ: ಆಗಮಿಸು; ಮೋರೆ: ಮುಖ; ಮಬ್ಬು: ನಸುಗತ್ತಲೆ, ಮಸುಕು; ಸಂತೈಸು: ಸಮಾಧಾನ ಪಡಿಸು; ಸಾಮ: ಶಾಂತಗೊಳಿಸುವಿಕೆ; ತಬ್ಬು: ಅಪ್ಪುಗೆ, ಆಲಿಂಗನ; ನಿಬ್ಬರ: ಅತಿಶಯ, ಹೆಚ್ಚಳ; ಜನ: ಮನುಷ್ಯ; ಮನ: ಮನಸ್ಸು; ನೋಡು: ವೀಕ್ಷಿಸು; ಸಾರು: ಹತ್ತಿರಕ್ಕೆ ಬರು, ಸಮೀಪಿಸು; ವಲ್ಲಭ: ಗಂಡ, ಪತಿ;

ಪದವಿಂಗಡಣೆ:
ಎಬ್ಬಿಸಲು+ ಭುಗಿಲ್+ಎಂಬನೋ +ಮೇಣ್
ಒಬ್ಬಳೇತಕೆ +ಬಂದೆ +ಮೋರೆಯ
ಮಬ್ಬಿದೇನ್+ಎಂದೆನ್ನ+ ಸಂತೈಸುವನೊ +ಸಾಮದಲಿ
ತಬ್ಬುವುದೊ+ ತಾ +ಬಂದ +ಬರವಿದು
ನಿಬ್ಬರವಲಾ+ ಜನದ+ ಮನಕಿನ್
ಎಬ್ಬಿಸಿಯೆ +ನೋಡುವೆನ್+ಎನುತ +ಸಾರಿದಳು +ವಲ್ಲಭನ

ಅಚ್ಚರಿ:
(೧) ಎಬ್ಬಿಸು – ೧, ೬ ಸಾಲಿನ ಮೊದಲ ಪದ
(೨) ದ್ರೌಪದಿಯ ಪ್ರಶ್ನೆಗಳು – ಎಬ್ಬಿಸಲು ಭುಗಿಲೆಂಬನೋ, ಒಬ್ಬಳೇತಕೆ ಬಂದೆ, ಮೋರೆಯ ಮಬ್ಬಿದೇನೆಂದೆನ್ನ ಸಂತೈಸುವನೊ ಸಾಮದಲಿ