ಪದ್ಯ ೩೧: ದ್ರೌಪದಿ ಏಕೆ ನೊಂದಳು?

ಎಂದು ಬೀಳ್ಕೊಂಡಬಲೆ ತನ್ನಯ
ಮಂದಿರಕೆ ಬಂದೊಳಗೊಳಗೆ ಮನ
ನೊಂದು ಸೈವೆರಗಾಗಿ ಚಿಂತಿಸಿ ನೂಕಿದಳು ಹಗಲ
ಕೊಂದು ಕೊಂಬೊಡೆ ಆತ್ಮಘಾತಕ
ಹಿಂದೆ ಹತ್ತದೆ ಮಾಣದೇಗುವೆ
ನೆಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು (ವಿರಾಟ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಹೀಗೆ ಹೇಳಿ ದ್ರೌಪದಿಯು ತನ್ನ ಮನೆಗೆ ಬಂದು ಮನಸ್ಸಿನಲ್ಲಿಯೇ ಅತಿಶಯವಾಗಿ ನೊಂದು, ಬಹಳ ತಳಮಳಗೊಂಡು ಚಿಂತಿಸಿದಳು. ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ ಪಾಪ ಬರುವುದು ತಪ್ಪಿದ್ದಲ್ಲ, ಏನು ಮಾಡಲಿ ಎಂದು ಬಹಳ ನೊಂದಳು.

ಅರ್ಥ:
ಬೀಳ್ಕೊಂಡು: ತೆರಳು; ಮಂದಿರ: ಆಲಯ; ಬಂದು: ಆಗಮಿಸು; ಮನ: ಮನಸ್ಸು; ನೊಂದು: ನೋವು, ದುಃಖ; ಸೈವೆರಗು: ಅತಿಯಾದ ತಳಮಳ; ಚಿಂತಿಸು: ಯೋಚಿಸು; ನೂಕು: ತಳ್ಳು; ಹಗಲು: ದಿನ; ಕೊಂದು: ಸಾಯಿಸು; ಆತ್ಮ: ಜೀವ; ಘಾತ: ಆಪತ್ತು, ಕೊಲೆ; ಹಿಂದೆ: ಅನಂತರ; ಹತ್ತು: ಮೇಲೇರು; ಮಾಣು: ತಡಮಾಡು; ಏಗು: ಸಾಗಿಸು, ನಿಭಾಯಿಸು; ಮನ: ಮನಸ್ಸು; ಹಿರಿ:ಚೆದುರು; ಮರುಗು: ತಳಮಳ, ಸಂಕಟ;

ಪದವಿಂಗಡಣೆ:
ಎಂದು +ಬೀಳ್ಕೊಂಡ್+ಅಬಲೆ +ತನ್ನಯ
ಮಂದಿರಕೆ +ಬಂದ್+ಒಳಗೊಳಗೆ +ಮನ
ನೊಂದು +ಸೈವೆರಗಾಗಿ+ ಚಿಂತಿಸಿ+ ನೂಕಿದಳು +ಹಗಲ
ಕೊಂದು +ಕೊಂಬೊಡೆ +ಆತ್ಮಘಾತಕ
ಹಿಂದೆ +ಹತ್ತದೆ +ಮಾಣದ್+ಏಗುವೆನ್
ಎಂದು +ದ್ರೌಪದಿ +ತನ್ನ +ಮನದಲಿ+ ಹಿರಿದು +ಮರುಗಿದಳು

ಅಚ್ಚರಿ:
(೧) ಆತ್ಮಹತ್ಯೆ ಏಕೆ ಮಾಡಿಕೊಳ್ಳಬಾರದು – ಕೊಂದು ಕೊಂಬೊಡೆ ಆತ್ಮಘಾತಕ

ಪದ್ಯ ೩೦: ಸೈರಂಧ್ರಿಯು ಸುದೇಷ್ಣೆಗೆ ಏನು ಹೇಳಿದಳು?

ಲಲನೆ ಕೇಳನ್ಯಾಯದವರನು
ಕೊಲಿಸುವೆನು ಭಯಬೇಡ ಪರಸತಿ
ಗಳುಪಿದವನೊಡಹುಟ್ಟಿದನೆ ಕಡುಪಾಪಿ ಹಗೆಯೆನಲು
ಕೊಲಿಸುವೊಡೆ ನೀವೇಕೆ ತಪ್ಪಿನ
ಬಳಿಯಲೆನ್ನಾತಗಳು ಕೀಚಕ
ಕುಲವ ಸವರುವರೆನಗೆ ಕಾರಣವಿಲ್ಲ ಸಾರಿದೆನು (ವಿರಾಟ ಪರ್ವ, ೩ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸೈರಂಧ್ರಿಯ ಮಾತನ್ನು ಕೇಳಿ, ಎಲೈ ಸೈರಂಧ್ರಿ ನೀನೇನು ಹೆದರಬೇಡ, ಅನ್ಯಾಯ ಮಾಡಿದವರನ್ನು ಕೊಲ್ಲಿಸುತ್ತೇನೆ, ಪರಸ್ತ್ರಿಯನ್ನು ಮೋಹಿಸಿದವನು ನನ್ನ ತಮ್ಮನಲ್ಲ ಮಹಾಪಾಪಿಯಾದ ಶತ್ರು ಎಂದು ಸುದೇಷ್ಣೆಯು ಹೇಳಿದಳು, ಸೈರಂಧ್ರಿಯು ಉತ್ತರಿಸುತ್ತಾ, ಅವನನ್ನು ನೀವೇನೂ ಕೊಲ್ಲಿಸಬೇಕಾಗಿಲ್ಲ. ತಪ್ಪನ್ನು ಈಗ ಮಾಡಿದ್ದಾನೆ, ನನ್ನ ಪತಿಗಳು ಈಗಲೇ ಕೀಚಕ ಕುಲವನ್ನು ಸಂಹಾರ ಮಾಡುತ್ತಾರೆ. ನನ್ನದೇನೂ ಇದರಲ್ಲಿಲ್ಲ, ಇದೋ ಹೊರಟೆ ಎಂದಳು.

ಅರ್ಥ:
ಲಲನೆ: ಹೆಣ್ಣು; ಕೇಳು: ಆಲಿಸು; ಅನ್ಯಾಯ: ಸರಿಯಲ್ಲದ; ಕೊಲಿಸು: ಸಾಯಿಸು; ಭಯ: ಅಂಜಿಕೆ; ಪರಸತಿ: ಅನ್ಯರ ಹೆಂಡತ್; ಅಳುಪು: ಬಯಸು; ಒಡಹುಟ್ಟು: ಜೊತೆಯಲ್ಲಿ ಜನಿಸಿದ; ಕಡುಪಾಪಿ: ಮಹಾದುಷ್ಟ; ಹಗೆ: ವೈರಿ; ತಪ್ಪು: ನೀತಿಬಿಟ್ಟ ನಡೆ; ಕುಲ: ವಂಶ; ಸವರು: ನಾಶ; ಕಾರಣ: ನಿಮಿತ್ತ, ಹೇತು; ಸಾರು: ಹೇಳು;

ಪದವಿಂಗಡಣೆ:
ಲಲನೆ ಕೇಳ್+ಅನ್ಯಾಯದವರನು
ಕೊಲಿಸುವೆನು +ಭಯಬೇಡ+ ಪರಸತಿಗ್
ಅಳುಪಿದವನ್+ಒಡಹುಟ್ಟಿದನೆ +ಕಡುಪಾಪಿ+ ಹಗೆಯೆನಲು
ಕೊಲಿಸುವೊಡೆ +ನೀವೇಕೆ +ತಪ್ಪಿನ
ಬಳಿಯಲ್+ಎನ್ನಾತಗಳು +ಕೀಚಕ
ಕುಲವ +ಸವರುವರ್+ಎನಗೆ +ಕಾರಣವಿಲ್ಲ +ಸಾರಿದೆನು

ಅಚ್ಚರಿ:
(೧) ಸುದೇಷ್ಣೆಯು ಕೀಚಕನನ್ನು ಬಯ್ಯುವ ಪರಿ – ಪರಸತಿಗಳುಪಿದವನೊಡಹುಟ್ಟಿದನೆ ಕಡುಪಾಪಿ ಹಗೆಯೆನಲು