ಪದ್ಯ ೨೯: ಸೈರಂಧ್ರಿಯು ಸುದೇಷ್ಣೆಗೆ ಏನು ಹೇಳಿದಳು?

ದುರುಳ ನಿಮ್ಮೊಡಹುಟ್ಟಿದನು ನೀ
ವರಸುಗಳು ತಿರುಕುಳಿಗಳಾವಿ
ನ್ನಿರಲುಬಾರದು ನೃಪತಿ ತಪ್ಪಿದೊಡಾರು ಕಾಯುವರು
ಕರೆಸಿ ಬುದ್ಧಿಯ ಹೇಳಿಯೆನ್ನನು
ಹೊರೆಯಲಾಪರೆ ಹೊರೆಯಿರಲ್ಲದೊ
ಡರಸಿ ಕಳುಹುವುದೆನಲು ಬಳಿಕಿಂತೆಂದಳಾ ರಾಣಿ (ವಿರಾಟ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ನಿಮ್ಮ ತಮ್ಮನು ದುಷ್ಟ, ನೀವು ರಾಜರು, ನಾನು ನಿಮ್ಮಾಶ್ರಯದಲ್ಲಿರುವ ತಿರುಪೆ ಬೇಡುವವಳು, ರಾಜರೇ ತಪ್ಪಿದ ಮೇಲೆ ಇನ್ನು ಕಾಯುವವರಾರು? ನಿಮ್ಮ ತಮ್ಮನನ್ನು ಕರೆಸಿ ಸರಿಯಾಗಿ ಬುದ್ಧಿ ಹೇಳಿ, ನಮ್ಮನ್ನು ಕಾಪಾಡುವಉದಾದರೆ ಇಟ್ಟುಕೊಳ್ಳಿ, ಇಲ್ಲದಿದ್ದರೆ ರಾಣಿ, ನಮ್ಮನ್ನು ಎಲ್ಲಿಗಾದರೂ ಕಳುಹಿಸಿಬಿಡಿ ಎಂದು ಸೈರಂಧ್ರಿಯು ಸುದೇಷ್ಣೆಗೆ ಹೇಳಿದಳು.

ಅರ್ಥ:
ದುರುಳ: ದುಷ್ಟ; ಒಡಹುಟ್ಟು: ಜೊತೆಯಲ್ಲಿ ಹುಟ್ಟಿದ; ಅರಸು: ರಾಜ; ತಿರುಕ:ಭಿಕ್ಷುಕ, ಯಾಚಕ; ನೃಪತಿ: ರಾಜ; ತಪ್ಪು: ಸರಿಯಲ್ಲದ; ಕಾಯು: ರಕ್ಷಿಸು; ಕರೆಸು: ಬರೆಮಾಡು; ಬುದ್ಧಿ: ತಿಳುವಳಿಕೆ; ಹೇಳು: ತಿಳಿಸು; ಹೊರೆ: ರಕ್ಷಣೆ, ಆಶ್ರಯ; ಅರಸಿ: ಹುಡುಕಿ; ಕಳುಹು: ಕಳುಹಿಸು, ತೆರಳು; ಬಳಿಕ: ನಂತರ; ರಾಣಿ: ಅರಸಿ;

ಪದವಿಂಗಡಣೆ:
ದುರುಳ +ನಿಮ್ಮ್+ಒಡಹುಟ್ಟಿದನು +ನೀವ್
ಅರಸುಗಳು +ತಿರುಕುಳಿಗಳ್+ಆವ್
ಇನ್ನಿರಲುಬಾರದು+ ನೃಪತಿ+ ತಪ್ಪಿದೊಡ್+ಆರು +ಕಾಯುವರು
ಕರೆಸಿ+ ಬುದ್ಧಿಯ +ಹೇಳಿ+ಎನ್ನನು
ಹೊರೆಯಲಾಪರೆ+ ಹೊರೆಯಿರಲ್ಲದೊಡ್
ಅರಸಿ +ಕಳುಹುವುದ್+ಎನಲು +ಬಳಿಕಿಂತೆಂದಳಾ +ರಾಣಿ

ಅಚ್ಚರಿ:
(೧) ಹೊರೆ ಪದದ ಬಳಕೆ – ಹೊರೆಯಲಾಪರೆ ಹೊರೆಯಿರಲ್ಲದೊಡ್

ಪದ್ಯ ೨೮: ದ್ರೌಪದಿ ಸುದೇಷ್ಣೆಗೆ ಏನು ಹೇಳಿದಳು?

ಆ ಸುದೇಷ್ಣೆಯ ಮನೆಗೆ ಬರಲವ
ಳೀ ಸತಿಯ ನುಡಿಸಿದಳು ತಂಗಿ ವಿ
ಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು
ಈಸು ಮರವೆಯಿದರಸುತನದ ಮ
ಹಾ ಸಗಾಢಿಕೆಯೆಮ್ಮ ನೀವಪ
ಹಾಸ ಮಾಡುವಿರೆನುತ ದ್ರೌಪದಿ ನುಡಿದಳರಸಿಯನು (ವಿರಾಟ ಪರ್ವ, ೩ ಸಂಧಿ, ೨೮ ಪದ್ಯ)

ತಾತ್ಪರ್ಯ:
ಅಂತಃಪುರಕ್ಕೆ ಸೈರಂಧ್ರಿಯು ಹಿಂದಿರುಗಿದಾಗ, ಸುದೇಷ್ಣೆಯು ತಂಗಿ, ಮುಖವೇಕೆ ಅಂದಗೆಟ್ಟಿದೆ, ಏನು ದುಃಖ, ಏನು ವಿಷಯ ಎಂದು ಕೇಳಿದಳು, ಸೈರಂಧ್ರಿಯು ಇಷ್ಟು ಬೇಗ ರಾಜಸಭೆಯಲ್ಲಾದುದನ್ನು ಮರೆತು ಬಿಟ್ಟಿರಾ? ರಾಜಪದವಿಯ ಸಲಿಗೆಯಿಂದ ನನ್ನನ್ನು ಅಪಹಾಸ್ಯ ಮಾಡುತ್ತಿದ್ದೀರಾ ಎಂದು ಕೇಳಿದಳು.

ಅರ್ಥ:
ಮನೆ: ಆಲಯ; ಬರಲು: ಆಗಮಿಸು; ಸತಿ: ಹೆಂಡತಿ, ಸ್ತ್ರಿ; ನುಡಿ: ಮಾತಾಡು; ತಂಗಿ: ಸಹೋದರಿ; ವಿಳಾಸ:ಅಂದ, ಸೊಬಗು; ಅಳಿ: ನಾಶ; ಮುಖ: ಆನನ; ದುಗುಡ: ದುಃಖ; ಹದ: ರೀತಿ; ಈಸು: ಇಷ್ಟು; ಮರವೆ: ಜ್ಞಾಪಕವಿಲ್ಲದಿರುವುದು; ಅರಸು: ರಾಜ; ಸಗಾಢ: ಜೋರು, ರಭಸ; ಅಪಹಾಸ: ತಿರಸ್ಕಾರ ಮಾಡುವ ಮಾತು; ಅರಸಿ: ರಾಣಿ;

ಪದವಿಂಗಡಣೆ:
ಆ +ಸುದೇಷ್ಣೆಯ +ಮನೆಗೆ +ಬರಲ್+ಅವಳ್
ಈ+ ಸತಿಯ+ ನುಡಿಸಿದಳು +ತಂಗಿ +ವಿ
ಳಾಸವ್+ಅಳಿದಿದೆ+ ಮುಖದ +ದುಗುಡವ್+ಇದೇನು +ಹದನೆನಲು
ಈಸು +ಮರವೆ+ಇದ್+ಅರಸುತನದ+ ಮ
ಹಾ +ಸಗಾಢಿಕೆ+ಎಮ್ಮ +ನೀವ್+ಅಪ
ಹಾಸ +ಮಾಡುವಿರೆನುತ+ ದ್ರೌಪದಿ+ ನುಡಿದಳ್+ಅರಸಿಯನು

ಅಚ್ಚರಿ:
(೧) ಸುದೇಷ್ಣೆಯ ಅಪಹಾಸದ ಮಾತುಗಳು – ತಂಗಿ ವಿಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು

ಪದ್ಯ ೨೭: ದ್ರೌಪದಿಯ ದಿಟ್ಟ ನಿರ್ಧಾರವೇನು?

ಅರರೆ ಹೆಂಗಸು ದಿಟ್ಟೆ ಮೋನದೊ
ಳಿರಲದಾವಂತರವು ರಾಯನ
ಹೊರೆಯಲೀ ಬಾಯ್ಬಡಿತಕನ ಗರುವಾಯಿತೇ ಯೆನಲು
ಕೆರಳಿದಳು ಲಲಿತಾಂಗಿಯಿಲ್ಲಿಯ
ಹಿರಿಯರಲಿ ಹುರುಳಿಲ್ಲ ಮಾರುತಿ
ಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು (ವಿರಾಟ ಪರ್ವ, ೩ ಸಂಧಿ, ೨೭ ಪದ್ಯ)

ತಾತ್ಪರ್ಯ:
ಸಭೆಯಲ್ಲಿದ್ದವರು ದ್ರೌಪದಿಯ ಮಾತನ್ನು ಕೇಳಿ, ಅರೆರೆ ಈ ಹೆಂಗಸು ಗೈಯ್ಯಾಳಿ, ಮೌನದಿಂದಿದ್ದರೆ ಆಗಿತ್ತು, ರಾಜನೆದುರಿನಲ್ಲಿ ಬಾಯಿಬಡುಕತನದಿಂದ ಮಾತನಾಡಿದಳು, ಇದು ಗೌರವದ ಲಕ್ಷಣವಲ್ಲ ಎನಲು, ದ್ರೌಪದಿಯು ಕೆರಳಿ, ಇಲ್ಲಿಯ ಹಿರಿಯರಲ್ಲಿ ಯಾವ ಸತ್ವವೂ ಇಲ್ಲ, ಭೀಮನಿಗೆ ಹೇಳುತ್ತೇನೆ ಆದುದಾಗಲಿ ಎಂದುಕೊಂಡು ಸಭೆಯಿಂದ ಹೊರನಡೆದಳು.

ಅರ್ಥ:
ಹೆಂಗಸು: ಸ್ತ್ರೀ; ದಿಟ್ಟೆ: ಗಟ್ಟಿ, ಧೈರ್ಯಶಾಲಿನಿ; ಮೋನ: ಮೌನ; ಅಂತರ: ದೂರ; ರಾಯ: ರಾಜ; ಹೊರೆ: ರಕ್ಷಣೆ, ಆಶ್ರಯ; ಬಾಯ್ಬಡಿತ: ಒರಟಾಗಿ/ಸುಮ್ಮನೆ ಮಾತಾಡು; ಗರುವಾಯಿ: ದೊಡ್ಡತನ, ಠೀವಿ; ಕೆರಳು: ರೇಗು, ಕನಲು; ಲಲಿತಾಂಗಿ: ಹೆಣ್ಣು, ಬಳ್ಳಿಯಂತ ಅಂಗವನ್ನುಳ್ಳವಳು; ಹಿರಿಯ: ದೊಡ್ಡವ; ಹುರುಳು: ಸತ್ವ; ಮಾರುತಿ: ವಾಯುಪುತ್ರ; ಅರುಹು: ಹೇಳು; ಬಳಿಕ: ನಂತರ; ತಿರುಗು: ಮಗ್ಗುಲಾಗು;

ಪದವಿಂಗಡಣೆ:
ಅರರೆ +ಹೆಂಗಸು +ದಿಟ್ಟೆ +ಮೋನದೊಳ್
ಇರಲ್+ಅದಾವ್+ಅಂತರವು+ ರಾಯನ
ಹೊರೆಯಲೀ+ ಬಾಯ್ಬಡಿತಕನ+ ಗರುವಾಯಿತೇ +ಯೆನಲು
ಕೆರಳಿದಳು+ ಲಲಿತಾಂಗಿ+ಇಲ್ಲಿಯ
ಹಿರಿಯರಲಿ +ಹುರುಳಿಲ್ಲ +ಮಾರುತಿಗ್
ಅರುಹುವೆನು +ಬಳಿಕ್+ಆದುದಾಗಲಿ+ಎನುತ +ತಿರುಗಿದಳು

ಅಚ್ಚರಿ:
(೧) ದ್ರೌಪದಿಯ ದಿಟ್ಟ ಹೆಜ್ಜೆ – ಮಾರುತಿಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು

ಪದ್ಯ ೨೬: ಕ್ಷಮೆಗೆ ಮಿತಿಯೆಂಬು ಇರಬೇಕೆ?

ನೀರು ಹೊರಗಿಕ್ಕುವುದು ಮೂರೇ
ಬಾರಿ ಬಳಿಕದು ಪಾಪಿ ಝಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು
ಸೈರಣೆಗೆ ತಾನವಧಿಯಿಲ್ಲಾ
ಪೌರುಷದ ಬಗೆ ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕ್ಷಮೆಗೂ ಒಂದು ಮಿತಿ ಇದೆ. ತನ್ನಲ್ಲಿ ಮುಳುಗಿದವನನ್ನು ನೀರು ಮೂರು ಬಾರಿ ಮಾತ್ರ ಮೇಲಕ್ಕೆತ್ತುತ್ತದೆ. ನಾಲ್ಕನೆಯ ಬಾರಿ ಝಾಡಿಸಿದರೆ ಮುಳುಗಿಸಿಯೇ ಬಿಡುತ್ತದೆ. ಅನ್ಯಾಯ ಮಿತಿಮೀರಿರುವ ಈಗ ನಾನೇನು ಮಾಡಲಿ, ಸೈರಣೆಗೂ ಒಂದು ಮಿತಿಯಿಲ್ಲವೇ? ಪೌರುಷವು ಬಂಜೆಯಾಯಿತೆ? ನ್ಯಾಯ ವಿಮರ್ಶೆಯಲ್ಲಿ ಮೆಲ್ಲನೆ ಜಾರಿಕೊಂಡು ಹೋಗುತ್ತಿರುವಿರಿ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ನೀರು: ಜಲ; ಹೊರಗೆ: ಆಚೆ; ಬಾರಿ: ಸರದಿ; ಬಳಿಕ: ನಂತರ; ಪಾಪಿ: ದುಷ್ಟ; ಝಾಡಿಸು: ಜೋರಾಗಿ ತಳ್ಳು; ಸೈರಿಸು: ತಾಳ್ಮೆ; ಅನ್ಯಾಯ: ಸರಿಯಲ್ಲದ; ಬಹುಳತೆ: ಹೆಚ್ಚು; ಅವಧಿ: ಕಾಲ; ಪೌರುಷ: ವೀರತನ; ಬಗೆ: ರೀತಿ; ಬಂಜೆ: ಮಕ್ಕಳಿಲ್ಲದ ಸ್ಥಿತಿ; ಆರಯಿಕೆ: ನೋಡಿಕೊಳ್ಳು; ಜುಣುಗು: ಜಾರಿಕೊಳು; ಜಾರು: ಕೆಳಗೆ ಬೀಳು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ನೀರು +ಹೊರಗಿಕ್ಕುವುದು +ಮೂರೇ
ಬಾರಿ +ಬಳಿಕದು +ಪಾಪಿ +ಝಾಡಿಸೆ
ಸೈರಿಸದು+ ಅನ್ಯಾಯ +ಬಹುಳತೆಗೇನ+ ಮಾಡುವೆನು
ಸೈರಣೆಗೆ+ ತಾನ್+ಅವಧಿಯಿಲ್ಲಾ
ಪೌರುಷದ+ ಬಗೆ +ಬಂಜೆಯಾಯಿತು
ಆರಯಿಕೆಯಲಿ +ಜುಣುಗಿ +ಜಾರುವಿರೆಂದಳ್+ಇಂದುಮುಖಿ

ಅಚ್ಚರಿ:
(೧) ಲೋಕದ ನುಡಿ – ನೀರು ಹೊರಗಿಕ್ಕುವುದು ಮೂರೇಬಾರಿ ಬಳಿಕದು ಪಾಪಿ ಝಾಡಿಸೆ ಸೈರಿಸದು
(೨) ಪೌರುಷವು ಕಡಿಮೆಯಾಯಿತೆ ಎಂದು ಹೇಳಲು – ಪೌರುಷದ ಬಗೆ ಬಂಜೆಯಾಯಿತು

ಪದ್ಯ ೨೫: ಧರ್ಮಜನು ದ್ರೌಪದಿಗೆ ಯಾವ ಉಪದೇಶ ನೀಡಿದನು?

ಕೋಪಕವಸರವಲ್ಲ ಪತಿಗಳು
ಕಾಪುರುಷರೇ ನಿನ್ನವರು ಪರಿ
ತಾಪವನು ಬೀಳ್ಕೊಡು ಪತಿವ್ರತೆಯರಿಗೆ ಗುರು ನೀನು
ದೀಪವಲ್ಲಾ ಕ್ಷಮೆಯಖಿಳ ದೋ
ಷಾಪಹಾರವು ಶೌರ್ಯಧರ್ಮದ
ರೂಪು ನೆಲೆಯಾ ಕ್ಷಮೆಯೆನಲು ಬಳಿಕೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕಂಕನು ಸೈರಂಧ್ರಿಗೆ, ಇದು ಕೋಪಮಾಡಿಕೊಳ್ಳುವ ಸಮಯವಲ್ಲ, ನಿನ್ನ ಗಂಡಲು ಕೆಲಸಕ್ಕೆ ಬಾರದವರಲ್ಲ, ಪತಿವ್ರತೆಯರಿಗೆ ಗುರುವಾದವಳು ನೀನು, ದುಃಖವನ್ನು ಬಿಟ್ಟುಬಿಡು, ಶೌರ್ಯಧರ್ಮದ ನೆಲೆಯು ಕ್ಷಮೆ, ಕ್ಷಮೆಯ ದೀಪವು ಸಕಲ ದೋಷಗಳನ್ನು ನಿವಾರಿಸುತ್ತದೆ ಎನ್ನಲು ಸೈರಂಧ್ರಿಯು ಹೀಗೆಂದಳು.

ಅರ್ಥ:
ಕೋಪ: ಮುನಿಸು, ಸಿಟ್ಟು; ಅವಸರ: ತ್ವರಿತ, ಬೇಗ; ಪತಿ: ಗಂಡ; ಕಾಪುರುಷ:ಹೀನ ಮನುಷ್ಯ, ಕ್ಷುದ್ರ; ಪರಿತಾಪ: ಕಾವು, ಉಷ್ಣ, ಶಾಖ; ಬೀಳ್ಕೊಡು: ತೊರೆ; ಪತ್ರಿವ್ರತೆ: ಗರತಿ; ಗುರು: ಆಚಾರ್ಯ; ದೀಪ: ಹಣತೆ; ಕ್ಷಮೆ: ಇತರರ ತಪ್ಪನ್ನು ಮನ್ನಿಸುವ ಗುಣ, ಸೈರಣೆ, ತಾಳ್ಮೆ; ಅಖಿಳ: ಎಲ್ಲಾ; ದೋಷ: ತಪ್ಪು; ಅಪಹಾರ: ಕಿತ್ತುಕೊಳ್ಳುವುದು; ಶೌರ್ಯ: ಧೈರ್ಯ; ಧರ್ಮ: ಧಾರಣ ಮಾಡುವುವು; ರೂಪು: ಆಕಾರ; ನೆಲೆ: ಆಲಯ; ಬಳಿಕ: ನಂತರ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಕೋಪಕ್+ಅವಸರವಲ್ಲ+ ಪತಿಗಳು
ಕಾಪುರುಷರೇ +ನಿನ್ನವರು +ಪರಿ
ತಾಪವನು +ಬೀಳ್ಕೊಡು +ಪತಿವ್ರತೆಯರಿಗೆ+ ಗುರು +ನೀನು
ದೀಪವಲ್ಲಾ +ಕ್ಷಮೆ+ಅಖಿಳ+ ದೋಷ
ಅಪಹಾರವು +ಶೌರ್ಯಧರ್ಮದ
ರೂಪು +ನೆಲೆ+ಆ+ಕ್ಷಮೆ+ಎನಲು +ಬಳಿಕೆಂದಳ್+ಇಂದುಮುಖಿ

ಅಚ್ಚರಿ:
(೧) ಕ್ಷಮೆಯ ಮಹತ್ವ – ಶೌರ್ಯಧರ್ಮದರೂಪು ನೆಲೆಯಾ ಕ್ಷಮೆ
(೨) ದ್ರೌಪದಿಯನ್ನು ಹೊಗಳುವ ಪರಿ – ಪತಿವ್ರತೆಯರಿಗೆ ಗುರು ನೀನು

ಪದ್ಯ ೨೪: ಧರ್ಮಜನು ಏನು ಹೇಳಿದ?

ಧರ್ಮಮಯ ತರುವಿದನು ಮುರಿಯದಿ
ರೆಮ್ಮನುಡಿಗಳ ಕೇಳೆನಲು ಮಿಗೆ
ಸುಮ್ಮನೋಲಗದಿಂದ ಸರಿದನು ಭೀಮ ದುಗುಡದಲಿ
ಕರ್ಮಫಲವಿದು ನಿನಗೆ ಮಾನಿನಿ
ನಿಮ್ಮ ಭವನಕೆ ಹೋಗು ಶಿಕ್ಷಿಸ
ಲಮ್ಮದೀ ಸಭೆ ಬಗೆಯನಾತನು ಮತ್ಸ್ಯಭೂಪತಿಯ (ವಿರಾಟ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಧರ್ಮಮಯವಾದ ಈ ಮರವನ್ನು ಮುರಿಯಬೇಡ, ನನ್ನ ಮಾತನ್ನು ಕೇಳು, ಎಂದು ಯುಧಿಷ್ಠಿರನು ಹೇಳಲು ವಲಲನು ಸಭೆಯನ್ನು ಬಿಟ್ಟು ಹೋದನು. ಆ ಮೇಲೆ ಧರ್ಮಜನು ಸೈರಂಧ್ರಿ, ಇದು ನಿನ್ನ ಕರ್ಮದ ಫಲ, ನಿನ್ನ ಮನೆಗೆ ಹೋಗು, ಕೀಚಕನು ರಾಜನನ್ನೇ ಲೆಕ್ಕಕ್ಕಿಟ್ಟಿಲ್ಲ ಎಂದ ಮೇಲೆ ಈ ಸಭೆಯು ಅವನನ್ನು ಶಿಕ್ಷಿಸಲಾರದು ಎಂದು ದ್ರೌಪದಿಗೆ ಹೇಳಿದನು.

ಅರ್ಥ:
ಧರ್ಮ: ಧಾರಣ ಮಾಡಿದುದು, ನಿಯಮ; ತರು: ಮರ; ಮುರಿ: ನಾಶ, ಸೀಳು; ನುಡಿ: ಮಾತು; ಕೇಳು: ಆಲಿಸು; ಮಿಗೆ: ಮತ್ತು; ಸುಮ್ಮನೆ: ಕಾರಣವಿಲ್ಲದೆ; ಓಲಗ: ದರ್ಬಾರು; ಸರಿ: ತೆರಳು; ದುಗುಡ: ದುಃಖ; ಕರ್ಮ:ಕಾರ್ಯದ ಫಲ; ಧರ್ಮ; ಫಲ: ಪ್ರಯೋಜನ; ಮಾನಿನಿ: ಹೆಣ್ಣು; ಭವನ: ಆಲಯ; ಹೋಗು: ತೆರಳು; ಶಿಕ್ಷಿಸು: ದಂಡಿಸು; ಸಭೆ: ಓಲಗ; ಬಗೆ:ತಿಳಿ; ಭೂಪತಿ: ರಾಜ;

ಪದವಿಂಗಡಣೆ:
ಧರ್ಮಮಯ +ತರುವಿದನು +ಮುರಿಯದಿರ್
ಎಮ್ಮ+ನುಡಿಗಳ+ ಕೇಳ್+ಎನಲು +ಮಿಗೆ
ಸುಮ್ಮನ್+ಓಲಗದಿಂದ +ಸರಿದನು +ಭೀಮ +ದುಗುಡದಲಿ
ಕರ್ಮಫಲವಿದು +ನಿನಗೆ +ಮಾನಿನಿ
ನಿಮ್ಮ +ಭವನಕೆ +ಹೋಗು +ಶಿಕ್ಷಿಸ
ಲಮ್ಮದೀ +ಸಭೆ +ಬಗೆಯನ್+ಆತನು +ಮತ್ಸ್ಯ+ಭೂಪತಿಯ

ಅಚ್ಚರಿ:
(೧) ದ್ರೌಪದಿಗೆ ಹೇಳಿದ ಮಾತು – ಕರ್ಮಫಲವಿದು ನಿನಗೆ ಮಾನಿನಿ ನಿಮ್ಮ ಭವನಕೆ ಹೋಗು