ಪದ್ಯ ೧೫: ಸೈರಂಧ್ರಿಯು ಏಕೆ ಬಿದ್ದಳು?

ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು (ವಿರಾಟ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ಓಡುವುದನ್ನು ನೋಡಿ, ಕೀಚಕನು ಅವಳ ಹಿಂದೆಯೇ ಬೆನ್ನು ಹತ್ತಿ ಓಡಿದನು. ಅವಳ ತಲೆಗೂದಲನ್ನು ಹಿಡಿದು ಏ ದಾಸಿಯ ಮಗಳೇ, ಓಡಿ ಹೋದರೆ ಬಿಟ್ಟು ಬಿಡುವೆನೇ ಎಂದು ಕೋಪದಿಂದ ಕೂಗುತ್ತಾ ಕಾಲಿನಿಂದ ಅವಳನ್ನು ಒದೆದು ಅವಳನ್ನು ಮೆಟ್ಟಿ ಹೊಡೆದನು. ಆ ಹೊಡೆತಕ್ಕೆ ಕೆಳಕ್ಕೆ ಉರುಳಿದ ಸೈರಂಧ್ರಿಯು ರಕ್ತವನ್ನು ಕಾರಿ, ಕೇಶರಾಶಿಯ ಹುಡಿಮಣ್ಣಿನಲ್ಲಿ ಹೊರಳುತ್ತಿದ್ದಳು, ಬಿರುಗಾಳಿಗೆ ಮುರಿದು ಬಿದ್ದ ಬಾಳೆಯ ಮರದಂತೆ ದ್ರೌಪದಿಯು ನೆಲದಲ್ಲಿ ಹೊರಳಿದಳು.

ಅರ್ಥ:
ಒಡನೆ: ಕೂಡಲೆ; ಬೆಂಬತ್ತು: ಹಿಂಬಾಲಿಸು; ತುರುಬು: ತಲೆಗೂದಲು; ಹಿಡಿ: ಗ್ರಹಿಸು; ತೊತ್ತು: ದಾಸಿ; ಮಗಳು: ಸುತೆ; ಹಾಯ್ದು: ಓಡು, ಚೆಲ್ಲು; ಬಿಡು: ತೊರೆ; ಫಡ: ಬಯ್ಯುವ ಒಂದು ಪದ; ಹೊಯ್ದು: ಹೊಡೆ; ಕಾಲು: ಪಾದ; ಮೆಟ್ಟು: ತುಳಿದು ನಿಲ್ಲು; ಕೆಡೆ: ಬೀಳು, ಕುಸಿ; ರಕುತ: ನೆತ್ತರು; ಕಾರು: ಕೆಸರು; ಹುಡಿ: ಮಣ್ಣು; ಹೊರಳು: ಉರುಳಾಡು, ಉರುಳು; ಬಿರುಗಾಳಿ: ಜೋರಾದ ಗಾಳಿ; ಸೈಗೆಡೆ: ಅಡ್ಡಬೀಳು; ಕದಳಿ: ಬಾಳೆ; ಕಂಬ: ಉದ್ದನೆಯ ಕೋಲು, ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಕಾಂತೆ: ಹೆಣ್ಣು; ಹೊರಳು: ಉರುಳು;

ಪದವಿಂಗಡಣೆ:
ಒಡನೆ +ಬೆಂಬತ್ತಿದನು +ತುರುಬನು
ಹಿಡಿದು +ತೊತ್ತಿನ +ಮಗಳೆ +ಹಾಯ್ದರೆ
ಬಿಡುವೆನೇ +ಫಡ+ಎನುತ +ಹೊಯ್ದನು +ಕಾಲಲ್+ಒಡೆಮೆಟ್ಟಿ
ಕೆಡೆದು+ ರಕುತವ +ಕಾರಿ +ಹುಡಿಯಲಿ
ಮುಡಿ +ಹೊರಳಿ +ಬಿರುಗಾಳಿಯಲಿ+ ಸೈ
ಗೆಡೆದ +ಕದಳಿಯ+ ಕಂಬದಂತಿರೆ +ಕಾಂತೆ +ಹೊರಳಿದಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿರುಗಾಳಿಯಲಿ ಸೈಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು

ನಿಮ್ಮ ಟಿಪ್ಪಣಿ ಬರೆಯಿರಿ