ಪದ್ಯ ೧೭: ದ್ರೌಪದಿ ಏಕೆ ದುಃಖಿಸಿದಳು?

ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು (ವಿರಾಟ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಮಗ್ಗುಲಾಗಿ ಎದ್ದು ತಲೆಗೂದಲಿನ ಮಣ್ಣನ್ನು ಕೊಡುವುತ್ತಾ, ಗಲ್ಲದ ಮೇಲಿನ ರಕ್ತವನ್ನು ಬೆರಳಿನಿಂದ ಮಿಡಿದು ಆ ದುಷ್ಟನು ಒಂದು ಹೆಣ್ಣನ್ನು ಬಡಿಯುತ್ತಿರುವಾಗ, ಆಸ್ಥಾನದಲ್ಲಿರುವ ಹಿರಿಯರಾದ ನೀವು ಒಂದಾದರೂ ಮಾತನಾಡಲಿಲ್ಲವಲ್ಲಾ! ಮೌನ ವ್ರತಕ್ಕೆ ನೀವು ಆರಿಸಿಕೊಂಡ ಹೊತ್ತು ಬಹಳ ಪ್ರಶಸ್ತವಾಗಿದೆ ಎಂದಳು.

ಅರ್ಥ:
ಹೊಡೆ: ಪೆಟ್ಟು; ಮರಳಿ: ಮತ್ತೆ; ಮುರಿ: ಸೀಳು; ಎದ್ದು: ಮೇಲೇಳು; ತುರುಬು: ತಲೆಗೂದಲು; ಹುಡಿ: ಮಣ್ಣು; ಕೊಡವು:ದೂಳನ್ನು ಹೊರಹಾಕು; ಮೊಲೆ: ಸ್ತನ; ಮೇಲುದು: ವಸ್ತ್ರ; ತೊಡಿಸು: ಹೊದ್ದು; ಗಲ್ಲ: ಕೆನ್ನೆ; ರಕುತ: ನೆತ್ತರು; ಬೆರಳು: ಅಂಗುಲಿ; ಮಿಡಿ: ಹೊಮ್ಮಿಸು; ನುಡಿ: ಮಾತು; ಖಳ: ದುಷ್ಟ; ಹೆಂಗುಸು: ಸ್ತ್ರೀ; ಬಡಿ: ಹೊಡೆ; ನೋಡು: ವೀಕ್ಷಿಸು; ಹಿರಿಯ: ದೊಡ್ಡವ; ಹಿಡಿ: ಗ್ರಹಿಸು; ಮೌನ: ಮಾತನಾಡದಿರುವ ಸ್ಥಿತಿ; ಹೊತ್ತು: ಉಂಟಾಗು, ಒದಗು; ಲೇಸು: ಒಳಿತು; ಹಲುಬು: ದುಃಖಪಡು, ಬೇಡು; ಅಬಲೆ: ಹೆಣ್ಣು;

ಪದವಿಂಗಡಣೆ:
ಹೊಡೆ +ಮರಳಿ +ಮುರಿದೆದ್ದು +ತುರುಬಿನ
ಹುಡಿಯ +ಕೊಡಹುತ +ಮೊಲೆಗೆ+ ಮೇಲುದು
ತೊಡಿಸಿ+ ಗಲ್ಲದ +ರಕುತವನು +ಬೆರಲಿಂದ +ಮಿಡಿಮಿಡಿದು
ನುಡಿಯಲಾಗದೆ+ ಖಳನು +ಹೆಂಗುಸ
ಬಡಿಯೆ+ ನೋಡುತ್ತಿಹರೆ+ ಹಿರಿಯರು
ಹಿಡಿದ +ಮೌನವ +ಹೊತ್ತು +ಲೇಸೆಂದ್+ಅಬಲೆ +ಹಲುಬಿದಳು

ಅಚ್ಚರಿ:
(೧) ದ್ರೌಪದಿಯು ಸಭೆಯನ್ನು ಬಯ್ದ ಪರಿ – ಹಿರಿಯರು ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು

ಪದ್ಯ ೧೬: ಕೀಚಕನಿಗೆ ಯಾರು ಹೊಡೆದರು?

ಕರುಳ ತೆಗೆ ತಿನ್ನಡಗನೆನುತ
ಬ್ಬರಿಸಿ ಸೂರ್ಯನು ಕೊಟ್ಟದಾನವ
ನುರವಣಿಸಿ ಕೀಚಕನ ಹೊಯ್ದನು ಹಿಡಿದು ಕುಸುಬಿದನು
ದುರುಳ ನಡೆಗೆಡದೆದ್ದು ನಿಮಿಷದೊ
ಳೊರಲುತೋಡಿದನಾಲಯಕೆ ಬಳಿ
ಕರಸ ಮೊದಲಾದಖಿಳಜನ ನಡುಗಿತ್ತು ಭಯ ಹೊಯ್ದು (ವಿರಾಟ ಪರ್ವ, ೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಕರುಳನ್ನು ಹೊರಗೆಳೆ, ಮಾಂಸವನ್ನು ತಿನ್ನು ಎಂದು ಗರ್ಜಿಸುತ್ತಾ ಸೂರ್ಯನು ದ್ರೌಪದಿಯ ರಕ್ಷಣೆಗಾಗಿ ನೇಮಿಸಿದ್ದ ರಾಕ್ಷಸನು ಮುನ್ನುಗ್ಗಿ ಕೀಚಕನನ್ನು ಬಡಿದು ನೆಲಕ್ಕೆ ಕೆಡಹಿ ಕಾಲಿನಿಮ್ದ ತುಳಿದನು. ರಾಕ್ಷಸನ ಗರ್ಜನೆ ಕೇಳಿತು, ಕೀಚಕನು ನೆಲಕ್ಕೆ ಹೊರಳಿ ಚೀರಿದ್ದು ಕೇಳಿತು, ರಾಕ್ಷಸನು ಯಾರಿಗೂ ಕಾಣಲಿಲ್ಲ, ಕೀಚಕನು ನೆಲಕ್ಕೆ ಬಿದ್ದು ಚೀರಿ ನೋವು ಭಯಗಳಿಂದ ಚೀರುತ್ತಾ ತನ್ನ ಮನೆಗೋಡಿದನು. ವಿರಾಟನೂ, ರಾಜಸಭಾಸದರೂ ಭಯದಿಂದ ನಡುಗಿದರು.

ಅರ್ಥ:
ಕರುಳು: ಹೊಟ್ಟೆಯ ಅಂಗ; ತೆಗೆ: ಹೊರತರು; ತಿನ್ನು: ಭಕ್ಷಿಸು; ಅಡಗು: ಮಾಂಸ; ಅಬ್ಬರಿಸು: ಗರ್ಜಿಸು; ಸೂರ್ಯ: ರವಿ; ಕೊಟ್ಟ: ನೀಡಿದ; ದಾನವ: ರಾಕ್ಷಸ; ಉರವಣೆ: ಆತುರ, ಅವಸರ, ಅಬ್ಬರ; ಹೊಯ್ದು: ಹೊಡೆ; ಹಿಡಿ: ಗ್ರಹಿಸು; ಕುಸುಬು: ಹೊಡೆದು ಕೆಡಹು; ದುರುಳ: ದುಷ್ಟ; ಅಡೆಗೆಡೆ: ಅಡಕ್ಕೆ ಬೀಳು; ಎದ್ದು ಮೇಲೇಳು; ಒರಲು: ಉರುಳು; ಓಡು: ಧಾವಿಸ; ಆಲಯ: ಮನೆ; ಬಳಿಕ: ನಂತರ; ಅರಸ: ರಾಜ; ಮೊದಲಾದ: ಉಳಿದ; ಅಖಿಳ: ಎಲ್ಲಾ; ಜನ: ಮನುಷ್ಯರ ಗುಂಪು; ನಡುಗು: ಭಯಪಡು;

ಪದವಿಂಗಡಣೆ:
ಕರುಳ +ತೆಗೆ+ ತಿನ್+ಅಡಗನ್+ಎನುತ್
ಅಬ್ಬರಿಸಿ +ಸೂರ್ಯನು +ಕೊಟ್ಟ+ದಾನವನ್
ಉರವಣಿಸಿ+ ಕೀಚಕನ+ ಹೊಯ್ದನು +ಹಿಡಿದು +ಕುಸುಬಿದನು
ದುರುಳನ್ + ಅಡೆಗೆಡದೆದ್ದು+ ನಿಮಿಷದೊಳ್
ಒರಲುತ್+ಓಡಿದನ್+ಆಲಯಕೆ +ಬಳಿಕ್
ಅರಸ +ಮೊದಲಾದ್+ಅಖಿಳ+ಜನ+ ನಡುಗಿತ್ತು +ಭಯ +ಹೊಯ್ದು

ಅಚ್ಚರಿ:
(೧) ದಾನವನ ರೋಷದ ಮಾತು – ಕರುಳ ತೆಗೆ ತಿನ್ನಡಗನೆನುತಬ್ಬರಿಸಿ

ಪದ್ಯ ೧೫: ಸೈರಂಧ್ರಿಯು ಏಕೆ ಬಿದ್ದಳು?

ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು (ವಿರಾಟ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ಓಡುವುದನ್ನು ನೋಡಿ, ಕೀಚಕನು ಅವಳ ಹಿಂದೆಯೇ ಬೆನ್ನು ಹತ್ತಿ ಓಡಿದನು. ಅವಳ ತಲೆಗೂದಲನ್ನು ಹಿಡಿದು ಏ ದಾಸಿಯ ಮಗಳೇ, ಓಡಿ ಹೋದರೆ ಬಿಟ್ಟು ಬಿಡುವೆನೇ ಎಂದು ಕೋಪದಿಂದ ಕೂಗುತ್ತಾ ಕಾಲಿನಿಂದ ಅವಳನ್ನು ಒದೆದು ಅವಳನ್ನು ಮೆಟ್ಟಿ ಹೊಡೆದನು. ಆ ಹೊಡೆತಕ್ಕೆ ಕೆಳಕ್ಕೆ ಉರುಳಿದ ಸೈರಂಧ್ರಿಯು ರಕ್ತವನ್ನು ಕಾರಿ, ಕೇಶರಾಶಿಯ ಹುಡಿಮಣ್ಣಿನಲ್ಲಿ ಹೊರಳುತ್ತಿದ್ದಳು, ಬಿರುಗಾಳಿಗೆ ಮುರಿದು ಬಿದ್ದ ಬಾಳೆಯ ಮರದಂತೆ ದ್ರೌಪದಿಯು ನೆಲದಲ್ಲಿ ಹೊರಳಿದಳು.

ಅರ್ಥ:
ಒಡನೆ: ಕೂಡಲೆ; ಬೆಂಬತ್ತು: ಹಿಂಬಾಲಿಸು; ತುರುಬು: ತಲೆಗೂದಲು; ಹಿಡಿ: ಗ್ರಹಿಸು; ತೊತ್ತು: ದಾಸಿ; ಮಗಳು: ಸುತೆ; ಹಾಯ್ದು: ಓಡು, ಚೆಲ್ಲು; ಬಿಡು: ತೊರೆ; ಫಡ: ಬಯ್ಯುವ ಒಂದು ಪದ; ಹೊಯ್ದು: ಹೊಡೆ; ಕಾಲು: ಪಾದ; ಮೆಟ್ಟು: ತುಳಿದು ನಿಲ್ಲು; ಕೆಡೆ: ಬೀಳು, ಕುಸಿ; ರಕುತ: ನೆತ್ತರು; ಕಾರು: ಕೆಸರು; ಹುಡಿ: ಮಣ್ಣು; ಹೊರಳು: ಉರುಳಾಡು, ಉರುಳು; ಬಿರುಗಾಳಿ: ಜೋರಾದ ಗಾಳಿ; ಸೈಗೆಡೆ: ಅಡ್ಡಬೀಳು; ಕದಳಿ: ಬಾಳೆ; ಕಂಬ: ಉದ್ದನೆಯ ಕೋಲು, ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಕಾಂತೆ: ಹೆಣ್ಣು; ಹೊರಳು: ಉರುಳು;

ಪದವಿಂಗಡಣೆ:
ಒಡನೆ +ಬೆಂಬತ್ತಿದನು +ತುರುಬನು
ಹಿಡಿದು +ತೊತ್ತಿನ +ಮಗಳೆ +ಹಾಯ್ದರೆ
ಬಿಡುವೆನೇ +ಫಡ+ಎನುತ +ಹೊಯ್ದನು +ಕಾಲಲ್+ಒಡೆಮೆಟ್ಟಿ
ಕೆಡೆದು+ ರಕುತವ +ಕಾರಿ +ಹುಡಿಯಲಿ
ಮುಡಿ +ಹೊರಳಿ +ಬಿರುಗಾಳಿಯಲಿ+ ಸೈ
ಗೆಡೆದ +ಕದಳಿಯ+ ಕಂಬದಂತಿರೆ +ಕಾಂತೆ +ಹೊರಳಿದಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿರುಗಾಳಿಯಲಿ ಸೈಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು

ಪದ್ಯ ೧೪: ಸೈರಂಧ್ರಿಯು ಎಲ್ಲಿಗೆ ಧಾವಿಸಿದಳು?

ಕರವನೊಡೆ ಮುರುಚಿದಳು ಬಟ್ಟಲ
ಧರೆಯೊಳೀಡಾಡಿದಳು ಸತಿ ಮೊಗ
ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ
ತರಳೆ ಹಾಯ್ದುಳು ಮೊಲೆಯ ಜಘನದ
ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ (ವಿರಾಟ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕೀಚಕನು ಹಿಡಿದ ಕೈಯನ್ನು ಹಿಂದಕ್ಕೆ ಸೆಳೆದು ಆತನ ಹಿಡಿತದಿಂದ ತಪ್ಪಿಸಿಕೊಂಡು, ಮಧುವಿನ ಪಾತ್ರೆಯನ್ನು ಅಲ್ಲೇ ಬಿಸಾಡಿ ಹಿಂದಕ್ಕೆ ತಿರುಗಿ ದ್ರೌಪದಿಯು ಅವನ ಮನೆಯ ಬಾಗಿಲನ್ನು ದಾಟಿ ಭಯದಿಮ್ದ ನದುಗಿ ಕಂಪಿಸುತ್ತಾ ಓಡಿ ಹೋದಳು. ಆಕೆಯ ಎದೆ, ನಿತಂಬಗಳ ಭಾರದಿಂದ ಅವಳ ತೆಳುವಾದ ನಡು ಮುರಿದು ಹೋಗದೇ ಎನ್ನಿಸುವಂತೆ ಅತಿವೇಗದಿಮ್ದ ವಿರಾಟನ ಸಭೆಗೆ ಬಂದಳು.

ಅರ್ಥ:
ಕರ: ಕೈ; ಒಡೆ: ಕೂಡಲೆ; ಮುರುಚು: ಹಿಂತಿರುಗಿಸು; ಬಟ್ಟಲು: ಪಾತ್ರೆ; ಧರೆ: ಭೂಮಿ; ಈಡಾಡು: ಕಿತ್ತು, ಒಗೆ, ಚೆಲ್ಲು; ಸತಿ: ಹೆಂಡತಿ; ಮೊಗ: ಮುಖ; ತಿರುಹಿ: ಹಿಂದೆಮಾದಿ ಬಾಗಿಲು: ಕದ; ದಾಂಟು: ದಾಟಿ; ಭಯ: ಅಂಜಿಕೆ; ನಡುಗು: ಕಂಪನ; ಡೆಂಡಣ: ಕಂಪಿಸು;ತರಳೆ: ಹೆಣ್ಣು; ಹಾಯ್ದು: ಮೇಲೆಬೀಳು, ಚಾಚು; ಮೊಲೆ: ಸ್ತನ; ಜಘನ:ನಿತಂಬ; ಭರ: ಹೊರೆ, ಭಾರ; ಬಡ: ತೆಳ್ಳಾಗಿರುವು; ನಡು: ಮಧ್ಯಭಾಗ; ಮುರಿ: ಸೀಳು; ವರ: ಶ್ರೇಷ್ಠ; ಸಭೆ: ದರ್ಬಾರು; ರಭಸ: ವೇಗ; ಓಡು: ಧಾವಿಸು; ಸಭಾಗ್ಯತೆ: ಒಳ್ಳೆಯ ಅದೃಷ್ಟ;

ಪದವಿಂಗಡಣೆ:
ಕರವನ್+ಒಡೆ +ಮುರುಚಿದಳು +ಬಟ್ಟಲ
ಧರೆಯೊಳ್+ಈಡಾಡಿದಳು +ಸತಿ +ಮೊಗ
ದಿರುಹಿ+ ಬಾಗಿಲ+ ದಾಂಟಿ +ಭಯದಲಿ +ನಡುಗಿ+ ಡೆಂಡಣಿಸಿ
ತರಳೆ+ ಹಾಯ್ದುಳು +ಮೊಲೆಯ +ಜಘನದ
ಭರದಿ+ ಬಡನಡು +ಮುರಿಯದಿಹುದೇ
ವರ +ಸಭಾಗ್ಯತೆಗ್+ಎನಲು +ರಭಸದೊಳ್+ಓಡಿದಳು +ಸಭೆಗೆ

ಅಚ್ಚರಿ:
(೧) ಓಟದ ವರ್ಣನೆ – ತರಳೆ ಹಾಯ್ದುಳು ಮೊಲೆಯ ಜಘನದ ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು

ಪದ್ಯ ೧೩: ಸೈರಂಧ್ರಿಯು ಕೀಚಕನನ್ನು ಹೇಗೆ ಜರೆದಳು?

ಬಾಯಿ ಹುಳುವುದು ಬಯಲ ನುಡಿದೊಡೆ
ನಾಯಿತನ ಬೇಡೆಲವೊ ಕೀಚಕ
ರಾಯನಂಗನೆ ಕಳುಹೆ ಬಂದೆನು ಮಧುವ ತರಲೆಂದು
ಸಾಯಬೇಕೇ ಹಸಿದ ಶೂಲವ
ಹಾಯಿ ಹೋಗೆನೆ ನಿನ್ನ ಬೈಗಳು
ನೋಯಿಸುವವೇ ತನ್ನನೆನುತವೆ ತುಡಿಕಿದನು ಸತಿಯ (ವಿರಾಟ ಪರ್ವ, ೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ವ್ಯರ್ಥವಾದ, ಇಲ್ಲಸಲ್ಲದ ಮಾತನ್ನಾಡಿದರೆ ನಿನ್ನ ಬಾಯಿಗೆ ಹುಳು ಬಿದ್ದೀತು, ನಿನ್ನ ಜೊಲ್ಲುಸುರಿಸುವ ನಾಯಿ ಬುದ್ಧಿಯನ್ನು ಬಿಡು, ಸುದೇಷ್ಣೆಯು ನನ್ನನ್ನು ಜೇನು ತರಲು ಕಳಿಸಿರುವುದರಿಂದ ನಾನಿಲ್ಲಿಗೆ ಬಂದಿದ್ದೇನೆ, ನೀನು ಸಾಯಬೇಕೆನ್ನಿಸಿದರೆ ಶೂಲಕ್ಕೆ ಹಾಯ್ದು ಪ್ರಾಣವನ್ನು ಬಿಡು ಎಂದು ಹೇಳಲು, ನಿನ್ನ ಮಾತುಗಳಿಂದ ನನಗಾವ ನೋವು ಇಲ್ಲ ಎನ್ನುತ್ತಾ ಆಕೆಯ ಕೈಯನ್ನು ಹಿಡಿದನು.

ಅರ್ಥ:
ಹುಳು: ಕ್ರಿಮಿ; ಬಯಲು: ವ್ಯರ್ಥವಾದುದು; ನುಡಿ: ಮಾತು; ನಾಯಿ: ಶ್ವಾನ; ಬೇಡ: ನಿಲ್ಲಿಸು; ರಾಯ: ರಾಜ; ರಾಯನಂಗನೆ: ರಾಣಿ; ಕಳುಹು: ಕಳಿಸು; ಬಂದೆ: ಆಗಮನ; ಮಧು: ಜೇನುತುಪ್ಪ; ತರಲು: ತೆಗೆದುಕೊಂಡು; ಸಾವು: ಮರಣ; ಹಸಿ: ಅತಿಯಾಗಿ ಬಯಸು, ತಾಜಾ; ಶೂಲ: ಈಟಿ; ಹಾಯಿ: ಮೇಲೆಬೀಳು, ಚಾಚು; ಹೋಗು: ತೆರಳು; ಬೈಗಳು: ಜರೆದ ಮಾತು; ನೋಯಿಸು: ತೊಂದರೆ ನೀಡು; ತುಡುಕು: ಹೋರಾಡು, ಸೆಣಸು; ಸತಿ: ಹೆಣ್ಣು;

ಪದವಿಂಗಡಣೆ:
ಬಾಯಿ +ಹುಳುವುದು +ಬಯಲ +ನುಡಿದೊಡೆ
ನಾಯಿತನ+ ಬೇಡ್+ಎಲವೊ +ಕೀಚಕ
ರಾಯನಂಗನೆ+ ಕಳುಹೆ +ಬಂದೆನು +ಮಧುವ +ತರಲೆಂದು
ಸಾಯಬೇಕೇ +ಹಸಿದ+ ಶೂಲವ
ಹಾಯಿ+ ಹೋಗ್+ಎನೆ +ನಿನ್ನ +ಬೈಗಳು
ನೋಯಿಸುವವೇ+ ತನ್ನನ್+ಎನುತವೆ+ ತುಡಿಕಿದನು +ಸತಿಯ

ಅಚ್ಚರಿ:
(೧) ಬಾಯಿಗೆ ಹುಳು ಬೀಳಲಿ ಎಂದು ಹೇಳುವ ಪರಿ – ಬಾಯಿ ಹುಳುವುದು ಬಯಲ ನುಡಿದೊಡೆ