ಪದ್ಯ ೧೨: ಸೈರಂಧ್ರಿ ಏಕೆ ಕೋಪಗೊಂಡಳು?

ತರುಣಿ ಬಾ ಕುಳ್ಳಿರು ಮದಂತಃ
ಕರಣದೆಡರಡಗಿತ್ತು ಕಾಮನ
ದುರುಳುತನಕಿನ್ನಂಜುವೆನೆ ನೀನೆನಗೆ ಬಲವಾಗೆ
ಬಿರುದ ಕಟ್ಟುವೆನಿಂದುವಿಗೆ ಮಧು
ಕರಗೆ ಕೋಗಿಲೆಗೆಂದು ಖಳನ
ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ತರುಣಿ, ಬಾ, ಇಲ್ಲಿ ಆಸೀನಳಾಗು, ನನ್ನ ಮನಸ್ಸಿನ ಆತಂಕವಉ ಕೊನೆಗೊಂಡಿದೆ, ನೀನು ನನಗೆ ಬೆಂಬಲವಾದರೆ, ಕಾಮನ ದುಷ್ಟತನಕ್ಕೆ ಹೆದರುವ ಗೋಜಿಲ್ಲ. ಚಂದ್ರ, ದುಂಬಿ, ಕೋಗಿಲೆಗಳಿಗೆ ಎದುರಾಗಿ ನಾನು ವಿಜಯಧ್ವಜವನ್ನು ಹಾರಿಸುತ್ತೇನೆ ಎಂದು ಕೀಚಕನು ಹೇಳಲು, ಕೋಪಗೊಂಡ ಸೈರಂಧ್ರಿ ಹೀಗೆ ನುಡಿದಳು.

ಅರ್ಥ:
ತರುಣಿ: ಹೆಣ್ಣು, ಸ್ತ್ರೀ; ಕುಳ್ಳಿರು: ಆಸೀನನಾಗು; ಅಂತಃಕರಣ: ಒಳಮನಸ್ಸು; ಎಡರು: ಕಳವಳ; ಅಡಗಿತು: ಮುಚ್ಚಿತು; ಕಾಮ: ಮನ್ಮಥ; ದುರುಳ: ದುಷ್ಟ; ಅಂಜು: ಹೆದರು; ಬಲ: ಬೆಂಬಲ; ಬಿರುದು: ಗೌರವ ಸೂಚಕ ಪದ; ಕಟ್ಟು: ಬಂಧಿಸು; ಇಂದು: ಚಂದ್ರ; ಮಧುಕರ: ದುಂಬಿ; ಕೋಗಿಲೆ: ಪಿಕ; ಅಬ್ಬರ: ಜೋರಾದ ಕೂಗು; ನುಡಿ: ಮಾತಾಡು; ಖಾತಿ: ಕೋಪ, ಕ್ರೋಧ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ತರುಣಿ +ಬಾ +ಕುಳ್ಳಿರು +ಮದ್+ಅಂತಃ
ಕರಣದ್+ ಎಡರ್+ಅಡಗಿತ್ತು +ಕಾಮನ
ದುರುಳುತನಕಿನ್ನ್+ಅಂಜುವೆನೆ+ ನೀನೆನಗೆ +ಬಲವಾಗೆ
ಬಿರುದ +ಕಟ್ಟುವೆನ್+ಇಂದುವಿಗೆ+ ಮಧು
ಕರಗೆ+ ಕೋಗಿಲೆಗೆಂದು +ಖಳನ್
ಅಬ್ಬರಿಸಿ+ ನುಡಿಯಲು+ ಖಾತಿಗೊಂಡ್+ಇಂತೆಂದಳ್+ಇಂದುಮುಖಿ

ಅಚ್ಚರಿ:
(೧) ತರುಣಿ, ಇಂದುಮುಖಿ – ದ್ರೌಪದಿಯನ್ನು ಕರೆದ ಪರಿ