ಪದ್ಯ ೫: ಸೈರಂಧ್ರಿಯು ಯಾರನ್ನು ನೆನೆವುತ್ತಾ ಚಲಿಸಿದಳು?

ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ಸಾವನವರಿಗೆ ತಹುದು ಬದ್ಧವಿಘಾತಿಯಿದು ಬಲುಹು
ಸೇವೆಯಿದಕೇ ಕಷ್ಟವೆಂಬುದು
ಕೋವಿದರ ಮತ ಶಿವಶಿವಾ ರಾ
ಜೀವಲೋಚನ ಕೃಷ್ಣ ಬಲ್ಲೆಯೆನುತ್ತ ಗಮಿಸಿದಳು (ವಿರಾಟ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ದೇವಿ ನಿಮ್ಮ ಆಜ್ಞೆಯನ್ನು ನಡೆಸಲಾರೆ ಎಂದು ಹೇಳಿದರೂ ಬಲವಂತವನ್ನು ಮಾಡುವುದು ಯಾವ ಧರ್ಮ? ನೀವು ಮಾಡಿದ ಆಜ್ಞೆಯಂತೆ ನಡೆಯುವುದು ನಿಮ್ಮ ತಮ್ಮನಿಗೆ ಸಾವನ್ನು ತರುತ್ತದೆ, ಈ ಬಲವಂತದ ಪೆಟ್ಟು ಬಲುದೊಡ್ಡದು, ಆದುದರಿಂದಲೇ ತಿಳಿದವರು ಹೇಳುತ್ತಾರೆ, ಸೇವೆಯು ಬಹುಕಷ್ಟಕರವೆಂದು, ಶಿವ ಶಿವಾ ಕೃಷ್ಣ ಇದರ ಪರಿಣಾಮವನ್ನು ನೀನೇ ಬಲ್ಲೆ ಎಂದು ಹೇಳುತ್ತಾ ಸೈರಂಧ್ರಿಯು ಕೀಚಕನ ಮನೆಯ ಕಡೆಗೆ ನಡೆದಳು.

ಅರ್ಥ:
ನೇಮಿಸು: ಅಪ್ಪಣೆ ಮಾಡು, ಗೊತ್ತು ಮಾಡು; ಅರಿ: ತಿಳಿ; ಧರ್ಮ: ಧಾರಣೆ ಮಾಡಿದುದು; ಹದ: ಸ್ಥಿತಿ; ಸಾವು: ಮರಣ; ತಹುದು: ತರುವುದು; ಬದ್ಧ: ಕಟ್ಟಿದ, ಬಿಗಿದ; ವಿಘಾತ: ನಾಶ, ಧ್ವಂಸ; ಬಲುಹು: ಬಲ, ಶಕ್ತಿ; ಸೇವೆ: ಊಳಿಗ; ಕಷ್ಟ: ತೊಂದರೆ; ಕೋವಿದ: ಪಂಡಿತ; ಮತ: ಅಭಿಪ್ರಾಯ; ರಾಜೀವಲೋಚನ: ಕಮಲದಂತ ಕಣ್ಣುಳ್ಳವ (ಕೃಷ್ಣ); ಬಲ್ಲೆ: ತಿಳಿದಿರುವೆ; ಗಮಿಸು: ತೆರಳು;

ಪದವಿಂಗಡಣೆ:
ದೇವಿ +ನೇಮಿಸಲ್+ಅರಿಯೆನ್+ಎಂದೊಡ್
ಇದಾವ +ಧರ್ಮವು +ಶಿವ +ಶಿವ್+ಈ+ ಹದ
ಸಾವನ್+ಅವರಿಗೆ+ ತಹುದು+ ಬದ್ಧ+ವಿಘಾತಿಯಿದು +ಬಲುಹು
ಸೇವೆಯಿದಕೇ+ ಕಷ್ಟವೆಂಬುದು
ಕೋವಿದರ+ ಮತ +ಶಿವಶಿವಾ+ ರಾ
ಜೀವಲೋಚನ +ಕೃಷ್ಣ +ಬಲ್ಲೆ+ಎನುತ್ತ +ಗಮಿಸಿದಳು

ಅಚ್ಚರಿ:
(೧) ಪಂಡಿತರ ಮಾತು – ಸೇವೆಯಿದಕೇ ಕಷ್ಟವೆಂಬುದು ಕೋವಿದರ ಮತ

ನಿಮ್ಮ ಟಿಪ್ಪಣಿ ಬರೆಯಿರಿ