ಪದ್ಯ ೨೬: ದ್ರೌಪದಿಯು ಕೀಚಕನನ್ನು ಹೇಗೆ ಬಯ್ದಳು?

ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಫಲವಾವುದಿದರಿಂದ
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾದುದೆಂದಳು ಪಾಂಡವರ ರಾಣಿ (ವಿರಾಟ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಎಲವೋ ದುರಾತ್ಮ, ವ್ಯರ್ಥವಾಗಿ ಮಹಾಪರಾಧಕ್ಕೆ ಮನಸ್ಸು ಮಾಡಿ, ನಿನ್ನ ಕುಲದ ಬೇರನ್ನೇ ಕೊಯ್ಯುವುದು ಸರಿಯೇ? ಇದರಿಂದ ನಿನಗೆ ಬರುವುದಾದರೂ ಏನು? ಅಪಕೀರ್ತಿ ಬರುವುದಿಲ್ಲವೇ, ಹೆತ್ತತಾಯಿ, ಮಕ್ಕಳು ಎಂದು ಗಣಿಸದೆ, ಅವರನ್ನು ಬಯಸಿದಂತೆ ಆಯಿತು ಎಂದಳು.

ಅರ್ಥ:
ದುರಾತ್ಮ: ದುಷ್ಟ; ಮಹಾಪರಾಧ: ದೊಡ್ಡ ತಪ್ಪು; ಬಳಸು: ಆವರಿಸುವಿಕೆ, ಸುತ್ತುವರಿ; ಬಯಲು: ಹೊರಾಂಗಣ; ಕುಲ: ವಂಶ; ಕೊಯ್ವು: ಸೀಳು; ಫಲ: ಪ್ರಯೋಜನ; ಹಳಿ: ದೂಷಿಸು, ನಿಂದಿಸು; ಹೊದ್ದು: ಪರಿಣಮಿಸು; ಹೆತ್ತು: ಹಡಿದು; ಮಕ್ಕಳು: ಕುಮಾರರು; ಬದುಕು: ಜೀವನ; ಮಾಣು:ನಿಲ್ಲಿಸು; ಎಳಸು: ಬಯಸು, ಅಪೇಕ್ಷಿಸು; ರಾಣಿ: ಅರಸಿ;

ಪದವಿಂಗಡಣೆ:
ಎಲೆ +ದುರಾತ್ಮ +ಮಹ+ಅಪರಾಧವ
ಬಳಸುವರೆ +ಬಯಲಿಂಗೆ +ನಿನ್ನಯ
ಕುಲದ +ಬೇರನು +ಕೊಯ್ವರೇ +ಫಲವಾವುದ್+ಇದರಿಂದ
ಹಳಿವು +ಹೊದ್ದದೆ+ ಹೆತ್ತವರು +ಮ
ಕ್ಕಳುಗಳೆಂಬೀ +ಬದುಕು+ ಮಾಣದೆ
ಎಳಸಿಕೊಂಬಂತ್+ಆದುದೆಂದಳು+ ಪಾಂಡವರ+ ರಾಣಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಳಿವು ಹೊದ್ದದೆ ಹೆತ್ತವರು

ಪದ್ಯ ೨೫: ದ್ರೌಪದಿ ಏನೆಂದು ಚಿಂತಿಸಿದಳು?

ಕೇಳಿ ಕಿವಿಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರಹರ
ಶೂಲಪಾಣಿ ಮುಕುಂದಯೆನುತವೆ ರವಿಯ ನೀಕ್ಷಿಸುತ
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ (ವಿರಾಟ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಕೀಚಕನ ಮಾತುಗಳನ್ನು ಕೇಳಿ, ತನ್ನೈವರು ಪತಿಗಳನ್ನು ನೆನೆದು ಶಿವ ಶಿವಾ ಮಹಾದೇವ ಶ್ರೀಕೃಷ್ಣಾ ಎಂದು ಸೂರ್ಯನನ್ನು ನೋಡಿದಳು. ಇವನು ಕ್ಷುಲ್ಲಕನೂ, ಕೆಲಸಕ್ಕೆ ಬಾರದವನೂ, ಮುಂದಾಲೋಚನೆ ಇಲ್ಲದವನೂ, ಮದಾಂಧನೂ ಆದ ದುಷ್ಟ. ಇವನನ್ನು ತಡೆದು ಸೋಲಿಸುವವರಾರು ಎಂದು ತಲೆತಗ್ಗಿಸಿದಳು.

ಅರ್ಥ:
ಕೇಳು: ಆಲಿಸು; ಕಿವಿ: ಕರ್ಣ; ಮುಚ್ಚು: ಮರೆಮಾಡು; ಮೇಳ: ಗುಂಪು; ದೈವ: ಭಗವಂತ; ನೆನೆ: ಜ್ಞಾಪಿಸಿಕೋ; ಹರ: ಈಶ್ವರ; ಶೂಲಪಾಣಿ: ಶಂಕರ; ಮುಕುಂದ: ಕೃಷ್ಣ; ರವಿ: ಸೂರ್ಯ; ಈಕ್ಷಿಸು: ನೋಡು; ಕಾಳು: ಕೀಳಾದುದು; ಮೂಳ: ತಿಳಿಗೇಡಿ, ಮೂಢ; ಖಳ: ದುಷ್ಟ; ಅಗ್ರಣಿ: ಮುಂದಾಳು; ಕಾಣು: ನೋಡು; ಮದ: ಅಹಂಕಾರ; ಅಂಧ: ಕುರುಡ; ಸೋಲಿಸು: ಪರಾಭವ ಗೊಳಿಸು; ತಲೆ: ಶಿರ; ಬಾಗು: ಬಗ್ಗು, ಮಣಿ; ತರಳೆ: ಹೆಣ್ಣು;

ಪದವಿಂಗಡಣೆ:
ಕೇಳಿ+ ಕಿವಿಮುಚ್ಚಿದಳು +ತನ್ನಯ
ಮೇಳದ್+ಐವರ +ನೆನೆದು +ಹರಹರ
ಶೂಲಪಾಣಿ +ಮುಕುಂದ+ಎನುತವೆ+ ರವಿಯನ್+ ಈಕ್ಷಿಸುತ
ಕಾಳು+ ಮೂಳನಲಾ +ಖಳಾಗ್ರಣಿ
ಮೇಲು+ಕಾಣನಲಾ+ ಮದಾಂಧನ
ಸೋಲಿಸುವರ್+ಆರುಂಟೆನುತ +ತಲೆ +ಬಾಗಿದಳು +ತರಳೆ

ಅಚ್ಚರಿ:
(೧) ಕೀಚಕನನ್ನು ಬಯ್ಯುವ ಪರಿ – ಕಾಳು ಮೂಳನಲಾ ಖಳಾಗ್ರಣಿ ಮೇಲುಗಾಣನಲಾ ಮದಾಂಧ

ಪದ್ಯ ೨೪: ಕೀಚಕನು ದ್ರೌಪದಿಯನ್ನು ಏನು ಬೇಡಿದನು?

ಎಳನಗೆಯ ಬೆಳದಿಂಗಳನು ನೀ
ತಳೆದು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು
ಅಳಿಮನದ ಬಡತನವ ನಿನ್ನಯ
ಕಳಶ ಕುಚಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ (ವಿರಾಟ ಪರ್ವ, ೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮೆಲುನಗೆಯ ಬೆಳದಿಂಗಳನ್ನು ಬೀರಿ ನನ್ನ ತಾಪವನ್ನು ಹೋಗಲಾಡಿಸು, ನನ್ನ ದಾಹವನ್ನು ಮೆಲುಮಾತಿನ ಅಮೃತದಿಂದ ಕಳೆ, ಬಯಸಿ ಅಳುಕಿರುವ ಮನಸ್ಸಿನ ಬಡತನವನ್ನು ಕಳಶೋಪಮವಾದ ಕುಚಲಕ್ಷ್ಮಿಯಿಂದ ಹೋಗಲಾಡಿಸು, ನಿನ್ನ ಒಲವನ್ನು ನನ್ನ ಕಡೆಗೆ ತಿರುಗಿಸು ಎಂದು ಕೀಚಕನು ಹೇಳಿದನು.

ಅರ್ಥ:
ಎಳನಗೆ: ಮಂದಸ್ಮಿತ; ಬೆಳದಿಂಗಳು: ಪೂರ್ಣ ಚಂದ್ರದ ದಿನ; ತಳೆ: ಪಡೆ, ಹೊಂದು; ತಾಪ: ಬಿಸಿ, ಸೆಕೆ; ಕೆಡಿಸು: ಹಾಳುಮಾಡು; ಮಧುರ: ಸಿಹಿ; ಮೆಲುನುಡಿ: ಮಧುರವಾದ ಮಾತು; ಸುಧೆ: ಅಮೃತ; ತೃಷ್ಣೆ: ನೀರಡಿಕೆ; ಅಕಟ: ಅಯ್ಯೋ; ಪರಿಹರಿಸು: ನಿವಾರಿಸು; ಅಳಿ: ನಾಶವಾಗು; ಮನ: ಮನಸ್ಸು; ಬಡತನ: ದಾರಿದ್ರ; ಕಳಶ: ಕುಂಭ; ಕುಚ: ಸ್ತನ; ಲಕ್ಷ್ಮಿ: ಐಶ್ವರ್ಯ; ಕಳೆ: ನಿವಾರಿಸು; ಒಲವು: ಪ್ರೀತಿ; ತಿದ್ದು: ಸರಿಪಡಿಸು; ಕಾಂತೆ: ಬಾಲೆ, ಚೆಲುವೆ; ಕೇಳು: ಆಲಿಸು;

ಪದವಿಂಗಡಣೆ:
ಎಳ+ನಗೆಯ +ಬೆಳದಿಂಗಳನು +ನೀ
ತಳೆದು +ತಾಪವ +ಕೆಡಿಸು +ಮಧುರದ
ಮೆಲುನುಡಿಯ +ಸುಧೆಯಿಂದ +ತೃಷ್ಣೆಯನ್+ಅಕಟ +ಪರಿಹರಿಸು
ಅಳಿಮನದ+ ಬಡತನವ+ ನಿನ್ನಯ
ಕಳಶ +ಕುಚಲಕ್ಷ್ಮಿಯಲಿ +ಕಳೆ +ಮನದ್
ಒಲವನಿತ್ತಲು +ತಿದ್ದಬೇಹುದು +ಕಾಂತೆ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಎಳನಗೆಯ ಬೆಳದಿಂಗಳನು ನೀತಳೆದು ತಾಪವ ಕೆಡಿಸು; ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು

ಪದ್ಯ ೨೩: ಕೀಚಕನು ದ್ರೌಪದಿಯನ್ನು ಏನು ಬೇಡಿದ?

ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ
ಬಾಲೆ ನಿನಗಾನೊಲಿದೆ ಕಾಮನ
ಕೋಲು ತನ್ನನು ಮರಳಲೀಯವು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳುಹೆಂದ (ವಿರಾಟ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಸದ್ಗತಿ ಸುಟ್ಟು ಹೋಗಲಿ, ಯಮದೂತರು ಈಗಲೇ ಬರಲಿ, ಬಂಧುಗಳು ನನ್ನನ್ನು ದೂರಕ್ಕೆ ಕಳಿಸಲಿ, ನನ್ನವರೆನ್ನುವವರು ತೊಲಗಿ ಹೋಗಲಿ, ನನ್ನ ರಾಣಿಯರು ನನ್ನನ್ನು ತ್ಯಜಿಸಲಿ, ತರುಣಿ, ನಿನಗೆ ನಾನೊಲಿದಿದ್ದೇನೆ, ಮದನನ ಬಾಣಗಳು ನನ್ನನ್ನು ಹಿಂದಕ್ಕೆ ಕಳಿಸುವುದಿಲ್ಲ. ಚಂಚಲ ನಯನೆ, ಕಠಿಣವಾದ ಮಾತುಗಳನ್ನಾಡದೆ ನನ್ನನ್ನು ಉಳಿಸು ಎಂದು ಕೀಚಕನು ಬೇಡಿದನು.

ಅರ್ಥ:
ಮೇಲೆ: ಪರಲೋಕ, ಎತ್ತರ; ಸದ್ಗತಿ: ಮೋಕ್ಷ; ಬೆಂದು: ಬೇಯು, ಸುಟ್ಟು; ಕಾಲ: ಸಮಯ; ಐತರು: ಬಂದು ಸೇರು; ಬಂಧು: ನೆಂಟ, ಸಂಬಂಧಿಕ; ಏಳಿಸು: ಎಚ್ಚರಿಸು; ತನ್ನವರು: ಸಂಬಂಧಿಕರು; ತೊಲಗು: ಹೊರಹೋಗು; ರಾಣಿ: ಅರಸಿ; ಬಿಡು: ತೊರೆ; ಬಾಲೆ: ಹೆಣ್ಣು; ಒಲಿ: ಪ್ರೀತಿಸು; ಕಾಮ: ಮನ್ಮಥ; ಕೋಲು: ಬಾಣ; ಮರಳು: ಸುತ್ತು, ತಿರುಗು; ಲೋಲಲೋಚನೆ: ಅತ್ತಿತ್ತ ಅಲುಗಾಡುವ (ಸುಂದರ) ಕಣ್ಣುಗಳುಳ್ಳ; ಬಿರು: ಒರಟು, ಗಟ್ಟಿ; ನುಡಿ: ಮಾತು; ಉಳುಹು: ಬದುಕಿಸು;

ಪದವಿಂಗಡಣೆ:
ಮೇಲೆ+ ಸದ್ಗತಿ+ ಬೆಂದು +ಹೋಗಲಿ
ಕಾಲನವರ್+ಐತರಲಿ +ಬಂಧುಗ
ಳೇಳಿಸಲಿ+ ತನ್ನವರು +ತೊಲಗಲಿ+ ರಾಣಿಯರು+ ಬಿಡಲಿ
ಬಾಲೆ +ನಿನಗಾನ್+ಒಲಿದೆ+ ಕಾಮನ
ಕೋಲು +ತನ್ನನು +ಮರಳಲೀಯವು
ಲೋಲಲೋಚನೆ +ಬಿರುಬ +ನುಡಿಯದೆ +ತನ್ನನುಳುಹೆಂದ

ಅಚ್ಚರಿ:
(೧) ದ್ರೌಪದಿಯನ್ನು ಲೋಲಲೋಚನೆ, ಬಾಲೆ ಎಂದು ಕರೆದಿರುವುದು

ಪದ್ಯ ೨೨: ದ್ರೌಪದಿಯು ಕೀಚಕನಿಗೆ ಏನು ಹೇಳಿದಳು?

ಪರರ ಸತಿಗಳುಪಿದರೆ ಪಾತಕ
ದೊರಕುವುದು ಜಯಲಕ್ಷ್ಮಿ ಸರಿವಳು
ಧರೆಯೊಳಗ್ಗದ ಕೀರ್ತಿ ಮಾಸುಗು ಗತಿಗೆ ಕೇಡಹುದು
ಕೊರಳು ಹಲವಾದಸುರನಂತಕ
ಪುರವನೈದಿದ ಕಥೆಯ ನೀ ಕೇ
ಳ್ದರಿಯಲಾ ಕಡುಮೂರ್ಖ ನೀನೆಂದಳು ಸರೋಜಮುಖಿ (ವಿರಾಟ ಪರ್ವ, ೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ದ್ರೌಪದಿಯು, ಪರಸ್ತ್ರೀಯನ್ನು ಬಯಸುವುದು ಪಾಪ, ಆದರಿಂದ ಜಯಲಕ್ಷ್ಮಿಯು ನಿನ್ನನ್ನು ತೊರೆದು ಹೋಗುತ್ತಾಳೆ. ಲೋಕದಲ್ಲಿ ಅಪಕೀರ್ತಿಯುಂಟಾಗುತ್ತದೆ. ಸದ್ಗತಿ ದೊರೆಯುವುದಿಲ್ಲ. ರಾವಣನು ಮರಣ ಹೊಂದಿದ ಕಥೆಯನ್ನು ತಿಳಿದೂ ತಿಳಿಯದೆ ಅವನಂತೆ ವರ್ತಿಸುತ್ತಿರುವ ಮಹಾಮೂರ್ಖ ನೀನು, ಹೊರಟು ಹೋಗು ಎಂದು ದ್ರೌಪದಿ ಹೇಳಿದಳು.

ಅರ್ಥ:
ಪರರು: ಬೇರೆಯವರು; ಸತಿ: ಹೆಂಡತಿ; ಅಳುಪು: ಬಯಸು; ಪಾತಕ: ಪಾಪ; ದೊರಕು: ಪಡೆ; ಸರಿ: ದೂರಹೋಗು; ಧರೆ: ಭೂಮಿ; ಅಗ್ಗ: ಶ್ರೇಷ್ಠ; ಕೀರ್ತಿ: ಯಶಸ್ಸು; ಮಾಸು: ಮಂಕಾಗು; ಗತಿ: ಮೋಕ್ಷ; ಕೇಡು: ಆಪತ್ತು, ಕೆಡಕು; ಕೊರಳು: ಗಂಟಲು; ಅಸುರ: ರಾಕ್ಷಸ; ಅಂತಕ: ಯಮ, ಸಾವು; ಪುರ: ಊರು; ಐದು: ಬಂದು ಸೇರು; ಕಥೆ: ವಿಆರ; ಅರಿ: ತಿಳಿ; ಕಡು: ಬಹಳ; ಮೂರ್ಖ: ತಿಳಿಗೇಡಿ, ಅವಿವೇಕಿ; ಸರೋಜಮುಖಿ: ಕಮಲದಂತಹ ಮುಖವುಳ್ಳವಳು;

ಪದವಿಂಗಡಣೆ:
ಪರರ +ಸತಿಗ್+ಅಳುಪಿದರೆ+ ಪಾತಕ
ದೊರಕುವುದು +ಜಯಲಕ್ಷ್ಮಿ+ ಸರಿವಳು
ಧರೆಯೊಳ್+ಅಗ್ಗದ +ಕೀರ್ತಿ +ಮಾಸುಗು +ಗತಿಗೆ+ ಕೇಡಹುದು
ಕೊರಳು +ಹಲವಾದ್+ಅಸುರನ್+ಅಂತಕ
ಪುರವನ್+ಐದಿದ+ ಕಥೆಯ +ನೀ +ಕೇಳ್ದ್
ಅರಿಯಲಾ +ಕಡುಮೂರ್ಖ +ನೀನೆಂದಳು +ಸರೋಜಮುಖಿ

ಅಚ್ಚರಿ:
(೧) ರಾವಣನ ಬಗ್ಗೆ ಹೇಳಿದ ಪರಿ – ಕೊರಳು ಹಲವಾದಸುರನಂತಕಪುರವನೈದಿದ ಕಥೆಯ ನೀ ಕೇಳ್ದರಿಯಲಾ ಕಡುಮೂರ್ಖ