ಪದ್ಯ ೨೩: ಅರ್ಜುನನು ಯಾವ ಕಾರ್ಯಕ್ಕೆ ಸಿದ್ಧನಾದನು?

ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯ ವಿದ್ಯಾಭ್ಯಾಸ ಸಂಗದಲಿ
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ (ವಿರಾಟ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಇಂದ್ರನ ಅರಮನೆಯಲ್ಲಿದ್ದ ಅಮರಕನ್ಯೆ ಊರ್ವಶಿಯ ಶಾಪದಿಂದ ಅರ್ಜುನನು ನಪುಂಸಕನಾಗಿ ವಿರಾಟನ ಮಗಳಿಗೆ ನಾಟ್ಯವನ್ನು ಕಲಿಸುವವನಾದನು. ನಕುಲ ಸಹದೇವರು ಕುದುರೆಗಳ, ಗೋವುಗಳ ಪಾಲಕರಾದರು. ಬಳಿಕ ದ್ರೌಪದಿಯು ವಿರಾಟನಗರವನ್ನು ಪ್ರವೇಶಿಸಿದಳು.

ಅರ್ಥ:
ಸುರಪ: ಇಂದ್ರ; ಅರಸಿ: ರಾಣಿ; ಶಾಪ: ನಿಷ್ಠುರದ ನುಡಿ; ಸಿತತುರಗ: ಬಿಳಿ ಕುದುರೆ; ಅರೆ: ಅರ್ಧ; ವೆಣ್ಣು: ಹೆಣ್ಣು; ಮಗಳು: ತನುಜೆ; ನಾಟ್ಯ: ನೃತ್ಯ; ವಿದ್ಯಾಭ್ಯಾಸ: ಶಿಕ್ಷಣ; ಸಂಗ: ಜೊತೆ; ಯಮಳರು: ಅವಳಿ ಮಕ್ಕಳು; ತುರಗ: ಅಶ್ವ; ಗೋವ್ರಜ: ಆಕಳುಗಳ ಗುಂಪು; ಭರಣ:ಕಾಪಾಡುವುದು, ರಕ್ಷಣೆ; ಬಳಿಕ: ನಂತರ; ಅರಸಿ: ರಾಣಿ; ಒಲವು: ಪ್ರೀತಿ; ಪಟ್ಟಣ: ಊರು; ಸಾರು: ಸಮೀಪಿಸು;

ಪದವಿಂಗಡಣೆ:
ಸುರಪನ್+ಅರಸಿಯ +ಶಾಪದಲಿ +ಸಿತ
ತುರಗನ್+ಅರೆವೆಣ್ಣಾಗಿ+ ಮತ್ಸ್ಯೇ
ಶ್ವರನ+ ಮಗಳಿಗೆ+ ನಾಟ್ಯ +ವಿದ್ಯಾಭ್ಯಾಸ +ಸಂಗದಲಿ
ಇರಲು +ಯಮಳರು+ ತುರಗ +ಗೋವ್ರಜ
ಭರಣರಾದರು +ಬಳಿಕ +ಪಾಂಡವರ್
ಅರಸಿ +ಸಾರಿದಳ್+ಒಲವಿನಲಿ+ ವೈರಾಟ +ಪಟ್ಟಣವ

ಅಚ್ಚರಿ:
(೧) ಸುರಪನರಸಿ, ಪಾಂಡವರರಸಿ – ಅರಸಿ ಪದದ ಬಳಕೆ – ಊರ್ವಶಿ, ದ್ರೌಪದಿಯನ್ನು ಕರೆಯುವ ಪರಿ

ಪದ್ಯ ೨೨: ಭೀಮನು ಯಾವ ಕೆಲಸಕ್ಕೆ ವಿರಾಟನಲ್ಲಿ ಸೇರಿಕೊಂಡನು?

ಏನು ಪರಿಣತಿ ನಿನಗೆ ಬಾಣಸಿ
ಯಾನು ಭೀಮನ ಮನೆಯವನು ಮ
ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ
ನೀನಧಿಕನೆಂದಾ ಸಮೀರನ
ಸೂನುವನು ಮನ್ನಿಸಿದನಿತ್ತಲು
ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ (ವಿರಾಟ ಪರ್ವ, ೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಮನು ವಿರಾಟನನ್ನು ಭೇಟಿಮಾಡಿದನು, ನೀನು ಯಾವುದರಲ್ಲಿ ಪರಿಣತಿ ಹೊಂದಿರುವೆ ಎಂದು ಕೇಳಲು, ಭೀಮನು ತನಗೆ ಅಡುಗೆ ಕಾರ್ಯದಲ್ಲಿ ನಿಪುಣತೆ ಹೊಂದಿರುವೆ ಎಂದು ಉತ್ತರಿಸಿದನು. ಇನ್ನಾವ ವಿದ್ಯೆ ಬರುತ್ತದೆ ಎನಲು, ತಾನು ಮಲ್ಲವಿದ್ಯೆಯಲ್ಲೂ ನಿಪುಣನೆಂದ ವಾಯುಪುತ್ರನು ಉತ್ತರಿಸಲು, ವಿರಾಟನು ಭೀಮನನ್ನು ತನ್ನ ಅಡುಗೆ ಮನೆಯಲ್ಲಿರುವಂತೆ ಅಪ್ಪಣೆಮಾಡಿದನು. ಮರುದಿನ ಅರ್ಜುನನು ಆ ಪಟ್ಟಣವನ್ನು ಹೊಕ್ಕನು.

ಅರ್ಥ:
ಪರಿಣತಿ: ಪಾಂಡಿತ್ಯ, ವಿಶೇಷತೆ; ಬಾಣಸಿ: ಅಡುಗೆಯವ; ಮನೆ: ಆಲಯ; ಭುಜಬಲ: ಪರಾಕ್ರಮ, ಶಕ್ತಿ; ಅಗ್ಗ: ಶ್ರೇಷ್ಠ; ಅರಿ: ತಿಳಿ; ಮಲ್ಲ: ಕುಸ್ತಿ; ವಿದ್ಯೆ: ಜ್ಞಾನ; ಅಧಿಕ: ಹೆಚ್ಚಳ; ಸಮೀರ: ವಾಯು; ಸೂನು: ಪುತ್ರ; ಮನ್ನಿಸು: ಅಂಗೀಕರಿಸು, ದಯಪಾಲಿಸು; ಮಾನನಿಧಿ: ಮಾನವನ್ನೇ ಐಶ್ವರ್ಯವನ್ನಾಗಿಸಿಕೊಂಡ; ಮರುದಿವಸ: ನಾಳೆ; ಹೊಕ್ಕು: ಸೇರು; ಹೊಳಲು:ಪಟ್ಟಣ, ನಗರ;

ಪದವಿಂಗಡಣೆ:
ಏನು +ಪರಿಣತಿ +ನಿನಗೆ +ಬಾಣಸಿ
ಯಾನು +ಭೀಮನ +ಮನೆಯವನು +ಮ
ತ್ತೇನು+ ಭುಜಬಲವ್+ಅರಿವೆನ್+ಅಗ್ಗದ +ಮಲ್ಲ+ವಿದ್ಯೆಯಲಿ
ನೀನ್+ಅಧಿಕನೆಂದ್+ಆ+ ಸಮೀರನ
ಸೂನುವನು+ ಮನ್ನಿಸಿದನ್+ಇತ್ತಲು
ಮಾನನಿಧಿ+ ಮರುದಿವಸ+ ಹೊಕ್ಕನು +ಪಾರ್ಥನಾ +ಹೊಳಲ

ಅಚ್ಚರಿ:
(೧) ಭೀಮ, ಸಮೀರನ ಸೂನು – ಭೀಮನನ್ನು ಕರೆದ ಪರಿ
(೨) ಭೀಮನ ಪರಿಣತಿ – ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ, ಬಾಣಸಿ

ಪದ್ಯ ೨೧: ಧರ್ಮಜನ ನಂತರ ವಿರಾಟನನ್ನು ಯಾರು ಕಂಡರು?

ಆದುದೈ ನಿರ್ವಾಹ ಕಂಕಂ
ಗಾದುದಾ ಮತ್ಸ್ಯೇಶನಿಂದ ವಿ
ವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು
ಹೋದವಿತ್ತಲು ಕೆಲವು ದಿನ ತನ
ಗಾದ ಸಾಹಾಯ್ಯದಲಿ ರಿಪು ಬಲ
ಭೇದಿ ಮಾರುತಿ ಬಂದುಕಂಡನು ಮತ್ಸ್ಯಭೂಪತಿಯ (ವಿರಾಟ ಪರ್ವ, ೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕಂಕನಿಗೆ ವಿರಾಟನಿಂದ ಆಶ್ರಯ ದೊರೆಯಿತು. ಇವನು ನಿಜವಾದ ಸೇವಕನೋ ಆಶ್ರಿತನೋ ಎಂಬಂತೆ ಧರ್ಮಜನಿದ್ದನು. ಕೆಲವು ದಿನಗಳ ನಂತರ ಭೀಮನು ತನಗೆ ಯುಕ್ತವಾದ ಪರಿಕರಗಳೊಡಗೂಡಿ ಬಂದು ವಿರಾಟನನ್ನು ಕಂಡನು.

ಅರ್ಥ:
ನಿರ್ವಾಹ: ನಿವಾರಣೋಪಾಯ; ಈಶ: ಒಡೆಯ; ವಿವಾದ: ವಾಗ್ದಾನ, ಚರ್ಚೆ, ಜಗಳ; ಸೇವೆ: ಊಳಿಗ, ಚಾಕರಿ; ನಿಜ: ದಿಟ; ಹೋದುವು: ಕಳೆಯಲು; ಕೆಲವು: ಸ್ವಲ್ಪ; ದಿನ: ವಾರ; ಸಾಹಾಯ: ಸಹಾಯ, ನೆರವು; ರಿಪು: ವೈರಿ; ಬಲ: ಶಕ್ತಿ, ಸೇನೆ; ಭೇದಿ: ಒಡೆಯುವವ; ಮಾರುತಿ: ವಾಯುಪುತ್ರ; ಬಂದು: ಆಗಮಿಸು; ಕಂಡು: ನೋಡು; ಭೂಪತಿ: ರಾಜ;

ಪದವಿಂಗಡಣೆ:
ಆದುದೈ +ನಿರ್ವಾಹ +ಕಂಕಂಗ್
ಆದುದಾ+ ಮತ್ಸ್ಯೇಶನಿಂದ +ವಿ
ವಾದವಿಲ್ಲದೆ +ಸೇವೆ +ನಿಜವಾದಂತೆ+ಯಿರುತಿರಲು
ಹೋದವ್+ಇತ್ತಲು+ ಕೆಲವು +ದಿನ +ತನ
ಗಾದ +ಸಾಹಾಯ್ಯದಲಿ+ ರಿಪು+ ಬಲ
ಭೇದಿ +ಮಾರುತಿ +ಬಂದು+ಕಂಡನು+ ಮತ್ಸ್ಯ+ಭೂಪತಿಯ

ಅಚ್ಚರಿ:
(೧) ಮತ್ಸ್ಯಭೂಪತಿ, ಮತ್ಸ್ಯೇಶ – ಸಮನಾರ್ಥಕ ಪದ
(೨) ಭೀಮನನ್ನು ಹೊಗಳುವ ಪರಿ – ರಿಪು ಬಲ ಭೇದಿ

ಪದ್ಯ ೨೦: ಧರ್ಮಜನು ಯಾರ ಸೇವಕನಾದನು?

ಓಲಗಕೆ ಬಂದಖಿಳರಾಯರ
ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ
ಕಾಲವಾವನನಾವಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ (ವಿರಾಟ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಆಸ್ಥಾನಕ್ಕೆ ಬಂದ ರಾಜರ ಕಿರೀಟಗಳ ಮುತ್ತು ರತ್ನಗಳು ಧರ್ಮಜನ ಪಾದಗಳಿಗೆ ನಿವಾಳಿಮಾಡುತ್ತಿದ್ದವು. ಆದರೆ ಕಾಲವು ಯಾರನ್ನು ಯಾವ ರೀತಿಯಲ್ಲಿ ಕೀಳುಗಳೆಯುತ್ತದೆ ಎನ್ನುವುದು ಮಾತಿಗೆ ಮೀರಿದ್ದು. ಹುಲು ಮಾಂಡಲಿಕನಾದ ವಿರಾಟನು ಧರ್ಮಜನನ್ನು ಇಂದು ತನ್ನ ಸೇವಕನಾಗಿಟ್ಟುಕೊಂಡನು.

ಅರ್ಥ:
ಓಲಗ: ದರ್ಬಾರು; ಬಂದು: ಆಗಮಿಸು; ಅಖಿಳ: ಎಲ್ಲಾ; ರಾಯ: ರಾಜ; ಮೌಳಿ: ಶಿರ; ರಾಜರಮೌಳಿ: ರಾಜರಲ್ಲಿ ಶ್ರೇಷ್ಠನಾದವ; ಮೌಕ್ತಿಕ: ಮುತ್ತು; ಮಣಿ: ಬೆಲೆಬಾಳುವ ರತ್ನ; ಮಯೂಖ: ಕಿರಣ, ರಶ್ಮಿ; ನಿವಾಳಿ: ನೀವಳಿಸುವುದು, ದೃಷ್ಟಿ ತೆಗೆಯುವುದು; ನೆರೆ: ಪಕ್ಕ, ಪಾರ್ಶ್ವ; ಮೆರೆ: ಪ್ರಕಾಶಿಸು; ಪಾದ: ಚರಣ; ಪದ್ಮ: ಕಮಲ; ಯುಗ: ಎರಡು; ಕಾಲ: ಸಮಯ; ಪರಿ: ರೀತಿ; ಕೀಳು: ನೀಅ; ಆಳು: ಸೇವಕ; ಕ್ಷಿತಿಪ: ರಾಜ;

ಪದವಿಂಗಡಣೆ:
ಓಲಗಕೆ +ಬಂದ್+ಅಖಿಳ+ರಾಯರ
ಮೌಳಿ +ಮೌಕ್ತಿಕ+ ಮಣಿ +ಮಯೂಖ +ನಿ
ವಾಳಿಯಲಿ +ನೆರೆ +ಮೆರೆವುದ್+ಆತನ +ಪಾದ +ಪದ್ಮಯುಗ
ಕಾಲವ್+ಆವನನ್+ಆವ+ಪರಿಯಲಿ
ಕೀಳು +ಮಾಡದು +ಧರ್ಮ+ಪುತ್ರನನ್
ಆಳು+ಕೊಂಡನು +ಮತ್ಸ್ಯನೆಲೆ+ ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ರಾಜ, ಕ್ಷಿತಿಪ – ಸಮನಾರ್ಥಕ ಪದ
(೨) ಮ ಕಾರದ ಸಾಲು ಪದ – ಮೌಳಿ ಮೌಕ್ತಿಕ ಮಣಿ ಮಯೂಖ
(೩) ಧರ್ಮಜನ ಹಿಂದಿನ ಹಿರಿಮೆ – ಓಲಗಕೆ ಬಂದಖಿಳರಾಯರ ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ

ಪದ್ಯ ೧೯: ಧರ್ಮಜನು ವಿರಾಟ ರಾಜನಿಗೆ ಏನು ಹೇಳಿದ?

ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ
ಬಿಟ್ಟರೆಮ್ಮನು ಜಠರ ಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಭಿದಾನ ತನಗೆಂದ (ವಿರಾಟ
ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಹಾ ವೈಭವಯುತವಾದ ಇಂದ್ರಪ್ರಸ್ಥನಗರವು ಕೆಟ್ಟು ಹೋಯಿತು. ಲೋಕೈಕ ವೀರರಾದ ಪಾಂಡಾರು ನಾರುಮಡಿಯುಟ್ಟು ಊರುಬಿಟ್ಟರು. ಚಂದ್ರವಂಶದ ರಾಜರಿಗೆ ದಟ್ಟವಾದ ಅಡವಿಯು ಮನೆಯಾಯಿತು. ಊರು ಬಿಡುವ ಮೊದಲು ನಮ್ಮನ್ನು ಕರೆಸಿ ಎಲ್ಲಿಯಾದರೂ ಹೋಗಿ ಹೊಟ್ಟೆ ಹೊರೆದುಕೊಳ್ಳಿರಿ ಎಂದು ಹೇಳಬೇಕಾಯಿತು. ಆಶ್ರಯವೇ ಇಲ್ಲದವನಾಗಿ ವ್ಯೆಥೆಪಟ್ಟು ಇಲ್ಲಿಗೆ ಬಂದಿದ್ದೇನೆ. ನನ್ನ ಹೆಸರು ಕಂಕ ಎಂದು ಧರ್ಜಜನು ವಿರಾಟ ರಾಜನಿಗೆ ಹೇಳಿದನು.

ಅರ್ಥ:
ಕೆಟ್ಟು: ಹಾಳಾಗು; ಉಟ್ಟು: ತೊಡು; ನಾರು: ತೊಗಟೆ; ಸೀರೆ: ವಸ್ತ್ರ; ಅಡವಿ: ಕಾದು; ಮನೆ: ಆಲಯ; ಹಿಮಕರ: ಚಂದ್ರ; ಕುಲ: ವಂಶ; ರಾಯ: ರಾಜ; ಬಿಟ್ಟು: ತೊರೆ; ಜಠರ: ಹೊಟ್ಟೆ; ಭರಣ: ಕಾಪಾಡು, ಪೋಷಿಸು; ಆಶ್ರಯ: ಆಸರೆ; ಕಂಗೆಟ್ಟು: ವ್ಯಥೆಗೊಳ್ಳು; ಬಂದು: ಆಗಮಿಸು; ಅಭಿಧಾನ: ಹೆಸರು;

ಪದವಿಂಗಡಣೆ:
ಕೆಟ್ಟುದ್+ಇಂದ್ರಪ್ರಸ್ಥ +ಪಾಂಡವರ್
ಉಟ್ಟು+ಹೋದರು +ನಾರ +ಸೀರೆಯನ್
ಅಟ್ಟಡವಿ+ ಮನೆಯಾಯ್ತು +ಹಿಮಕರ+ಕುಲದ +ರಾಯರಿಗೆ
ಬಿಟ್ಟರ್+ಎಮ್ಮನು +ಜಠರ+ ಭರಣಕೆ
ನೆಟ್ಟನ್+ಆಶ್ರಯವಿಲ್ಲದಿರೆ+ ಕಂ
ಗೆಟ್ಟು +ಬಂದೆವು +ಕಂಕನೆಂಬ್+ಅಭಿದಾನ+ ತನಗೆಂದ

ಅಚ್ಚರಿ:
(೧) ಪಾಂಡವರ ಸ್ಥಿತಿಯನ್ನು ವಿವರಿಸುವ ಪರಿ – ಪಾಂಡವರುಟ್ಟುಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ಹಿಮಕರಕುಲದ ರಾಯರಿಗೆ