ಪದ್ಯ ೯: ಉಳಿದ ಪಾಂಡವರು ಧರ್ಮಜನಿಗೇನು ಹೇಳಿದರು?

ಒಡಲ ಬಳಿ ನೆಳಲಿಂಗೆ ಗತಿ ಬೇ
ರ್ಪಡಿಸಿಹುದೆ ಸುಖದುಃಖವಿವು ನಿ
ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ
ಅಡವಿಯೇ ಸಾಮ್ರಾಜ್ಯ ನಿಮ್ಮಡಿ
ಯೊಡನಿರಲು ನೀವಿಲ್ಲದಾ ಪುರ
ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ (ವಿರಾಟ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ದೇಹವನ್ನು ಬಿಟ್ಟು ನೆರಳು ಬೇರೆಡೆಗೆ ಹೋಗಲು ಸಾಧ್ಯವೇ? ನಿಮ್ಮ ಸುಖ ದುಃಖಗಳು ನಮ್ಮವೇ ಅಲ್ಲವೇ? ನಾಲ್ವರ ದೇಹಗಳಲ್ಲಿಯೂ ಇರುವ ಜೀವಾತ್ಮನೇ ನೀವು, ನಿಮ್ಮ ಪಾದಗಳ ಬಳಿಯಲ್ಲಿದ್ದರೆ ಅಡವಿಯೇ ನಮಗೆ ಸಾಮ್ರಾಜ್ಯ. ನಿಮ್ಮನ್ನು ಬಿಟ್ಟು ನಗರದಲ್ಲಿದ್ದರೆ ಆ ಪುರವು ನಮ್ಮ ಪಾಲಿಗೆ ಅಡವಿಯ ಸಮಾನ ಎಂದು ಧರ್ಮರಾಯನಿಗೆ ಉಳಿದವರು ಹೇಳಿದರು.

ಅರ್ಥ:
ಒಡಲು: ದೇಹ; ಬಳಿ: ಹತ್ತಿರ; ನೆಳಲು: ನೆರಳು; ಗತಿ: ವೇಗ; ಬೇರ್ಪಡಿಸು: ದೂರಮಾದು; ಸುಖ: ಸಂತಸ; ದುಃಖ: ನೋವು; ಅಡಿ: ಕೆಳಗೆ, ಜೊತೆ; ತನು: ದೇಹ; ಜೀವಾತ್ಮ: ಪ್ರಾಣ; ಅಡವಿ: ಕಾಡು; ಸಾಮ್ರಾಜ್ಯ: ರಾಷ್ಟ್ರ; ಪುರ: ಊರು; ಅಡವಿ: ಕಾಡು; ಬಿನ್ನವಿಸು: ಹೇಲು; ಭೂಪತಿ: ರಾಜ;

ಪದವಿಂಗಡಣೆ:
ಒಡಲ +ಬಳಿ +ನೆಳಲಿಂಗೆ +ಗತಿ +ಬೇ
ರ್ಪಡಿಸಿಹುದೆ+ ಸುಖ+ದುಃಖವ್+ಇವು+ ನಿ
ಮ್ಮಡಿಗಳಲಿ +ತನು +ನಾಲ್ಕರಲಿ +ಜೀವಾತ್ಮ +ನೀವೆಮಗೆ
ಅಡವಿಯೇ +ಸಾಮ್ರಾಜ್ಯ +ನಿಮ್ಮಡಿ
ಯೊಡನಿರಲು +ನೀವಿಲ್ಲದಾ +ಪುರವ್
ಅಡವಿ +ನಮಗಹುದೆಂದು +ಬಿನ್ನವಿಸಿದರು +ಭೂಪತಿಗೆ

ಅಚ್ಚರಿ:
(೧) ಸುಖ, ದುಃಖ – ವಿರುದ್ಧ ಪದಗಳು
(೨) ಧರ್ಮಜನ ಮೇಲಿನ ಅಭಿಮಾನ – ಅಡವಿಯೇ ಸಾಮ್ರಾಜ್ಯ ನಿಮ್ಮಡಿಯೊಡನಿರಲು ನೀವಿಲ್ಲದಾ ಪುರ
ವಡವಿ

ನಿಮ್ಮ ಟಿಪ್ಪಣಿ ಬರೆಯಿರಿ