ಪದ್ಯ ೧೧: ಯಾವ ಮರದಲ್ಲಿ ಆಯುಧಗಳನ್ನಿರಿಸಿದರು?

ಬಂದು ಮತ್ಸ್ಯಪುರೋಪಕಂಠದ
ನಂದನದ ಕೆಲಕಡೆಯಲನಿಬರು
ನಿಂದು ನಾಲಕು ದೆಸೆಯನೀಕ್ಷಿಸಿ ನಿಜನಿವಾಸದಲಿ
ತಂದ ಚರ್ಮದಲಖಿಳ ಕೈದುವ
ನೊಂದು ಹೆಣನಾಕಾರದಲಿ ಬಿಗಿ
ದೊಂದು ಬನ್ನಿಯ ಮರನ ತುದಿಯಲಿ ಕಟ್ಟಲೇರಿದರು (ವಿರಾಟ ಪರ್ವ, ೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮತ್ಸ್ಯನಗರದ ಹತ್ತಿರ ಬಂದು ಊರಿನ ಹೊರಗಿರುವ ಒಂದು ಉಪವನದ ಬಳಿಯಲ್ಲಿ ಎಲ್ಲರೂ ನಿಂತು, ಸುತ್ತಲೂ ನೋಡಿ ತಾವು ತಂದಿದ್ದ ಒಂದು ದೊಡ್ಡ ಚರ್ಮದಲ್ಲಿ ತಮ್ಮೆಲ್ಲಾ ಆಯುಧಗಳನ್ನು ಒಂದು ಹೆಣದ ಆಕಾರ ಬರುವಂತೆ ಬಿಗಿದು ಕಟ್ಟಿ ಒಂದು ಬನ್ನಿಯ ಮರದ ತುದಿಯಲ್ಲಿ ಕಟ್ಟಲು ಮರವನ್ನೇರಿದರು.

ಅರ್ಥ:
ಬಂದು: ಆಗಮಿಸು; ಪುರ: ಊರು; ಉಪಕಂಠ: ಹತ್ತಿರ; ನಂದನ: ಉಪವನ; ಕೆಲ: ಸ್ವಲ್ಪ, ಹತ್ತಿರ; ಕಡೆ: ಪಕ್ಕ, ಅಂಚು; ಅನಿಬರು: ಅಷ್ಟು ಜನ; ನಿಂದು: ನಿಲ್ಲು; ದೆಸೆ: ದಿಕ್ಕು; ಈಕ್ಷಿಸು: ನೋಡು; ನಿವಾಸ: ಸ್ಥಾನ; ತಂದ: ಬಳಿಯಿದ್ದ; ಚರ್ಮ: ತೊಗಲು; ಅಖಿಳ: ಎಲ್ಲಾ; ಕೈದು: ಆಯುಧ; ಹೆಣ: ಜೀವವಿಲ್ಲದ ಶರೀರ; ಆಕಾರ: ರೂಪ; ಬಿಗಿ: ಬಂಧಿಸು; ಮರ: ತರು; ತುದಿ: ಅಗ್ರಭಾಗ; ಕಟ್ಟು: ಬಂಧಿಸು; ಏರು: ಮೇಲೆ ಹೋಗು;

ಪದವಿಂಗಡಣೆ:
ಬಂದು +ಮತ್ಸ್ಯ+ಪುರ+ಉಪಕಂಠದ
ನಂದನದ +ಕೆಲಕಡೆಯಲ್+ಅನಿಬರು
ನಿಂದು +ನಾಲಕು +ದೆಸೆಯನ್+ಈಕ್ಷಿಸಿ +ನಿಜ+ನಿವಾಸದಲಿ
ತಂದ +ಚರ್ಮದಲ್+ಅಖಿಳ +ಕೈದುವನ್
ಒಂದು ಹೆಣನ್+ಆಕಾರದಲಿ +ಬಿಗಿದ್
ಒಂದು+ ಬನ್ನಿಯ +ಮರನ+ ತುದಿಯಲಿ +ಕಟ್ಟಲೇರಿದರು

ಅಚ್ಚರಿ:
(೧) ಬಂದು, ನಿಂದು, ಒಂದು – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ