ಪದ್ಯ ೧೦: ಯಾರ ಆಶ್ರಮಕ್ಕೆ ಪಾಂಡವರು ಬಂದರು?

ತುಷ್ಟನಾದನು ನೃಪತಿ ಕೃತ ಪರಿ
ಶಿಷ್ಟಪಾಲನು ಜಗದೊಳತ್ಯು
ತ್ಕೃಷ್ಟ ಚರಿತನು ತೆಂಕದೆಸೆಗೆ ಸಹೋದರರು ಸಹಿತ
ದುಷ್ಟಮೃಗಗಳ ಬೇಂಟೆಯಾಡಿ ವ
ಸಿಷ್ಠ ಮುನಿಯಾಶ್ರಮದ ಸುಜನರ
ರಿಷ್ಟವನು ಪರಿಹರಿಸುತೈತಂದನು ಸರಾಗದಲಿ (ವಿರಾಟ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ತನ್ನ ಸೋದರರ ಮಾತನ್ನು ಕೇಳಿ ಧರ್ಮಜನು ತೃಪ್ತನಾದನು. ಲೋಕದಲ್ಲಿ ಅತಿ ಉತ್ಕೃಷ್ಟ ನಡೆಯುಳ್ಳವನೂ, ಶಿಷ್ಟರ ಧರ್ಮವನ್ನು ಪರಿಪಾಲಿಸುವವನೂ ಆದ ಅವನು ತಮ್ಮಂದಿರೊಡನೆ ದಕ್ಷಿಣಕ್ಕೆ ನಡೆದು ದಾರಿಯಲ್ಲಿ ವಸಿಷ್ಠಾಶ್ರಮದ ಸಜ್ಜನರ ಕಷ್ಟವನ್ನು (ದುಷ್ಟ ಮೃಗಗಳ ಕಾಟ) ಪರಿಹರಿಸಿ ಮುಂದೆ ನಡೆದನು.

ಅರ್ಥ:
ತುಷ್ಟ: ತೃಪ್ತ, ಆನಂದ; ನೃಪತಿ: ರಾಜ; ಕೃತ: ಮಾಡಿದ, ಪುಣ್ಯವಂತ; ಪರಿಶಿಷ್ಟ: ಪೂರ್ತಿಯಾದ; ಪಾಲ: ಕಾಯುವವ, ರಕ್ಷಿಸುವ; ಜಗ: ಪ್ರಪಂಚ; ಉತ್ಕೃಷ್ಟ: ಶ್ರೇಷ್ಠ; ಚರಿತ: ವಿಚಾರವುಳ್ಳ; ತೆಂಕ: ದಕ್ಷಿಣ; ದೆಸೆ: ದಿಕ್ಕು; ಸಹೋದರ: ತಮ್ಮ; ಸಹಿತ: ಜೊತೆ; ದುಷ್ಟ: ಕೆಟ್ಟ; ಮೃಗ: ಪ್ರಾಣಿ; ಬೇಂಟೆ: ಕಾಡುಮೃಗಗಳನ್ನು ಕೊಲ್ಲುವುದು; ಮುನಿ: ಋಷಿ; ಆಶ್ರಮ: ಕುಟೀರ; ಸುಜನ: ಸಜ್ಜನ; ಇಷ್ಟ: ಇಚ್ಛೆ; ಪರಿಹರಿಸು: ನಿವಾರಿಸು; ಐತಂದು: ಬಂದು ಸೇರು; ಸರಾಗ: ಸುಲಭ;

ಪದವಿಂಗಡಣೆ:
ತುಷ್ಟನಾದನು +ನೃಪತಿ +ಕೃತ +ಪರಿ
ಶಿಷ್ಟಪಾಲನು +ಜಗದೊಳ್+ಅತಿ
ಉತ್ಕೃಷ್ಟ +ಚರಿತನು +ತೆಂಕ+ದೆಸೆಗೆ+ ಸಹೋದರರು +ಸಹಿತ
ದುಷ್ಟ+ಮೃಗಗಳ+ ಬೇಂಟೆಯಾಡಿ +ವ
ಸಿಷ್ಠ +ಮುನಿ+ಆಶ್ರಮದ +ಸುಜನರರ್
ಇಷ್ಟವನು +ಪರಿಹರಿಸುತ್+ಐತಂದನು +ಸರಾಗದಲಿ

ಅಚ್ಚರಿ:
(೧) ತುಷ್ಟ, ಶಿಷ್ಟ, ದುಷ್ಟ, ಇಷ್ಟ – ಪ್ರಾಸ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ