ಪದ್ಯ ೫: ಧರ್ಮಜನು ತನ್ನ ತಮ್ಮಂದಿರ ಬಗ್ಗೆ ಏನು ಯೋಚಿಸಿದ?

ನೃಪತಿ ನಿಶ್ಚೈಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು (ವಿರಾಟ ಪರ್ವ, ೧ ಸಂಧಿ, ೫ ಪದ್ಯ)

ತಾತ್ಪರ್ಯ:
ಧರ್ಮಜನು ಮತ್ಸ್ಯನಗರದಲ್ಲಿ ವಿರಾಟನ ಆಶ್ರಯದಲ್ಲಿ ಒಂದು ವರ್ಷ ದೈನ್ಯದಿಂದಿರುವುದನ್ನು ನಿಶ್ಚಯಿಸಿ ತಮ್ಮಂದಿರಿಗೆ ನಾವು ಗುಪ್ತವಾಗಿರುವುದಾದರೂ ಹೇಗೆ? ನಿಮ್ಮಂತಹ ವೀರರು ಇನ್ನೊಬ್ಬರ ಆಶ್ರಯದಲ್ಲಿರುವ ಅಪದೆಸೆಯನ್ನು ಹೇಗೆ ಸೈರಿಸೀರಿ? ಕರುಣೆಯಿಲ್ಲದೆ ಹೀಗಿರಬೇಕೆಂದು ನಾನು ನಿಮಗೆ ಹೇಗೆ ತಾನೆ ಅಪ್ಪಣೆನೀಡಲಿ ಎಂದನು.

ಅರ್ಥ:
ನೃಪತಿ: ರಾಜ; ನಿಶ್ಚೈಸು: ನಿರ್ಧರಿಸು; ಅಧಿಪ: ರಾಜ; ನಗರ: ಊರು; ಸೈರಿಸು: ತಾಳು, ಸಹಿಸು; ಕೃಪಣ: ದೀನ, ದೈನ್ಯದಿಂದ ಕೂಡಿದುದು; ನೂಕು: ತಳ್ಳು; ನುಡಿ: ಮಾತು; ವತ್ಸರ: ವರ್ಷ; ಗುಪಿತ: ಗುಪ್ತ; ಆಶ್ರಯ: ಆಸರೆ, ಅವಲಂಬನ; ಅಪದೆಸೆ: ದುರ್ವಿಧಿ, ದುರದೃಷ್ಟ; ನಿಷ್ಕೃಪೆ: ಕರುಣೆ ಇಲ್ಲದ; ನಂದನ: ಮಗ;

ಪದವಿಂಗಡಣೆ:
ನೃಪತಿ +ನಿಶ್ಚೈಸಿದನು+ ಮತ್ಸ್ಯಾ
ಧಿಪನ +ನಗರಿಯೊಳಲ್ಲಿ+ ಸೈರಿಸಿ
ಕೃಪಣ+ತನದಲಿ +ನೂಕಬೇಹುದು +ನುಡಿದ +ವತ್ಸರವ
ಗುಪಿತವೆಂತ್+ಅಳವಡುವುದ್+ಆಶ್ರಯದ್
ಅಪದೆಸೆಯನ್+ಎಂತಾನುವಿರಿ+ ನಿ
ಷ್ಕೃಪೆಯೊಳ್+ಎಂತಾನೆಂಬೆನ್+ಎಂದನು +ಧರ್ಮ+ನಂದನನು

ಅಚ್ಚರಿ:
(೧) ಒಂದು ವರ್ಷವನ್ನು ಕಳೆಯುವ ಪರಿ – ಕೃಪಣತನದಲಿ ನೂಕಬೇಹುದು ನುಡಿದ ವತ್ಸರವ

ನಿಮ್ಮ ಟಿಪ್ಪಣಿ ಬರೆಯಿರಿ