ಪದ್ಯ ೫೨: ಭೀಮನು ಮತ್ತಾವ ಪ್ರಸ್ತಾಪವನ್ನು ಮುಂದಿಟ್ಟನು?

ಗಂಡುಗರ್ವವ ನುಡಿಯೆವೆಮ್ಮಯ
ದಂಡಿ ತಾನದು ಬೇರೆ ನಾವೀ
ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
ಕೊಂಡು ಕೊನರುವರಲ್ಲ ರಾಯನ
ನಂಡಲೆದು ಕೀಚಕನ ತಲೆಯನು
ಚೆಂಡನಾಡಿಸು ರಮಣಿ ನೀನರ್ಜುನಗೆ ಹೇಳೆಂದ (ವಿರಾಟ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಎಲೈ ಪ್ರಿಯತಮೆ, ನಾನು ಗಂಡಸುತನದ ಗರ್ವದ ಮಾತನ್ನಾಡುವುದಿಲ್ಲ. ನನ್ನ ರೀತಿಯೇ ಬೇರೆ, ನಾನು ಭಂಡತನದ ಬಾಳನ್ನು ಬದುಕಲು ಇಷ್ಟಪಡುವುದಿಲ್ಲ. ಧರ್ಮಗಿರ್ಮಗಳನ್ನು ಅವಲಂಬಿಸಿ ಚಿಗುರುವವನಲ್ಲ. ಧರ್ಮರಾಯನ ಬೆನ್ನು ಹತ್ತಿ ಅವನಿಂದ ಕೀಚಕನ ತಲೆಯನ್ನು ಚೆಂಡಾಡಿಸು, ಇಲ್ಲವೇ ಅರ್ಜುನನಿಗೆ ಹೇಳು ಎಂದು ದ್ರೌಪದಿಗೆ ಸಲಹೆಯನ್ನು ನೀಡಿದನು.

ಅರ್ಥ:
ಗಂಡು: ಗಂಡಸು; ಗರ್ವ: ದರ್ಪ, ಅಹಂಕಾರ; ನುಡಿ: ಮಾತು; ದಂಡಿ: ಘನತೆ, ಹಿರಿಮೆ; ಬೇರೆ: ಅನ್ಯ; ಭಂಡ: ನಾಚಿಕೆ, ಲಜ್ಜೆ; ಬದುಕು: ಜೀವಿಸು; ಅರಿ: ತಿಳಿ; ಧರ್ಮ: ಧಾರಣ ಮಾಡಿದುದು, ನಿಯಮ; ಕೊಂಡು: ತೆಗೆದು; ಕೊನರು: ಚಿಗುರು, ಕುಡಿ; ರಾಯ: ರಾಜ; ತಲೆ: ಶಿರ; ಚೆಂಡಾಡು: ಚೆಂಡಿನಂತೆ ಎಲ್ಲೆಡೆ ಎಸೆದು ಕ್ರೀಡಿಸು; ರಮಣಿ: ಪ್ರಿಯತಮೆ; ಹೇಳು: ತಿಳಿಸು;

ಪದವಿಂಗಡಣೆ:
ಗಂಡುಗರ್ವವ +ನುಡಿಯೆವ್+ಎಮ್ಮಯ
ದಂಡಿ+ ತಾನದು+ ಬೇರೆ+ ನಾವೀ
ಭಂಡತನದಲಿ +ಬದುಕಲರಿಯೆವು +ಧರ್ಮಗಿರ್ಮವನು
ಕೊಂಡು +ಕೊನರುವರಲ್ಲ+ ರಾಯನ
ನಂಡಲೆದು+ ಕೀಚಕನ+ ತಲೆಯನು
ಚೆಂಡನಾಡಿಸು+ ರಮಣಿ+ ನೀನ್+ಅರ್ಜುನಗೆ +ಹೇಳೆಂದ

ಅಚ್ಚರಿ:
(೧) ಭೀಮನ ಸ್ವಭಾವ – ನಾವೀ ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
(೨) ಆಡುಭಾಷೆಯ ಪ್ರಯೋಗ – ಧರ್ಮಗಿರ್ಮ

ಪದ್ಯ ೫೧: ಭೀಮನು ಯಾವುದರಲ್ಲಿ ಬಂಧಿತನಾಗಿದ್ದನು?

ಹೆಣ್ಣ ಹರಿಬಕ್ಕೋಸುಗವೆ ತ
ಮ್ಮಣ್ಣನಾಜ್ಞೆಯ ಮೀರಿ ಕುಂತಿಯ
ಚಿಣ್ಣ ಬದುಕಿದೆನೆಂದು ನುಡಿವರು ಕುಜನರಾದವರು
ಅಣ್ಣನವರಿಗೆ ದೂರುವುದು ನಾ
ವುಣ್ಣದುರಿಯಿವು ರಾಯನಾಜ್ಞೆಯ
ಕಣ್ಣಿಯಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ (ವಿರಾಟ ಪರ್ವ, ೩ ಸಂಧಿ, ೫೧ ಪದ್ಯ)

ತಾತ್ಪರ್ಯ:
ಹೆಂಡತಿಯ ಮಾತು ಕೇಳಿ ಭೀಮನು ಅಣ್ಣನಾಜ್ಞೆಯನ್ನು ಮೀರಿದ ಎಂದು ಕುಜನರು ನಾಳೆ ಮಾತನಾದುತ್ತಾರೆ, ಅಣ್ಣನ ಬಳಿಗೆ ಹೋಗಿ ದೂರು ಕೊಡು, ಇದು ನಾವು ನುಂಗಲಾಗದ ಕೆಂಡ. ಅಣ್ಣನಾಜ್ಞೆಯೆಂಬ ಹಗ್ಗವು ನನ್ನ ಕಾಲನ್ನು ಕಟ್ಟಿಹಾಕಿದ್ದು ನಾನದರಲ್ಲಿ ಬಿದ್ದಿದ್ದೇನೆ ಎಂದು ಭೀಮನು ಹೇಳಿದನು.

ಅರ್ಥ:
ಹೆಣ್ಣು: ಸ್ತ್ರೀ; ಹರಿಬ: ಕೆಲಸ, ಕಾರ್ಯ; ಆಜ್ಞೆ: ಅಪ್ಪಣೆ; ಮೀರು: ದಾಟು; ಅಣ್ಣ: ಹಿರಿಯ ಸಹೋದರ; ದೂರು: ಮೊರೆ, ಅಹವಾಲು; ಉರಿ: ಜ್ವಾಲೆ, ಸಂಕಟ; ಉಣ್ಣು: ಊಟಮಾದು; ರಾಯ: ರಾಜ; ಕಣ್ಣಿ: ಹಗ್ಗ, ರಜ್ಜು; ಬಿಗಿ: ಬಂಧಿಸು; ಕೆಡೆ: ಬೀಳು, ಕುಸಿ; ಕಾಂತೆ: ಪ್ರಿಯತಮೆ; ಕೇಳು: ಆಲಿಸು; ಚಿಣ್ಣ: ಎಳೆಯವನು;

ಪದವಿಂಗಡಣೆ:
ಹೆಣ್ಣ +ಹರಿಬಕ್ಕೋಸುಗವೆ+ ತ
ಮ್ಮಣ್ಣನ್+ಆಜ್ಞೆಯ +ಮೀರಿ +ಕುಂತಿಯ
ಚಿಣ್ಣ+ ಬದುಕಿದೆನೆಂದು +ನುಡಿವರು+ ಕುಜನರಾದವರು
ಅಣ್ಣನವರಿಗೆ+ ದೂರುವುದು +ನಾ
ವುಣ್ಣದ್+ಉರಿಯಿವು +ರಾಯನಾಜ್ಞೆಯ
ಕಣ್ಣಿಯಲಿ +ಬಿಗಿವಡೆದು+ ಕೆಡೆದೆವು +ಕಾಂತೆ +ಕೇಳೆಂದ

ಅಚ್ಚರಿ:
(೧) ಕುಜನರ ಮಾತು – ಹೆಣ್ಣ ಹರಿಬಕ್ಕೋಸುಗವೆ ತಮ್ಮಣ್ಣನಾಜ್ಞೆಯ ಮೀರಿ ಕುಂತಿಯ ಚಿಣ್ಣ ಬದುಕಿದ

ಪದ್ಯ ೫೦: ಭೀಮನ ಅಸಹಾಯಕತೆಯೇನು?

ಅಂದು ದುಶ್ಯಾಸನನ ಕರುಳನು
ತಿಂದಡಲ್ಲದೆ ತಣಿವು ದೊರೆಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದ ಯಮಸೂನು
ಇಂದು ಕೀಚಕನಾಯನೆರಗುವೆ
ನೆಂದು ಮರನನು ನೋದಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ (ವಿರಾಟ ಪರ್ವ, ೩ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅಂದು ವಸ್ತ್ರಾಪಹರಣದ ಸಮಯದಲ್ಲಿ ದುಶ್ಯಾಸನನ ಕರುಳನ್ನು ಕಿತ್ತು ತಿನ್ನದ ಹೊರತು ತೃಪ್ತಿದೊರಕುವುದಿಲ್ಲವೆಂದು ನುಗ್ಗಿದರೆ ಅಣ್ಣನು ಹಲ್ಲು ಕಿರಿದು ತಪ್ಪಿಸಿದ. ಈ ದಿನ ಸಭೆಯಲ್ಲಿ ಕೀಚಕ ನಾಯಿಯನ್ನು ಬಡಿಯಬೇಕೆಂದು ಮರವನ್ನು ನೋಡಿದರೆ ಅಣ್ಣನು ಬೇಡವೆಂದುದನ್ನು ನೀನೇ ಕಂಡಿರುವೆ. ಹೀರಿಗುವಾಗ ನನ್ನಲ್ಲೇನು ತಪ್ಪಿದೆ ನೀನೇ ಹೇಳು ಎಂದು ಭೀಮನು ನೊಂದು ನುಡಿದನು.

ಅರ್ಥ:
ಅಂದು: ಹಿಂದೆ; ಕರುಳು: ಪಚನಾಂಗ; ತಿಂದು: ಉಣ್ಣು; ತಣಿವು: ತೃಪ್ತಿ, ಸಮಾಧಾನ; ದೊರಕು: ಪಡೆ; ಹಾಯ್ದು: ಹೊಡೆ; ಹಾಯಿ: ಮೇಲೆಬೀಳು; ಹಲುಗಿರಿ: ನಗು; ಮಾಣು: ತಪ್ಪಿಸು, ನಿಲ್ಲಿಸು; ನಾಯಿ: ಕುನ್ನಿ; ಎರಗು: ಬೀಳಿಸು; ಮರ: ತರು; ನೋಡು: ವೀಕ್ಷಿಸು; ಬೇಡ: ತ್ಯಜಿಸು; ಹದ: ರೀತಿ; ಕಂಡು: ನೋಡು; ಅಪರಾಧ: ತಪ್ಪು;

ಪದವಿಂಗಡಣೆ:
ಅಂದು +ದುಶ್ಯಾಸನನ +ಕರುಳನು
ತಿಂದಡಲ್ಲದೆ +ತಣಿವು +ದೊರೆಕೊಳ
ದೆಂದು +ಹಾಯ್ದೊಡೆ +ಹಲುಗಿರಿದು+ ಮಾಣಿಸಿದ +ಯಮಸೂನು
ಇಂದು+ ಕೀಚಕ+ನಾಯನ್+ಎರಗುವೆನ್
ಎಂದು +ಮರನನು+ ನೋದಿದರೆ+ ಬೇ
ಡೆಂದ +ಹದನನು +ಕಂಡೆ +ನೀನ್+ಎನಗುಂಟೆ+ಅಪರಾಧ

ಅಚ್ಚರಿ:
(೧) ಅಂದು, ಇಂದು, ಎಂದು – ಪ್ರಾಸ ಪದಗಳು

ಪದ್ಯ ೪೯: ಭೀಮನು ದ್ರೌಪದಿಯ ಹಂಗಿನ ಮಾತಿಗೆ ಹೇಗೆ ಉತ್ತರಿಸಿದನು?

ದಾನವರು ಮಾನವರೊಳೆನ್ನಭಿ
ಮಾನವನು ಕೊಂಬವನ ಹೆಸರನ
ದೇನನೆಂಬೆನು ನೊಂದು ನುಡಿದರೆ ಖಾತಿಯಿಲ್ಲೆನಗೆ
ಈ ನಪುಂಸಕರೊಡನೆ ಹುಟ್ಟಿದ
ನಾನು ಮೂಗುಳ್ಳವನೆ ಮಾನಿನಿ
ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ (ವಿರಾಟ ಪರ್ವ, ೩ ಸಂಧಿ, ೪೯ ಪದ್ಯ)

ತಾತ್ಪರ್ಯ:
ಆಗ ಭೀಮನು ಮನುಷ್ಯರಾಗಲೀ, ದೈತ್ಯರಾಗಲೀ, ನನ್ನ ಅಭಿಮಾನವನ್ನು ಲಘುವಾಗಿ ತೆಗೆದುಕೊಂಡವನ ಗತಿ ಏನಾದೀತೆಂದು ಗೊತ್ತೇ, ನೋವಿನಿಂದ ನೀನು ಬೈದರೆ ನನಗೇನೂ ಸಿಟ್ಟಿಲ್ಲ ನಾಲ್ವರು ನಪುಂಸಕರ ಸಹೋದರನಾಗಿ ಹುಟ್ಟಿದ ನನಗೆ ಮಾತ್ರ ಮೂಗಿದೆಯೇ? ಪರಾಕ್ರಮಿಯೆಂದು ನಾನು ಹೇಳಿಕೊಳ್ಳೋಣವೇ? ದ್ರೌಪದಿ ನೀನು ಮನಬಂದಂತೆ ಮಾತನಾಡು, ಹೆದರಬೇಡ ಎಂದನು.

ಅರ್ಥ:
ದಾನವ: ರಾಕ್ಷಸ; ಮಾನವ: ಮನುಷ್ಯ; ಅಭಿಮಾನ: ಹೆಮ್ಮೆ, ಅಹಂಕಾರ; ಹೆಸರು: ನಾಮ; ನೊಂದು: ನೋವು; ನುಡಿ: ಮಾತಾಡು; ಖಾತಿ: ಕೋಪ, ಕ್ರೋಧ; ನಪುಂಸಕ: ಷಂಡ; ಹುಟ್ಟು: ಜನಿಸು; ಮೂಗುಳ್ಳು: ಅಭಿಮಾನಿ; ಮಾನಿನಿ: ಹೆಣ್ಣು; ತೋರು: ಪ್ರದರ್ಶಿಸು; ಪರಿ: ರೀತಿ; ಭೀತಿ: ಭಯ; ಬೇಡ: ತೊರೆ, ತ್ಯಜಿಸು;

ಪದವಿಂಗಡಣೆ:
ದಾನವರು+ ಮಾನವರೊಳ್+ಎನ್ನ್+ಅಭಿ
ಮಾನವನು+ ಕೊಂಬವನ+ ಹೆಸರನದ್
ಏನನೆಂಬೆನು+ ನೊಂದು+ ನುಡಿದರೆ+ ಖಾತಿಯಿಲ್ಲೆನಗೆ
ಈ+ ನಪುಂಸಕರೊಡನೆ +ಹುಟ್ಟಿದ
ನಾನು +ಮೂಗುಳ್ಳವನೆ+ ಮಾನಿನಿ
ನೀನು +ತೋರಿದ +ಪರಿಯಲೆಂಬುದು+ ಭೀತಿ+ ಬೇಡೆಂದ

ಅಚ್ಚರಿ:
(೧) ಹಂಗಿಸುವ ಪರಿ – ಈ ನಪುಂಸಕರೊಡನೆ ಹುಟ್ಟಿದ ನಾನು ಮೂಗುಳ್ಳವನೆ
(೨) ದಾನವ, ಮಾನವ; ಖಾತಿ, ಭೀತಿ – ಪ್ರಾಸ ಪದಗಲು
(೩) ಮಾನವ ಪದದ ಬಳಕೆ – ಮಾನವರೊಳು, ಮಾನವನು

ಪದ್ಯ ೪೮: ದ್ರೌಪದಿಯು ತನ್ನ ಪತಿಯರನ್ನು ಹೇಗೆ ಹಂಗಿಸಿದಳು?

ಅಂದು ಕೌರವ ನಾಯಿ ಸಭೆಯಲಿ
ತಂದು ಸೀರೆಯ ಸುಲಿಸಿದನು ತಾ
ನಿಂದು ಕೀಚಕ ಕುನ್ನಿಯೊದೆದನು ವಾಮಪಾದದಲಿ
ಅಂದು ಮೇಲಿಂದಾದ ಭಂಗಕೆ
ಬಂದುದಾವುದು ನೀವು ಬಲ್ಲಿದ
ರೆಂದು ಹೊಕ್ಕರೆ ಹೆಣ್ಣಕೊಂದಿರಿಯೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಹಿಂದೆ ದುರ್ಯೋಧನನು ನನ್ನನ್ನು ಸಭೆಗೆಳೆದು ಸೀರೆಯನ್ನು ಸುಲಿಸಿದನು. ಇಂದು ರಾಜಸಭೆಯ ಮುಂದೆ ನನ್ನನ್ನು ಕೀಚಕನೆಂಬ ನಾಯಿ ಎಡಗಾಲಿನಿಂದ ಒದೆದನು. ಅಂದು ಇಂದೂ ನನಗೊದಗಿದ ಭಂಗಕ್ಕೆ ನೀವು ಪ್ರತಿಯಾಗಿ ಏನು ಮಾಡಿದಿರಿ? ವೀರರೆಂದು ವರಿಸಿದರೆ ಹೆಣ್ಣನ್ನು ಕೊಂದಿರಿ ಎಂದು ದ್ರೌಪದಿಯು ಹಂಗಿಸಿದಳು.

ಅರ್ಥ:
ಅಂದು: ಹಿಂದೆ; ನಾಯಿ: ಶ್ವಾನ; ಸಭೆ: ದರ್ಬಾರು; ಸೀರೆ: ಬಟ್ಟೆ; ಸುಲಿ: ತೆಗೆ, ಕಳಚು; ಕುನ್ನಿ: ನಾಯಿ; ಒದೆ: ಕಾಲಿನಿಂದ ನೂಕು; ವಾಮ: ಎಡ; ಪಾದ: ಚರಣ; ಭಂಗ: ಮುರಿಯುವಿಕೆ; ಬಲ್ಲಿರಿ: ತಿಳಿದಿರುವಿರಿ; ಹೊಕ್ಕು: ಸೇರು; ಕೊಂದು: ಕೊಲ್ಲು, ಸಾಯಿಸು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಅಂದು+ ಕೌರವ+ ನಾಯಿ +ಸಭೆಯಲಿ
ತಂದು+ ಸೀರೆಯ+ ಸುಲಿಸಿದನು +ತಾನ್
ಇಂದು +ಕೀಚಕ+ ಕುನ್ನಿ+ಒದೆದನು +ವಾಮಪಾದದಲಿ
ಅಂದು +ಮೇಲಿಂದಾದ +ಭಂಗಕೆ
ಬಂದುದ್+ಆವುದು +ನೀವು +ಬಲ್ಲಿದ
ರೆಂದು +ಹೊಕ್ಕರೆ +ಹೆಣ್ಣ+ಕೊಂದಿರಿ+ಯೆಂದಳ್+ಇಂದುಮುಖಿ

ಅಚ್ಚರಿ:
(೧) ಅಂದು, ಇಂದು, ತಂದು, ಬಂದು, ಎಂದು – ಪ್ರಾಸ ಪದಗಳು
(೨) ಹಂಗಿಸುವ ಪರಿ – ನೀವು ಬಲ್ಲಿದರೆಂದು ಹೊಕ್ಕರೆ ಹೆಣ್ಣಕೊಂದಿರಿಯೆಂದಳಿಂದುಮುಖಿ
(೩) ನಾಯಿ, ಕುನ್ನಿ – ಸಮನಾರ್ಥಕ ಪದ

ಪದ್ಯ ೪೭: ದ್ರೌಪದಿಯು ಹತಾಶೆಯಿಂದ ಏನೆಂದಳು?

ಹೆಂಡತಿಯ ಹರಿಬದಲಿಯೊಬ್ಬನೆ
ಗಂಡನಾದರೆ ವೈರಿಯನು ಕಡಿ
ಖಂಡವನು ಮಾಡುವನು ಮೇಣ್ತನ್ನೊಡಲನಿಕ್ಕುವನು
ಗಂಡರೈವರು ಮೂರು ಲೋಕದ
ಗಂಡರೊಬ್ಬಳನಾಳಲಾರಿರಿ
ಗಂಡರೋ ನೀವ್ ಷಂಡರೋ ಹೇಳೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೪೭ ಪದ್ಯ)

ತಾತ್ಪರ್ಯ:
ಹೆಂಡತಿಯ ಮಾನವನ್ನು ರಕ್ಷಿಸ್ವುಅ ಪ್ರಸಂಗ ಬಂದಾಗ ಒಬ್ಬನೇ ಗಂಡನಾದರೆ ಶತ್ರುವನ್ನು ಕಡಿದು ಸಾಯಿಸುತ್ತಾನೆ ಇಲ್ಲವೇ ತಾನೆ ಮಡಿಯುತ್ತಾನೆ, ನನಗೆ ತ್ರಿಲೋಕ ವೀರರಾದ ಐವರು ಗಂಡಂದಿರು, ನನ್ನೊಬ್ಬಳನ್ನು ಆಳಲಾರಿರಿ? ನೀವು ನಿಜವಾಗಿ ಗಂಡರೋ ಅಥವ ಷಂಡರೋ ಹೇಳಿ ಎಂದು ದ್ರೌಪದಿಯು ದುಃಖದಿಂದ ಹತಾಶಳಾಗಿ ಉದ್ಗರಿಸಿದಳು.

ಅರ್ಥ:
ಹೆಂಡತಿ: ಪತ್ನಿ; ಹರಿಬ: ರಕ್ಷಣೆ, ಪಾಲನೆ; ವೈರಿ: ಶತ್ರು; ಕಡಿ: ಸೀಳು; ಖಂಡ: ತುಂಡು, ಚೂರು; ಮೇಣ್: ಅಥವ; ಒಡಲು: ದೇಹ; ಇಕ್ಕು: ಇರಿಸು, ಇಡು; ಲೋಕ: ಜಗತ್ತು; ಆಳು: ಅಧಿಕಾರ ನಡೆಸು; ಷಂಡ: ನಪುಂಸಕ, ಹೇಡಿ; ಗಂಡ: ಯಜಮಾನ; ಹೇಳು: ತಿಳಿಸು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಹೆಂಡತಿಯ+ ಹರಿಬದಲಿ+ಒಬ್ಬನೆ
ಗಂಡನಾದರೆ+ ವೈರಿಯನು +ಕಡಿ
ಖಂಡವನು +ಮಾಡುವನು +ಮೇಣ್+ತನ್ನೊಡಲನ್+ಇಕ್ಕುವನು
ಗಂಡರ್+ಐವರು +ಮೂರು +ಲೋಕದ
ಗಂಡರ್+ಒಬ್ಬಳನ್+ಆಳಲಾರಿರಿ
ಗಂಡರೋ +ನೀವ್ +ಷಂಡರೋ +ಹೇಳೆಂದಳ್+ ಇಂದುಮುಖಿ

ಅಚ್ಚರಿ:
(೧) ಗಂಡ, ಖಂಡ – ಪ್ರಾಸ ಪದ
(೨) ಹತಾಶಾಭಾವ – ಗಂಡರೋ ನೀವ್ ಷಂಡರೋ ಹೇಳೆಂದಳಿಂದುಮುಖಿ

ಪದ್ಯ ೪೬: ಭೀಮನು ಯಾರ ಬಳಿಗೆ ಹೋಗಲು ಸೂಚಿಸಿದನು?

ಹೊದ್ದುವುದು ಫಲುಗುಣನ ಪದದಲಿ
ಬಿದ್ದು ಯಮನಂದನನ ಮನವನು
ತಿದ್ದುವುದು ಸಹದೇವ ನಕುಲರ ಕೈಯೊಳೆನಿಸುವುದು
ಗೆದ್ದುಕೊಡುವರು ನಿನ್ನ ಪಾಲಿಸ
ದಿದ್ದರಾದರೆ ದೋಷವವರನು
ಹೊದ್ದುವುದು ಸಾಕಿನ್ನು ನಿನ್ನಯ ತೊಡರು ಬೇಡೆಂದ (ವಿರಾಟ ಪರ್ವ, ೩ ಸಂಧಿ, ೪೬ ಪದ್ಯ)

ತಾತ್ಪರ್ಯ:
ದ್ರೌಪದಿ ನಿನ್ನ ಸಮಸ್ಯೆಯ ಪರಿಹಾರಕ್ಕೆ ನೀನು ಅರ್ಜುನನ ಬಳಿಗೆ ಹೋಗು, ಧರ್ಮಜನ ಪಾದದ ಮೇಲೆ ಬಿದ್ದು ಅವನ ಮನಸ್ಸನ್ನು ಬದಲಿಸು, ನಕುಲ ಸಹದೇವರಿಮ್ದ ಕೀಚಕನನ್ನು ಕೊಲ್ಲಿಸು, ಅವರು ನಿನ್ನ ಕಾರ್ಯಕ್ಕೆ ಜಯವನ್ನು ತಂದುಕೊಡುತ್ತಾರೆ, ಹಾಗೆ ಮಾಡದಿದ್ದರೆ ಆ ದೋಷ ಅವರಿಗೆ ತಟ್ಟುತ್ತದೆ, ನಿನ್ನ ಈ ಕ್ಲಿಷ್ಟಕರವಾದ ಸಮಸ್ಯೆ ನನಗೆ ಬೇಡವೇ ಬೇಡ ಎಂದು ಭೀಮನು ಹೇಳಿದನು.

ಅರ್ಥ:
ಹೊದ್ದು: ಸೇರು, ತಬ್ಬಿಕೊ; ಫಲುಗುಣ: ಅರ್ಜುನ; ಪದ: ಪಾದ; ಬಿದ್ದು: ಬೀಳು; ನಂದನ: ಮಗ; ಮನ: ಮನಸ್ಸು; ತಿದ್ದು: ಸರಿಪಡಿಸು; ಕೈ: ಹಸ್ತ; ಗೆದ್ದು; ಜಯಗಳಿಸು; ಪಾಲಿಸು: ರಕ್ಷಿಸು, ಕಾಪಾಡು; ದೋಷ: ಕುಂದು, ಕಳಂಕ; ಸಾಕು: ನಿಲ್ಲಿಸು; ತೊಡರು: ತೊಂದರೆ; ಬೇಡ: ಸಲ್ಲದು, ಕೂಡದು, ಬೇಕಾಗಿಲ್ಲ;

ಪದವಿಂಗಡಣೆ:
ಹೊದ್ದುವುದು+ ಫಲುಗುಣನ+ ಪದದಲಿ
ಬಿದ್ದು +ಯಮನಂದನನ+ ಮನವನು
ತಿದ್ದುವುದು+ ಸಹದೇವ +ನಕುಲರ +ಕೈಯೊಳೆನಿಸುವುದು
ಗೆದ್ದು+ಕೊಡುವರು +ನಿನ್ನ+ ಪಾಲಿಸ
ದಿದ್ದರಾದರೆ +ದೋಷವ್+ಅವರನು
ಹೊದ್ದುವುದು +ಸಾಕಿನ್ನು +ನಿನ್ನಯ +ತೊಡರು +ಬೇಡೆಂದ

ಅಚ್ಚರಿ:
(೧) ಹೊದ್ದು, ಬಿದ್ದು, ತಿದ್ದು, ಗೆದ್ದು – ಪ್ರಾಸ ಪದಗಳು
(೨) ದ್ರೌಪದಿಯ ಕಷ್ಟದಿಂದ ದೂರ ಸರಿಯುವ ಪರಿ – ಸಾಕಿನ್ನು ನಿನ್ನಯ ತೊಡರು ಬೇಡೆಂದ

ಪದ್ಯ ೪೫: ಭೀಮನು ಯಾರಿಗೆ ಹೆದರುವೆನೆಂದು ಹೇಳಿದನು?

ಕಲಹಕಾದರೆ ನಾವು ರಮಿಸುವ
ರುಳಿದವರು ಬಳಿಕೇನು ಗಾದೆಯ
ಬಳಕೆ ಕೆಲಬರು ಗಳಿಸಿದರೆ ಕೆಲರುಂಡು ಜಾರುವರು
ಅಳುಕಿ ನಡೆವವರಲ್ಲ ನಿನ್ನಯ
ಹಳಿವು ಹರಿಬವ ಹೇಳಿ ಚಿತ್ತವ
ತಿಳುಹಿಕೊಂಬುದು ನಾವು ಭೀತರು ಧರ್ಮಜನ ದೆಸೆಗೆ (ವಿರಾಟ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಹೊಡೆದಾಟಕ್ಕಾದರೆ ನಾನು, ಪ್ರೀತಿಸಲು ಉಳಿದವರು, ಗಾದೆ ಹೇಳುತ್ತಾರಲ್ಲ, ದುಡಿಯುವವನು ಯಾರೋ, ತಿನ್ನುವವನು ಯಾರೋ, ಹೆದರಿ ಬಾಳುವವನು ನಾನಲ್ಲ, ನಿನ್ನ ಮಾನ ರಕ್ಷಣೆಗೆ ನೀನೇನು ಮಾಡಬೇಕೆಂದು ಯೋಚಿಸಿ ಸಮಾಧಾನ ಮಾಡಿಕೋ, ನಾನು ಮಾಡಬಲ್ಲೆ, ಆದರೆ ಧರ್ಮಜನನ್ನು ಕಂಡು ಹೆದರುತ್ತೇನೆ ಎಂದನು.

ಅರ್ಥ:
ಕಲಹ: ಹೋರಾಟ, ಯುದ್ಧ; ರಮಿಸು: ಪ್ರೀತಿಸು; ಉಳಿದ: ಮಿಕ್ಕ; ಬಳಿಕ: ನಂತರ; ಗಾದೆ: ನಾನ್ನುಡಿ; ಬಳಕೆ: ನಂತರ; ಕೆಲಬರು: ಕೆಲರು; ಗಳಿಸು: ಸಂಪಾದಿಸು; ಉಂಡು: ತಿನ್ನು; ಜಾರು: ನುಣುಚಿಕೊಳ್ಳು; ಅಳುಕು: ಹೆದರು; ನಡೆ: ಚಲಿಸು; ಹಳಿವು: ನಿಂದಿಸು; ಹರಿಬ: ರಕ್ಷಣೆ; ಚಿತ್ತ: ಮನಸ್ಸು; ತಿಳುಹು: ತಿಳಿಸು; ಭೀತ: ಭಯ; ದೆಸೆ: ಸ್ಥಿತಿ, ಹತ್ತಿರ;

ಪದವಿಂಗಡಣೆ:
ಕಲಹಕ್+ಆದರೆ +ನಾವು +ರಮಿಸುವರ್
ಉಳಿದವರು +ಬಳಿಕೇನು +ಗಾದೆಯ
ಬಳಕೆ +ಕೆಲಬರು +ಗಳಿಸಿದರೆ +ಕೆಲರುಂಡು +ಜಾರುವರು
ಅಳುಕಿ+ ನಡೆವವರಲ್ಲ+ ನಿನ್ನಯ
ಹಳಿವು +ಹರಿಬವ +ಹೇಳಿ +ಚಿತ್ತವ
ತಿಳುಹಿಕೊಂಬುದು +ನಾವು +ಭೀತರು+ ಧರ್ಮಜನ +ದೆಸೆಗೆ

ಅಚ್ಚರಿ:
(೧) ಗಾದೆಯ ಮಾತು – ಕೆಲಬರು ಗಳಿಸಿದರೆ ಕೆಲರುಂಡು ಜಾರುವರು

ಪದ್ಯ ೪೪: ದ್ರೌಪದಿಯು ಭೀಮನನ್ನು ಏನು ಕೇಳಿದಳು?

ರಮಣ ಕೇಳುಳಿದವರ ನನ್ನನು
ರಮಿಸುವರು ಮಾನಾರ್ಥವೆನೆ ನಿ
ರ್ಗಮಿಸುವರು ನೀನಲ್ಲದುಳಿದವರುಚಿತ ಬಾಹಿರರು
ಮಮತೆಯಲಿ ನೀನೋಡು ಚಿತ್ತದ
ಸಮತೆಯನು ಬೀಳ್ಕೊಡು ಕುಠಾರನ
ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು (ವಿರಾಟ ಪರ್ವ, ೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪ್ರಿಯತಮ ನನ್ನ ಉಳಿದ ಪತಿಗಳು ನನ್ನೊಡನೆ ರಮಿಸಿ ಸಂತೋಷಿಸುತ್ತಾರೆ. ನನ್ನ ಮಾನದ ಪ್ರಶ್ನೆ ಬಂದೊಡನೆ ಎತ್ತಲೋ ಹೋಗಿ ಬಿಡುತ್ತಾರೆ. ನಿನ್ನನ್ನು ಬಿಟ್ಟರೆ ಉಳಿದವರು ಪತಿಗಳಾಗಲು ಯೋಗ್ಯತೆ ಪಡೆದವರಲ್ಲ, ಅವರೆಲ್ಲರೂ ಬಾಹಿರರು, ಇವಳು ನನ್ನವಳೆಂಬ ದೃಷ್ಟಿಯಿಂದ ನೋಡು, ಮನಸ್ಸಿನ ಸಮತೆಯನ್ನು ಬಿಡು, ಈ ನೀಚನನ್ನು ಸಂಹರಿಸು ಎಂದು ದ್ರೌಪದಿಯು ಹೇಳಿದಳು.

ಅರ್ಥ:
ರಮಣ: ಪ್ರಿಯತಮ; ಕೇಳು: ಆಲಿಸು; ಉಳಿದ: ಮಿಕ್ಕ; ರಮಿಸು: ಪ್ರೀತಿಸು; ಮಾನ: ಗೌರವ; ನಿರ್ಗಮಿಸು: ತೆರಳು; ಉಳಿದ: ಮಿಕ್ಕ; ಉಚಿತ: ಸರಿಯಾದ; ಬಾಹಿರ: ಹೊರಗಿನವರು; ಮಮತೆ: ಪ್ರೀತಿ; ಚಿತ್ತ: ಮನಸ್ಸು; ಸಮತೆ: ಸಾದೃಶ್ಯ; ಬೀಳ್ಕೊಡು: ತೆರಳು; ಕುಠಾರ: ಕೊಡಲಿ; ಯಮ: ಮೃತ್ಯುದೇವತೆ; ಕಾಣಿಸು: ತೋರಿಸು; ಕರುಣಿಸು: ದಯೆ ತೋರು; ಕಾಂತೆ: ಪ್ರಿಯತಮೆ; ಕೈಮುಗಿದು: ನಮಸ್ಕರಿಸು;

ಪದವಿಂಗಡಣೆ:
ರಮಣ+ ಕೇಳ್+ಉಳಿದವರು+ ನನ್ನನು
ರಮಿಸುವರು +ಮಾನ+ಅರ್ಥವೆನೆ+ ನಿ
ರ್ಗಮಿಸುವರು+ ನೀನಲ್ಲದ್+ಉಳಿದವರ್+ಉಚಿತ +ಬಾಹಿರರು
ಮಮತೆಯಲಿ +ನೀ+ನೋಡು+ ಚಿತ್ತದ
ಸಮತೆಯನು +ಬೀಳ್ಕೊಡು +ಕುಠಾರನ
ಯಮನ +ಕಾಣಿಸಿ+ ಕರುಣಿಸೆಂದಳು +ಕಾಂತೆ+ ಕೈಮುಗಿದು

ಅಚ್ಚರಿ:
(೧) ಸಾಯಿಸು ಎಂದು ಹೇಳುವ ಪರಿ – ಕುಠಾರನ ಯಮನ ಕಾಣಿಸಿ

ಪದ್ಯ ೪೩: ಭೀಮನು ದ್ರೌಪದಿಗೆ ಏನು ಹೇಳಿದನು?

ಉಸುರಲಾಗದು ನಿನ್ನ ಹರಿಬಕೆ
ಮಿಸುಕುವವರಾವಲ್ಲ ಹೆಂಡಿರ
ಗಸಣಿಗೊಂಬವರಲ್ಲ ಹುದುವಿನ ಗಂಡತನವಿದನು
ಶಶಿವದನೆ ಸುಡು ಕಷ್ಟವೀಯಪ
ದೆಸೆಯವರು ನಾವಲ್ಲ ನಿನ್ನವ
ರಸಮ ಸಾಹಸರುಳಿದ ನಾಲ್ವರಿಗರುಹು ಹೋಗೆಂದ (ವಿರಾಟ ಪರ್ವ, ೩ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಮನು ದ್ರೌಪದಿಯ ಮಾತನ್ನು ಕೇಳಿ, ನನ್ನ ಹತ್ತಿರ ಈ ಮಾತು ಬೇಡ. ನಿನ್ನ ಕೆಲಸಕ್ಕೆ ಅಲುಗಾಡುವನು ನಾನಲ್ಲ, ಹೆಂಡತಿಯ ಕಷ್ಟವನ್ನು ಹೋಗಲಾಡಿಸಲು ಒಪ್ಪುವವನಲ್ಲ. ಸರದಿಯ ಮೇಲಿನ ಈ ಗಂಡತನವು ಮಹಾಕಷ್ಟಕರವಾದದ್ದು, ಈ ಅಪದೆಸೆಯನ್ನು ನಾನೊಲ್ಲೆ. ಮಹಾಸಾಹಸಿಗಳಾದ ನಿನ್ನ ಉಳಿದ ಗಂಡಂದಿರಿಗೆ ನಿನ್ನ ಕಷ್ಟವನ್ನು ಹೇಳು ಹೋಗು ಎಂದು ಹೇಳಿದನು.

ಅರ್ಥ:
ಉಸುರು: ಹೇಳು, ಮಾತನಾಡು; ಹರಿಬ:ಕೆಲಸ, ಕಾರ್ಯ; ಮಿಸುಕು:ಕದಲು, ಅಲುಗು; ಹೆಂಡಿರ: ಹೆಂಡತಿ; ಗಸಣಿ: ತೊಂದರೆ; ಹುದು: ನಂಟು, ಸಂಬಂಧ; ಗಂಡ: ಪತಿ; ಶಶಿವದನೆ: ಚಂದ್ರನಂತ ಮುಖ; ಸುಡು: ದಹಿಸು; ಕಷ್ಟ: ತೊಂದರೆ; ಅಪದೆಸೆ: ದುರದೃಷ್ಟ; ಅಸಮ: ಸಮವಲ್ಲದ; ಸಾಹಸ: ವೀರ; ಉಳಿದ: ಮಿಕ್ಕ; ಅರುಹು: ಹೇಳು; ಹೋಗು: ತೆರಳು;

ಪದವಿಂಗಡಣೆ:
ಉಸುರಲಾಗದು +ನಿನ್ನ +ಹರಿಬಕೆ
ಮಿಸುಕುವವರಾವಲ್ಲ+ ಹೆಂಡಿರ
ಗಸಣಿಗೊಂಬವರಲ್ಲ+ ಹುದುವಿನ +ಗಂಡತನವಿದನು
ಶಶಿವದನೆ+ ಸುಡು +ಕಷ್ಟವ್+ಈ+ಅಪ
ದೆಸೆಯವರು +ನಾವಲ್ಲ +ನಿನ್ನವರ್
ಅಸಮ ಸಾಹಸರ್+ಉಳಿದ +ನಾಲ್ವರಿಗ್+ಅರುಹು+ ಹೋಗೆಂದ

ಅಚ್ಚರಿ:
(೧) ಭೀಮನು ತಿರಸ್ಕರಿಸುವ ಪರಿ – ನಿನ್ನವರಸಮ ಸಾಹಸರುಳಿದ ನಾಲ್ವರಿಗರುಹು ಹೋಗೆಂದ