ಪದ್ಯ ೧೬: ಧರ್ಮಜನು ಯಾರನ್ನು ಮತ್ತೆ ಕಳುಹಿಸಿದನು?

ಜಡಿಯಲೆರಡಳ್ಳೆಗಳು ಕೊರಳೈ
ಕುಡಿದನುದಕವನಬುಜದೆಲೆಯಲಿ
ಹಿಡಿದನನಿಬರಿಗಮಳ ಜಲವನು ಮರಳಿ ನಿಮಿಷದಲಿ
ತಡಿಯನಡರಿದು ಧೊಪ್ಪನವನಿಗೆ
ಕೆಡೆದು ಪರವಶನಾದನಿತ್ತಲು
ತಡೆದನೇಕೆಂದಟ್ಟಿದನು ಸಹದೇವನನು ನೃಪತಿ (ಅರಣ್ಯ ಪರ್ವ, ೨೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಎರಡು ಅಳ್ಳೆಗಳೂ ಜಡಿಯುವಂತೆ ಕೊರಳಿನವರೆಗೆ ನೀರನ್ನು ಕುಡಿದು, ಕಮಲದೆಲೆಯಲ್ಲಿ ಸಹೋದರರಿಗೆ ನೀರನ್ನು ತುಂಬಿಕೋಂಡು, ಹಿಂದಿರುಗಿ ದಡಕ್ಕೆ ಹತ್ತಿ ನಕುಲನು ಪರವಶನಾಗಿ ಮರಣಹೊಂದಿದನು. ನಕುಲನು ಬರುವುದು ತಡವಾಯಿತೆಂದು ಧರ್ಮಜನು ಸಹದೇವನನ್ನು ಕಳುಹಿಸಿದನು.

ಅರ್ಥ:
ಜಡಿ: ತುಂಬು; ಅಳ್ಳೆ: ಪಕ್ಕೆ; ಕೊರಳು: ಗಂಟಲು; ಕುಡಿ: ಪಾನಮಾಡು; ಉದಕ: ನೀರು; ಅಬುಜ: ತಾವರೆ; ಎಲೆ: ಪರ್ಣ; ಹಿಡಿದು: ಗ್ರಹಿಸು; ಅನಿಬರಿಗೆ: ಅಷ್ಟು ಜನರಿಗೆ; ಅಮಳ: ನಿರ್ಮಲ; ಜಲ: ನೀರು; ಮರಳಿ: ಹಿಂದಿರುಗು; ನಿಮಿಷ: ಕ್ಷಣಮಾತ್ರ; ತಡಿ: ದಡ; ಅಡರು: ಮೇಲಕ್ಕೆ ಹತ್ತು; ಧೊಪ್ಪನೆ: ಜೋರಾಗಿ; ಅವನಿ: ಭೂಮಿ; ಕೆಡೆ: ಬೀಳು, ಕುಸಿ; ಪರವಶ: ಮೂರ್ಛೆ; ತಡೆ: ತಡ, ವಿಳಂಬ; ಅಟ್ಟು: ಬೆನ್ನುಹತ್ತಿ ಹೋಗು; ನೃಪತಿ: ರಾಜ;

ಪದವಿಂಗಡಣೆ:
ಜಡಿಯಲ್+ಎರಡ್+ಅಳ್ಳೆಗಳು+ ಕೊರಳೈ
ಕುಡಿದನ್+ಉದಕವನ್+ಅಬುಜದ್+ಎಲೆಯಲಿ
ಹಿಡಿದನ್+ಅನಿಬರಿಗ್+ಅಮಳ +ಜಲವನು +ಮರಳಿ +ನಿಮಿಷದಲಿ
ತಡಿಯನ್+ಅಡರಿದು +ಧೊಪ್ಪನ್+ಅವನಿಗೆ
ಕೆಡೆದು +ಪರವಶನಾದನ್+ಇತ್ತಲು
ತಡೆದನ್+ಏಕೆಂದ್+ಅಟ್ಟಿದನು +ಸಹದೇವನನು +ನೃಪತಿ

ಅಚ್ಚರಿ:
(೧) ಉದಕ, ಜಲ – ಸಮನಾರ್ಥಕ ಪದ
(೨) ೨ನೇ ಸಾಲು ಒಂದೇ ಪದವಾಗಿರುವುದು – ಕುಡಿದನುದಕವನಬುಜದೆಲೆಯಲಿ

ನಿಮ್ಮ ಟಿಪ್ಪಣಿ ಬರೆಯಿರಿ