ಪದ್ಯ ೫: ಕರ್ಣನ ಆಲಯಕ್ಕೆ ಯಾರು ಬಂದರು?

ಒಂದು ದಿನ ಶತಮನ್ಯು ವಿಪ್ರರ
ಚಂದದಲಿ ನಡೆತಂದು ಕರ್ಣನ
ಮಂದಿರಕೆ ಬರಲಾತನಿದಿರೆದ್ದವನ ಸಂತೈಸಿ
ತಂದು ಜಲವನು ಪದಯುಗವ ತೊಳೆ
ದಂದು ಪೀಠದಿ ಕುಳ್ಳಿರಿಸಿ ಪದ
ಕಂದು ನಮಿಸಿದನರ್ಘ್ಯವಿತ್ತಾದರಿಸಿ ಮನ್ನಿಸಿದ (ಅರಣ್ಯ ಪರ್ವ, ೨೩ ಸಂಧಿ, ೫ ಪದ್ಯ)

ತಾತ್ಪರ್ಯ:
ಒಂದು ದಿನ ಇಂದ್ರನು ಬ್ರಾಹ್ಮಣನ ವೇಷವನ್ನುಂಟು ಕರ್ಣನ ಮನೆಗೆ ಬಂದನು, ಕರ್ಣನು ಬಂದ ಬ್ರಾಹ್ಮಣನ್ನು ಗೌರವಿಸಿ, ಆತನ ಪಾದಗಳನ್ನು ನೀರಿನಿಂದ ತೊಳೆದು, ಆಸೀನನಾಗಲು ಪೀಠವನ್ನು ನೀಡಿ, ಆತನ ಪಾದಗಳಿಗೆ ಅರ್ಘ್ಯವನ್ನು ನೀಡಿ ಗೌರವಿಸುತ್ತಾ ನಮಸ್ಕರಿಸಿದನು.

ಅರ್ಥ:
ದಿನ: ದಿವಸ; ಶತಮನ್ಯು: ಇಂದ್ರ; ವಿಪ್ರ: ಬ್ರಾಹ್ಮಣ; ಚಂದ: ಅಂದ; ನಡೆತಂದು: ಆಗಮಿಸು; ಮಂದಿರ: ಆಲಯ, ಮನೆ; ಬರಲು: ಆಗಮಿಸು; ಇದಿರು: ಎದುರು; ಸಂತೈಸು: ಆದರಿಸು; ಜಲ: ನೀರು; ಪದಯುಗ: ಎರಡು ಪಾದಗಳು; ತೊಳೆ: ಸ್ವಚ್ಛಗೊಳಿಸು; ಪೀಠ: ಆಸನ; ಕುಳ್ಳಿರಿಸು: ಆಸೀನವಾಗು; ಪದ: ಪಾದ; ನಮಿಸು: ನಮಸ್ಕರಿಸು; ಅರ್ಘ್ಯ: ನೀರು; ಆದರಿಸು: ಗೌರವಿಸು; ಮನ್ನಿಸು: ಗೌರವಿಸು;

ಪದವಿಂಗಡಣೆ:
ಒಂದು +ದಿನ +ಶತಮನ್ಯು +ವಿಪ್ರರ
ಚಂದದಲಿ +ನಡೆತಂದು +ಕರ್ಣನ
ಮಂದಿರಕೆ +ಬರಲ್+ಆತನ್+ಇದಿರ್+ಎದ್ದ್+ಅವನ +ಸಂತೈಸಿ
ತಂದು +ಜಲವನು +ಪದಯುಗವ +ತೊಳೆದ್
ಅಂದು +ಪೀಠದಿ +ಕುಳ್ಳಿರಿಸಿ +ಪದ
ಕಂದು +ನಮಿಸಿದನ್+ಅರ್ಘ್ಯವಿತ್+ಆದರಿಸಿ +ಮನ್ನಿಸಿದ

ಅಚ್ಚರಿ:
(೧) ಅಂದು, ತಂದು, ಒಂದು – ಪ್ರಾಸ ಪದಗಳು
(೨) ಆದರಿಸು, ಮನ್ನಿಸು – ಸಮನಾರ್ಥಕ ಪದ

ನಿಮ್ಮ ಟಿಪ್ಪಣಿ ಬರೆಯಿರಿ