ಪದ್ಯ ೫೦: ಯಾರಿಗೆ ಪಟ್ಟಕಟ್ಟಲು ದುರ್ಯೋಧನನು ಹೇಳಿದನು?

ದೂತನಮರರಿಗಟ್ಟುವೆನೆ ತಾ
ಬೂತು ಭೀಮಾರ್ಜುನರ ಕೂಡೆ ವಿ
ಘಾತಿ ಕೈಯೊಡನುಚಿತವೇ ಕೆಡೆನುಡಿವುದೀ ಲೋಕ
ಈ ತನುವನೀ ಪರಿಯಲೇ ನಿ
ರ್ಧೂತವನೆ ಮಾಡುವೆನು ನನ್ನನು
ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ (ಅರಣ್ಯ ಪರ್ವ, ೨೨ ಸಂಧಿ, ೫೦ ಪದ್ಯ)

ತಾತ್ಪರ್ಯ:
ಗಂಧರ್ವರ ಬಳಿಗೆ ದೂತರನ್ನು ಕಳಿಸುವುದು ಹಾಸ್ಯಾಸ್ಪದ. ಭೀಮಾರ್ಜುನರ ಜೊತೆ ಯುದ್ಧಕ್ಕೆ ಹೋದರೆ ಲೋಕನಿಂದೆಗೆ ಪಾತ್ರನಾಗುತ್ತೇನೆ. ಉಪವಾಸದಿಂದಲೇ ಈ ದೇಹವನ್ನು ಕೊಡವಿ ಬಿಡುತ್ತೇನೆ. ನನ್ನ ತಮ್ಮನಿಗೆ ಪಟ್ಟಕಟ್ಟಿ ನೀವು ಬಾಳಿರಿ ಎಂದು ದುರ್ಯೋಧನನು ಹೇಳಿದನು.

ಅರ್ಥ:
ದೂತ: ಸೇವಕ; ಅಮರ: ದೇವತೆ; ಬೂತು: ನಾಚಕೆಗೆಟ್ಟ ಮಾತು; ಕೂಡ: ಜೊತೆ; ವಿಘಾತ: ನಾಶ, ಧ್ವಂಸ; ಕೈಯೊಡು: ಕೈ ಕೈ ಜೊತೆಗೂಡು, ಯುದ್ಧ; ಅನುಚಿತ: ಸರಿಯಲ್ಲದ; ಕೆಡು: ಹಾಳಾಗು; ನುಡಿ: ಮಾತಾಡು; ಲೋಕ: ಜಗತ್ತು; ತನು: ದೇಹ; ಪರಿ: ರೀತಿ; ನಿರ್ಧೂತ: ತೊಡೆದು ಹಾಕುವುದು; ಅನುಜಾತ: ತಮ್ಮ; ಭೂವಧು: ಭೂದೇವಿ; ಸೇರಿಸು: ಜೋಡಿಸು; ಬದುಕು: ಜೀವಿಸು;

ಪದವಿಂಗಡಣೆ:
ದೂತನ್+ಅಮರರಿಗ್+ಅಟ್ಟುವೆನೆ +ತಾ
ಬೂತು +ಭೀಮಾರ್ಜುನರ +ಕೂಡೆ +ವಿ
ಘಾತಿ +ಕೈಯೊಡ್+ಅನುಚಿತವೇ +ಕೆಡೆನುಡಿವುದೀ +ಲೋಕ
ಈ+ ತನುವನ್+ಈ+ ಪರಿಯಲೇ+ ನಿ
ರ್ಧೂತವನೆ +ಮಾಡುವೆನು +ನನ್ನ್
ಅನುಜಾತನಲಿ+ ಭೂವಧುವ +ಸೇರಿಸಿ +ಬದುಕಿ +ನೀವೆಂದ

ಅಚ್ಚರಿ:
(೧) ತಮ್ಮನಿಗೆ ಪಟ್ಟವಕಟ್ಟಿ ಎಂದು ಹೇಳುವ ಪರಿ – ನನ್ನನುಜಾತನಲಿ ಭೂವಧುವ ಸೇರಿಸಿ

ಪದ್ಯ ೪೯: ಕರ್ಣಾದಿಗಳು ಯಾವ ಸಲಹೆಯನ್ನು ನೀಡಿದರು?

ಹರಿಬಬೇಕೇ ಮತ್ತೆ ಗಂಧ
ರ್ವರಿಗೆ ದೂತರನಟ್ಟು ಭೀಮನ
ನರನೊಳನುಸಂಧಾನವೇ ನಾಲ್ಕೆಂಟು ದಿವಸದಲಿ
ಧರೆಯೊಳವರಿರದಂತೆ ಧಟ್ಟಿಸಿ
ತೆರಳಿಚುವೆವಿದಕಕಟ ದರ್ಭೆಯ
ಹರಹಿ ಹಕ್ಕೆಯ ನಿಕ್ಕಲೇಕೆಂದೊದರಿದರು ಖಳರು (ಅರಣ್ಯ ಪರ್ವ, ೨೨ ಸಂಧಿ, ೪೯ ಪದ್ಯ)

ತಾತ್ಪರ್ಯ:
ಯುದ್ಧ ಬೇಕಾದರೆ ದೂತರನ್ನು ಕಳಿಸಿ ಗಂಧರ್ವರನ್ನು ಮತ್ತೆ ಕರೆಸು, ಭೀಮಾರ್ಜುನರೊಡನೆ ಅನುಸಂಧಾನ ಬೇಕೇ, ನಾಲ್ಕೆಂಟು ದಿವಸಗಳೊಳಗಾಗಿ ಅವರು ಭೂಮಿಯ ಮೇಲಿರದಂತೆ ಬಡಿದು ಹಾಕುತ್ತೇವೆ, ಇಂತಹ ಕ್ಷುಲ್ಲಕ ಕಾರಣಕ್ಕಾಗಿ ನೀನು ದರ್ಭೆಯನ್ನು ಹರಡಿ ಅದರ ಮೇಲೆ ಮಲಗುವೆಯಾ ಎಂದು ದುಷ್ಟರು ಕೌರವನಿಗೆ ಹೇಳಿದರು.

ಅರ್ಥ:
ಹರಿಬ: ಕೆಲಸ, ಕಾರ್ಯ; ಗಂಧರ್ವ: ಖಚರು; ದೂತ: ಸೇವಕ; ನರ: ಅರ್ಜುನ; ಅನುಸಂಧಾನ: ಪರಿಶೀಲನೆ; ದಿವಸ: ದಿನ; ಧರೆ: ಭೂಮಿ; ಇರವು: ಜೀವಿಸು; ಧಟ್ಟಿಸು: ಒರಸಿಹಾಕು, ಉಜ್ಜು; ತೆರಳು: ಹೋಗು, ನಡೆ; ಅಕಟ: ಅಯ್ಯೋ; ದರ್ಭೆ: ಹುಲ್ಲು; ಹರಹು: ಹಬ್ಬು; ಹಕ್ಕೆ: ಹಾಸುಗೆ, ಶಯ್ಯೆ; ಒದರು: ಅರಚು, ಕೂಗು; ಖಳ: ದುಷ್ಟ;

ಪದವಿಂಗಡಣೆ:
ಹರಿಬ+ಬೇಕೇ +ಮತ್ತೆ +ಗಂಧ
ರ್ವರಿಗೆ +ದೂತರನಟ್ಟು +ಭೀಮನ
ನರನೊಳ್+ ಅನುಸಂಧಾನವೇ +ನಾಲ್ಕೆಂಟು +ದಿವಸದಲಿ
ಧರೆಯೊಳ್+ಅವರ್+ಇರದಂತೆ +ಧಟ್ಟಿಸಿ
ತೆರಳಿಚುವೆವ್+ಇದಕ್+ಅಕಟ+ ದರ್ಭೆಯ
ಹರಹಿ+ ಹಕ್ಕೆಯನಿಕ್ಕಲೇಕೆಂದ್+ಒದರಿದರು+ ಖಳರು

ಅಚ್ಚರಿ:
(೧) ಒಣ ಧೈರ್ಯದ ಮಾತು – ಭೀಮನನರನೊಳನುಸಂಧಾನವೇ ನಾಲ್ಕೆಂಟು ದಿವಸದಲಿ
ಧರೆಯೊಳವರಿರದಂತೆ ಧಟ್ಟಿಸಿ ತೆರಳಿಚುವೆ

ಪದ್ಯ ೪೮: ಕರ್ಣ ಶಕುನಿಗಳು ಏನೆಂದು ಹೇಳಿದರು?

ಹೊಕ್ಕು ರಾಯನ ಕಂಡಿದೇನೀ
ಹಕ್ಕೆ ಹುಲ್ಲಿನಲಿರವು ಹರಹರ
ಮಕ್ಕಳಾಟಿಕೆಯೇನಿದಗ್ಗದ ಸಾರ್ವಭೌಮರಿಗೆ
ಸಿಕ್ಕುವನು ಹಗೆ ತನಗೆ ತಾನೇ
ಸಿಕ್ಕುವನು ಹಗೆಗಳಿಗೆ ಲೋಕದೊ
ಳಕ್ಕಜವೆ ಜಯವಿಜಯವೆಂದರು ಕರ್ಣ ಶಕುನಿಗಳು (ಅರಣ್ಯ ಪರ್ವ, ೨೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ಅವರು ಒಳಕ್ಕೆ ಹೋಗಿ ದುರ್ಯೋಧನನನ್ನು ಕಂಡು, ಸಾರ್ವಭೌಮರಿಗೆ ಇದೇನು ಹುಲ್ಲಿನ ಹಾಸಿಗೆ? ಇದೇನು ಹುಡುಗಾಟವೇ, ಶಿವ ಶಿವಾ ಎಂದು ಉದ್ಗರಿಸಿದರು. ಒಮ್ಮೆ ಶತ್ರುವು ತನಗೆ ಸೆರೆಸಿಕ್ಕುತ್ತಾನೆ, ಇನ್ನೊಮ್ಮೆ ತಾನೇ ಹಗೆಗಳಿಗೆ ಸೆರೆ ಸಿಕ್ಕುತ್ತಾನೆ, ಲೋಕದಲ್ಲಿ ಸೋಲು ಗೆಲುವುಗಳಾಗುವುದು ಆಶ್ಚರ್ಯವೇನಿಲ್ಲ ಎಂದು ಕರ್ಣ ಶಕುನಿಗಳು ಕೌರವನಿಗೆ ಹೇಳಿದರು.

ಅರ್ಥ:
ಹೊಕ್ಕು: ಸೇರು; ರಾಯ: ರಾಜ; ಕಂದು: ನೋಡು; ಹಕ್ಕೆ: ಹಾಸುಗೆ, ಶಯ್ಯೆ, ನೆಲೆ; ಹುಲ್ಲು: ದರ್ಬೆ; ಇರವು: ಜೀವನ; ಹರಹರ: ಶಿವ ಶಿವಾ; ಮಕ್ಕಳಾಟಿಕೆ: ಮಕ್ಕಳು ಆಟವಾಡುವ ವಸ್ತು; ಅಗ್ಗ: ಶ್ರೇಷ್ಠ; ಸಾರ್ವಭೌಮ: ರಾಜ; ಸಿಕ್ಕು: ಪಡೆ; ಹಗೆ: ವೈರತ್ವ; ಲೋಕ: ಜಗತ್ತು; ಜಯ: ಗೆಲುವು; ವಿಜಯ: ಯಶಸ್ಸು; ಅಕ್ಕಜ: ಪ್ರೀತಿ;

ಪದವಿಂಗಡಣೆ:
ಹೊಕ್ಕು+ ರಾಯನ +ಕಂಡಿದ್+ಏನ್+ಈ
ಹಕ್ಕೆ+ ಹುಲ್ಲಿನಲ್+ಇರವು +ಹರಹರ
ಮಕ್ಕಳಾಟಿಕೆಯೇನಿದ್+ಅಗ್ಗದ+ ಸಾರ್ವಭೌಮರಿಗೆ
ಸಿಕ್ಕುವನು +ಹಗೆ+ ತನಗೆ+ ತಾನೇ
ಸಿಕ್ಕುವನು +ಹಗೆಗಳಿಗೆ +ಲೋಕದೊಳ್
ಅಕ್ಕಜವೆ+ ಜಯ+ವಿಜಯವೆಂದರು +ಕರ್ಣ +ಶಕುನಿಗಳು

ಅಚ್ಚರಿ:
(೧) ದುರ್ಯೋಧನನ ಸ್ಥಿತಿಗೆ ಮರುಗುವ ಪರಿ – ಈ ಹಕ್ಕೆ ಹುಲ್ಲಿನಲಿರವು ಹರಹರ ಮಕ್ಕಳಾಟಿಕೆಯೇನಿದಗ್ಗದ ಸಾರ್ವಭೌಮರಿಗೆ

ಪದ್ಯ ೪೭: ಯಾರು ದುರ್ಯೋಧನನನ್ನು ನೋಡಲು ಬಂದರು?

ಐಸಲೇ ದೈವೋಪಹತ ಮನ
ದಾಸರಾರಿಮ್ದಡಗುವುದು ನಾ
ವೇಸನೊರಲಿದಡಾಗದವರೇ ಬಂದು ನಿಲಿಸುವರು
ಈಸರಲಿ ಮರಳುವೆವೆನುತ ನಿಜ
ವಾಸಕೈದಿದರಿತ್ತ ಮೋಹಿದ
ವಾ ಶಕುನಿ ಕರ್ಣಾದಿಗಳ ದಂಡಿಗೆಗಳೊಗ್ಗಿನಲಿ (ಅರಣ್ಯ ಪರ್ವ, ೨೨ ಸಂಧಿ, ೪೭ ಪದ್ಯ)

ತಾತ್ಪರ್ಯ:
ಅಷೇ ಅಲ್ಲವೇ, ದೈವವೇ ಕೆಡಿಸಿರುವ ಇವನ ಮನಸ್ಸಿನ ಚಿಂತನೆಯನ್ನು ಯಾರಿಂದ ತಾನೆ ನಿಲ್ಲಿಸಲು ಸಾಧ್ಯ? ನಾವು ಎಷ್ಟು ಕೂಗಿ ಹೇಳಿದರೂ ಇದು ಆಗದ ಕಾರ್ಯ, ಅವರೇ ಬಂದು ಇವನ ಬೇಸರವನ್ನು ಕಳೆಯಲಿ ಎಂದು ಹೇಳಿ ಭೀಷ್ಮಾದಿಗಳು ತಮ್ಮ ನಿವಾಸಕ್ಕೆ ಹಿಂದಿರುಗಿದರು. ಇತ್ತ ಶಕುನಿ, ಕರ್ಣ ಮೊದಲಾದವರ ಪಲ್ಲಕ್ಕಿಗಳು ದುರ್ಯೋಧನನ ಬಳಿಗೆ ಬಂದವು.

ಅರ್ಥ:
ಐಸಲೇ:ಅಲ್ಲವೇ; ಉಪಹತ: ಹಿಂಸೆ, ನಾಶ; ಮನ: ಮನಸ್ಸು; ದಾಸ: ಸೇವಕ; ಅಡಗು: ಶಮನವಾಗು; ಒರಲು: ಅರಚು, ಕೂಗಿಕೊಳ್ಳು; ಬಂದು: ಆಗಮಿಸು; ನಿಲಿಸು: ನಿಲ್ಲು, ತಡೆ; ಈಸರಲಿ: ಇಷ್ಟರಲಿ; ಮರಳು: ಹಿಂದಿರುಗು; ವಾಸ: ನೆಲೆಸಿರುವ ಆಲಯ; ಐದು: ಬಂದು ಸೇರು; ಮೋಹ: ಆಸೆ; ಆದಿ: ಮುಂತಾದ; ದಂಡಿಗೆ: ಪಲ್ಲಕ್ಕಿ; ಒಗ್ಗು: ಗುಂಪು;

ಪದವಿಂಗಡಣೆ:
ಐಸಲೇ +ದೈವ+ಉಪಹತ+ ಮನ
ದಾಸರ್+ಆರಿಂದ್+ಅಡಗುವುದು +ನಾವ್
ಈಸನ್+ಒರಲಿದಡ್+ಆಗದ್+ಅವರೇ+ ಬಂದು +ನಿಲಿಸುವರು
ಈಸರಲಿ+ ಮರಳುವೆವ್+ಎನುತ +ನಿಜ
ವಾಸಕ್+ಐದಿದರ್+ಇತ್ತ+ ಮೋಹಿದವ್
ಆ+ ಶಕುನಿ +ಕರ್ಣಾದಿಗಳ +ದಂಡಿಗೆಗಳ್+ಒಗ್ಗಿನಲಿ

ಅಚ್ಚರಿ:
(೧) ದೇವರೇ ಬಂದು ನಿಲಿಸಲಿ ಎಂದು ಹೇಳುವ ಪರಿ – ನಾವೇಸನೊರಲಿದಡಾಗದವರೇ ಬಂದು ನಿಲಿಸುವರು

ಪದ್ಯ ೪೬: ದುರ್ಯೋಧನನ ಸಂಕಲ್ಪವೇಕೆ ಗಟ್ಟಿಗೊಂಡಿತು?

ಕದನವಾರಲಿ ಪಾಂಡುಸುತರಲಿ
ಕದನವಾಡುವುದುಚಿತವೇ ನಮ
ಗಿದಿರು ಬಳಿಕಾರುಂಟು ಭಾರತ ವರುಷ ಸೀಮೆಯಲಿ
ಇದನರಿತು ಸಂಕಲ್ಪ ಭಂಗಾ
ಸ್ಪದವ ಮಾಡುವುದೊಳ್ಳಿತೇ ನಿಜ
ಸದನಕಭಿಮುಖರಾಗಿ ಕರುಣಿಪುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಸಾಯುವುದು ಧರ್ಮವೆಂದಿರಿ, ಭಾರತ ವರ್ಷದಲ್ಲಿ ಪಾಂಡವರನ್ನು ಬಿಟ್ಟು ನಮಗೆ ವಿರೋಧಿಗಳಾರು? ಈಗ ಅವರು ನಮ್ಮನ್ನು ಗಂಧರ್ವರಿಂದ ಬಿಡುಗಡೆಗೊಳ್ಳಿಸಿರುವುದರಿಂದ ಅವರೊಡನೆ ಯುದ್ಧಮಾಡುವುದು ಉಚಿತವೇ? ಇದನ್ನು ತಿಳಿದೇ ನಾನು ಸಂಕಲ್ಪ ಭಂಗಮಾಡಲಾರೆ, ತಾವು ತಮ್ಮ ಮನೆಗಳಿಗೆ ಹಿಂದಿರುಗಿ ನನ್ನ ಮೇಲೆ ಕರುಣೆ ತೋರಿಸಬೇಡಿ ಎಂದು ಬೇಡಿದನು.

ಅರ್ಥ:
ಕದನ: ಯುದ್ಧ; ಸುತ: ಮಕ್ಕಳು; ಉಚಿತ: ಸರಿ; ಇದಿರು: ಎದುರು; ಬಳಿಕ: ನಂತರ; ವರುಷ: ಪ್ರದೇಶ; ಸೀಮೆ: ಎಲ್ಲೆ, ಗಡಿ; ಸಂಕಲ್ಪ: ನಿಶ್ಚಯ; ಭಂಗ: ಮುರಿಯುವಿಕೆ; ಆಸ್ಪದ: ಪ್ರತಿಷ್ಠೆ; ಸದನ: ಆಲಯ; ಅಭಿಮುಖ: ಎದುರು; ಕರುಣೆ: ದಯೆ; ಭೂಪ: ರಾಜ;

ಪದವಿಂಗಡಣೆ:
ಕದನವ್+ಆರಲಿ +ಪಾಂಡು+ಸುತರಲಿ
ಕದನವಾಡುವುದ್+ಉಚಿತವೇ +ನಮಗ್
ಇದಿರು +ಬಳಿಕಾರುಂಟು +ಭಾರತ+ ವರುಷ+ ಸೀಮೆಯಲಿ
ಇದನರಿತು +ಸಂಕಲ್ಪ +ಭಂಗ
ಆಸ್ಪದವ +ಮಾಡುವುದ್+ಒಳ್ಳಿತೇ +ನಿಜ
ಸದನಕ್+ಅಭಿಮುಖರಾಗಿ+ ಕರುಣಿಪುದೆಂದನಾ +ಭೂಪ

ಅಚ್ಚರಿ:
(೧) ಹಿಂದಿರುಗಿ ಎಂದು ಹೇಳುವ ಪರಿ – ನಿಜಸದನಕಭಿಮುಖರಾಗಿ