ಪದ್ಯ ೪೪: ಭೀಷ್ಮ ಗುರು ಕೃಪರು ಯಾವ ಮಾತನ್ನು ಹೇಳಿದರು?

ನಾವು ಪಡಿ ಬಾಹಿರರು ಬೀಯದ
ಸೇವಕರು ಸಮಹಂತಿಕಾರರಿ
ಗೀವುದೈ ದೃಢ ಮುದ್ರಿತಾಂತರ್ಮಾನಸಾಮೃತವ
ಭೂವಧುವ ಬೋಳೈಸು ಕಾನನ
ಜೀವಿಗಳು ತಮ್ಮೊಲಿದುದಾಗಲಿ
ಸಾವುದನುಚಿತವೆಂದು ನುಡಿದರು ಭೀಷ್ಮಗುರು ಕೃಪರು (ಅರಣ್ಯ ಪರ್ವ, ೨೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಭೀಷ್ಮ ದ್ರೋಣ ಕೃಪರು ದುರ್ಯೋಧನನಿಗೆ ನಾವು ನಿನ್ನಿಂದ ಪಡಿಯನ್ನು ಪಡೆಯಲೂ ಅನರ್ಹರು. ವೃಥಾವೆಚ್ಚಕ್ಕೆ ಕಾರಣರಾದ ಸೇವಕರು ಎಮ್ದು ನೀನು ತಿಳಿದಿರುವೆ. ಆದುದರಿಂದ ನಿನ್ನ ಸರಿಸಮಾನಸ್ಕಂಧರೂ ವಿಶ್ವಾಸಿಕರೂ ಆದ ಕರ್ಣಾದಿಗಳಿಗೆ ನಿನ್ನ ಮನಸ್ಸಿನಲ್ಲಿ ಅಚ್ಚೊತ್ತಿರುವ ಅಮೃತವಾದ ಅಭಿಪ್ರಾಯವನ್ನು ಹೇಳು. ಕಾಡಿನಲ್ಲಿರುವ ಪಾಂಡವರು ತಮಗಿಷ್ಟ ಬಂದಂತೆ ಮಾಡಲಿ, ನೀನು ರಾಜ್ಯವನ್ನಾಳು, ಸಾಯುವುದು ಉಚಿತವಲ್ಲವೆಂದು ಹೇಳಿದರು.

ಅರ್ಥ:
ಪಡಿ: ಸಮಾನವಾದುದು; ಬಾಹಿರ: ಹೊರಗಿನವ; ಬೀಯ: ನಷ್ಟ, ಹಾಳು; ಸೇವಕ: ದಾಸ; ಹಂತಿಕಾರ: ಸಾಲಿನಲ್ಲಿರುವವ; ದೃಢ: ಗಟ್ಟಿ; ಮುದ್ರೆ: ಮೊಹರು; ಮಾನಸ; ಮನಸ್ಸು; ಅಮೃತ: ಸುಧೆ; ಭೂವಧು: ಭೂಮಿ; ವಧು: ಹೆಂಗಸು; ಬೋಳೈಸು: ಸಂತೈಸು, ಸಮಾಧಾನ ಮಾಡು; ಕಾನನ: ಕಾದು; ಜೀವಿ: ಪ್ರಾಣಿ; ಒಲಿದು: ಪ್ರೀತಿ; ಸಾವು: ಮರಣ; ಅನುಚಿತ: ಸರಿಯಲ್ಲದ; ನುಡಿ: ಮಾತಾಡು;

ಪದವಿಂಗಡಣೆ:
ನಾವು +ಪಡಿ+ ಬಾಹಿರರು+ ಬೀಯದ
ಸೇವಕರು +ಸಮಹಂತಿಕಾರರಿಗ್
ಈವುದೈ +ದೃಢ +ಮುದ್ರಿತ+ಅಂತರ್ಮಾನಸ+ಅಮೃತವ
ಭೂವಧುವ +ಬೋಳೈಸು +ಕಾನನ
ಜೀವಿಗಳು +ತಮ್ಮೊಲಿದುದಾಗಲಿ
ಸಾವುದ್+ಅನುಚಿತವೆಂದು +ನುಡಿದರು +ಭೀಷ್ಮ+ಗುರು +ಕೃಪರು

ಅಚ್ಚರಿ:
(೧) ಬ ಕಾರದ ಜೋಡಿ ಪದ – ಬಾಹಿರರು ಬೀಯದ; ಭೂವಧುವ ಬೋಳೈಸು