ಪದ್ಯ ೪೩: ದುರ್ಯೋಧನನು ತಂದೆಗೆ ತೆರಳಲು ಏಕೆ ಹೇಳಿದನು?

ಮೊದಲು ಧೃತರಾಷ್ಟ್ರಂಗೆ ತಾ ಜನಿ
ಸಿದುದು ಬಳಿಕೀ ದೇಹ ಧರ್ಮಜ
ನುದರದಿಂದವೆ ಬಂದುದಿನ್ನವರೊಡನೆ ಮತ್ಸರವೆ
ಅದು ನಿಲಲಿ ದುರ್ವಿಷಯ ವೈರಾ
ಗ್ಯದಲಿ ದೇಹವ ಬಿಡುವೆನಲ್ಲದೆ
ಬೆದರು ಭಂಗದೊಳಿಲ್ಲ ಬಿಜಯಂಗೈಯಿ ನೀವೆಂದ (ಅರಣ್ಯ ಪರ್ವ, ೨೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ಈ ದೇಹವು ಧೃತರಾಷ್ರನಿಗೆ ಜನಿಸಿತು, ಈಗ ಧರ್ಮಜನ ಹೊಟ್ಟೆಯಿಂದ ಮತ್ತೆ ಹುಟ್ಟಿತು ಎಂದ ಮೇಲೆ ಪಾಂಡವರೊಡನೆ ನನಗೆ ಮತ್ಸರವೇ? ದುಷ್ಟವಿಷ್ಯ ಸುಖಗಳಲ್ಲಿ ವೈರಾಗ್ಯ ಬಂದು ಈ ದೇಹವನ್ನು ಬಿಡುತ್ತಿದ್ದೇನೆ, ತಾವು ದಯಮಾಡಿಸಿ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಮೊದಲು: ಮುಂಚೆ; ಜನಿಸು: ಹುಟ್ಟು; ಬಳಿಕ: ನಂತರ; ದೇಹ: ಕಾಯ; ಉದರ: ಹೊಟ್ಟೆ; ಮತ್ಸರ: ಹೊಟ್ಟೆಕಿಚ್ಚು; ನಿಲಲಿ: ನಿಲ್ಲು, ತಡೆ; ದುರ್ವಿಷಯ: ಕೆಟ್ಟ ವಿಚಾರ; ವೈರಾಗ್ಯ: ವಿರಕ್ತಿ; ದೇಹ: ಕಾಯ; ಬಿಡುವು: ವಿರಾಮ, ವಿಶ್ರಾಂತಿ; ಬೆದರು: ಹೆದರು; ಭಂಗ: ಮೋಸ, ವಂಚನೆ; ಬಿಜಯಂಗೈ: ದಯಮಾಡಿ, ತೆರಳು;

ಪದವಿಂಗಡಣೆ:
ಮೊದಲು +ಧೃತರಾಷ್ಟ್ರಂಗೆ +ತಾ +ಜನಿ
ಸಿದುದು +ಬಳಿಕೀ+ ದೇಹ +ಧರ್ಮಜನ್
ಉದರದಿಂದವೆ+ ಬಂದುದಿನ್+ಅವರೊಡನೆ +ಮತ್ಸರವೆ
ಅದು +ನಿಲಲಿ +ದುರ್ವಿಷಯ +ವೈರಾ
ಗ್ಯದಲಿ +ದೇಹವ +ಬಿಡುವೆನಲ್ಲದೆ
ಬೆದರು +ಭಂಗದೊಳಿಲ್ಲ +ಬಿಜಯಂಗೈಯಿ +ನೀವೆಂದ

ಅಚ್ಚರಿ:
(೧) ಜನಿಸು, ಬಂದುದು – ಸಾಮ್ಯಾರ್ಥ ಪದಗಳು
(೨) ಬ ಕಾರದ ಸಾಲು ಪದಗಳು – ಬಿಡುವೆನಲ್ಲದೆ ಬೆದರು ಭಂಗದೊಳಿಲ್ಲ ಬಿಜಯಂಗೈಯಿ