ಪದ್ಯ ೧: ಕೌರವನು ಹೇಗೆ ಕಂಡನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ನೃಪನ ತಂದು ಕೃ
ಪಾಳುವಿನ ಚರಣಾಗ್ರದಲಿ ಕೆಡಹಿದನು ಕಲಿಪಾರ್ಥ
ತೋಳ ಹಿಂಗಟ್ಟುಗಳ ಮೋರೆಯ
ಕಾಳಿಕೆಯ ಬಿಡುದಲೆಯ ನೀರೊರೆ
ವಾಲಿಗಳ ಕುರುಭೂಪನಿದ್ದನು ತಮ್ಮದಿರು ಸಹಿತ (ಅರಣ್ಯ ಪರ್ವ, ೨೨ ಸಂಧಿ, ೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಕಥೆಯನ್ನು ಮುಂದುವರೆಸುತ್ತಾ, ಜನಮೇಜಯ ರಾಜ ಕೇಳು, ಮಹಾ ವೀರನಾದ ಅರ್ಜುನನು ಕೌರವರಾಜನಾದ ದುರ್ಯೋಧನನನ್ನು ಚಿತ್ರಸೇನನಿಂದ ಬಿಡುಗೊಡಿಸಿ ಧರ್ಮಜನ ಚರಣಗಳ್ಳಿ ತಳ್ಳಿದನು. ಬಂಧಿಯಾಗಿದ್ದ ಕೌರವನ ತೋಳುಗಳು ಹಿಂಬದಿಯಲ್ಲಿ ಕಟ್ಟಿದ್ದವು, ಮುಖವು ಕಪ್ಪುಗೆಟ್ಟಿತ್ತು, ತಲೆಯ ಕೂದಲು ಕೆದರಿತ್ತು, ಕಣ್ಣಲ್ಲಿ ನೀರು ಜಿನುಗುತ್ತಿತ್ತು, ಹೀಗೆ ಕೌರವನು ತನ್ನ ತಮ್ಮಂದಿರ ಸಹಿತ ಧರ್ಮಜನ ಮುಂದೆ ನಿಂತನು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಪಾಲ: ಒಡೆಯ, ರಕ್ಷಿಸುವವ; ನೃಪ: ರಾಜ; ತಂದು: ಬರೆಮಾಡು; ಕೃಪಾಳು: ದಯಾಳು; ಚರಣಾಗ್ರ: ಪಾದದ ಮುಂದೆ; ಕೆಡಹು: ಬೀಳಿಸು; ಕಲಿ: ಶೂರ; ತೋಳ: ಭುಜ; ಹಿಂಗಟ್ಟು: ಹಿಂಬದಿಯಲ್ಲಿ ಬಂಧಿಸು; ಮೋರೆ: ಮುಖ; ಕಾಳಿಕೆ: ಕಪ್ಪಾಗು; ಬಿಡುದಲೆ: ಕೆದರಿದ ಕೂದಲು ನೀರೊರೆ: ನೀರು ಸೋರುವಿಕೆ; ಆಲಿ: ಕಣ್ಣು; ಭೂಪ: ರಾಜ; ತಮ್ಮ: ಅನುಜ; ಸಹಿತ: ಜೊತೆ;

ಪದವಿಂಗಡಣೆ:
ಕೇಳು +ಜನಮೇಜಯ+ ಧರಿತ್ರೀ
ಪಾಲ +ಕೌರವ+ ನೃಪನ+ ತಂದು +ಕೃ
ಪಾಳುವಿನ +ಚರಣಾಗ್ರದಲಿ+ ಕೆಡಹಿದನು +ಕಲಿಪಾರ್ಥ
ತೋಳ +ಹಿಂಗಟ್ಟುಗಳ +ಮೋರೆಯ
ಕಾಳಿಕೆಯ +ಬಿಡುದಲೆಯ +ನೀರೊರೆವ್
ಆಲಿಗಳ +ಕುರುಭೂಪನಿದ್ದನು +ತಮ್ಮದಿರು+ ಸಹಿತ

ಅಚ್ಚರಿ:
(೧) ಸೋತ ಕೌರವನ ವಿವರಣೆ: ತೋಳ ಹಿಂಗಟ್ಟುಗಳ, ಮೋರೆಯ ಕಾಳಿಕೆಯ, ಬಿಡುದಲೆಯ, ನೀರೊರೆವಾಲಿಗಳ, ಕುರುಭೂಪನಿದ್ದನು

ನುಡಿಮುತ್ತುಗಳು: ಅರಣ್ಯ ಪರ್ವ ೨೨ ಸಂಧಿ

  • ತೋಳ ಹಿಂಗಟ್ಟುಗಳ ಮೋರೆಯಕಾಳಿಕೆಯ ಬಿಡುದಲೆಯ ನೀರೊರೆವಾಲಿಗಳ ಕುರುಭೂಪನಿದ್ದನು – ಪದ್ಯ
  • ಚರಣದೊಳಾನತರ ಪಾಲಿಸುವುದೇ ಕ್ಷತ್ರಿಯರ ಧರ್ಮವಿದು – ಪದ್ಯ
  • ಬೆಂದ ವಿಧಿ ಬಂಧನವ ತಂದುದೆ ಸಾರ್ವಭೌಮರಿಗೆ – ಪದ್ಯ
  • ಮೌನವನು ಮರೆಗೊಂಡು ಕಲುಷಧ್ಯಾನನಿದ್ದನು – ಪದ್ಯ ೧೦
  • ಪ್ರಾಣ ವಾಯುಗಳವರು ಸುಭಟಶ್ರೇಣಿ ದೇಹಕೆ – ಪದ್ಯ ೧೨
  • ಬಿಡಿಸಿದಧರದ್ವಯ ವಿಷಾದದ ತಡಿಯ ಚಿತ್ರದ ನೆಯ್ಗೆ – ಪದ್ಯ ೧೩
  • ಪಟಹ ಪಣವ ಮೃದಂಗವಿದ್ದವು ಮೌನದೀಕ್ಷೆಯಲಿ – ಪದ್ಯ ೧೪
  • ಉಬ್ಬೆಗದ ಬೆಳೆ ಸಿರಿವಂತನೆತ್ತಿದದುಗುಡದಲಿ ಕುಳ್ಳೀರ್ದನಾ ಸುರನದಿಯ ತೀರದಲಿ – ಪದ್ಯ ೧೫
  • ಅಮಲ ದರ್ಭಾಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ – ಪದ್ಯ ೧೯
  • ಅವಿವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ – ಪದ್ಯ ೨೫
  • ಕಂದಿದಳು ಕಡುಶೋಕ ಶಿಖಿಯಲಿ ಬೆಂದಳ್ – ಪದ್ಯ ೨೬
  • ಮೋಹಿದ ಮೌನ ಮುದ್ರೆಯ ಬಿಸುಟು – ಪದ್ಯ ೨೭
  • ಹಣೆಯ ಹಣೆಯಲಿ ಚಾಚಿದಳು ಮಗನ – ಪದ್ಯ ೨೭
  • ಕೇಡಿಗನು ಕುರುವಂಶಕೆಂದಿಳೆಯಾಡುವುದು – ಪದ್ಯ ೨೯
  • ನಿನಗಳಿವಾದೋಡೀ ಕುರುವಂಶವಳಿವುದು ಪಟ್ಟವಾವನಲಿ – ಪದ್ಯ ೩೫
  • ನಿದ್ರಾನಾಯಕಿಯ ಮೇಳವದಲೈದನೆ – ಪದ್ಯ ೪೦
  • ಈ ಶರೀರವ ನೂಕಿ ನಿಲುವೆನು ಮುಕ್ತಿರಾಜ್ಯದಲಿ – ಪದ್ಯ ೪೧
  • ಈ ಹಕ್ಕೆ ಹುಲ್ಲಿನಲಿರವು ಹರಹರ ಮಕ್ಕಳಾಟಿಕೆಯೇನಿದಗ್ಗದ ಸಾರ್ವಭೌಮರಿಗೆ – ಪದ್ಯ ೪೮
  • ನನ್ನನುಜಾತನಲಿ ಭೂವಧುವ ಸೇರಿಸಿ – ಪದ್ಯ ೫೦
  • ತಲೆಮುಸುಕಿನಲಿ ತಾರಿದೊಡಲಿನ ತಳಿತ ದುಗುಡದ ಮೋರೆಯಲಿ ಕುರುಕುಲಭಯಂಕರ ನೈದಿದನು – ಪದ್ಯ ೫೨
  • ಹತವಿಧಿಗೆ ವಿಪರೀತ ಕೃತಿ ಸಹಜ – ಪದ್ಯ ೫೭
  • ಕಾತೊಡೆ ಬೀತುಹೋಹುದು ಬೀತಮರನೇ ಕಾತಿಹುದಲೈ – ಪದ್ಯ ೫೭
  • ಮೋಹದ ಮರುಳುತನವೀ ಕ್ಷತ್ರಧರ್ಮದೊಳಿಲ್ಲ – ಪದ್ಯ ೫೮
  • ಮಗಗೆ ಮುನಿವನು ತಂದೆ ತಂದೆಗೆ ಮಗ ಮುನಿವನನೊಡಹುಟ್ಟಿದರು ಬಲುಪಗೆ ಕಣಾ ತಮ್ಮೊಳಗೆ ಭೂಪರ ಖುಲ್ಲ ವಿದ್ಯೆಯಿದು – ಪದ್ಯ ೫೯
  • ಭವತ್ಪರೋಕ್ಷದೊಳಂತಕನ ಪುರವಲ್ಲದುರ್ವೀಕಾಂತೆಗಲುಪಿದೆನಾದರೊಡಹುಟ್ಟಿದನೆ ನಿಮ್ಮಡಿಯ – ಪದ್ಯ ೬೦
  • ಸುರಪುರದ ಸೂಳೆಯರ ಪಡಿಗವ ನಿರಿಸುವರು ಗಂಧರ್ವ – ಪದ್ಯ ೬೭
  • ನೆತ್ತಿಗಣ್ಣಾಯ್ತಧಮತೆಗೆ ನಗೆಯೊತ್ತಿ ತಾರಡಿ ಸುಜನಮಾರ್ಗವಕೆತ್ತುದಟಮಟವೀ ಸುಯೋಧನ ಸೌಮನಸ್ಯದಲಿ – ಪದ್ಯ ೬೯