ಪದ್ಯ ೩೨: ಚಿತ್ರಸೇನನು ಕೌರವನ ಬಗ್ಗೆ ಅರ್ಜುನನಿಗೆ ಏನು ಹೇಳಿದನು?

ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ ನೀರಲಿ
ನಾದ ಕೆಂಡವನುರುಹಿ ಮುಡಿದಾರುಂಟೆ ಮಂಡೆಯಲಿ
ಕೈದು ಮುರಿದೊಡೆ ಹಗೆಗೆ ತನ್ನಯ
ಕೈದು ಕೊಟ್ಟವರುಂಟೆ ಕುರುಪತಿ
ತೀದಡೀತನ ಬಿಡಿಸಿಕೊಂಬಿರೆ ಲೇಸು ಲೇಸೆಂದ (ಅರಣ್ಯ ಪರ್ವ, ೨೧ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹೋದ ಮಾರಿಯನ್ನು ಮನೆಯೊಳಗೆ ಕರೆದುಕೊಂಡು ಬಂದು ಆದರಿಸುವುದುಂಟೆ? ನೀರಿನಲ್ಲಿ ಆರಿದ ಕೆಂಡವನ್ನು ಮತ್ತೆ ಕೆಂಡವನ್ನಾಗಿ ಮಾಡಿ ತಲೆಯಲ್ಲಿ ಮುಡಿದುಕೊಳ್ಳುವವರುಂಟೆ? ಆಯುಧ ಮುರಿದ ಶತ್ರುವಿಗೆ ತನ್ನ ಆಯುಧವನ್ನು ಕೊಡುವವರುಂಟೇ? ಕೌರವನೀಗ ಸೆರೆ ಸಿಕ್ಕಿರಲು ಅವನನ್ನು ಬಿಡಿಸಿಕೊಂಡು ಹೋಗುವಿರಾ? ಚೆನ್ನಾಗಿದೆ, ಬಹಳ ಒಳಿತು ಎಂದು ಚಿತ್ರಸೇನನು ಅರ್ಜುನನಿಗೆ ಹೇಳಿದನು.

ಅರ್ಥ:
ಹೋದ: ತೆರಳಿದ; ಮಾರಿ: ಕ್ಷುದ್ರ ದೇವತೆ; ಕರೆ: ಬರೆಮಾಡು; ಮನೆ: ಆಲಯ; ಆದರಿಸು: ಗೌರವಿಸು; ನೀರು: ಜಲ; ನಾದ: ಒದ್ದೆ ಮಾಡು, ತೋಯಿಸು; ಕೆಂಡ: ಇಂಗಳ; ಉರುಹು: ತಾಪಗೊಳಿಸು; ಮುಡಿ: ತುರುಬು; ಮಂಡೆ: ಶಿರ; ಕೈದು: ಆಯುಧ, ಶಸ್ತ್ರ; ಮುರಿ: ಸೀಳು; ಹಗೆ: ಶತ್ರು; ಕೊಡು: ನೀದು; ತೀದು: ಮುಗಿಸು; ಬಿಡಿಸು: ಬಿಡುಗಡೆ ಮಾಡು; ಲೇಸು: ಒಳಿತು;

ಪದವಿಂಗಡಣೆ:
ಹೋದ +ಮಾರಿಯ +ಕರೆದು +ಮನೆಯೊಳಗ್
ಆದರಿಸಿದವರುಂಟೆ +ನೀರಲಿ
ನಾದ+ ಕೆಂಡವನ್+ಉರುಹಿ +ಮುಡಿದಾರುಂಟೆ +ಮಂಡೆಯಲಿ
ಕೈದು +ಮುರಿದೊಡೆ +ಹಗೆಗೆ+ ತನ್ನಯ
ಕೈದು +ಕೊಟ್ಟವರುಂಟೆ +ಕುರುಪತಿ
ತೀದಡ್+ಈತನ +ಬಿಡಿಸಿಕೊಂಬಿರೆ +ಲೇಸು +ಲೇಸೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹೋದ ಮಾರಿಯ ಕರೆದು ಮನೆಯೊಳ
ಗಾದರಿಸಿದವರುಂಟೆ; ನೀರಲಿ ನಾದ ಕೆಂಡವನುರುಹಿ ಮುಡಿದಾರುಂಟೆ ಮಂಡೆಯಲಿ;
ಕೈದು ಮುರಿದೊಡೆ ಹಗೆಗೆ ತನ್ನಯ ಕೈದು ಕೊಟ್ಟವರುಂಟೆ

ನಿಮ್ಮ ಟಿಪ್ಪಣಿ ಬರೆಯಿರಿ