ಪದ್ಯ ೩೧: ಕೌರವನನ್ನು ನಿಗ್ರಹಿಸುವುದೇಕೆ ಒಳಿತೆಂದು ಚಿತ್ರಸೇನನು ಹೇಳಿದನು?

ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ (ಅರಣ್ಯ ಪರ್ವ, ೨೧ ಸಂಧಿ, ೩೧ ಪದ್ಯ)

ತಾತ್ಪರ್ಯ:
ಹುಲಿಯನ್ನು ಸಂಹರಿಸಿದರೆ ಗೋವುಗಳಿಗೇಕೆ ಸಂಕಟವಾಗಬೇಕು? ಕಾಗೆಗಳನ್ನು ಹೊಡೆದರೆ ಕೋಗಿಲೆಗೇಕೆ ತೊಂದರೆಯಾಗಬೇಕು? ದುಷ್ಟರನ್ನು ನಿಗ್ರಹಿಸಿದರೆ ಸಜ್ಜನರಿಗೇಕೆ ತಲೆನೋವು ಬರಬೇಕು? ಕೌರವ ಕುಲವನ್ನು ನಿಗ್ರಹಿಸಿದರೆ ನಿನಗೇಕೆ ಹೊಟ್ಟೆ ಬೇನೆ? ಎಂದು ಚಿತ್ರಸೇನನು ಅರ್ಜುನನನ್ನು ಕೇಳಿದನು.

ಅರ್ಥ:
ಹುಲಿ: ವ್ಯಾಘ್ರ; ಮುರಿ: ಸೀಳು; ಒತ್ತು: ಆಕ್ರಮಿಸು, ಮುತ್ತು; ಪಶು: ಹಸು, ಗೋವು; ಸಂಕುಲ: ವಂಶ; ಸಂಕಟ: ತೊಂದರೆ; ವಾಯಸ: ಕಾಗೆ; ಕುಲ: ವಂಶ; ಕೈಮಾಡು: ಹೊಡೆ; ಕೋಟಲೆ: ತೊಂದರೆ; ಕೋಗಿಲೆ: ಪಿಕ; ಖಳ: ದುಷ್ಟ; ಕೊಪ್ಪರಿಸು: ತಿವಿ, ಹೊಡೆ; ಸುಜನ: ಒಳ್ಳೆಯ ಜನ; ತಲೆ: ಶಿರ; ವೇದನೆ: ನೋವು; ಜಠರ: ಹೊಟ್ಟೆ; ಶೂಲೆ: ನೋವು;

ಪದವಿಂಗಡಣೆ:
ಹುಲಿಯ +ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು ವಾಯಸ
ಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ
ಖಳರ ಕೊಪ್ಪರಿಸಿದರೆ ಸುಜನರ
ತಲೆಗೆ ವೇದನೆಯೇನು ಕೌರವ
ಕುಲವನದ್ದಿದರೇನು ಜಠರದ ಶೂಲೆ ನಿನಗೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹುಲಿಯ ಮುರಿದೊತ್ತಿದೊಡೆ ಪಶುಸಂ
ಕುಲಕೆ ಸಂಕಟವೇನು; ವಾಯಸಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ

ಪದ್ಯ ೩೦: ಚಿತ್ರಸೇನನು ಅರ್ಜುನನಿಗೇನು ಹೇಳಿದನು?

ತಿರುಗಿ ನಿಂದನು ಖಚರಪತಿ ನಿ
ಷ್ಠುರವಿದೇನೈ ಪಾರ್ಥ ನೀಕಡು
ಮರುಳೊ ಮೂಢನೊ ಜಡನೊ ಪಿತ್ತ ಭ್ರಾಂತಿ ವಿಹ್ವಲನೊ
ಧುರದ ಕೌತುಕ ಗರಳ ಮೂರ್ಛಾಂ
ತರಿತ ಹೃದಯನೊ ನಿಲ್ಲು ಚಾಪದ
ಶರವನುಪಸಂಹರಿಸಿ ನಮ್ಮಯ ಮಾತ ಕೇಳೆಂದ (ಅರಣ್ಯ ಪರ್ವ, ೨೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅರ್ಜುನ ನಿನಗೇಕೆ ಇಷ್ಟು ನಿಷ್ಠುರತೆ? ನೀನೇನು ಹುಚ್ಚನೋ, ಮೂಢನೋ, ಆಲಸ್ಯದಿಂದ ತುಂಬಿರುವವನೋ, ಕೋಪಿಷ್ಠನೋ, ಭ್ರಾಂತಿಗೊಂಡವನೋ, ಯುದ್ಧದ ಉತ್ಸುಕತೆಯ ವಿಷದಿಂದ ಮೂರ್ಛಿತ ಮನಸ್ಸುಳ್ಲವನೋ, ಏನು? ನೀನು ಹೂಡಿರುವ ಬಾಣಗಳನ್ನು ತೆಗೆದು ನಮ್ಮ ಮಾತನ್ನು ಕೇಳು ಎಂದು ಚಿತ್ರಸೇನನು ನುಡಿದನು.

ಅರ್ಥ:
ತಿರುಗು: ಮರಳು; ನಿಂದು: ನಿಲ್ಲು; ಖಚರಪತಿ: ಗಂಧವರ ಒಡೆಯ; ನಿಷ್ಠುರ: ಕಠಿಣವಾದ, ಒರಟಾದ; ಕಡು: ತುಂಬ; ಮರುಳು: ಬುದ್ಧಿಭ್ರಮೆ, ಹುಚ್ಚು; ಮೂಢ: ತಿಳಿವಳಿಕೆಯಿಲ್ಲದವನು, ತಿಳಿಗೇಡಿ; ಜಡ: ಆಲಸ್ಯ; ಪಿತ್ತ: ಕೋಪ, ಸಿಟ್ಟು; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ವಿಹ್ವಲ: ಹತಾಶ; ಧುರ:ಯುದ್ಧ; ಕೌತುಕ: ಕುತೂಹಲ; ಗರಳ: ವಿಷ; ಮೂರ್ಛೆ: ಜ್ಞಾನತಪ್ಪಿದ ಸ್ಥಿತಿ; ಹೃದಯ: ಎದೆ; ನಿಲ್ಲು: ತಡೆ; ಚಾಪ: ಬಿಲ್ಲು; ಶರ: ಬಾಣ; ಉಪಸಂಹಾರ: ಹಿಂದಕ್ಕೆ ತೆಗೆದುಕೊಳ್ಳುವಿಕೆ; ನಾಶ; ಮಾತು: ನುಡಿ; ಕೇಳು: ಆಲಿಸು;

ಪದವಿಂಗಡಣೆ:
ತಿರುಗಿ +ನಿಂದನು +ಖಚರಪತಿ +ನಿ
ಷ್ಠುರವಿದೇನೈ +ಪಾರ್ಥ +ನೀ+ಕಡು
ಮರುಳೊ +ಮೂಢನೊ +ಜಡನೊ +ಪಿತ್ತ +ಭ್ರಾಂತಿ +ವಿಹ್ವಲನೊ
ಧುರದ +ಕೌತುಕ +ಗರಳ +ಮೂರ್ಛಾಂ
ತರಿತ +ಹೃದಯನೊ +ನಿಲ್ಲು +ಚಾಪದ
ಶರವನ್+ಉಪಸಂಹರಿಸಿ+ ನಮ್ಮಯ +ಮಾತ +ಕೇಳೆಂದ

ಅಚ್ಚರಿ:
(೧) ಅರ್ಜುನನನ್ನು ಕರೆದ ಪರಿ – ಮರುಳೊ, ಮೂಢನೊ, ಜಡನೊ, ಪಿತ್ತ, ಭ್ರಾಂತಿ, ವಿಹ್ವಲನೊ
(೨) ಬಾಣವನ್ನು ಕೆಳಗಿಳಿಸು ಎಂದು ಹೇಳುವ ಪರಿ – ಚಾಪದಶರವನುಪಸಂಹರಿಸಿ

ಪದ್ಯ ೨೯: ದೇವತೆಗಳ ವಿಮಾನಗಳೇಕೆ ದಿಕ್ಕು ದಿಕ್ಕಿಗೆ ಓಡಿದವು?

ಎಲವೊ ಕೌರವ ಸಹಿತ ಕಮಠನ
ಕೆಳಗೆ ಧ್ರುವನಿಂ ಮೇಲೆ ಹೊಕ್ಕರೆ
ಕೊಲುವೆನಲ್ಲದೆ ಬಿಡುವೆನೇ ಫಡ ನಿಲ್ಲುನಿಲ್ಲೆನುತ
ತುಳುಕಿದನು ಕೆಂಗೋಲನಿನ ಮಂ
ಡಲಕೆ ದಿಗ್ಭ್ರಮೆಯಾಯ್ತು ನಭದಲಿ
ಸುಳಿವ ಸುರರ ವಿಮಾನತತಿ ಚೆಲ್ಲಿದವು ದೆಸೆದೆಸೆಗೆ (ಅರಣ್ಯ ಪರ್ವ, ೨೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎಲವೋ ಚಿತ್ರಸೇನ, ಕೌರವನ ಸಮೇತ ಆಮೆಯ ಕೆಳಗೆ ಹೊಕ್ಕರೂ, ಧ್ರುವಮಂಡಲದ ಮೇಲೆ ಹೋದರೂ ನಾನು ಬಿಡುವುದಿಲ್ಲ. ನಿಲ್ಲು ನಿಲ್ಲು ಎನ್ನುತ್ತಾ ಅರ್ಜುನನು ಕೆಂಪಾದ ಬಾಣಗಳನ್ನು ಬಿಡಲು, ಸೂರ್ಯಮಂಡಲಕ್ಕೆ ದಿಗ್ಭ್ರಮೆಯಾಯಿತು. ದೇವತೆಗಳ ವಿಮಾನಗಳು ದಿಕ್ಕು ದಿಕ್ಕಿಗೆ ಓಡಿದವು.

ಅರ್ಥ:
ಸಹಿತ: ಜೊತೆ; ಕಮಠ: ಆಮೆ, ಕೂರ್ಮ; ಕೆಳಗೆ: ಅಡಿ; ಧುರ್ವ: ನಕ್ಷತ್ರದ ಹೆಸರು; ಮೇಲೆ: ಎತ್ತರ; ಹೊಕ್ಕು: ಸೇರು; ಕೊಲು: ಸಾಯಿಸು; ಫಡ: ತಿರಸ್ಕಾರದ ಮಾತು; ನಿಲ್ಲು: ತಡೆ; ತುಳುಕು: ಉಕ್ಕುವಿಕೆ; ಕೆಂಗೋಲು: ಕೆಂಪಾದ ಬಾಣ; ಇನ: ಸೂರ್ಯ; ಮಂಡಲ: ನಾಡಿನ ಒಂದು ಭಾಗ; ದಿಗ್ಭ್ರಮೆ: ಗಾಬರಿ, ಕಳವಳ; ನಭ: ಆಗಸ; ಸುಳಿ: ಆವರಿಸು, ಮುತ್ತು; ಸುರ: ದೇವತೆ; ವಿಮಾನ: ಆಗಸದಲ್ಲಿ ಹಾರುವ ವಾಹನ; ತತಿ: ಗುಂಪು; ಚೆಲ್ಲು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಎಲವೊ +ಕೌರವ+ ಸಹಿತ +ಕಮಠನ
ಕೆಳಗೆ +ಧ್ರುವನಿಂ +ಮೇಲೆ +ಹೊಕ್ಕರೆ
ಕೊಲುವೆನಲ್ಲದೆ +ಬಿಡುವೆನೇ+ ಫಡ+ ನಿಲ್ಲು+ನಿಲ್ಲೆನುತ
ತುಳುಕಿದನು +ಕೆಂಗೋಲನ್+ಇನ +ಮಂ
ಡಲಕೆ+ ದಿಗ್ಭ್ರಮೆಯಾಯ್ತು +ನಭದಲಿ
ಸುಳಿವ +ಸುರರ+ ವಿಮಾನ+ತತಿ +ಚೆಲ್ಲಿದವು +ದೆಸೆದೆಸೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ತುಳುಕಿದನು ಕೆಂಗೋಲನಿನ ಮಂಡಲಕೆ ದಿಗ್ಭ್ರಮೆಯಾಯ್ತು
(೨) ಮೇಲೆ ಕೆಳಗೆಯನ್ನು ಸೂಚಿಸಲು – ಕಮಠ, ಧ್ರುವ ಪದದ ಬಳಕೆ

ಪದ್ಯ ೨೮: ಅರ್ಜುನನು ಚಿತ್ರಸೇನನನ್ನು ಹಿಂಬಾಲಿಸುತ್ತ ಎಲ್ಲಿಗೆ ಏರಿದನು?

ನೂಕದಿರಲಾಹವಕೆ ಸಮ್ಮುಖ
ವೇಕೆನುತ ಹತ್ತಿದನು ಗಗನವ
ನಾ ಕಿರೀಟಿಯ ಗೆಲುವೆನೆಂದುಬ್ಬರದ ಬೊಬ್ಬೆಯಲಿ
ನಾಕ ನಿಳಯರ ಮಾರ್ಗದೊಲಗ
ವ್ಯಾಕುಳನು ಭುಲ್ಲೈಸಿದೊಡೆ ಲೋ
ಕೈಕವೀರನಲಾ ಧನಂಜಯನಡರಿದನು ನಭವ (ಅರಣ್ಯ ಪರ್ವ, ೨೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಚಿತ್ರಸೇನನಿಗೆ ಯುದ್ಧವನ್ನು ನೂಕಲು ಕಷ್ಟಕರವಾಯಿತು, ನಾನೇಕೆ ಅರ್ಜುನನ ಮುಂದೆ ಏಕಿರಬೇಕು, ಅರ್ಜುನನ ಎದುರು ಗೆಲುವನ್ನು ಸಾಧಿಸುವೆ ಎಂದು ಗರ್ಜಿಸುತ್ತಾ ಆಗಸಕ್ಕೇರಿದನು. ಆಕಾಶದಲ್ಲಿ ಅವನು ವಿಜೃಂಭಿಸಲು, ಲೋಕೈಕವೀರನಾದ ಅರ್ಜುನನು ಆಕಾಶಕ್ಕೇರಿದನು.

ಅರ್ಥ:
ನೂಕು: ತಳ್ಳು; ಆಹವ: ಯುದ್ಧ; ಸಮ್ಮುಖ: ಎದುರು, ಮುಂಭಾಗ; ಹತ್ತು: ಏರು; ಗಗನ: ಆಗಸ; ಕಿರೀಟಿ: ಅರ್ಜುನ; ಗೆಲುವು: ಜಯ; ಉಬ್ಬರ: ಅತಿಶಯ, ಹೆಚ್ಚಳ; ಬೊಬ್ಬೆ: ಗರ್ಜಿಸು; ನಾಕ: ಸ್ವರ್ಗ; ನಿಳಯ: ಮನೆ; ಮಾರ್ಗ: ದಾರಿ; ವ್ಯಾಕುಲ: ದುಃಖ, ವ್ಯಥೆ; ಭುಲ್ಲೈಸು: ಸಂತೋಷಗೊಳ್ಳು; ಲೋಕೈಕವೀರ: ಜಗದೇಕ ಶೂರ; ಅಡರು: ಆಕ್ರಮಿಸು; ನಭ: ಆಗಸ;

ಪದವಿಂಗಡಣೆ:
ನೂಕದಿರಲ್+ಆಹವಕೆ +ಸಮ್ಮುಖವ್
ಏಕೆನುತ +ಹತ್ತಿದನು +ಗಗನವನ್
ಆ +ಕಿರೀಟಿಯ +ಗೆಲುವೆನೆಂದ್+ಉಬ್ಬರದ +ಬೊಬ್ಬೆಯಲಿ
ನಾಕ +ನಿಳಯರ +ಮಾರ್ಗದೊಳಗ್
ಅವ್ಯಾಕುಳನು+ ಭುಲ್ಲೈಸಿದೊಡೆ +ಲೋ
ಕೈಕವೀರನಲ್+ಆ+ ಧನಂಜಯನ್+ಅಡರಿದನು +ನಭವ

ಅಚ್ಚರಿ:
(೧) ಕಿರೀಟಿ, ಧನಂಜಯ – ಅರ್ಜುನನನ್ನು ಕರೆದ ಪರಿ
(೨) ಗಗನ, ನಭ – ಸಮನಾರ್ಥಕ ಪದ

ಪದ್ಯ ೨೭: ಅರ್ಜುನನು ಚಿತ್ರಸೇನನನ್ನು ಹೇಗೆ ಬಂಧಿಸಿದನು?

ಬಿಡು ಸೆರೆಯನವಗಡೆಯ ತನವೆ
ಮ್ಮೊಡನೆ ಸಲ್ಲದು ಸೂಳೆಯರ ಸುರೆ
ಗುಡುಹಿಗಳ ರಸವಾದಿಗಳ ಸೇರುವೆಯಲೊಪ್ಪುವುದು
ಫಡಯೆನುತ ನಾರಾಚದಲಿ ಬಲ
ನೆಡನ ಕೀಲಿಸಿ ಪಿಂಗುಡಿಯ ಮುಂ
ಗುಡಿಯ ಕಟ್ಟಿದ ನಂಬಿನಲಿ ಖಚರಾಧಿಪನ ರಥವ (ಅರಣ್ಯ ಪರ್ವ, ೨೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಚಿತ್ರಸೇನ, ಸೆರೆಹಿಡಿದ ಕೌರವನನ್ನು ಬಿಡು, ನಿನ್ನ ಪರಾಕ್ರಮವನ್ನು ನಮ್ಮ ಹತ್ತಿರ ತೋರಬೇಡ. ಅದೇನಿದ್ದರೂ ಸೂಳೆಯರು ಮದ್ಯಪಾನಿಳು, ರಸವಾದಿಗಳ ಮುಂದೆ ಸರಿ ಎಂದು ಹೇಳುತ್ತಾ ಅರ್ಜುನನು ಚಿತ್ರಸೇನನ ಹಿಂಭಾಗ ಮುಂಭಾಗಳನ್ನು ತನ್ನ ಬಾಣಗಳಿಂದ ಬಂಧಿಸಿದನು.

ಅರ್ಥ:
ಬಿಡು: ತೊರೆ; ಸೆರೆ: ಬಂಧನ; ಅವಗಡೆ: ಅಸಡ್ಡೆ; ಸಲ್ಲದು: ಸರಿಹೊಂದುವುದಿಲ್ಲ, ನಡೆಯದು; ಸೂಳೆ: ಗಣಿಕೆ; ಸುರೆ: ಮದ್ಯ; ಕುಡುಹಿಗ: ಪಾನಮಾಡುವ; ರಸವಾದಿ: ರಸಿಕ; ಸೇರು: ಜೊತೆಯಾಗು; ಒಪ್ಪು: ಒಪ್ಪಿಗೆ, ಸಮ್ಮತಿ; ಫಡ: ತಿರಸ್ಕಾರದ ಮಾತು; ನಾರಾಚ: ಬಾಣ, ಸರಳು; ಬಲ: ಸೈನ್ಯ; ಕೀಲಿಸು: ಜೋಡಿಸು, ನಾಟು; ಪಿಂಗುಡಿ: ಸೈನ್ಯದ ಹಿಂಭಾಗ; ಮುಂಗುಡಿ: ಸೈನ್ಯದ ಮುಂಭಾಗ; ಕಟ್ಟು: ಬಂಧಿಸು; ಅಂಬು: ಬಾಣ; ಖಚರ: ಗಂಧರ್ವ; ಅಧಿಪ: ಒಡೆಯ; ರಥ: ಬಂಡಿ;

ಪದವಿಂಗಡಣೆ:
ಬಿಡು +ಸೆರೆಯನ್+ಅವಗಡೆಯ +ತನವ್
ಎಮ್ಮೊಡನೆ +ಸಲ್ಲದು +ಸೂಳೆಯರ +ಸುರೆ
ಕುಡುಹಿಗಳ +ರಸವಾದಿಗಳ +ಸೇರುವೆಯಲ್+ಒಪ್ಪುವುದು
ಫಡ+ಎನುತ +ನಾರಾಚದಲಿ +ಬಲ
ನೆಡನ +ಕೀಲಿಸಿ +ಪಿಂಗುಡಿಯ +ಮುಂ
ಗುಡಿಯ +ಕಟ್ಟಿದನ್ + ಅಂಬಿನಲಿ +ಖಚರಾಧಿಪನ+ ರಥವ

ಅಚ್ಚರಿ:
(೧)ಪಿಂಗುಡಿ, ಮುಂಗುಡಿ – ಪದಗಳ ಬಳಕೆ
(೨) ಚಿತ್ರಸೇನನನ್ನು ಹಂಗಿಸುವ ಪರಿ – ಸೂಳೆಯರ ಸುರೆಗುಡುಹಿಗಳ ರಸವಾದಿಗಳ ಸೇರುವೆಯಲೊಪ್ಪುವುದು ಫಡ

ಪದ್ಯ ೨೬: ಅರ್ಜುನನೊಡನೆ ಯಾರು ಯುದ್ಧಕ್ಕೆ ನಿಂತರು?

ಅಳವಿಯಲಿ ಕೈಮಾಡಿ ಖೇಚರ
ರಳಲಿಗರು ಮುಮ್ಮುಳಿತರಾದರು
ಬೆಳಗಿದವು ದಿವ್ಯಾಸ್ತ್ರಧಾರೆಗಳಖಿಳ ದಿಗುತಟವ
ತಳಪಟದೊಳಾ ಸೆರೆ ಸಹಿತ ಕೈ
ಚಳಕದಲಿ ತೆಗೆದೆಸುತ ಸಮರಕೆ
ಮಲೆತು ನಿಂದನು ಚಿತ್ರಸೇನನು ಪಾರ್ಥನಿದುರಿನಲಿ (ಅರಣ್ಯ ಪರ್ವ, ೨೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಮಡಿದ ಜೊತೆಗಾರರ ಮುಯ್ಯಿ ತೀರಿಸಲು ಗಂಧರ್ವರು ಯುದ್ಧಕ್ಕೆ ನಿಂತು ಸಾಮೂಹಿಕವಾಗಿ ಮಡಿದರು. ಅರ್ಜುನನ ದಿವ್ಯಾಸ್ತ್ರಗಳ ಧಾರೆಗಳು ದಿಕ್ತಟಗಳನ್ನು ಬೆಳಗಿದವು. ಬಳಿಕ ತಾನು ಸೆರೆಹಿಡಿದು ರಥದಲ್ಲಿಟ್ಟುಕೊಂಡ ಕೌರವನೊಡನೆ, ಯುದ್ಧ ಭೂಮಿಯಲ್ಲಿ ಚಿತ್ರಸೇನನು ಅರ್ಜುನನೊಡನೆ ಯುದ್ಧಕ್ಕೆ ನಿಂತನು.

ಅರ್ಥ:
ಅಳವಿ: ಶಕ್ತಿ; ಕೈಮಾಡು: ಹೊಡೆ; ಖೇಚರ: ಗಂಧರ್ವ; ಅಳಲಿಗ: ವ್ಯಥೆಗೊಂಡವ; ಮುಮ್ಮುಳಿವಾಗು: ರೂಪಗೆಟ್ಟು ನಾಶವಾಗು; ಬೆಳಗು: ಹೊಳೆ; ದಿವ್ಯ: ಶ್ರೇಷ್ಠ; ಅಸ್ತ್ರ: ಆಯುಧ; ಅಖಿಳ: ಎಲ್ಲಾ; ದಿಗುತಟ: ದಿಕ್ಕು, ದಿಶೆ; ತಳಪಟ: ಅಂಗಾತವಾಗಿ ಬೀಳು; ಸೋಲು; ಸೆರೆ: ಬಂಧನ; ಸಹಿತ: ಜೊತೆ; ಕೈಚಳಕ: ಹಸ್ತಕೌಶಲ, ನೈಪುಣ್ಯ; ಇದುರು: ಎದುರು;

ಪದವಿಂಗಡಣೆ:
ಅಳವಿಯಲಿ +ಕೈಮಾಡಿ +ಖೇಚರರ್
ಅಳಲಿಗರು+ ಮುಮ್ಮುಳಿತರಾದರು
ಬೆಳಗಿದವು +ದಿವ್ಯಾಸ್ತ್ರ+ಧಾರೆಗಳ್+ಅಖಿಳ +ದಿಗುತಟವ
ತಳಪಟದೊಳಾ+ ಸೆರೆ +ಸಹಿತ +ಕೈ
ಚಳಕದಲಿ +ತೆಗೆದೆಸುತ+ ಸಮರಕೆ
ಮಲೆತು +ನಿಂದನು +ಚಿತ್ರಸೇನನು +ಪಾರ್ಥನಿದುರಿನಲಿ

ಅಚ್ಚರಿ:
(೧) ಅಳವಿ, ಅಳಲಿ – ಪದಗಳ ಬಳಕೆ
(೨) ಪಾರ್ಥನ ಸಾಮರ್ಥ್ಯ – ಬೆಳಗಿದವು ದಿವ್ಯಾಸ್ತ್ರಧಾರೆಗಳಖಿಳ ದಿಗುತಟವ

ಪದ್ಯ ೨೫: ಅರ್ಜುನನ ಆಕ್ರಮಣ ಹೇಗಿತ್ತು?

ಗಜದ ಪದಘಟ್ಟಣೆಯ ಬಹಳಂ
ಬುಜದವೊಲು ರಥ ಚಕ್ರಹತಿಯಲಿ
ಗಿಜಿಗಜಿಯ ಮಾಡಿಸಿದ ಖೇಚರ ಚಟುಲ ಪಟುಭಟರ
ವಿಜಯನಲ್ಲಾ ಸುರಪುರದ ಮೌ
ರಜಿಗನಾವೆಡೆ ಕುರುಬಲದ ಗಜ
ಬಜದ ಗರುವನ ತೋರೆನುತ ತೂಳಿದನು ಕಲಿಪಾರ್ಥ (ಅರಣ್ಯ ಪರ್ವ, ೨೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಆನೆಯ ತುಳಿದ ಕಮಲವನದಂತೆ ಅರ್ಜುನನ ರಥ ಚರ್ಕ್ರದ ಹೊಡೆತ ರಭಸಗಳಿಗೆ ಗಂಧರ್ವ ಬಲವು ಗಿಜಿಗಿಜಿಯಾಯಿತು. ಅಮರಾವತಿಯ ಮೃದಂಗ ಮದ್ದಳೆ ವಾದಕನು, ಯುದ್ಧದಲ್ಲಿ ಗೆದ್ದವನು ಎಲ್ಲಿ? ಕುರುಬಲವನ್ನು ನಾಶಮಾಡಿದವನು ಎಲ್ಲಿ ತೋರಿಸಿರಿ ಎಂದು ಅರ್ಜುನನು ಮುಂದುವರಿದನು.

ಅರ್ಥ:
ಗಜ: ಆನೆ; ಪದ: ಪಾದ; ಘಟ್ಟಣೆ: ಗುಂಪು; ಬಹಳ: ತುಂಬ; ಅಂಬುಜ: ತಾವರೆ; ರಥ: ಬಂಡಿ; ಚಕ್ರ: ಗಾಲಿ; ಹತಿ: ಪೆಟ್ಟು, ಹೊಡೆತ; ಗಿಜಿಗಜಿ: ದಟ್ಟಣೆ; ಖೇಚರ: ಗಂಧರ್ವ; ಚಟುಲ: ವೇಗ, ತ್ವರಿತ; ಪಟುಭಟ: ಕುಶಲನಾದ ಸೈನಿಕ; ವಿಜಯ: ಗೆಲುವು; ಸುರಪುರ: ಅಮರಾವತಿ; ಮೌರಜಿಗ: ತಬಲ ಬಾರಿಸುವವ; ಬಲ: ಸೈನ್ಯ; ಗರುವ: ಹಿರಿಯ, ಶ್ರೇಷ್ಠ; ತೋರು: ಪ್ರದರ್ಶಿಸು; ತೂಳು: ಆವೇಶ, ಉನ್ಮಾದ; ಕಲಿ: ಶೂರ;

ಪದವಿಂಗಡಣೆ:
ಗಜದ +ಪದಘಟ್ಟಣೆಯ +ಬಹಳ್+ಅಂ
ಬುಜದವೊಲು +ರಥ +ಚಕ್ರಹತಿಯಲಿ
ಗಿಜಿಗಜಿಯ +ಮಾಡಿಸಿದ +ಖೇಚರ +ಚಟುಲ +ಪಟುಭಟರ
ವಿಜಯನಲ್ಲಾ+ ಸುರಪುರದ+ ಮೌ
ರಜಿಗನ್+ಆವೆಡೆ +ಕುರುಬಲದ +ಗಜ
ಬಜದ +ಗರುವನ+ ತೋರೆನುತ+ ತೂಳಿದನು+ ಕಲಿಪಾರ್ಥ

ಅಚ್ಚರಿ:
(೧) ಗಿಜಿಗಜಿ, ಗಜಬಜ – ಪದಗಳ ಬಳಕೆ
(೨) ಉಪಮಾನದ ಪ್ರಯೋಗ – ಗಜದ ಪದಘಟ್ಟಣೆಯ ಬಹಳಂಬುಜದವೊಲು