ಪದ್ಯ ೧೧: ಭೀಮನು ಧರ್ಮಜನಿಗೆ ಏನು ಹೇಳಿದ?

ಬೆಸಸ ಬೇಹುದು ನೀತಿ ಶಾಸ್ತ್ರದ
ಬೆಸುಗೆ ತಪ್ಪದೆ ರಾಜಧರ್ಮದ
ಮುಸುಡು ಕುಂದದೆ ಖೋಡಿವಿಡಿಯದೆ ಕುಶಲರಾದವರು
ಎಸಗುವದು ನಾವಾವ ಕಾರ್ಯದೊ
ಳಸುವನಿಕ್ಕಿ ತದರ್ಥವನು ಪರ
ರೆಸಗಿದೊಡೆ ನಮಗೇಕೆ ಬಾಧಕವೆಂದನಾ ಭೀಮ (ಅರಣ್ಯ ಪರ್ವ, ೨೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಭೀಮನು ತನ್ನ ಮಾತನ್ನು ಹೇಳುತ್ತಾ, ಅಣ್ಣಾ ನೀತಿ ಶಾಸ್ತ್ರಕ್ಕೆ ವಿರುದ್ಧವಲ್ಲದ, ರಾಜಧರ್ಮದ ಮುಖಕ್ಕೆ ಮಸಿ ಬಳಿಯದ, ತಿಳಿದವರು, ಇದು ಅಲ್ಲ ಎನ್ನುತಂತಹ ಅಪ್ಪಣೆ ಮಾಡಬೇಕು. ನಾವು ಯಾವ ಕೆಲಸವನ್ನು ಪ್ರಾಣ ಪಣವನ್ನಿಟ್ಟು ಮಾಡಬೇಕಾಗಿತ್ತೋ, ಅದನ್ನು ಬೇರೆಯವರೇ ಮಾಡಿದರೆ ನಮಗೇನು ಬಾಧಕ ಎಂದು ಬಿನ್ನಯಿಸಿದನು.

ಅರ್ಥ:
ಬೆಸಸು:ಹೇಳು, ಆಜ್ಞಾಪಿಸು; ಬೇಹುದು: ಗುಪ್ತಚಾರನ ಕೆಲಸ; ನೀತಿ: ಧರ್ಮ, ನ್ಯಾಯ; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ಬೆಸುಗೆ: ಒಂದಾಗು; ತಪ್ಪದೆ: ಬಿಡದೆ; ರಾಜಧರ್ಮ: ಅರಸನು ಪಾಲಿಸಬೇಕಾದ ಧರ್ಮ; ಮುಸುಡು: ಮುಖ, ಮೊರೆ; ಕುಂದು: ಕಡಿಮೆಯಾಗು; ಖೋಡಿ: ದುರುಳ, ಕೊರತೆ; ಕುಶಲ: ಸರಿಯಾದ; ಎಸಗು: ಕೆಲಸ, ಉದ್ಯೋಗ; ಕಾರ್ಯ: ಕೆಲಸ; ಅಸು: ಪ್ರಾಣ; ಅರ್ಥ: ಪುರುಷಾರ್ಥ, ಆಶಯ; ಪರರು: ಬೇರೆಯವರು; ಎಸಗು: ಮಾಡು; ಬಾಧಕ: ಅಡ್ಡಿ, ಅಡಚಣೆ;

ಪದವಿಂಗಡಣೆ:
ಬೆಸಸ+ ಬೇಹುದು +ನೀತಿ +ಶಾಸ್ತ್ರದ
ಬೆಸುಗೆ +ತಪ್ಪದೆ +ರಾಜ+ಧರ್ಮದ
ಮುಸುಡು +ಕುಂದದೆ +ಖೋಡಿವಿಡಿಯದೆ+ ಕುಶಲರಾದವರು
ಎಸಗುವದು+ ನಾವ್+ಆವ+ ಕಾರ್ಯದೊಳ್
ಅಸುವನ್+ಇಕ್ಕಿ +ತದರ್ಥವನು +ಪರರ್
ಎಸಗಿದೊಡೆ +ನಮಗೇಕೆ +ಬಾಧಕವೆಂದನಾ +ಭೀಮ

ಅಚ್ಚರಿ:
(೧) ಪದ್ಯದ ಆದಿ ಮತ್ತು ಅಂತ್ಯ ಬ ಕಾರದಲ್ಲಿರುವುದು – ಬೆಸಸ ಬೇಹುದು, ಬಾಧಕವೆಂದನಾ ಭೀಮ

ಪದ್ಯ ೧೦: ಧರ್ಮಜನು ಯಾರನ್ನು ಕರೆದನು?

ಭೀಮ ಬಾ ಕುರುರಾಜ ಕುಲ ಚೂ
ಡಾಮಣಿಯ ತಾ ಹೋಗು ಕದನೋ
ದ್ದಾಮ ದರ್ಪನ ತಾ ನಿಜಾನ್ವಯ ಕುಮುದ ಚಂದ್ರಮನ
ತಾ ಮನೋವ್ಯಥೆ ಬೇಡ ನೃಪ ಚಿಂ
ತಾಮಣಿಯ ತಾಯೆನಲು ಕರಯುಗ
ತಾಮರಸವನು ಮುಗಿದು ಬಿನ್ನಹ ಮಾಡಿದನು ಭೀಮ (ಅರಣ್ಯ ಪರ್ವ, ೨೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭಾನುಮತಿಯ ಅಳಲನ್ನು ಕೇಳಿ, ಧರ್ಮರಾಯನು ಭೀಮನನ್ನು ಕರೆದು, ಕುರುವಂಶ ಚೂಡಾಮಣಿಯನ್ನು, ಯುದ್ಧದಲ್ಲಿ ದರ್ಪವುಳ್ಳವನನ್ನು, ಚಂದ್ರವಂಶದ ಕುಮುದಕ್ಕೆ ಚಂದ್ರನನ್ನು ಕರೆದುಕೊಂಡು ಬಾ, ಮನಸ್ಸಿನ ದುಗುಡವ ತೊರೆದು, ಶ್ರೇಷ್ಠನಾದವನನ್ನು ಕರೆದು ತಾ ಎನ್ನಲು, ಭೀಮನು ಕೈಮುಗಿದು ತನ್ನ ಮನವಿಯನ್ನು ಮುಂದಿಟ್ಟನು.

ಅರ್ಥ:
ಕುಲ: ವಂಶ; ಚೂಡಾಮಣಿ: ಶ್ರೇಷ್ಠ ವ್ಯಕ್ತಿ; ಕದನ: ಯುದ್ಧ; ಉದ್ದಾಮ: ಶ್ರೇಷ್ಠ; ಹೋಗು: ತೆರಳು; ದರ್ಪ: ಅಹಂಕಾರ; ಅನ್ವಯ: ವಂಶ; ಕುಮುದ: ಚಂದ್ರ, ಬಿಳಿಯ ನೈದಿಲೆ; ಚಂದ್ರ: ಶಶಿ; ಮನ: ಮನಸ್ಸು; ವ್ಯಥೆ: ದುಃಖ; ಬೇಡ: ತೋರೆ; ನೃಪ: ರಾಜ; ತಾ: ಕರೆದುಕೊಂಡು ಬಾ; ಕರ: ಹಸ್ತ; ಯುಗ: ಜೊತೆ, ಜೋಡಿ; ತಾಮರಸ: ಕಮಲ; ಮುಗಿ: ನಮಸ್ಕರಿಸು; ಬಿನ್ನಹ: ಮನವಿ;

ಪದವಿಂಗಡಣೆ:
ಭೀಮ+ ಬಾ +ಕುರುರಾಜ +ಕುಲ +ಚೂ
ಡಾಮಣಿಯ +ತಾ +ಹೋಗು +ಕದನ
ಉದ್ದಾಮ +ದರ್ಪನ+ ತಾ +ನಿಜಾನ್ವಯ +ಕುಮುದ +ಚಂದ್ರಮನ
ತಾ+ ಮನೋವ್ಯಥೆ +ಬೇಡ +ನೃಪ +ಚಿಂ
ತಾಮಣಿಯ +ತಾಯೆನಲು+ ಕರಯುಗ
ತಾಮರಸವನು+ ಮುಗಿದು+ ಬಿನ್ನಹ+ ಮಾಡಿದನು+ ಭೀಮ

ಅಚ್ಚರಿ:
(೧) ದುರ್ಯೋಧನನನ್ನು ಹೊಗಳಿದ ಪರಿ – ಕುರುರಾಜ ಕುಲ ಚೂಡಾಮಣಿಯ, ಕದನೋ
ದ್ದಾಮ ದರ್ಪನ, ನಿಜಾನ್ವಯ ಕುಮುದ ಚಂದ್ರಮನ

ಪದ್ಯ ೯: ಧರ್ಮಜನು ಭಾನುಮತಿಗೆ ಏನು ಹೇಳಿದನು?

ಚುಂಬಿಸಿತು ಕಡುಶೋಕ ಮಿಡಿದನು
ಕಂಬನಿಯನುಗುರಿನಲಿ ಘನಕರು
ಣಾಂಬುನಿಧಿ ಸೀಗುರಿಸಿ ಮೈಗೂಡಿರಿದ ರೋಮದಲಿ
ಹಂಬಲಿಸ ಬೇಡಕಟ ಕುರುಪತಿ
ಯೆಂಬನಾರವ ಬೊಪ್ಪನವರೇ
ನೆಂಬರೇಳೌ ತಾಯೆಯೆನುತೆತ್ತಿದನು ಭಾಮಿನಿಯ (ಅರಣ್ಯ ಪರ್ವ, ೨೧ ಸಂಧಿ, ೯ ಪದ್ಯ)

ತಾತ್ಪರ್ಯ:
ಧರ್ಮಜನನ್ನು ಗಾಢವಾದ ಶೋಕವು ಆವರಿಸಿತು, ಬೆರಳ ತುದಿಯಿಂದ ಅವನು ಕಂಬನಿಯನ್ನೊರೆಸಿಕೊಂಡನು. ಕರುಣಾ ಸಮುದ್ರನಾದ ಅವನು, ಅಯ್ಯೋ ನೀನು ನೊಂದುಕೊಳ್ಳಬೇಡ, ಇಷ್ಟಕ್ಕೂ ದುರ್ಯೋಧನನು ಯಾರು? ನಮ್ಮ ದೊಡ್ಡಪ್ಪನವರು ಏನೆಂದಾರು? ಎಂದು ಸಮಾಧಾನ ಪಡಿಸಿ ಭಾನುಮತಿಯನ್ನು ಮೇಲಕ್ಕೆತ್ತಿದನು.

ಅರ್ಥ:
ಚುಂಬಿಸು: ಮುತ್ತಿಡು; ಕಡು: ತುಂಬ; ಶೋಕ: ದುಃಖ; ಮಿಡಿ: ತವಕಿಸು; ಕಂಬನಿ: ಕಣ್ಣೀರು; ಉರುಗು: ನಖ; ಘನ: ಶ್ರೇಷ್ಠ, ಭಾರ, ದೊಡ್ಡ; ಕರುಣೆ: ದಯೆ; ಅಂಬುನಿಧಿ: ಸಾಗರ; ಸೀಗುರಿ: ಬಿರುದಿನ ಫಲಕ; ಮೈಗೂಡು: ಸೇರಿಕೋ; ರೋಮ: ಕೂದಲು; ಹಂಬಲಿಸು: ತವಕಿಸು, ಹಾತೊರೆ; ಬೇಡ: ಸಲ್ಲದು; ಅಕಟ: ಅಯ್ಯೋ; ಬೊಪ್ಪ: ತಂದೆ, ತಾತ; ಏಳು: ಮೇಲೆ ಬಾ; ತಾಯೆ: ಮಾತೆ; ಎತ್ತು: ಮೇಲೇಳಿಸು; ಭಾಮಿನಿ: ಹೆಣ್ಣು;

ಪದವಿಂಗಡಣೆ:
ಚುಂಬಿಸಿತು +ಕಡುಶೋಕ +ಮಿಡಿದನು
ಕಂಬನಿಯನ್+ಉಗುರಿನಲಿ+ ಘನ+ಕರು
ಣಾಂಬುನಿಧಿ +ಸೀಗುರಿಸಿ+ ಮೈಗೂಡಿರಿದ +ರೋಮದಲಿ
ಹಂಬಲಿಸ ಬೇಡ್+ಅಕಟ +ಕುರುಪತಿ
ಯೆಂಬನ್+ಆರವ+ ಬೊಪ್ಪನವರೇನ್
ಎಂಬರ್+ಏಳೌ +ತಾಯೆ+ಎನುತ್+ಎತ್ತಿದನು +ಭಾಮಿನಿಯ

ಅಚ್ಚರಿ:
(೧) ದುಃಖಿತನಾದನು ಎಂದು ಹೇಳಲು – ಚುಂಬಿಸಿತು ಕಡುಶೋಕ, ಮಿಡಿದನು ಕಂಬನಿಯನುಗುರಿನಲಿ

ಪದ್ಯ ೮: ಭಾನುಮತಿಯು ದ್ರೌಪದಿಯ ಬಳಿ ಏನೆಂದು ಒರಲಿದಳು?

ರಾಯರಿಗೆ ಬಿನ್ನಹದ ಮಾಡೌ
ತಾಯೆ ಕೇಳೌ ದ್ರೌಪದಿಯೆ ಹಿರಿ
ದಾಯಸವ ಬಡಿಸಿದನು ಕುರುಪತಿ ನಿನ್ನ ಮೈದುನನು
ನೋಯಿಸಲು ಶ್ರೀಗಂಧ ನಿಜಗುಣ
ದಾಯತವ ಬಿಡದಂತೆ ನೀವೇ
ಕಾಯಬೇಹುದು ಪತಿಯನೆಂದೊರಲಿದಳು ಭಾನುಮತಿ (ಅರಣ್ಯ ಪರ್ವ, ೨೧ ಸಂಧಿ, ೮ ಪದ್ಯ)

ತಾತ್ಪರ್ಯ:
ಭಾನುಮತಿಯು ದ್ರೌಪದಿಯತ್ತ ತಿರುಗಿ, ಎಲೈ ತಾಯೆ ನಿನ್ನ ರಾಯರಿಗೆ ನೀನು ನನ್ನ ಪರವಾಗಿ ಮನವಿಯನ್ನು ಮಾಡು, ನಿನ್ನ ಮೈದುನ ದುಶ್ಯಾಸನನು ನಿನ್ನನ್ನು ಬಹಳವಾಗಿ ಆಯಾಸ ಪಡಿಸಿದನು. ಶ್ರೀಗಂಧದ ಮರವು ಕತ್ತರಿಸಿ, ತೇದರೂ ಗಂಧವನ್ನೇ ಬೀರುತ್ತದೆ. ಹಾಗೆ ಸದ್ಗುಣ ಶಾಲಿಯಾದ ನೀನು ನನ್ನ ಪತಿಯನ್ನು ರಕ್ಷಿಸಬೇಕು ಎಂದು ಭಾನುಮತಿಯು ಗೋಳಿಟ್ಟಳು.

ಅರ್ಥ:
ರಾಯ: ರಾಜ; ಬಿನ್ನಹ: ಮನವಿ; ತಾಯೆ: ಮಾತೆ; ಕೇಳು: ಆಲಿಸು; ಹಿರಿ: ದೊಡ್ಡ; ಆಯಸ: ಬಳಲಿಕೆ; ಬಡಿಸು: ನೀಡು; ಮೈದುನ: ಗಂಡನ ತಮ್ಮ; ನೋವು: ಪೆಟ್ಟು; ಶ್ರೀಗಂಧ: ಚಂದನ; ಗುಣ: ನಡತೆ, ಸ್ವಭಾವ; ಆಯತ: ಉಚಿತವಾದ ಕ್ರಮ; ಬಿಡು: ತೊರೆ; ಕಾಯು: ರಕ್ಷಿಸು; ಪತಿ: ಗಂಡ; ಒರಲು: ಗೋಳಿಡು;

ಪದವಿಂಗಡಣೆ:
ರಾಯರಿಗೆ +ಬಿನ್ನಹದ +ಮಾಡೌ
ತಾಯೆ+ ಕೇಳೌ +ದ್ರೌಪದಿಯೆ +ಹಿರಿದ್
ಆಯಸವ +ಬಡಿಸಿದನು +ಕುರುಪತಿ+ ನಿನ್ನ +ಮೈದುನನು
ನೋಯಿಸಲು +ಶ್ರೀಗಂಧ +ನಿಜಗುಣದ್
ಆಯತವ +ಬಿಡದಂತೆ +ನೀವೇ
ಕಾಯಬೇಹುದು +ಪತಿಯನೆಂದ್+ಒರಲಿದಳು +ಭಾನುಮತಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೋಯಿಸಲು ಶ್ರೀಗಂಧ ನಿಜಗುಣದಾಯತವ ಬಿಡದಂತೆ

ಪದ್ಯ ೭: ಭಾನುಮತಿಯು ಹೇಗೆ ಗೋಳಿಟ್ಟಳು?

ಖಳರು ಕೌರವರಿಂದು ಸಜ್ಜನ
ಕುಲ ಶಿರೋಮಣಿ ನೀನು ಕರುಣಾ
ಜಲಧಿ ನೀನಪರಾಧಿಗಳು ನಾವಹೆವು ಜಗವರಿಯೆ
ಹುಳಿಗೆ ಹಾಲಳುಕಿದರೆ ಹಾಲಿನ
ಜಲಧಿ ಕೆಡುವುದೆ ಜೀಯ ತನ್ನವ
ರೆಳಸಿಕೊಂಡರು ಕಾಯಬೇಕೆಂದೊರಲಿದಳು ತರಳೆ (ಅರಣ್ಯ ಪರ್ವ, ೨೧ ಸಂಧಿ, ೭ ಪದ್ಯ)

ತಾತ್ಪರ್ಯ:
ಕೌರವರು ದುಷ್ಟರು, ನೀನು ಸಜ್ಜನ ಕುಲದ ಶಿರೋಮಣಿ, ನೀನು ಕರುಣೆಯ ಸಾಗರ, ನಾವು ಪಾಪಿಗಳೆಂದು ಜಗತ್ತು ತಿಳಿದಿದೆ, ಸ್ವಲ್ಪ ಹಾಲು ಹುಳಿಗೆ ಹೆದರಿದರೆ, ಕ್ಷೀರಸಮುದ್ರವು ಬೆದರುವುದೇ? ನನ್ನವರು ಬಯಸಿ, ಈ ದುರ್ಗತಿಯನ್ನು ತಂದುಕೊಂಡರು. ನೀನೇ ನಮ್ಮನ್ನು ಕಾಪಾಡಬೇಕು, ಎಂದು ಭಾನುಮತಿಯು ಅಳಲಿದಳು

ಅರ್ಥ:
ಖಳ: ದುಷ್ಟ; ಇಂದು: ಚಂದ್ರ; ಸಜ್ಜನ: ಒಳ್ಳೆಯ ನಡತೆಯುಳ್ಳವ; ಕುಲ: ವಂಶ; ಶಿರೋಮಣಿ: ಶ್ರೇಷ್ಠ; ಕರುಣೆ: ದಯೆ; ಜಲಧಿ: ಸಾಗರ; ಅಪರಾಧಿ: ತಪ್ಪುಮಾಡಿದವ; ಜಗ: ಜಗತ್ತು; ಅರಿ: ತಿಳಿ; ಹುಳಿ: ಆಮ್ಲತ್ವ, ಷಡ್ರಸಗಳಲ್ಲಿ ಒಂದು; ಹಾಲು: ಕ್ಷೀರ; ಅಳುಕು: ಹೆದರು; ಹಾಲಿನ ಜಲಧಿ: ಕ್ಷೀರಸಾಗರ; ಕೆಡು: ಹಾಳು; ಜೀಯ: ಒಡೆಯ; ಕಾಯು: ರಕ್ಷಿಸು; ಒರಲು: ಅರಚು, ಗೋಳಿಡು; ತರಳೆ: ಹೆಣ್ಣು; ಎಳಸು: ಸೆಳೆಯಿಸು;

ಪದವಿಂಗಡಣೆ:
ಖಳರು +ಕೌರವರ್+ಇಂದು +ಸಜ್ಜನ
ಕುಲ +ಶಿರೋಮಣಿ+ ನೀನು +ಕರುಣಾ
ಜಲಧಿ +ನೀನ್+ಅಪರಾಧಿಗಳು +ನಾವಹೆವು +ಜಗವ್+ಅರಿಯೆ
ಹುಳಿಗೆ +ಹಾಲ್+ಅಳುಕಿದರೆ+ ಹಾಲಿನ
ಜಲಧಿ +ಕೆಡುವುದೆ +ಜೀಯ ತನ್ನವರ್
ಎಳಸಿಕೊಂಡರು+ ಕಾಯಬೇಕೆಂದ್+ಒರಲಿದಳು +ತರಳೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹುಳಿಗೆ ಹಾಲಳುಕಿದರೆ ಹಾಲಿನಜಲಧಿ ಕೆಡುವುದೆ
(೨) ಧರ್ಮಜನನ್ನು ಹೊಗಳಿದ ಪರಿ – ಇಂದು ಸಜ್ಜನ ಕುಲ ಶಿರೋಮಣಿ, ಕರುಣಾ ಜಲಧಿ

ಪದ್ಯ ೬: ಭಾನುಮತಿ ಧರ್ಮಜನ ಪಾದಪೂಜೆಯನ್ನು ಹೇಗೆ ಮಾಡಿದಳು?

ನಾದಿದಳು ನೃಪನಂಘ್ರಿಯನು ನಯ
ನೋದಕದ ಧಾರೆಯಲಿ ಭಾಳವ
ತೇದು ತಿಲಕದ ಗಂಧದಲಿ ಬೈತಲೆಯ ಮುತ್ತಿನಲಿ
ಆದರಿಸಿ ನವ ಕುಸುಮದಲಿ ಘನ
ರೋದನದ ಮಂತ್ರದಲಿ ನೃಪ
ಪಾದಪೂಜೆಯ ರಚಿಸುವವೊಲೊಪ್ಪಿದಳು ಭಾನುಮತಿ (ಅರಣ್ಯ ಪರ್ವ, ೨೧ ಸಂಧಿ, ೬ ಪದ್ಯ)

ತಾತ್ಪರ್ಯ:
ಧರ್ಮಜನ ಪಾದಗಳನ್ನು ಭಾನುಮತಿಯು ತನ್ನ ಕಣ್ಣೀರಿನ ಧಾರೆಯಿಂದ ತೋಯಿಸಿದಳು. ಹಣೆಯನ್ನು ಅವನ ಪಾದಕ್ಕೆ ತಾಗಿಸಿ ತೇದಳು. ಬೈತಲೆಯ ಮುತ್ತು, ಹಣೆಯ ಚಂದನ ತಿಲಕಗಳಿಂದ ಅಲಂಕರಿಸಿ, ಮುಡಿದ ಹೂವನ್ನು ಸಮರ್ಪಿಸಿ, ಅಳುವೇ ಮಂತ್ರವನ್ನಾಗಿಸಿ ಭಾನುಮತಿಯು ಧರ್ಮಜನ ಪಾದಪೂಜೆ ಮಾಡುವಂತೆ ತೋರಿದಳು.

ಅರ್ಥ:
ನಾದು: ತೋಯಿಸು, ಒಲವು; ಅಂಘ್ರಿ: ಪಾದ; ನಯನ: ಕಣ್ಣು; ಉದಕ: ನೀರು; ಧಾರೆ: ಪ್ರವಾಹ; ಭಾಳ: ಹಣೆ; ತೇಯು: ಉಜ್ಜು, ಸವೆಯಿಸು; ತಿಲಕ: ಹಣೆಯಲ್ಲಿಡುವ ಬೊಟ್ಟು; ಗಂಧ: ಚಂದನ; ಬೈತಲೆ: ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ; ಮುತ್ತು: ಶ್ರೇಷ್ಠವಾದ ಮಣಿ; ಆದರಿಸು: ಗೌರವಿಸು; ನವ: ಹೊಸ; ಕುಸುಮ: ಹೂವ; ಘನ: ಜೋರಾದ; ರೋದನ: ಅಳು; ಮಂತ್ರ: ವಿಚಾರ; ನೃಪ: ರಾಜ; ಪಾದಪೂಜೆ: ಚರಣಾರಾಧನೆ; ರಚಿಸು: ನಿರ್ಮಿಸು; ಒಪ್ಪು: ಸಮ್ಮತಿಸು;

ಪದವಿಂಗಡಣೆ:
ನಾದಿದಳು +ನೃಪನ್+ಅಂಘ್ರಿಯನು +ನಯನ
ಉದಕದ +ಧಾರೆಯಲಿ +ಭಾಳವ
ತೇದು +ತಿಲಕದ +ಗಂಧದಲಿ +ಬೈತಲೆಯ +ಮುತ್ತಿನಲಿ
ಆದರಿಸಿ +ನವ +ಕುಸುಮದಲಿ +ಘನ
ರೋದನದ +ಮಂತ್ರದಲಿ+ ನೃಪ
ಪಾದಪೂಜೆಯ +ರಚಿಸುವವೊಲ್+ಒಪ್ಪಿದಳು +ಭಾನುಮತಿ

ಅಚ್ಚರಿ:
(೧) ಭಾನುಮತಿಯ ರೋದನವನ್ನು ಪಾದಪೂಜೆಗೆ ಹೋಲಿಸುವ ಕವಿಯ ಕಲ್ಪನೆ