ಪದ್ಯ ೫೭: ಗಂಧರ್ವರು ಏನೆಂದು ಹೇಳಿದರು?

ಮುಟ್ಟದಿರಿ ಪರಿವಾರ ಕೈದುವ
ಕೊಟ್ಟು ಹೋಗಲಿ ದೊರೆಗಳಾದರ
ಬಿಟ್ಟವರಿಗಮರೇಂದ್ರನಾಣೆಯೆನುತ್ತ ಸಾರಿದರು
ಕೆಟ್ಟುದೀ ಕುರುಪತಿಯ ದಳ ಜಗ
ಜಟ್ಟಿಗಳು ಕರ್ಣಾದಿಗಳು ಮುಸು
ಕಿಟ್ಟು ಜಾರಿತು ಕಂಡದೆಸೆಗವನೀಶ ಕೇಳೆಂದ (ಅರಣ್ಯ ಪರ್ವ, ೨೦ ಸಂಧಿ, ೫೭ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಶತ್ರುಗಳ ಪರಿವಾರದವರನ್ನು ಮುಟ್ಟದಿರಿ, ಅವರು ಆಯುಧವನ್ನು ನೀಡಿ ಹೋಗಲಿ, ರಾಜವಂಶದವರನ್ನು ಬಿಡಲು ಹೋಗಬೇಡಿ, ನಿಮ್ಮ ಮೇಲೆ ಇಂದ್ರನ ಆಣೆ ಎಂದು ಗಂಧರ್ವರು ಸಾರಿದರು. ಕುರುಪತಿಯ ಸೈನ್ಯವು ಹಾಳಾಯಿತು, ಮಹಾ ಪರಾಕ್ರಮಿಗಳಾದ ಕರ್ಣಾದಿಗಳು ತಲೆಗೆ ಮುಸುಕು ಹಾಕಿಕೊಂಡು ದಿಕ್ಕು ದಿಕ್ಕುಗಳಲ್ಲಿ ಓಡಿ ಹೋದರು.

ಅರ್ಥ:
ಮುಟ್ಟು: ತಾಗು; ಪರಿವಾರ: ವಂಶ; ಕೈದು: ಕತ್ತಿ; ಕೊಟ್ಟು: ನೀಡಿ; ಹೋಗು: ತೆರಳು; ದೊರೆ: ರಾಜ; ಬಿಟ್ಟು: ತೆರಳು; ಅಮರೇಂದ್ರ: ಇಂದ್ರ; ಆಣೆ: ಪ್ರಮಾಣ; ಸಾರು: ಹೇಳು; ಕೆಟ್ಟು: ಹಾಳು; ದಳ: ಸೈನ್ಯ; ಜಗಜಟ್ಟಿ: ಪರಾಕ್ರಮಿ; ಆದಿ: ಮುಂತಾದ; ಮುಸುಕು: ಹೊದಿಕೆ; ಯೋನಿ; ಜಾರು: ಬೀಳು; ದೆಸೆ: ದಿಕ್ಕು; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಮುಟ್ಟದಿರಿ +ಪರಿವಾರ +ಕೈದುವ
ಕೊಟ್ಟು +ಹೋಗಲಿ +ದೊರೆಗಳಾದರ
ಬಿಟ್ಟವರಿಗ್+ಅಮರೇಂದ್ರನ್+ಆಣೆ+ಎನುತ್ತ +ಸಾರಿದರು
ಕೆಟ್ಟುದೀ +ಕುರುಪತಿಯ+ ದಳ +ಜಗ
ಜಟ್ಟಿಗಳು +ಕರ್ಣಾದಿಗಳು +ಮುಸು
ಕಿಟ್ಟು +ಜಾರಿತು+ ಕಂಡ+ ದೆಸೆಗ್+ಅವನೀಶ +ಕೇಳೆಂದ

ಅಚ್ಚರಿ:
(೧) ಕೌರವರ ಸೋಲಿನ ವಿವರಣೆ – ಕೆಟ್ಟುದೀ ಕುರುಪತಿಯ ದಳ ಜಗಜಟ್ಟಿಗಳು ಕರ್ಣಾದಿಗಳು ಮುಸುಕಿಟ್ಟು ಜಾರಿತು ಕಂಡದೆಸೆಗ್

ನಿಮ್ಮ ಟಿಪ್ಪಣಿ ಬರೆಯಿರಿ