ಪದ್ಯ ೫೫: ದೇವತೆಗಳ ಸೈನ್ಯ್ ಕೌರವರನ್ನು ಹೇಗೆ ಪರಾಭವಗೊಳಿಸಿತು?

ಇಟ್ಟಣಿಸಿದರು ಮುಟ್ಟಿ ರಾಯನ
ನಟ್ಟಲೀಸದೆ ಕುರುಚತುರ್ಬಲ
ಹೊಟ್ಟುಗಳ ತೂರಿದರು ಹಿಡಿದರು ಕೌರವಾನುಜರ
ಮುಟ್ಟಿ ಬಂದುದು ಕೇಡು ರಾಯನ
ನಟ್ಟಿಹಿಡಿದುದು ದಿವಿಜ ಬಲ ಜಗ
ಜಟ್ಟಿ ಚಿತ್ರಾಂಗದನು ನೋಡಿದ ಕೌರವೇಶ್ವರನ (ಅರಣ್ಯ ಪರ್ವ, ೨೦ ಸಂಧಿ, ೫೫ ಪದ್ಯ)

ತಾತ್ಪರ್ಯ:
ಗಂಧರ್ವರು ಕೌರವರನ್ನು ಮುತ್ತಿ, ಕೌರವ ಬಲವನ್ನು ಹೊಟ್ಟಿನಂತೆ ತೂರಿ, ಕೌರವನ ತಮ್ಮಂದಿರನ್ನು ಹಿಡಿದರು. ಗಂಧರ್ವ ಸೈನ್ಯವು ಕೌರವನನ್ನು ಅಟ್ಟಿಸಿಕೊಂಡು ಹೋಗಿ ಹಿಡಿಯಿತು. ಚಿತ್ರಸೇನನು ದುರ್ಯೋಧನನನ್ನು ನೋಡಿದನು.

ಅರ್ಥ:
ಇಟ್ಟಣಿಸು: ದಟ್ಟವಾಗು, ಒತ್ತು; ಮುಟ್ಟು: ತಾಗು; ರಾಯ: ರಾಜ; ಚತುರ್ಬಲ: ಚತುರಂಗ ಸೈನ್ಯ; ಹೊಟ್ಟು: ಪುಡಿ; ತೂರು: ಎರಚು; ಹಿಡಿ: ಬಂಧಿಸು; ಅನುಜ: ತಮ್ಮ; ಬಂದು: ಆಗಮಿಸು; ಕೇಡು: ಅಪದೆಸೆ; ರಾಯ: ರಾಜ; ಅಟ್ಟಿಹಿಡಿ: ಹಿಂಬಾಲಿಸಿಕೊಂಡು ಬಂಧಿಸು; ದಿವಿಜ: ದೇವತೆ; ಬಲ: ಸೈನ್ಯ; ಜಗಜಟ್ಟಿ: ಪರಾಕ್ರಮಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಇಟ್ಟಣಿಸಿದರು +ಮುಟ್ಟಿ +ರಾಯನನ್
ಅಟ್ಟಲೀಸದೆ+ ಕುರು+ಚತುರ್ಬಲ
ಹೊಟ್ಟುಗಳ+ ತೂರಿದರು+ ಹಿಡಿದರು+ ಕೌರವ+ಅನುಜರ
ಮುಟ್ಟಿ +ಬಂದುದು +ಕೇಡು +ರಾಯನನ್
ಅಟ್ಟಿ+ಹಿಡಿದುದು +ದಿವಿಜ +ಬಲ +ಜಗ
ಜಟ್ಟಿ +ಚಿತ್ರಾಂಗದನು+ ನೋಡಿದ +ಕೌರವೇಶ್ವರನ

ಅಚ್ಚರಿ:
(೧) ಕೌರವಾನುಜ, ಕೌರವೇಶ್ವರ – ಪದಗಳ ಬಳಕೆ
(೨) ರಾಯನ – ೧, ೪ ಸಾಲಿನ ಕೊನೆಯ ಪದ

ನಿಮ್ಮ ಟಿಪ್ಪಣಿ ಬರೆಯಿರಿ