ಪದ್ಯ ೫೪: ಚಿತ್ರಸೇನನು ಯಾರನ್ನು ಬಂಧಿಸಿದನು?

ಮುರಿದ ಬಲಗರಿಗಟ್ಟಿ ನೋಡಿತು
ಧರಣಿಪನ ಮುಂಗುಡಿಯಲೇರಿತು
ತುರಗ ಗಜ ರಥ ಹರಿಗೆ ಸಬಳ ಮುಸುಂಡಿ ಪರಿಘದಲಿ
ಉರುಬಿದನು ಖಚರೇಂದ್ರ ಕೌರವ
ರರಸನನು ಶಕುನಿ ಸೈಂಧವ
ರಿರದೆ ಹಿಂಗಿತು ಕೌರವೇಶ್ವರ ಸಿಲುಕಿದನು ಹಗೆಗೆ (ಅರಣ್ಯ ಪರ್ವ, ೨೦ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭಂಗಗೊಂಡ ಕುರುಚತುರ್ಬಲವು ಮತ್ತೆ ಕೂಡಿ ನಾನಾ ವಿಧವಾದ ಆಯುಧಗಳಿಂದ ಚಿತ್ರಸೇನನನ್ನು ಎದುರಿಸಿತು. ಗಂಧರ್ವಪತಿಯು ಕೌರವನ ಕಡೆಗೆ ಮುಂದಕ್ಕೆ ಬಂದನು. ಶಕುನಿ ಜಯದ್ರಥರು ಹಿಂದಕ್ಕೆ ಸರಿದರು. ದುರ್ಯೋಧನನು ಚಿತ್ರಸೇನನಿಗೆ ಸೆರೆ ಸಿಕ್ಕನು.

ಅರ್ಥ:
ಮುರಿ: ಸೀಳು; ಅರಿ: ವೈರಿ, ಶತ್ರು; ಬಲ: ಸೈನ್ಯ; ಕಟ್ಟು: ಬಂಧಿಸು; ನೋಡು: ವೀಕ್ಷಿಸು; ಧರಣಿಪ: ರಾಜ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ತುರಗ: ಕುದುರೆ, ಗಜ: ಆನೆ; ರಥ: ಬಂಡಿ; ಹರಿ: ಚಲಿಸು; ಸಬಳ: ಈಟಿ, ಭರ್ಜಿ; ಮುಸುಂಡಿ: ಒಂದು ಆಯುಧ; ಪರಿಘ: ಗದೆ; ಉರುಬು: ಅತಿಶಯವಾದ ವೇಗ; ಖಚರೇಂದ್ರ: ಗಂಧರ್ವರ ಒಡೆಯ (ಚಿತ್ರಸೇನ); ಅರಸ: ರಾಜ; ಹಿಂಗು: ಬತ್ತುಹೋಗು; ಸಿಲುಕು: ಸೆರೆಯಾದ ವಸ್ತು; ಹಗೆ: ವೈರಿ, ಶತ್ರು;

ಪದವಿಂಗಡಣೆ:
ಮುರಿದ +ಬಲಗ್+ಅರಿ+ಕಟ್ಟಿ +ನೋಡಿತು
ಧರಣಿಪನ +ಮುಂಗುಡಿಯಲ್+ಏರಿತು
ತುರಗ+ ಗಜ+ ರಥ+ ಹರಿಗೆ +ಸಬಳ +ಮುಸುಂಡಿ +ಪರಿಘದಲಿ
ಉರುಬಿದನು +ಖಚರೇಂದ್ರ +ಕೌರವರ್
ಅರಸನನು+ ಶಕುನಿ+ ಸೈಂಧವರ್
ಇರದೆ+ ಹಿಂಗಿತು +ಕೌರವೇಶ್ವರ +ಸಿಲುಕಿದನು+ ಹಗೆಗೆ

ಅಚ್ಚರಿ:
(೧) ಆಯುಧಗಳ ಹೆಸರು – ಸಬಳ, ಮುಸುಂಡಿ, ಪರಿಘ;
(೨) ಧರಣಿಪ, ಕೌರವರರಸ, ಕೌರವೇಶವರ – ದುರ್ಯೋಧನನನ್ನು ಕರೆದ ಪರಿ

ನಿಮ್ಮ ಟಿಪ್ಪಣಿ ಬರೆಯಿರಿ