ಪದ್ಯ ೫೩: ಚಿತ್ರಸೇನನ ಯುದ್ಧದ ಪ್ರಹಾರ ಹೇಗಿತ್ತು?

ಇತ್ತ ಕೌರವರಾಯ ರಥವನು
ಎತ್ತಿ ಬಿಟ್ಟನು ಖಚರರಾಯನು
ಸುತ್ತಣಿನ ಚತುರಂಗ ಸೇನೆಯನಸಮಬಾಣದಲಿ
ತೆತ್ತಿಗರ ಕರೆ ನಿನಗೆ ನೂಕದೆ
ನುತ್ತ ಶರಸಂಧಾನ ಚಯದಲಿ
ಮೆತ್ತಿದನು ಮೊನೆಗಣೆಗಳಲಿ ಖಚರೇಂದ್ರ ಕೈಮರೆಯ (ಅರಣ್ಯ ಪರ್ವ, ೨೦ ಸಂಧಿ, ೫೩ ಪದ್ಯ)

ತಾತ್ಪರ್ಯ:
ಚಿತ್ರಸೇನನು ಕೌರವನ ರಥವನ್ನು ಹಾರಿ ಹೋಗುವಂತೆ ಹೊಡೆದು, ಸುತ್ತಲಿದ್ದ ಚತುರಂಗ ಸೈನ್ಯವನ್ನು ಇದಿರಿಲ್ಲದ ಬಾಣಗಳಿಂದ ಸಂಹರಿಸಿದನು. ನಿನ್ನನ್ನು ರಕ್ಷಿಸುವವರನ್ನು ಕರೆ ನಿನ್ನ ಕೈಲಾಗದು ಎನ್ನುತ್ತಾ ಬಾಣಗಳ ಗುಂಪಿನಿಂದ ಬೆರಗಾಗುವಂತೆ ಪ್ರಹಾರ ಮಾಡಿದನು.

ಅರ್ಥ:
ರಾಯ: ರಾಜ; ರಥ: ಬಂಡಿ; ಎತ್ತು: ಮೇಲೆ ತರು; ಖಚರ: ಗಂಧರ್ವ; ಸುತ್ತಣ: ಅಕ್ಕ ಪಕ್ಕ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಸೇನೆ: ಸೈನ್ಯ; ಅಸಮ: ಅಸದೃಶವಾದ; ಬಾಣ: ಸರಳು; ತೆತ್ತಿಗ: ನಂಟ, ಬಂಧು; ಕರೆ: ಕೂಗು; ನೂಕು: ತಳ್ಳು; ಶರ: ಬಾಣ; ಸಂಧಾನ: ಸೇರಿಸುವುದು, ಹೊಂದಿಸುವುದು; ಚಯ: ಮೂಹ, ರಾಶಿ; ಮೆತ್ತು: ಬಳಿ, ಲೇಪಿಸು; ಮೊನೆ: ತುದಿ, ಕೊನೆ; ಖಚರ: ಗಂಧರ್ವ; ಕೈ ಮರೆ: ಕೈ ಅಡ್ಡವಾಗಿಡು;

ಪದವಿಂಗಡಣೆ:
ಇತ್ತ +ಕೌರವರಾಯ +ರಥವನು
ಎತ್ತಿ +ಬಿಟ್ಟನು+ ಖಚರರಾಯನು
ಸುತ್ತಣಿನ+ ಚತುರಂಗ +ಸೇನೆಯನ್+ಅಸಮ+ಬಾಣದಲಿ
ತೆತ್ತಿಗರ+ ಕರೆ+ ನಿನಗೆ +ನೂಕದ್
ಎನುತ್ತ +ಶರ+ಸಂಧಾನ +ಚಯದಲಿ
ಮೆತ್ತಿದನು +ಮೊನೆಗಣೆಗಳಲಿ+ ಖಚರೇಂದ್ರ +ಕೈಮರೆಯ

ಅಚ್ಚರಿ:
(೧) ಕೌರವರಾಯ, ಖಚರರಾಯ – ದುರ್ಯೋಧನ ಮತ್ತು ಚಿತ್ರಸೇನನನ್ನು ಕರೆದ ಪರಿ
(೨) ಚಿತ್ರಸೇನನನ್ನು ಖಚರರಾಯ, ಖಚರೇಂದ್ರ ಎಂದು ಕರೆದಿರುವುದು

ನಿಮ್ಮ ಟಿಪ್ಪಣಿ ಬರೆಯಿರಿ