ಪದ್ಯ ೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಬೇಡಿದಳು?

ನೀಲಕಂಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು
ಏಳು ದಿಟವೈಯೆಮ್ಮ ನುಡಿಯನು
ಪಾಲಿಸೈ ಸಂಕಲ್ಪವಳಿದೊಡೆ
ಹಾಳು ಹೊರುವುದು ಕೃಷ್ಣಮೈದೋರೆಂದಳಿಂದು ಮುಖಿ (ಅರಣ್ಯ ಪರ್ವ, ೧೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನ ಹಣೆಗಣ್ಣಿನ ಬೆಂಕಿಗೆ ಆಹುತಿಯಾದ ಮನ್ಮಥನ ಯಮನ ದಾರಿಯನ್ನು ಪಾಂಡವರು ಹಿಡಿಯಲಿದ್ದಾರೆ. ಹೇ ಕೃಷ್ಣ ನೀನು ಏಳು, ನನ್ನ ಮಾತು ನಿಜ. ನಮ್ಮ ಭಾಷೆಯನ್ನು ನಡೆಸಿಕೊಡು. ಸಂಕಲ್ಪ ಭಂಗವಾದರೆ ನಾವು ಹಾಳಾದಂತೆ. ಕೃಷ್ಣ ಬೇಗ ಬಾ ಎಂದು ಬೇಡಿದಳು.

ಅರ್ಥ:
ಕಂಠ: ಕೊರಳು; ನೀಲಕಂಠ: ಶಿವ; ನೇತ್ರ: ಕಣ್ಣು; ವಹ್ನಿ: ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಆಹುತಿ: ಬಲಿ; ಮುಗ್ಗು: ಬಾಗು, ಮಣಿ; ಕಾಲ: ಸಮಯ; ಕಾಮ: ಮನ್ಮಥ; ಪಥ: ದಾರಿ; ಪಡೆ: ದೊರಕು; ನಂದನ: ಮಕ್ಕಳು; ಏಳು: ಎದ್ದೇಳು; ದಿಟ: ಸತ್ಯ; ನುಡಿ: ಮಾತು; ಪಾಲಿಸು: ರಕ್ಷಿಸು; ಸಂಕಲ್ಪ: ನಿರ್ಧಾರ, ನಿರ್ಣಯ; ಅಳಿ: ನಾಶ; ಹಾಳು: ನಾಶ; ಮೈದೋರು: ಕಾಣಿಸಿಕೋ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ನೀಲಕಂಠನ+ ನೇತ್ರ+ವಹ್ನಿ
ಜ್ವಾಲೆಗ್+ಆಹುತಿಯಾಗಿ +ಮುಗ್ಗಿದ
ಕಾಲ +ಕಾಮನ +ಪಥವ +ಪಡೆವರು+ ಪಾಂಡುನಂದನರು
ಏಳು +ದಿಟವೈ+ಎಮ್ಮ +ನುಡಿಯನು
ಪಾಲಿಸೈ +ಸಂಕಲ್ಪವ್+ಅಳಿದೊಡೆ
ಹಾಳು +ಹೊರುವುದು +ಕೃಷ್ಣ+ಮೈದೋರೆಂದಳ್+ಇಂದುಮುಖಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಕಂಠನ ನೇತ್ರವಹ್ನಿಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು

ನಿಮ್ಮ ಟಿಪ್ಪಣಿ ಬರೆಯಿರಿ