ಪದ್ಯ ೨೮: ಅಂಬರೀಷನು ಕೃಷ್ಣನನ್ನು ಹೇಗೆ ಬೇಡಿದನು?

ಮುನ್ನವೇ ಮುನಿದಂಬರೀಷನ
ಬೆನ್ನಹತ್ತಲು ಹರನ ನೇತ್ರದ
ವಹ್ನಿಯೊಳಗುದಯಿಸಿದ ಕೆಂಗಿಡಿ ಸುಡಲು ಕಂಗೆಡುತ
ಉನ್ನತೋನ್ನತ ಕೃಷ್ಣರಕ್ಷಿಸು
ಪನ್ನಗಾರಿಧ್ವಜನೆ ರಕ್ಷಿಸು
ಅನ್ಯಗತಿಯಾರೆನುತ ಹಲುಬಿದನಂದು ಭೂಪಾಲ (ಅರಣ್ಯ ಪರ್ವ, ೧೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಹಿಂದೆ ಮಹಾರಾಜ ಅಂಬರೀಷನ ಮೇಲೆ ಕೋಪಗೊಂಡ ದೂರ್ವಾಸನು ಅವನನ್ನು ಶಪಿಸಿ, ಆ ಕೋಪದ ಕೆಂಗಿಡಿಯು ಅಂಬರೀಷನನ್ನು ಸುಡಲು ಹೋಯಿತು. ಆಗ ಅವನು ಪರಾತ್ಪರನಾದ ಕೃಷ್ಣನೇ ರಕ್ಷಿಸು, ಗರುಡಧ್ವಜನೇ ರಕ್ಷಿಸು, ನೀನಲ್ಲದೆ ನನಗಿನ್ನಾರು ಗತಿ ಎಂದು ಬೇಡಿದನು.

ಅರ್ಥ:
ಮುನ್ನ: ಹಿಂದೆ; ಮುನಿ: ಋಷಿ; ಬೆನ್ನಹತ್ತು: ಹಿಂಬಾಲಿಸು; ಹರ: ಈಶ್ವರ; ನೇತ್ರ: ಕಣ್ಣು; ವಹ್ನಿ: ಬೆಂಕಿ; ಉದಯಿಸು: ಹುಟ್ಟು; ಕೆಂಗಿಡಿ: ಬೆಂಕಿಯ ಕಿಡಿ; ಸುಡು: ದಹಿಸು; ಕಂಗೆಡು: ದಿಕ್ಕುಕಾಣದಾಗು, ಗಾಬರಿಯಾಗು; ಉನ್ನತ: ಹೆಚ್ಚಿನ; ರಕ್ಷಿಸು: ಕಾಪಾಡು; ಪನ್ನಗ: ಹಾವು; ಅರಿ: ವೈರಿ; ಧ್ವಜ: ಬಾವುಟ; ಅನ್ಯ: ಬೇರೆ; ಗತಿ: ದಾರಿ, ದಿಕ್ಕು; ಹಲುಬು: ಬೇಡು; ಭೂಪಾಲ: ರಾಜ;

ಪದವಿಂಗಡಣೆ:
ಮುನ್ನವೇ +ಮುನಿದ್+ಅಂಬರೀಷನ
ಬೆನ್ನಹತ್ತಲು +ಹರನ+ ನೇತ್ರದ
ವಹ್ನಿಯೊಳಗ್+ಉದಯಿಸಿದ +ಕೆಂಗಿಡಿ +ಸುಡಲು +ಕಂಗೆಡುತ
ಉನ್ನತೋನ್ನತ +ಕೃಷ್ಣ+ರಕ್ಷಿಸು
ಪನ್ನಗ+ಅರಿ+ಧ್ವಜನೆ +ರಕ್ಷಿಸು
ಅನ್ಯಗತಿ+ಆರೆನುತ +ಹಲುಬಿದನ್+ಅಂದು +ಭೂಪಾಲ

ಅಚ್ಚರಿ:
(೧) ಗರುಡ ಎಂದು ಹೇಳಲು ಪನ್ನಗಾರಿ ಪದದ ಬಳಕೆ
(೨) ಕೃಷ್ಣ, ಪನ್ನಗಾರಿಧ್ವಜನೆ – ಕೃಷ್ಣನನ್ನು ಕರೆದ ಪರಿ

ಪದ್ಯ ೨೭: ದ್ರೌಪದಿಯು ಕೃಷ್ಣನಲ್ಲಿ ಹೇಗೆ ಮೊರೆಯಿಟ್ಟಳು?

ಅರಸುವೆನೆ ಪರಿಪೂರ್ಣ ಕೇಳೆಂ
ದರುಹುವೆನೆ ಸರ್ವಜ್ಞ ಸಾಕಿ
ನ್ನರಸಿ ಮಾಡುವುದೇನು ತಾಯ್ ನೀನಾವು ಶಿಶುಗಳಲೆ
ಕುರುಹುದೋರೈ ಕೃಷ್ಣ ಕರುಣವ
ಕರೆದು ಕಳೆಯೈ ಭಕ್ತರಾರ್ತಿಯ
ಹೊರೆವ ಹೊಂಪುಳ್ಳದಟರಾರೆಂದಳು ಸರೋಜಮುಖಿ (ಅರಣ್ಯ ಪರ್ವ, ೧೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ನೀನೆಲ್ಲಿರುವೆಯೆಂದು ಹುಡುಕಲಿ? ನೀನು ಎಲ್ಲದರಲ್ಲೂ ವ್ಯಾಪಿಸಿರುವೆ. ನನ್ನ ಮೊರೆಯನ್ನು ಕೇಳೆಂದು ಪ್ರಾರ್ಥಿಸಲೇ? ನೀನು ಎಲ್ಲವನ್ನೂ ತಿಳಿದಿರುವೆ, ನಿನ್ನನ್ನು ಹುಡುಕಿ ಮಾಡುವುದಾದರೂ ಏನು? ನೀನು ತಾಯಿ ನಾವು ಮಕ್ಕಳು. ಕೃಷ್ಣಾ ನಿನ್ನ ಗುರುತನ್ನು ತೋರಿಸು. ಕರುಣೆಯ ಮಳೆಗರೆದು ಭಕ್ತರ ಕಷ್ಟಗಳನ್ನು ಪರಿಹರಿಸು. ನಮ್ಮನ್ನು ರಕ್ಷಿಸುವ ಸಮರ್ಥನು ನೀನಲ್ಲದೆ ಇನ್ನಾರಿದ್ದಾರೆ ಎಂದು ದ್ರೌಪದಿಯು ಮೊರೆಯಿಟ್ಟಳು.

ಅರ್ಥ:
ಅರಸು: ಹುಡುಕು; ಪರಿಪೂರ್ಣ: ತುಂಬ, ಪೂರ್ತಿಯಾದ; ಕೇಳು: ಆಲಿಸು; ಅರುಹು: ತಿಳಿಸು, ಹೇಳು; ಸರ್ವಜ್ಞ: ಎಲ್ಲಾ ತಿಳಿದವ; ತಾಯಿ: ಮಾತೆ; ಶಿಶು: ಮಕ್ಕಳು; ಕುರುಹು: ಚಿಹ್ನೆ, ಗುರುತು; ತೋರು: ಗೋಚರಿಸು; ಕರುಣ: ದಯೆ; ಕರೆ: ಬರೆಮಾಡು; ಕಳೆ: ಬೀಡು, ತೊರೆ; ಭಕ್ತ: ಆರಾಧಕ; ಆರ್ತಿ: ವ್ಯಥೆ, ಚಿಂತೆ; ಹೊರೆ: ಭಾರ; ಹೊಂಪು: ಹೆಚ್ಚಳ, ಮೇಲ್ಮೆ; ಸರೋಜಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ)

ಪದವಿಂಗಡಣೆ:
ಅರಸುವೆನೆ+ ಪರಿಪೂರ್ಣ +ಕೇಳೆಂದ್
ಅರುಹುವೆನೆ+ ಸರ್ವಜ್ಞ+ ಸಾಕಿ
ನ್ನರಸಿ +ಮಾಡುವುದೇನು +ತಾಯ್ +ನೀನ್+ಆವು +ಶಿಶುಗಳಲೆ
ಕುರುಹುದೋರೈ +ಕೃಷ್ಣ +ಕರುಣವ
ಕರೆದು+ ಕಳೆಯೈ +ಭಕ್ತರಾರ್ತಿಯ
ಹೊರೆವ +ಹೊಂಪುಳ್ಳದಟರಾರ್+ಎಂದಳು +ಸರೋಜಮುಖಿ

ಅಚ್ಚರಿ:
(೧) ಅರಸುವೆನೆ, ಅರುಹುವೆನೆ – ಪದಗಳ ಬಳಕೆ
(೨) ಕ ಕಾರದ ಸಾಲು ಪದ – ಕುರುಹುದೋರೈ ಕೃಷ್ಣ ಕರುಣವ ಕರೆದು ಕಳೆಯೈ

ಪದ್ಯ ೨೬: ದ್ರೌಪದಿಯು ಕೃಷ್ಣನನ್ನು ಹೇಗೆ ಬೇಡಿದಳು?

ಹಿಂದೆ ನಾನಾಪಾಯದಿರುಬಿನ
ಬಂಧನವ ಬಿಡಿಸಿದೆಯೆಲೈ ಗೋ
ವಿಂದ ಶರಣಾನಂದಕಂದ ಮುಕುಂದ ಗುಣವೃಂದ
ಇಂದು ರುದ್ರನು ತಪ್ಪ ಸಾಧಿಸ
ಬಂದರೆಮ್ಮನು ಕಾವರಾರೆಲೆ
ತಂದೆ ನೀನೇ ಗತಿಯೆನುತ ಹಲುಬಿದಳು ಲಲಿತಾಂಗಿ (ಅರಣ್ಯ ಪರ್ವ, ೧೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಹಿಂದೆ ಅನೇಕ ಅಪಾಯಗಳಿಗೆ ಸಿಕ್ಕಾಗ ಅಪಾಯದ ಕಟ್ಟನ್ನು ಬಿಡಿಸಿದೆ. ಓ ಗೋವಿಂದ, ಭಕ್ತರ ಆನಂದ ಮೂಲ, ಮುಕುಂದ, ಸಕಲ ಕಲ್ಯಾಣಗುಣ ಪರಿಪೂರ್ಣ, ಈಗ ರುದ್ರಾವತಾರನಾದ ದ್ರೂರ್ವಾಸನು ತಪ್ಪನ್ನು ಸಾಧಿಸಲು ಬಂದರೆ ನಮ್ಮನ್ನು ಕಾಪಾಡುವವರಾರು? ತಂದೆ ಶ್ರೀಕೃಷ್ಣಾ ನೀನೇ ಗತಿ ಎಂದು ದ್ರೌಪದಿಯು ಬೇಡಿದಳು.

ಅರ್ಥ:
ಹಿಂದೆ: ಪೂರ್ವ;ದಲ್ಲಿ; ನಾನಾ: ಹಲವಾರು; ಅಪಾಯ: ತೊಂದರೆ; ಇರುಬು: ಇಕ್ಕಟ್ಟು; ಬಂಧನ: ಪಾಶ; ಬಿಡಿಸು: ಸಡಿಲಗೊಳಿಸು; ಶರಣ: ಭಕ್ತ; ಗುಣ: ಸ್ವಭಾವ; ವೃಂದ: ಗುಂಪು; ರುದ್ರ: ಶಿವನ ಗಣ, ದೂರ್ವಾಸ; ತಪ್ಪು: ಸರಿಯಲ್ಲದ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಬಂದು: ಆಗಮಿಸು; ಕಾವ: ರಕ್ಷಿಸು; ಗತಿ: ಮಾರ್ಗ, ಅವಸ್ಥೆ; ಹಲುಬು: ಬೇಡು; ಲಲಿತಾಂಗಿ: ಬಳ್ಳಿಯಂತೆ ದೇಹವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಹಿಂದೆ +ನಾನ+ಅಪಾಯದ್+ಇರುಬಿನ
ಬಂಧನವ+ ಬಿಡಿಸಿದೆ+ಎಲೈ +ಗೋ
ವಿಂದ+ ಶರಣಾನಂದ+ಕಂದ+ ಮುಕುಂದ +ಗುಣವೃಂದ
ಇಂದು +ರುದ್ರನು +ತಪ್ಪ +ಸಾಧಿಸ
ಬಂದರ್+ಎಮ್ಮನು +ಕಾವರಾರ್+ಎಲೆ
ತಂದೆ +ನೀನೇ +ಗತಿ+ಎನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಗೋವಿಂದ, ಶರಣಾನಂದ, ಕಂದ ಮುಕುಂದ, ಗುಣವೃಂದ, ತಂದೆ

ಪದ್ಯ ೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಬೇಡಿದಳು?

ನೀಲಕಂಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು
ಏಳು ದಿಟವೈಯೆಮ್ಮ ನುಡಿಯನು
ಪಾಲಿಸೈ ಸಂಕಲ್ಪವಳಿದೊಡೆ
ಹಾಳು ಹೊರುವುದು ಕೃಷ್ಣಮೈದೋರೆಂದಳಿಂದು ಮುಖಿ (ಅರಣ್ಯ ಪರ್ವ, ೧೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನ ಹಣೆಗಣ್ಣಿನ ಬೆಂಕಿಗೆ ಆಹುತಿಯಾದ ಮನ್ಮಥನ ಯಮನ ದಾರಿಯನ್ನು ಪಾಂಡವರು ಹಿಡಿಯಲಿದ್ದಾರೆ. ಹೇ ಕೃಷ್ಣ ನೀನು ಏಳು, ನನ್ನ ಮಾತು ನಿಜ. ನಮ್ಮ ಭಾಷೆಯನ್ನು ನಡೆಸಿಕೊಡು. ಸಂಕಲ್ಪ ಭಂಗವಾದರೆ ನಾವು ಹಾಳಾದಂತೆ. ಕೃಷ್ಣ ಬೇಗ ಬಾ ಎಂದು ಬೇಡಿದಳು.

ಅರ್ಥ:
ಕಂಠ: ಕೊರಳು; ನೀಲಕಂಠ: ಶಿವ; ನೇತ್ರ: ಕಣ್ಣು; ವಹ್ನಿ: ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಆಹುತಿ: ಬಲಿ; ಮುಗ್ಗು: ಬಾಗು, ಮಣಿ; ಕಾಲ: ಸಮಯ; ಕಾಮ: ಮನ್ಮಥ; ಪಥ: ದಾರಿ; ಪಡೆ: ದೊರಕು; ನಂದನ: ಮಕ್ಕಳು; ಏಳು: ಎದ್ದೇಳು; ದಿಟ: ಸತ್ಯ; ನುಡಿ: ಮಾತು; ಪಾಲಿಸು: ರಕ್ಷಿಸು; ಸಂಕಲ್ಪ: ನಿರ್ಧಾರ, ನಿರ್ಣಯ; ಅಳಿ: ನಾಶ; ಹಾಳು: ನಾಶ; ಮೈದೋರು: ಕಾಣಿಸಿಕೋ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ನೀಲಕಂಠನ+ ನೇತ್ರ+ವಹ್ನಿ
ಜ್ವಾಲೆಗ್+ಆಹುತಿಯಾಗಿ +ಮುಗ್ಗಿದ
ಕಾಲ +ಕಾಮನ +ಪಥವ +ಪಡೆವರು+ ಪಾಂಡುನಂದನರು
ಏಳು +ದಿಟವೈ+ಎಮ್ಮ +ನುಡಿಯನು
ಪಾಲಿಸೈ +ಸಂಕಲ್ಪವ್+ಅಳಿದೊಡೆ
ಹಾಳು +ಹೊರುವುದು +ಕೃಷ್ಣ+ಮೈದೋರೆಂದಳ್+ಇಂದುಮುಖಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಕಂಠನ ನೇತ್ರವಹ್ನಿಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು

ಪದ್ಯ ೨೪: ದ್ರೌಪದಿಯು ಕೃಷ್ಣನನ್ನು ಹೇಗೆ ಆರಾಧಿಸಿದಳು?

ಶ್ರೀ ರಮಾವರ ದೈತ್ಯಕುಲ ಸಂ
ಹಾರ ಹರಿ ಭವ ಜನನ ಮರಣಕು
ಠಾರ ನಿಗಮವಿದೂರ ಸಚರಾಚರ ಜಗನ್ನಾಥ
ಚಾರುಗುಣ ಗಂಭೀರ ಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೋರೆನುತ ಹಲುಬಿದಳು ಲಲಿತಾಂಗಿ (ಅರಣ್ಯ ಪರ್ವ, ೧೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಲಕ್ಷ್ಮೀ ದೇವಿಯ ಪತಿಯೇ, ರಾಕ್ಷಸ ಕುಲ ಸಂಹಾರಕನೇ, ಹುಟ್ತು ಸಾವಿನ ಚಕ್ರರೂಪವಾದ ಸಂಸಾರ ವೃಕ್ಷಕ್ಕೆ ಕೊಡಲಿಯಾದವನೇ, ವೇದಗಳಿಗೆ ನಿಲುಕದವನೇ, ಸಮಸ್ತ ಜೀವಿಸುವ ಮತ್ತು ನಿರ್ಜೀವ ವಸ್ತುಗಳ ಜಗತ್ತಿನ ಈಶ್ವರನೇ, ಕಲ್ಯಾಣ ಗುಣಗುಂಭೀರನೇ, ಕರುಣೆಯೇ ಮೂರ್ತಿಯಾದಂತಿರುವವನೇ, ಸಕ್ರಮ ವಿಚಾರದ ಎಲ್ಲೆಯಲ್ಲಿ ದೊರಕುವವನೇ, ಶ್ರೀಕೃಷ್ಣನು ಪ್ರತ್ಯಕ್ಷನಾಗು ಎಂದು ದ್ರೌಪದಿ ಬೇಡಿದಳು.

ಅರ್ಥ:
ರಮಾವರ: ಲಕ್ಷಿಯ ಪಿತ; ದೈತ್ಯ: ರಾಕ್ಷಸ; ಕುಲ: ವಂಶ; ಸಂಹಾರ: ನಾಶ; ಭವ: ಇರುವಿಕೆ, ಅಸ್ತಿತ್ವ; ಜನನ: ಹುಟ್ಟು; ಮರಣ: ಸಾವು; ಕುಠಾರ: ಕೊಡಲಿ; ನಿಗಮ: ಶೃತಿ, ವೇದ; ವಿದೂರ: ನಿಲುಕದವ; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಜಗನ್ನಾಥ: ಜಗತ್ತಿನ ಒಡೆಯ; ಚಾರು: ಸುಂದರ; ಗುಣ: ಸ್ವಭಾವ; ಗಂಭೀರ: ಆಳವಾದ, ಗಹನವಾದ; ಕರುಣ: ದಯೆ; ವಿಹಿತ: ಯೋಗ್ಯ; ವಿಚಾರ: ವಿಷಯ, ಸಂಗತಿ; ಪಾರಾವಾರ: ಸಮುದ್ರ, ಕಡಲು, ಎಲ್ಲೆ; ಮೈದೋರು: ಕಾಣಿಸಿಕೋ, ಪ್ರತ್ಯಕ್ಷನಾಗು; ಹಲುಬು: ಬೇಡು; ಲಲಿತಾಂಗಿ: ಬಳ್ಳಿಯಂತೆ ದೇಹವುಳ್ಳವಳು, ಸುಂದರಿ (ದ್ರೌಪದಿ)

ಪದವಿಂಗಡಣೆ:
ಶ್ರೀ+ ರಮಾವರ +ದೈತ್ಯಕುಲ +ಸಂ
ಹಾರ +ಹರಿ +ಭವ +ಜನನ +ಮರಣ+ಕು
ಠಾರ +ನಿಗಮವಿದೂರ +ಸಚರಾಚರ +ಜಗನ್ನಾಥ
ಚಾರುಗುಣ+ ಗಂಭೀರ +ಕರುಣಾ
ಕಾರ +ವಿಹಿತ +ವಿಚಾರ +ಪಾರಾ
ವಾರ +ಹರಿ +ಮೈದೋರೆನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಸಂಹಾರ, ಕುಠಾರ, ಪಾರಾವಾರ – ಪ್ರಾಸಪದ
(೨) ಕೃಷ್ಣನ ಗುಣಗಾನ – ದೈತ್ಯಕುಲ ಸಂಹಾರ, ನಿಗಮವಿದೂರ, ಚಾರುಗುಣ, ಗಂಭೀರ, ವಿಹಿತ ವಿಚಾರ, ಪಾರಾವಾರ

ಪದ್ಯ ೨೩: ದ್ರೌಪದಿಯು ಕೃಷ್ಣನನ್ನು ಹೇಗೆ ಭಜಿಸಿದಳು?

ಮುಗುದೆ ಮಿಗೆ ನಿಂದಿರ್ದು ಸಮಪದ
ಯುಗಳದಲಿ ಸೂರ್ಯನ ನಿರೀಕ್ಷಿಸಿ
ಮಗುಳೆವೆಯ ನೆರೆಮುಚ್ಚಿ ನಾಸಿಕದಗ್ರದಲಿ ನಿಲಿಸಿ
ನೆಗಹಿ ಪುಳಕಾಂಬುಗಳು ಮೈಯಲಿ
ಬಿಗಿದುವೊನಲಾಗಿರಲು ಹಿಮ್ಮಡಿ
ಗೊಗುವ ಕೇಶದ ಬಾಲೆ ಭಾವಿಸಿ ನೆನೆದಳುಚ್ಯುತನ (ಅರಣ್ಯ ಪರ್ವ, ೧೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ದ್ರೌಪದಿಯು ಪಾದಗಳನ್ನು ಸಮವಾಗಿ ನಿಲ್ಲಿಸಿ, ಕಣ್ಣಿನ ರೆಪ್ಪೆಯನ್ನು ಸ್ವಲ್ಪ ಮುಚ್ಚಿ, ಸೂರ್ಯನನ್ನು ನೋಡಿ, ದೃಷ್ಟಿಯನ್ನು ಭ್ರೂಮಧ್ಯದಲ್ಲಿ ಕೇಂದ್ರೀಕರಿಸಿ, ರೋಮಾಂಚನದ ಜಲವು ಹರಿಯುತ್ತಿರಲು, ಹಿಮ್ಮಡಿಯನ್ನು ಮುಟ್ಟುವ ಕೇಷರಾಶಿಯ ಅಬಲೆಯು ಶ್ರೀಕೃಷ್ಣನನ್ನು ಸ್ಮರಿಸಿದಳು.

ಅರ್ಥ:
ಮುಗುದೆ: ಕಪಟವರಿಯದವಳು; ಮಿಗೆ: ಮತ್ತು, ಅಧಿಕವಾಗಿ; ನಿಂದಿರ್ದು: ನಿಲ್ಲು; ಸಮ: ಸಮನಾಗಿ; ಪದ: ಪಾದ, ಚರಣ; ಯುಗಳ: ಎರಡು; ಸೂರ್ಯ: ರವಿ; ನಿರೀಕ್ಷಿಸಿ: ನೋಡಿ; ಮಗುಳೆ: ಮತ್ತೆ, ಪುನಃ; ನೆರೆ: ಪಕ್ಕ, ಪಾರ್ಶ್ವ; ನಾಸಿಕ: ಮೂಗು; ನೆಗಹು: ಮೇಲೆತ್ತು; ಪುಳಕ: ರೋಮಾಂಚನ; ಅಂಬು: ನೀರು; ಮೈ: ತನು; ಬಿಗಿ: ಕಟ್ತು; ಹಿಮ್ಮಡಿ: ಹಿಂದಿನ ಪಾದ; ಒಗು: ಚೆಲ್ಲು, ಸುರಿ; ಕೇಶ: ಕೂದಲು; ಬಾಲೆ: ಅಬಲೆ, ಹೆಣ್ಣು; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಅಚ್ಯುತ: ಚ್ಯುತಿಯಿಲ್ಲದ (ಕೃಷ್ಣ);

ಪದವಿಂಗಡಣೆ:
ಮುಗುದೆ +ಮಿಗೆ +ನಿಂದಿರ್ದು +ಸಮಪದ
ಯುಗಳದಲಿ +ಸೂರ್ಯನ +ನಿರೀಕ್ಷಿಸಿ
ಮಗುಳೆವೆಯ +ನೆರೆಮುಚ್ಚಿ +ನಾಸಿಕದ್+ಅಗ್ರದಲಿ +ನಿಲಿಸಿ
ನೆಗಹಿ +ಪುಳಕಾಂಬುಗಳು+ ಮೈಯಲಿ
ಬಿಗಿದುವೊನಲಾಗಿರಲು +ಹಿಮ್ಮಡಿ
ಗೊಗುವ +ಕೇಶದ +ಬಾಲೆ +ಭಾವಿಸಿ+ ನೆನೆದಳ್+ಅಚ್ಯುತನ

ಅಚ್ಚರಿ:
(೧) ದ್ರೌಪದಿಯ ಕೇಶವನ್ನು ವಿವರಿಸುವ ಪರಿ – ಹಿಮ್ಮಡಿಗೊಗುವ ಕೇಶದ ಬಾಲೆ