ಪದ್ಯ ೧೭: ಧರ್ಮಜನು ಯಾವುದಕ್ಕೆ ಅಂಜಿದನು?

ತುಡುಕಿ ಸುರಪನ ಸಿರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದೊಡೀಗಲೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡಮುನೀಶನು ತನಗೆ ಶಾಪವ
ಕೊಡಲಿ ತಾನದಕಂಜೆ ತನ್ನಯ
ನುಡಿಗನೃತ ಸಂದಪ್ಪವಾದರೆ ಕೆಟ್ಟೆ ತಾನೆಂದ (ಅರಣ್ಯ ಪರ್ವ, ೧೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ದೂರ್ವಾಸ ಮುನಿಗಳು ಹಿಂದೆ ಕೋಪದಿಂದ ದೇವೇಂದ್ರನ ಐಶ್ವರ್ಯವನ್ನು ಸಾಗರದ ಮಡುವಿನಲ್ಲಿ ಮುಳುಗಿಸಿದನು. ಈಗಲೂ ಕೋಪಗೊಂಡರೆ ಮೂರು ಲೋಕಗಳನ್ನು ಸುಟ್ಟು ಭಸ್ಮವನ್ನು ಹಣೆಗೆ ಧಾರಣೆ ಮಾಡಬಲ್ಲ. ಶಿವನ ಅವತಾರವಾದ ಈ ದೂರ್ವಾಸ ಮುನಿಗಳು ನನಗೆ ಶಾಪವನ್ನು ಕೊಟ್ಟರೆ ನನಗೆ ಹೆದರಿಕೆಯಿಲ್ಲ, ಆದರೆ ನನ್ನ ಮಾತು ಸುಳ್ಳಾದರೆ ನಾನು ಕೆಟ್ಟೆ ಎಂದು ಧರ್ಮಜನು ಹೇಳಿದನು.

ಅರ್ಥ:
ತುಡುಕು: ಆತುರದಿಂದ ಹಿಡಿ; ಸುರಪ: ಇಂದ್ರ; ಸಿರಿ: ಐಶ್ವರ್ಯ; ಶರಧಿ: ಸಾಗರ; ಮಡು: ನದಿ, ಹೊಳೆ; ಹಾಯ್ಕು: ಸೇರಿಸಿಕೊಳ್ಳು; ರೋಷ: ಕೋಪ; ಹಿಡಿ: ಗ್ರಹಿಸು; ಸುಟ್ಟು: ದಹಿಸು; ಬೊಟ್ಟಿಡು: ಹಣೆಗೆ ಬಳೆದುಕೋ; ಜಗತ್ರಯ: ಮೂರು ಲೋಕ; ಮೃಡ: ಶಿವ; ಮುನಿ: ಋಷಿ; ಈಶ: ಒಡೆಯ; ಶಾಪ: ಕೆಡುಕಾಗಲೆಂದು ಬಯಸಿ ಹೇಳುವ ಮಾತು; ಕೊಡಲಿ: ಪರಶು;ಅಂಜು: ಹೆದರು; ನುಡಿ: ಮಾತು; ಅನೃತ: ಸುಳ್ಳು; ಸಂದು: ಬಿರುಕು; ಕೆಟ್ಟೆ: ಕೆಡುಕು, ಹಾಳು;

ಪದವಿಂಗಡಣೆ:
ತುಡುಕಿ +ಸುರಪನ+ ಸಿರಿಯ +ಶರಧಿಯ
ಮಡುವಿನಲಿ +ಹಾಯ್ಕಿದನು +ರೋಷವ
ಹಿಡಿದೊಡ್+ಈಗಲೆ +ಸುಟ್ಟು +ಬೊಟ್ಟಿಡುವನು +ಜಗತ್ರಯವ
ಮೃಡ+ಮುನೀಶನು +ತನಗೆ+ ಶಾಪವ
ಕೊಡಲಿ +ತಾನದಕ್+ಅಂಜೆ+ ತನ್ನಯ
ನುಡಿಗ್+ಅನೃತ+ ಸಂದಪ್ಪವಾದರೆ+ ಕೆಟ್ಟೆ +ತಾನೆಂದ

ಅಚ್ಚರಿ:
(೧) ದೂರ್ವಾಸನ ಪ್ರತಾಪ – ತುಡುಕಿ ಸುರಪನ ಸಿರಿಯ ಶರಧಿಯ ಮಡುವಿನಲಿ ಹಾಯ್ಕಿದನು

ನಿಮ್ಮ ಟಿಪ್ಪಣಿ ಬರೆಯಿರಿ