ಪದ್ಯ ೧೬: ಧರ್ಮಜನೇಕೆ ಮಾತಾಡಲು ತಡವಡಿಸಿದನು?

ಅರಸಿಯಾರೋಗಿಸಿದ ಹದನನು
ಬರವಿನಲಿ ನೃಪ ತಿಳಿಯಲಂತಃ
ಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ
ಉರಿಹೊಡೆದ ಕೆಂದಾವರೆಯ ವೊಲ್
ಕರುಕುವರಿಯಲು ಮುಖ ಕಪಾಲದಿ
ಕರವನಿಟ್ಟು ಮಹೀಶ ತೊನಹುತ ನುಡಿದನಿಂತೆಂದು (ಅರಣ್ಯ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೌಪದಿಯ ಆಗಮನವನ್ನು ನೋಡಿ ಧರ್ಮಜನು ಅವಳ ಊಟವಾಗಿದೆಯೆಂದು ತಿಳಿದನು. ಅವನ ಮನಸ್ಸು ಕಳವಳಗೊಂಡು ಕಣ್ಣೀರಿನ ಧಾರೆ ಹರಿಯಿತು. ಉರಿಹೊಡೆದ ಕೆಂದಾವರೆಯಂತೆ ಅವನ ಮುಖ ಕಪ್ಪಾಯಿತು. ಅವನು ಕೈಯನ್ನು ಕೆನ್ನೆಯಮೇಲಿಟ್ಟು ತೊದಲುತ್ತಾ ದ್ರೌಪದಿಗೆ ಹೀಗೆ ನುಡಿದನು.

ಅರ್ಥ:
ಅರಸಿ: ರಾಣಿ; ಆರೋಗಿಸು: ಸೇವಿಸು; ಹದ: ಸ್ಥಿತಿ; ಬರುವು: ಆಗಮನ; ನೃಪ: ರಾಜ; ತಿಳಿ: ಅರ್ಥೈಸು; ಅಂತಃಕರಣ: ಮನಸ್ಸು; ಕಳವಳ: ಗೊಂದಲ; ಸುರಿದು: ಹರಿಸು; ನಯನ: ಕಣ್ಣು; ಜಲಧಾರೆ: ವರ್ಷ, ಮಳೆ; ಉರಿ: ಹೊಗೆ; ಕೆಂದಾವರೆ: ಕೆಂಪಾವದ ಕಮಲ; ಮುಖ: ಆನನ; ಕಪಾಲ: ಕೆನ್ನೆ; ಕರುಕು: ಕಪ್ಪು; ಕರ: ಹಸ್ತ; ಮಹೀಶ: ರಾಜ; ತೊನಹುತ: ತೊದಲುತ್ತ; ನುಡಿ: ಮಾತಾಡು;

ಪದವಿಂಗಡಣೆ:
ಅರಸಿ+ಆರೋಗಿಸಿದ +ಹದನನು
ಬರವಿನಲಿ +ನೃಪ +ತಿಳಿಯಲ್+ಅಂತಃ
ಕರಣ+ ಕಳವಳಗೊಳಲು +ಸುರಿದುದು +ನಯನ +ಜಲಧಾರೆ
ಉರಿಹೊಡೆದ+ ಕೆಂದಾವರೆಯ +ವೊಲ್
ಕರುಕುವರಿಯಲು+ ಮುಖ +ಕಪಾಲದಿ
ಕರವನಿಟ್ಟು +ಮಹೀಶ +ತೊನಹುತ +ನುಡಿದನ್+ಇಂತೆಂದು

ಅಚ್ಚರಿ:
(೧) ಮನಸ್ಸು ನೊಂದಿತು ಎಂದು ಹೇಳಲು – ಅಂತಃಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ
(೨) ಉಪಮಾನದ ಪ್ರಯೋಗ – ಉರಿಹೊಡೆದ ಕೆಂದಾವರೆಯ ವೊಲ್ಕರುಕುವರಿಯಲು ಮುಖ

ನಿಮ್ಮ ಟಿಪ್ಪಣಿ ಬರೆಯಿರಿ