ಪದ್ಯ ೧೫: ಧರ್ಮಜನು ಋಷಿಯ ಮಾತನ್ನು ಹೇಗೆ ಅಂಗೀಕರಿಸಿದನು?

ಆವ ಜನ್ಮದ ಸುಕೃತ ಫಲ ಸಂ
ಭಾವಿಸಿದುದೋ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆಂದನು ನೃಪತಿ ಕೈಮುಗಿದು
ಆ ವಿಗಡಮುನಿ ಬಳಿಕನುಷ್ಠಾ
ನಾವಲಂಬನಕತ್ತ ಯಮುನಾ
ದೇವಿಯರ ಹೊಗಲಿತ್ತ ನೃಪ ಕರೆಸಿದನು ದ್ರೌಪದಿಯ (ಅರಣ್ಯ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ನಾನು ಯಾವ ಜನ್ಮದಲ್ಲಿ ಮಾಡಿದ ಪುಣ್ಯದ ಫಲವೋ ಏನೋ, ಈಗ ಒದಗಿದೆ, ನಿಮ್ಮ ಬರವಿನ ಪುಣ್ಯ ಇನ್ಯಾರಿಗೆ ಸಿಕ್ಕೀತು? ನಿಮ್ಮ ಭೋಜನಕ್ಕೆ ವ್ಯವಸ್ಥೆಯುಂಟು ಎಂದನು ಆಗಾ ಮಹರ್ಷಿಯು ಅನುಷ್ಠಾನಕ್ಕಾಗಿ ಯಮುನಾ ನದಿಗೆ ಹೋಗಲು, ಇತ್ತ ಧರ್ಮಜನು ದ್ರೌಪದಿಯನ್ನು ಕರೆದನು.

ಅರ್ಥ:
ಜನ್ಮ: ಹುಟ್ಟು; ಸುಕೃತ: ಒಳ್ಳೆಯ ಕೆಲಸ; ಫಲ: ಪ್ರಯೋಜನ; ಸಂಭಾವಿಸು: ಉಂಟಾಗು; ಬರವು: ಆಗಮನ; ಪಡೆ: ದೊರಕು; ಕೊಡು: ನೀಡು; ನೃಪತಿ: ರಾಜ; ಕೈಮುಗಿ: ನಮಸ್ಕರಿಸು; ವಿಗಡ: ಉಗ್ರವಾದ; ಬಳಿಕ: ನಂತರ; ಅನುಷ್ಠಾನ: ಆಚರಣೆ; ಅವಲಂಬನ: ಆಸರೆ; ನೃಪ: ರಾಜ; ಕರೆಸು: ಬರೆಮಾಡು;

ಪದವಿಂಗಡಣೆ:
ಆವ +ಜನ್ಮದ +ಸುಕೃತ +ಫಲ +ಸಂ
ಭಾವಿಸಿದುದೋ +ನಿಮ್ಮ +ಬರವನದ್
ಆವ+ ಪಡೆವನು+ ಕೊಟ್ಟೆನೆಂದನು +ನೃಪತಿ +ಕೈಮುಗಿದು
ಆ +ವಿಗಡಮುನಿ +ಬಳಿಕ್+ಅನುಷ್ಠಾನ
ಅವಲಂಬನಕ್+ಅತ್ತ+ ಯಮುನಾ
ದೇವಿಯರ +ಹೊಗಲ್+ಇತ್ತ +ನೃಪ +ಕರೆಸಿದನು +ದ್ರೌಪದಿಯ

ಅಚ್ಚರಿ:
(೧) ಧರ್ಮಜನು ತಾನು ಭಾಗ್ಯವಂತನೆಂದು ಹೇಳುವ ಪರಿ – ಆವ ಜನ್ಮದ ಸುಕೃತ ಫಲ ಸಂ
ಭಾವಿಸಿದುದೋ

ನಿಮ್ಮ ಟಿಪ್ಪಣಿ ಬರೆಯಿರಿ