ಪದ್ಯ ೨: ಹಸ್ತಿನಾಪುರಕ್ಕೆ ಯಾವ ಮುನಿಗಳು ಬಂದರು?

ಆ ಸುಯೋಧನನೇಕಛತ್ರ ವಿ
ಳಾಸದುರ್ವೀರಾಜ್ಯ ಪದವಿ
ನ್ಯಾಸ ವಿಭವದ ಸುಲಭ ಸೌಖ್ಯವನನುಭವಿಸುತಿರಲು
ಭೂಸುರವ್ರಜವೆರಸಿ ವರ ವಿ
ನ್ಯಾಸ ಮುನಿಜನ ಸಹಿತಲಾ ದೂ
ರ್ವಾಸ ಮುನಿಪತಿ ಬಂದು ಹೊಕ್ಕನು ಹಸ್ತಿನಾಪುರವ (ಅರಣ್ಯ ಪರ್ವ, ೧೭ ಸಂಧಿ, ೨ ಪದ್ಯ)

ತಾತ್ಪರ್ಯ:
ಇತ್ತ ಹಸ್ತಿನಾಪುರದಲ್ಲಿ ದುರ್ಯೋಧನನು ಏಕಚ್ಛತ್ರಾಧಿಪತಿಯಾಗಿ ರಾಜ್ಯಸುಖವನ್ನನುಭವಿಸುತ್ತಿದ್ದನು. ಒಂದು ದಿನ ದೂರ್ವಾಸ ಮುನಿಯು ಅನೇಕ ಬ್ರಾಹ್ಮಣರೊಡನೆ ಹಸ್ತಿನಾವತಿಗೆ ಬಂದನು.

ಅರ್ಥ:
ವಿಳಾಸ: ಉಲ್ಲಾಸ, ಸಂಭ್ರಮ; ಉರ್ವೀ: ಭೂಮಿ; ರಾಜ್ಯ: ದೇಶ; ಪದ: ಅವಸ್ಥೆ; ವಿನ್ಯಾಸ: ರಚನೆ; ವಿಭವ: ಸಿರಿ, ಸಂಪತ್ತು; ಸುಲಭ: ಆಯಾಸವಿಲ್ಲದೆ; ಸೌಖ್ಯ: ಸುಖ, ನೆಮ್ಮದಿ; ಅನುಭವ: ಅನುಭಾವ; ಭೂಸುರ: ಬ್ರಾಹ್ಮಣ; ವ್ರಜ: ಗುಂಪು; ವರ: ಶ್ರೇಷ್ಠ; ಸಹಿತ: ಜೊತೆ; ಮುನಿ: ಋಷಿ; ಹೊಕ್ಕು: ಸೇರು; ಬಂದು: ಆಗಮಿಸು;

ಪದವಿಂಗಡಣೆ:
ಆ+ ಸುಯೋಧನನ್+ಏಕಛತ್ರ+ ವಿ
ಳಾಸದ್+ಉರ್ವೀ+ರಾಜ್ಯ +ಪದ+ವಿ
ನ್ಯಾಸ +ವಿಭವದ +ಸುಲಭ +ಸೌಖ್ಯವನ್+ಅನುಭವಿಸುತಿರಲು
ಭೂಸುರ+ವ್ರಜವೆರಸಿ+ ವರ+ ವಿ
ನ್ಯಾಸ +ಮುನಿಜನ +ಸಹಿತಲಾ+ ದೂ
ರ್ವಾಸ +ಮುನಿಪತಿ +ಬಂದು +ಹೊಕ್ಕನು +ಹಸ್ತಿನಾಪುರವ

ಅಚ್ಚರಿ:
(೧) ಪದವಿನ್ಯಾಸ, ವರವಿನ್ಯಾಸ – ಪದದ ಬಳಕೆ

ಪದ್ಯ ೧: ಪಾಂಡವರು ಎಷ್ಟು ವರ್ಷ ವನವಾಸ ಮುಗಿಸಿದ್ದರು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರಕರು ವಿಪಿ
ನಾಲಯದೊಳನುಭವಿಸಿದರು ದಶಸಂವತ್ಸರಂಗಳನು
ಲೀಲೆಮಿಗೆಯೈತಂದು ಯಮುನಾ
ಕೂಲದಲಿ ವರತೀರ್ಥಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ (ಅರಣ್ಯ ಪರ್ವ, ೧೭ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರು ವನವಾಸದಲ್ಲಿ ಹತ್ತು ವರ್ಷಗಳನ್ನು ಕಳೆದು, ಯಮುನಾ ನದಿಯ ತೀರಕ್ಕೆ ಬಂದು, ಸಮಸ್ತ ಮುನಿಗಳೊಡನೆ ತೀರ್ಥ ಸೇವೆಯನ್ನು ಮಾಡುತ್ತಿದ್ದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರಿ: ಭೂಮಿ; ಕುಮಾರ: ಮಕ್ಕಳು; ವಿಪಿನ: ಅರಣ್ಯ; ಆಲಯ: ಮನೆ; ಅನುಭವ: ಅನುಭಾವ; ದಶ: ಹತ್ತು; ಸಂವತ್ಸರ: ವರ್ಷ; ಲೀಲೆ: ಆನಂದ, ಸಂತೋಷ; ಕೂಲ:ದಡ, ತಟ; ವರ: ಶ್ರೇಷ್ಠ; ತೀರ್ಥ: ಪವಿತ್ರವಾದ ಜಲ; ಶೀಲ: ನಡತೆ, ಸ್ವಭಾವ; ಸಕಲ: ಎಲ್ಲಾ; ಮುನಿ: ಋಷಿ; ಸಹಿತ: ಜೊತೆ; ಹರುಷ: ಸಂತಸ; ಐತಂದು: ಬಂದು ಸೇರು;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಪಾಂಡು +ಕುಮಾರಕರು +ವಿಪಿ
ನಾಲಯದೊಳ್+ಅನುಭವಿಸಿದರು +ದಶ+ಸಂವತ್ಸರಂಗಳನು
ಲೀಲೆಮಿಗೆ+ಐತಂದು +ಯಮುನಾ
ಕೂಲದಲಿ +ವರ+ತೀರ್ಥ+ಸೇವಾ
ಶೀಲರಿದ್ದರು +ಸಕಲ+ ಮುನಿಜನ +ಸಹಿತ +ಹರುಷದಲಿ

ಪದ್ಯ ೩೦: ಭಗವಂತನ ದಯೆ ಎಂತಹುದು?

ಅರಸುತಾಯಾಮ್ನಾಯ ತತಿಕು
ಕ್ಕುರಿಸಿದವು ಮುನಿಗಳ ಸಮಾಧಿಗೆ
ಕರುಬುವವರಾವಲ್ಲ ಕಾಣರು ನಖದ ಕೊನೆಗಳನು
ಅರಸ ತಾನೇ ಹರಿಹರಿದು ತ
ನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ ರಾಯಗದುಗಿನ ವೀರನಾರಣನ (ಅರಣ್ಯ ಪರ್ವ, ೧೬ ಸಂಧಿ, ೩೦ ಪದ್ಯ)

ತಾತ್ಪರ್ಯ:
ವೇದಗಳು ಭಗವಂತನನ್ನು ಹುಡುಕಲು ಹೊರಟು ಮುಂದೆ ಹೋಗಲು ದಾರಿ ಕಾಣದೇ ಸೋತು ಕುಳಿತುಬಿಟ್ಟವು, ಮುನಿಗಳು ಸಮಾಧಿ ಸ್ಥಿತಿಯನ್ನು ಹೋದುವರಲ್ಲಾ, ಅದನ್ನು ಕಂಡು ನಮಗೇನೂ ಹೊಟ್ಟೆಕಿಚ್ಚಿಲ್ಲ, ಆದರೆ ಅವರಿಗೆ ಭಗವಂತನ ಉಗುರುಗಳ ತುದಿಯೂ ಕಾಣಲಿಲ್ಲಾ, ಶ್ರೀ ಹರಿಯು ತನ್ನ ಭಕ್ತರನ್ನು ತಾನೆ ಮುಂದೆ ಬಂದು ಸಲಹುತ್ತಾನೆ, ಭಕ್ತರ ಮೇಲೆ ವೀರನಾರಾಯಣನ ಕರುಣೆ ಎಷ್ಟೋ ಯಾರು ಬಲ್ಲರು ಎಂದು ಜನಮೇಜಯ ರಾಜನಿಗೆ ವೈಶಂಪಾಯನರು ತಿಳಿಸಿದರು.

ಅರ್ಥ:
ಅರಸು: ಹುಡುಕು; ಆಮ್ನಾಯ: ಶೃತಿ; ತತಿ: ಸಮೂಹ; ಕುಕ್ಕುರಿಸು; ಕುಳಿತುಕೊಳ್ಳು; ಮುನಿ: ಋಷಿ; ಸಮಾಧಿ: ಏಕಾಗ್ರತೆ, ತನ್ಮಯತೆ; ಕರುಬು: ಹೊಟ್ಟೆಕಿಚ್ಚು ಪಡು; ಕಾಣು: ತೋರು; ನಖ: ಉಗುರು; ಕೊನೆ: ತುದಿ; ಅರಸ: ರಾಜ; ಹರಿಹರಿದು: ಮುಂದೆ ಬಂದು, ಚಲಿಸು; ಎರಕ: ಪ್ರೀತಿ, ಅನುರಾಗ; ಬಿಡು: ತೊರೆ; ಸಲಹು: ಕಾಪಾಡು; ಕರುಣ: ದಯೆ; ರಾಯ: ರಾಜ;

ಪದವಿಂಗಡಣೆ:
ಅರಸುತಾ+ಆಮ್ನಾಯ +ತತಿ+ಕು
ಕ್ಕುರಿಸಿದವು +ಮುನಿಗಳ +ಸಮಾಧಿಗೆ
ಕರುಬುವವರಾವಲ್ಲ+ ಕಾಣರು +ನಖದ +ಕೊನೆಗಳನು
ಅರಸ+ ತಾನೇ +ಹರಿಹರಿದು +ತನ್
ಎರಕದವರನು +ಬಿಡದೆ+ ಸಲಹುವ
ಕರುಣವೆಂತುಟೊ +ರಾಯ+ಗದುಗಿನ+ ವೀರನಾರಣನ

ಅಚ್ಚರಿ:
(೧) ಭಗವಂತನ ದಯೆ – ತಾನೇ ಹರಿಹರಿದು ತನ್ನೆರಕದವರನು ಬಿಡದೆ ಸಲಹುವ
ಕರುಣವೆಂತುಟೊ

ಪದ್ಯ ೨೯: ಕೃಷ್ಣನ ಬೀಳ್ಕೊಡುಗೆ ಹೇಗಿತ್ತು?

ಮರೆಯಲಿಹ ಕಾಲದಲಿ ಬಲಿದೆ
ಚ್ಚರದಿಹುದು ಬೇಕಾದರೆಮಗೆ
ಚ್ಚರಿಸಿ ಕಾರ್ಯಸ್ಥಿತಿಯ ನಿಶ್ಚೈಸುವುದು ನಮ್ಮೊಳಗೆ
ಅರಿದಿಹುದು ನೀವೆಂದು ರಾಯನಿ
ಗರುಹಿ ಭೀಮಾದಿಗಳಿಗುಚಿತವ
ನೆರೆನುಡಿದು ದ್ರೌಪದಿಯ ಮನ್ನಿಸಿ ಮರಳಿದನು ಪುರಕೆ (ಅರಣ್ಯ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣನು ಪಾಂಡವರಿಗೆ ಹಿತವಚನವನ್ನು ಹೇಳುತ್ತಾ, ಬರಲಿರುವ ಕಾಲದಲ್ಲಿ ಅತಿಶಯವಾದ ಎಚ್ಚರದಿಂದಿರಬೇಕು, ಅಗತ್ಯಬಿದ್ದರೆ ನಮಗೆ ತಿಳಿಸಿ ಏನು ಮಾಡಬೇಕೆಂದು ನಿಶ್ಚಯಿಸಿರಿ, ಇದನ್ನು ನೀವು ಸದಾ ನೆನಪಿನಲ್ಲಿಡಬೇಕು, ಎಂದು ಶ್ರೀಕೃಷ್ಣನು ಧರ್ಮಜನಿಗೆ ತಿಳಿಸಿ, ಭೀಮಾದಿಗಳಿಗೆ ಉಚಿತವಾದ ಮಾತುಗಳನ್ನಾಡಿ, ದ್ರೌಪದಿಯನ್ನು ಅನುಗ್ರಹಿಸಿ ದ್ವಾರಕೆಗೆ ತೆರಳಿದನು.

ಅರ್ಥ:
ಮರೆ: ನೆನಪಿನಿಂದ ದೂರವಾಗು; ಕಾಲ: ಸಮಯ; ಬಲಿದು: ಗಟ್ಟಿಯಾಗು; ಎಚ್ಚರ: ಹುಷಾರು, ಜೋಪಾನ; ಇಹುದು: ಇರುವುದು; ಎಚ್ಚರಿಸು: ಮೇಲೇಳು; ಕಾರ್ಯ: ಕೆಲಸ; ಸ್ಥಿತಿ: ಹದ, ಅವಸ್ಥೆ; ನಿಶ್ಚೈಸು: ನಿರ್ಧರಿಸು; ಅರಿ: ತಿಳಿ; ರಾಯ: ರಾಜ; ಅರುಹು: ಹೇಳು; ಆದಿ: ಮುಂತಾದ; ಉಚಿತ: ಸರಿಯಾದ; ಎರೆ: ಸುರಿ; ನುಡಿ: ವಚನ, ಮಾತು; ಮನ್ನಿಸು: ಅನುಗ್ರಹಿಸು; ಮರಳು: ಹಿಂದಿರುಗು; ಪುರ: ಊರು;

ಪದವಿಂಗಡಣೆ:
ಮರೆಯಲಿಹ +ಕಾಲದಲಿ +ಬಲಿದ್
ಎಚ್ಚರದ್+ಇಹುದು +ಬೇಕಾದರ್+ಎಮಗ್
ಎಚ್ಚರಿಸಿ +ಕಾರ್ಯ+ಸ್ಥಿತಿಯ +ನಿಶ್ಚೈಸುವುದು +ನಮ್ಮೊಳಗೆ
ಅರಿದಿಹುದು+ ನೀವೆಂದು +ರಾಯನಿಗ್
ಅರುಹಿ +ಭೀಮಾದಿಗಳಿಗ್+ಉಚಿತವ
ನೆರೆನುಡಿದು +ದ್ರೌಪದಿಯ +ಮನ್ನಿಸಿ +ಮರಳಿದನು +ಪುರಕೆ

ಅಚ್ಚರಿ:
(೧) ಕೃಷ್ಣನ ಸ್ವಯಂ ಸ್ನೇಹದ ಹಸ್ತವನ್ನು ನೀಡುವ ಪರಿ – ಬೇಕಾದರೆಮಗೆ
ಚ್ಚರಿಸಿ ಕಾರ್ಯಸ್ಥಿತಿಯ ನಿಶ್ಚೈಸುವುದು ನಮ್ಮೊಳಗೆ

ಪದ್ಯ ೨೮: ಕೃಷ್ಣನು ಯಾವ ಸಲಹೆಯನ್ನು ನೀಡಿದನು?

ನುಡಿದ ಕಾಲಾವಧಿಗೆ ಜರೆ ತೆರೆ
ಯಡಸಿದವು ಜಾಣಿನಲಿ ಸತ್ಯವ
ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದರೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ (ಅರಣ್ಯ ಪರ್ವ, ೧೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀವು ಮಾತುಕೊಟ್ಟ ಅರಣ್ಯವಾಸದ ಅವಧಿಗೆ ಮುಪ್ಪು ಬಂದಿದೆ. ಕೆಲವೇ ದಿನಗಳು ಈಗ ಉಳಿದಿವೆ. ಇಷ್ಟು ದಿನ ಜಾಣತನದಿಂದ ಸತ್ಯಮಾರ್ಗದಲ್ಲಿ ನಡೆದಿದ್ದೀರಿ, ಕೊನೆಯಲ್ಲಿ ಹಿರಿಮೆಯನ್ನು ಕಳೆದುಕೊಳ್ಳಬೇಡಿ. ಕರ್ಣನೇ ಮೊದಲಾದ ಕುಹಕಿಗಳು ದುಡುಕಿ ಆ ಕೃತ್ಯವನ್ನು ಮಾಡಲು ಬಂದರೆ ನೀವು ದುಡುಕದೆ ನಿಧಾನಿಸೆ, ಧರ್ಮದ ದಡವನ್ನು ಸೇರಿದರೆ ವಿಜಯ ಮಾರ್ಗದಲ್ಲಿ ಕ್ಷಿಪ್ರವಾಗಿ ಮುಂದುವರೆಯುವಿರಿ ಎಂದು ಶ್ರೀಕೃಷ್ಣನು ಎಚ್ಚರಿಸಿ ಆಶೀರ್ವದಿಸಿದನು.

ಅರ್ಥ:
ನುಡಿ: ಮಾತಾಡು; ಕಾಲ: ಸಮಯ; ಅವಧಿ: ಗಡು, ಸಮಯದ ಪರಿಮಿತಿ; ಜರೆ: ಮುಪ್ಪು; ತೆರೆ: ತೆಗೆ, ಬಿಚ್ಚು; ಅಡಸು: ಬಿಗಿಯಾಗಿ ಒತ್ತು; ಜಾಣಿನಲಿ: ಬುದ್ಧಿವಂತಿಕೆ; ಸತ್ಯ: ದಿಟ;ನಡೆಸು: ಮುನ್ನಡೆ, ಚಲಿಸು; ಕಡೆ: ಕೊನೆ; ಉನ್ನತಿ: ಏಳಿಗೆ; ಕೆಡಿಸು: ಹಾಳುಮಾಡು; ಕಡು: ವಿಶೇಷ, ಅಧಿಕ; ಮನ: ಮನಸ್ಸು; ಆದಿ: ಮುಂತಾದ; ಕೈ: ಹಸ್ತ; ದುಡುಕು: ಆತುರ, ಅವಸರ; ಧರ್ಮ: ಧಾರಣೆ ಮಾಡಿದುದು; ತಡಿ:ದಡ, ತೀರ; ಜಾರು: ಬೀಳು; ಜಯ: ಗೆಲುವು; ಅಧ್ವ: ದಾರಿ, ಮಾರ್ಗ; ಜಂಘಾಲ: ಶೀಘ್ರ ಓಟದ, ಚಿಗರೆ; ಅರಹು: ತಿಳಿ;

ಪದವಿಂಗಡಣೆ:
ನುಡಿದ +ಕಾಲ+ಅವಧಿಗೆ +ಜರೆ +ತೆರೆ
ಯಡಸಿದವು +ಜಾಣಿನಲಿ +ಸತ್ಯವ
ನಡೆಸಿದಿರಿ +ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದರೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ

ಅಚ್ಚರಿ:
(೧) ಅರಣ್ಯವಾಸ ಅಂತ್ಯದಲ್ಲಿದೆ ಎಂದು ಹೇಳಲು – ನುಡಿದ ಕಾಲಾವಧಿಗೆ ಜರೆ ತೆರೆ
ಯಡಸಿದವು
(೨) ಕೃಷ್ಣನ ಸಲಹೆ – ಧರ್ಮದತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ

ಪದ್ಯ ೨೭: ಕೃಷ್ಣನು ಧರ್ಮಜನಿಗೆ ಏನು ಹೇಳಿದ?

ಹಗೆಗಳಮರಾರಿಗಳು ನಮ್ಮಯ
ನಗರಿ ಶೂನ್ಯಾಸನದಲಿರ್ದುದು
ವಿಗಡ ರಾಮಾದಿಗಳು ವಿಷಯಂಗಳ ವಿನೋದಿಗಳು
ಅಗಲಲಾರೆನು ನಿಮ್ಮವನದೋ
ಲಗಕೆ ಬಿಡೆಯವ ಕಾಣೆನೆಂದನು
ನಗುತ ಕರುಣಾಸಿಂಧು ಯಮನಂದನನ ಮೊಗ ನೋಡಿ (ಅರಣ್ಯ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಎಲೈ ಧರ್ಮಜ ನಮ್ಮ ದ್ವಾರಕಾಪುರಿಗೆ ರಾಕ್ಷಸರದ್ದೇ ದೊಡ್ಡ ವಿಪತ್ತು, ನಮಗೆ ರಾಕ್ಷಸರೇ ಶತ್ರುಗಳು, ನಮ್ಮ ಊರನ್ನು ಕಾಪಾಡಲು ಜನರಿಲ್ಲ, ಬಲರಾಮನೇ ಮೊದಲಾದವರು ವಿಷಯ ವಸ್ತುಗಳಲ್ಲಿ ಆಸಕ್ತರು. ಊರನ್ನು ಬಿಟ್ಟಿರಲಾರೆ, ನಿಮ್ಮೊಡನೆ ವನವಾಸದಲ್ಲಿರಲು ನನಗೆ ಪುರುಸೊತ್ತು ಇಲ್ಲ, ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ಹಗೆ: ವೈರಿ; ಅಮರಾರಿ: ದೇವತೆಗಳ ವೈರಿ (ರಾಕ್ಷಸ); ನಗರ: ಊರು; ಶೂನ್ಯ: ಬರಿದಾದುದು; ವಿಗಡ: ಶೌರ್ಯ, ಪರಾಕ್ರಮ; ಆದಿ: ಮೊದಲಾದ; ವಿಷಯ: ಭೋಗಾಭಿಲಾಷೆ; ವಿನೋದ: ಸಂತೋಷ, ಹಿಗ್ಗು; ಅಗಲು: ಬಿಟ್ಟಿರು, ಬೇರೆ; ವನ: ಕಾಡು; ಓಲಗ: ದರ್ಬಾರು; ಬಿಡೆ: ಬಿಡುವು; ಕಾಣು: ತೋರು; ನಗು: ಸಂತ್ಸ; ಕರುಣಾಸಿಂಧು: ಕರುಣಾ ಸಾಗರ; ನಂದನ: ಮಗ; ಮೊಗ: ಮುಖ; ನೋಡಿ: ವೀಕ್ಷಿಸು; ಆಸನ: ಪೀಠ;

ಪದವಿಂಗಡಣೆ:
ಹಗೆಗಳ್+ಅಮರಾರಿಗಳು+ ನಮ್ಮಯ
ನಗರಿ+ ಶೂನ್ಯಾಸನದಲ್+ಇರ್ದುದು
ವಿಗಡ +ರಾಮಾದಿಗಳು+ ವಿಷಯಂಗಳ+ ವಿನೋದಿಗಳು
ಅಗಲಲಾರೆನು +ನಿಮ್ಮ+ವನದ್
ಓಲಗಕೆ +ಬಿಡೆಯವ+ ಕಾಣೆನೆಂದನು
ನಗುತ +ಕರುಣಾಸಿಂಧು +ಯಮನಂದನನ +ಮೊಗ +ನೋಡಿ

ಅಚ್ಚರಿ:
(೧) ಹಗೆ, ಅರಿ – ಸಾಮ್ಯಾರ್ಥ ಪದ