ಪದ್ಯ ೭: ಬ್ರಾಹ್ಮಣನು ಯಾರ ಕೇರಿಗೆ ಬಂದನು?

ಹೆಸರು ಧರ್ಮವ್ಯಾಧನಾತನ
ದೆಸೆಯಲರಿ ಹೋಗೆನಲು ಬಂದನು
ವಸುಧೆಯಮರನು ನಗರಿಗಾಸತಿ ಕೊಟ್ಟ ಕುರುಹಿನಲಿ
ಹಸಿದು ಬೀದಿಗಳೊಳಗೆ ತೊಳಲುತ
ಘಸಣಿಗೊಳುತ ಪುರಾಂತದಲಿ ಕ
ರ್ಕಶ ಪುಳಿಂದರ ಕೇರಿಯಿರೆ ಕಂಡಲ್ಲಿಗೈ ತಂದ (ಅರಣ್ಯ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ಅವನ ಹೆಸರು ಧರ್ಮವ್ಯಾಧ ಅವನಿಂದ ನೀನು ಧರ್ಮದ ಸಾರವನ್ನರಿಯಲು ಹೋಗು, ಎಂದು ಪತಿವ್ರತೆಯು ಹೇಳಲು ಆ ಬ್ರಾಹ್ಮಣನು ಅವಳು ಹೇಳಿದ ಗುರುತನ್ನು ತಿಳಿದು ಆ ಪಟ್ಟಣಕ್ಕೆ ಹೋದನು. ಅಲ್ಲಿ ಬೀದಿ ಬೀದಿಗಳನ್ನು ಹಸಿವಿನ ಬಾಧೆಯನ್ನು ಲೆಕ್ಕಿಸದೆ ಕಷ್ಟದಿಮ್ದ ಅಲೆದು ಊರಿನ ತುದಿಗೆ ಬೇಡರ ಕರ್ಕಶವಾದ ಕೇರಿಯನ್ನು ಕಂಡು ಅಲ್ಲಿಗೆ ಹೋದನು.

ಅರ್ಥ:
ಹೆಸರು: ನಾಮ; ದೆಸೆ: ದಿಕ್ಕು; ಅರಿ: ತಿಳಿ; ಹೋಗು: ತೆರಳು; ವಸುಧೆ: ಭೂಮಿ; ವಸುಧೆಯಮರ: ಬ್ರಾಹ್ಮಣ; ನಗರ: ಊರು; ಸತಿ: ಹೆಣ್ಣು, ಗರತಿ; ಕೊಟ್ಟ: ನೀಡಿದ; ಕುರುಹು: ಗುರುತು; ಹಸಿ: ಆಹಾರವನ್ನು ಬಯಸು; ಬೀದಿ: ರಸ್ತೆ; ತೊಳಲು: ಬವಣೆ, ಸಂಕಟ; ಘಸಣೆ: ತೊಂದರೆ; ಪುರ: ಊರು; ಅಂತ: ಕೊನೆ; ಕರ್ಕಶ: ಗಟ್ಟಿಯಾದ, ಕಠಿಣ; ಪುಳಿಂದರ: ಬೇಡ; ಕಂಡು: ನೋಡಿ; ಐತರು: ಬಂದು ಸೇರು;

ಪದವಿಂಗಡಣೆ:
ಹೆಸರು +ಧರ್ಮವ್ಯಾಧನ್+ಆತನ
ದೆಸೆಯಲ್+ಅರಿ+ ಹೋಗೆನಲು +ಬಂದನು
ವಸುಧೆಯಮರನು +ನಗರಿಗ್+ಆ+ಸತಿ+ ಕೊಟ್ಟ +ಕುರುಹಿನಲಿ
ಹಸಿದು +ಬೀದಿಗಳೊಳಗೆ +ತೊಳಲುತ
ಘಸಣಿಗೊಳುತ +ಪುರಾಂತದಲಿ +ಕ
ರ್ಕಶ +ಪುಳಿಂದರ +ಕೇರಿಯಿರೆ +ಕಂಡಲ್ಲಿಗೈ +ತಂದ

ಅಚ್ಚರಿ:
(೧) ವಸುಧೆಯಮರ – ಬ್ರಾಹ್ಮಣನಿಗೆ ಉಪಯೋಗಿಸಿದ ಪದ

ನಿಮ್ಮ ಟಿಪ್ಪಣಿ ಬರೆಯಿರಿ