ಪದ್ಯ ೧೧: ಧರ್ಮವ್ಯಾಧನು ತನ್ನನ್ನು ಹೇಗೆ ಪರಿಚಯಿಸಿದನು?

ಇವರು ಮಾತಾಪಿತೃಗಳೆನ್ನಯ
ಯುವತಿಯಿವಳಿವನೆನ್ನ ಮಗನಿಂ
ತಿವರ ರಕ್ಷೆಗೆ ಬೇಂಟೆಯಾಡುವೆನಡವಿಯಡವಿಯಲಿ
ಕವಲುಗೋಲಲಿ ಮೃಗಗಣವ ಕೊಂ
ದವನು ತಗೆನಂಗಡಿಯಲವ ಮಾ
ರುವೆನು ಲೋಭವನಿಲ್ಲಿ ಮಾಡೆನು ವಿಪ್ರ ಕೇಳೆಂದ (ಅರಣ್ಯ ಪರ್ವ, ೧೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ಧರ್ಮವ್ಯಾಧನು ತನ್ನನ್ನು ಪರಿಚಯಿಸಿಕೊಳ್ಳುತ್ತಾ, ಎಲೈ ಬ್ರಹ್ಮಚಾರಿಯೇ, ಇವರೇ ನನ್ನ ತಂದೆ ತಾಯಿ, ಈಕೆ ನನ್ನ ಪತ್ನಿ, ಹಾಗು ಇವನು ನನ್ನ ಮಗ, ಇವರನ್ನು ಸಲಹಲು ನಾನು ಬೇಟೆಯಾಡುತ್ತೇನೆ, ಕಾಡು ಕಾಡಿನಲ್ಲಿ ಅಲೆದು ಮೃಗಗಳನ್ನು ಕೊಂದು ಅಂಗಡಿಗೆ ತಂದು ಮಾರುತ್ತೇನೆ, ಲೋಭ ಮಾಡುವುದಿಲ್ಲವೆಂದು ಹೇಳಿದನು.

ಅರ್ಥ:
ಮಾತ: ತಾಯಿ; ಪಿತೃ: ತಂದೆ; ಯುವತಿ: ಹೆಣ್ಣು; ಮಗ: ಸುತ; ರಕ್ಷೆ: ಕಾಪಾದು; ಬೇಂಟೆ: ಪ್ರಾಣಿಗಳನ್ನು ಕೊಲ್ಲುವ ಕ್ರೀಡೆ; ಅಡವಿ: ಕಾಡು; ಕವಲುಗೋಲು: ಬಾಣ; ಮೃಗ: ಪಶು, ಪ್ರಾಣಿ; ಗಣ: ಗುಂಪು; ಕೊಲ್ಲು: ಸಾಯಿಸು; ತಹೆ: ತಂದು; ಅಂಗಡಿ: ವಸ್ತುಗಳನ್ನು ಮಾರುವ ಸ್ಥಳ; ಮಾರುವೆ: ವಿಕ್ರಯಿಸು; ಲೋಭ: ದುರಾಸೆ; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಇವರು +ಮಾತಾ+ಪಿತೃಗಳ್+ಎನ್ನಯ
ಯುವತಿ+ಇವಳ್+ಇವನೆನ್ನ +ಮಗನ್+ಇಂ
ತಿವರ+ ರಕ್ಷೆಗೆ +ಬೇಂಟೆಯಾಡುವೆನ್+ಅಡವಿ+ಅಡವಿಯಲಿ
ಕವಲುಗೋಲಲಿ+ ಮೃಗಗಣವ+ ಕೊಂದ್
ಅವನು +ತಗೆನ್+ಅಂಗಡಿಯಲ್+ಅವ+ ಮಾ
ರುವೆನು +ಲೋಭವನ್+ಇಲ್ಲಿ +ಮಾಡೆನು +ವಿಪ್ರ +ಕೇಳೆಂದ

ಅಚ್ಚರಿ:
(೧) ಪ್ರಾಣಿಯನ್ನು ಬೇಟೆಯಾಡುವ ಪರಿ – ಕವಲುಗೋಲಲಿ ಮೃಗಗಣವ ಕೊಂ
ದವನು ತಗೆನಂಗಡಿಯಲವ ಮಾರುವೆನು

ಪದ್ಯ ೧೦: ಧರ್ಮವ್ಯಾಧನ ತಂದೆ ತಾಯಿಯರ ಸ್ಥಿತಿ ಹೇಗಿತ್ತು?

ಒಳಗೆ ಮಂಚದ ಮೇಲೆ ನಡುಗುವ
ತಲೆಯ ತೆರಳಿದ ಮೈಯ್ಯ ಬೆಳುಪಿನ
ತಲೆನವಿರ ತಗ್ಗಿದ ಶರೀರದ ನೆಗ್ಗಿದವಯವದ
ತಳಿತ ಸೆರೆಗಳ ತಾರಿದಾನನ
ದಿಳಿದ ಹುಬ್ಬಿನ ಹುದಿದ ಕಣ್ಗಳ
ಚಲಿತ ವಚನದ ವೃದ್ಧರನು ತೋರಿದನು ಮುನಿಸುತಗೆ (ಅರಣ್ಯ ಪರ್ವ, ೧೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮವ್ಯಾಧನ ಮನೆಯೊಳಗೆ ಮಂಚದ ಮೇಲೆ ಅವನ ತಂದೆ ತಾಯಿಗಳಿದ್ದರು. ಅತಿವೃದ್ಧರಾದ ಅವರ ತಲೆಗಳು ನಡುಗುತ್ತಿದ್ದವು, ಮೈಗಳು ಕೃಶವಾಗಿದ್ದವು, ತಲೆಗೂದಲುಗಳು ನೆರೆತಿದ್ದವು, ಶರೀರ ಕುಗ್ಗಿದ್ದವು, ಅವಯವಗಳು ನೆಗ್ಗಿದ್ದವು, ನರಗಳು ಉಬ್ಬಿದ್ದವು, ಹುಬ್ಬುಗಲು ಜೋತು ಬಿದ್ದಿದ್ದವು, ಕಣ್ಣುಗಳು ಕುಳಿಬಿದ್ದಿದ್ದವು ಅವರ ಮಾತು ಅಸ್ಪಷ್ಟವಾಗಿದ್ದವು.

ಅರ್ಥ:
ಒಳಗೆ: ಅಂತರ್ಯ; ಮಂಚ: ಪರ್ಯಂಕ; ನಡುಗು: ಅಲ್ಲಾಡು; ತಲೆ: ಶಿರ; ತೆರಳು: ಸುಕ್ಕುಗಟ್ಟು; ಮೈಯ್ಯ: ತನು, ಶರೀರ; ಬೆಳುಪು: ಸಿತವರ್ಣ; ನವಿರು:ಕೂದಲು, ಕೇಶ; ತಗ್ಗು: ಕುಗ್ಗಿರುವ ಸ್ಥಿತಿ; ಶರೀರ: ದೇಹ; ನೆಗ್ಗು: ಕುಗ್ಗು, ಕುಸಿ; ಅವಯವ: ಶರೀರದ ಅಂಗ; ತಳಿತ: ಚಿಗುರಿದ; ಸೆರೆ: ನರ; ತಾರು: ಸೊರಗು, ಬಡಕಲಾಗು; ಆನನ: ಮುಖ; ಇಳಿ: ಜಗ್ಗು; ಹುಬ್ಬು: ಕಣ್ಣ ಮೇಲಿನ ಕೂದಲು; ಹುದಿ: ಒಳಸೇರು; ಕಣ್ಣು: ನಯನ; ಚಲಿತ: ಓಡಾಟ; ವಚನ:ಮಾತು; ವೃದ್ಧ: ವಯಸ್ಸಾದ; ತೋರು: ಗೋಚರ; ಮುನಿ: ಋಷಿ; ಸುತ: ಮಗ;

ಪದವಿಂಗಡಣೆ:
ಒಳಗೆ +ಮಂಚದ +ಮೇಲೆ +ನಡುಗುವ
ತಲೆಯ +ತೆರಳಿದ +ಮೈಯ್ಯ +ಬೆಳುಪಿನ
ತಲೆನವಿರ +ತಗ್ಗಿದ +ಶರೀರದ +ನೆಗ್ಗಿದ್+ಅವಯವದ
ತಳಿತ +ಸೆರೆಗಳ +ತಾರಿದ್+ಆನನದ್
ಇಳಿದ +ಹುಬ್ಬಿನ +ಹುದಿದ +ಕಣ್ಗಳ
ಚಲಿತ +ವಚನದ +ವೃದ್ಧರನು +ತೋರಿದನು +ಮುನಿಸುತಗೆ

ಅಚ್ಚರಿ:
(೧) ವೃದ್ಧರನ್ನು ವಿವರಿಸುವ ಪರಿ – ನಡುಗುವ ತಲೆಯ, ತೆರಳಿದ ಮೈಯ್ಯ, ಬೆಳುಪಿನ
ತಲೆನವಿರ, ತಗ್ಗಿದ ಶರೀರದ, ನೆಗ್ಗಿದವಯವದ, ಚಲಿತ ವಚನದ

ಪದ್ಯ ೯: ಬ್ರಹ್ಮಚಾರಿಯನ್ನು ಎಲ್ಲಿಗೆ ಕರೆದೊಯ್ದನು?

ಬರಬರಲು ದೂರದಲಿ ವಿಪ್ರನ
ಬರವ ಕಂಡಿದಿರಾಗಿ ಬಂದುಪ
ಚರಿಸಿದನು ಬಂದೈ ಪತಿವ್ರತೆಯೆನ್ನ ದೂರಿದಳೆ
ಧರಣಿಯಮರೋತ್ತಮರಿಗಿದು ಸಂ
ಚರಣ ಯೋಗ್ಯಸ್ಥಾನವಲ್ಲಾ
ದರಿಸುವೊಡೆ ಬಾಯೆನುತ ತನ್ನಾಲಯಕೆ ಕೊಂಡೊಯ್ದ (ಅರಣ್ಯ ಪರ್ವ, ೧೬ ಸಂಧಿ, ೯ ಪದ್ಯ)

ತಾತ್ಪರ್ಯ:
ಬ್ರಹ್ಮಚಾರಿಯು ಬರುವುದನ್ನು ದೂರದಿಮ್ದ ನೋಡಿ ಧರ್ಮವ್ಯಾಧನು ಬ್ರಹ್ಮಚಾರಿಗೆ ಎದುರಾಗಿ ಬಂದು ಉಪಚರದ ಮಾತನ್ನಾಡಿ, ಪತಿವ್ರತೆಯು ನನ್ನ ಬಳಿಗೆ ಕಳಿಸಿದಳೇ? ಬಂದೆಯಾ? ಬ್ರಾಹ್ಮಣೋತ್ತಮರು ಸುಳಿದಾಡಲು ಇದು ಯೋಗ್ಯವಾದ ಜಾಗವಲ್ಲ, ಇಲ್ಲಿ ನಿನ್ನನ್ನು ಆದರಿಸಲು ಬರುವುದಿಲ್ಲ, ಎಂದು ಹೇಳಿ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋದನು.

ಅರ್ಥ:
ಬರಬರಲು: ಹತ್ತಿರ ಆಗಮಿಸು; ದೂರ: ಅಂತರ; ವಿಪ್ರ: ಬ್ರಾಹ್ಮಣ; ಬರವ: ಆಗಮನ; ಕಂಡು: ನೋಡಿ; ಇದಿರಾಗು: ಎದುರು ಬಂದು; ಉಪಚರಿಸು: ಶುಶ್ರೂಷೆ, ನೋಡಿಕೊಳ್ಳು; ಪತಿವ್ರತೆ: ಗರತಿ; ದೂರು: ಕಳಿಸು; ಧರಣಿಯಮರ: ಬ್ರಾಹ್ಮಣ; ಉತ್ತಮ: ಶ್ರೇಷ್ಠ; ಸಂಚರಣ: ಓಡಾಟ; ಯೋಗ್ಯ: ಸರಿಯಾದ; ಸ್ಥಾನ: ಪ್ರದೇಶ; ಆದರಿಸು: ಗೌರವಿಸು; ಆಲಯ: ಮನೆ; ಕೊಂಡೊಯ್ದು: ಕರೆದುಕೊಂಡು ಹೋಗು;

ಪದವಿಂಗಡಣೆ:
ಬರಬರಲು +ದೂರದಲಿ +ವಿಪ್ರನ
ಬರವ+ ಕಂಡ್+ಇದಿರಾಗಿ +ಬಂದ್+ಉಪ
ಚರಿಸಿದನು +ಬಂದೈ +ಪತಿವ್ರತೆ+ಎನ್ನ +ದೂರಿದಳೆ
ಧರಣಿಯಮರ+ಉತ್ತಮರಿಗ್+ಇದು +ಸಂ
ಚರಣ+ ಯೋಗ್ಯಸ್ಥಾನವಲ್ಲ+
ಆದರಿಸುವೊಡೆ +ಬಾಯೆನುತ +ತನ್ನಾಲಯಕೆ +ಕೊಂಡೊಯ್ದ

ಅಚ್ಚರಿ:
(೧) ಬರವ, ಬರಬರಲು, ಬದು, ಬಂದೈ – ಪದಗಳ ಬಳಕೆ
(೨) ವಿಪ್ರ, ಧರಣಿಯಮರ – ಸಮನಾರ್ಥಕ ಪದ

ಪದ್ಯ ೮: ವ್ಯಾಧರ ಕೇರಿಯು ಹೇಗಿತ್ತು?

ಬಸೆನೆಣನ ಸುಂಟಗೆಯ ಹರಹಿದ
ಹಸಿಯತೊಗಲಿನ ತಳಿತ ಖಂಡದ
ಹಸರದುರುಗಲ ಕಾಳಿಜದ ಜಂಗಡೆಯ ಗಳಿಗೆಗಳ
ಬಸೆಯ ಹರವಿಯ ಸಾಲತೊರಳೆಗೆ
ಬೆಸಳಿಗೆಯ ಕುರಿದಲೆಯ ಹಂತಿಯ
ಕುಸುರಿದೆಲುವಿನ ಕೋದ ಮೀನಂಗಡಿಯಲೈತಂದ (ಅರಣ್ಯ ಪರ್ವ, ೧೬ ಸಂಧಿ, ೮ ಪದ್ಯ)

ತಾತ್ಪರ್ಯ:
ನೀರು ಬಸಿಯುತ್ತಿರುವ ಕೊಬ್ಬು, ಪ್ರಾಣಿಯ ಹೃದಯ, ಹರಡಿದ ಚರ್ಮಗಳು, ಮಾಂಸಖಂಡಗಳು, ಕೊಬ್ಬಿನ ಬುಟ್ಟಿಗಳು, ಬಸಿಯುವ ಪುಟ್ಟಿಗಳು, ಗಲ್ಮಾದಿಗಳನ್ನು ಹುರಿಯುವ ಅಗ್ಗಿಷ್ಟಿಕೆ, ಕುರಿದಲೆಗಳು, ಮೀನಿನ ಅಂಗಡಿಗಳನ್ನು ನೋಡುತ್ತಾ ಬ್ರಹ್ಮಚಾರಿಯು ವ್ಯಾಧರ ಕೇರಿಯಲ್ಲಿ ಬಂದನು.

ಅರ್ಥ:
ಬಸೆ: ಕೊಬ್ಬು; ಸುಂಟಗೆ: ಹೃದಯದ ಮಾಂಸ; ಹರಹು: ಹಬ್ಬುವಿಕೆ, ಪ್ರಸರ; ಹಸಿ: ಬಯಸು; ತೊಗಲು: ಚರ್ಮ, ತ್ವಕ್ಕು; ತಳಿತ:ಚಿಗುರಿದ; ಖಂಡ: ತುಂಡು, ಚೂರು; ಹಸರ: ಹರಡುವಿಕೆ; ಉರುಗ: ; ಕಾಳಿಜ: ಪಿತ್ತಾಶಯ; ಜಂಗಡೆ: ಮೀನಖಂಡ, ಮಾಂಸದ ರಾಶಿ; ಗಳಿಗೆ: ಮಡಿಕೆ; ಹರವಿ: ಗಡಿಗೆ; ಸಾಲ: ಸುತ್ತುಗೋಡೆ, ಪ್ರಾಕಾರ; ತೊರಳೆ: ಗುಲ್ಮ, ಪ್ಲೀಹ; ಬೆಸಳಿಗೆ: ಬಾಣಲಿಗೆ, ತವೆ; ಕುರಿ: ಆಡು; ತಲೆ: ಶಿರ; ಹಂತಿ: ಸಾಲು; ಪಂಕ್ತಿ; ಕುಸುರಿ: ತುಂಡು; ಎಲುಬು: ಮೂಳೆ; ಕೋದು: ಸೇರಿಸು; ಮೀನು:ಮತ್ಸ್ಯ; ಅಂಗಡಿ: ವಸ್ತುಗಲನ್ನು ಮಾರುವ ಸ್ಥಳ; ಐತರು: ಬಂದು ಸೇರು;

ಪದವಿಂಗಡಣೆ:
ಬಸೆ+ನೆಣನ +ಸುಂಟಗೆಯ +ಹರಹಿದ
ಹಸಿಯ+ತೊಗಲಿನ +ತಳಿತ +ಖಂಡದ
ಹಸರದ್+ಉರುಗಲ +ಕಾಳಿಜದ +ಜಂಗಡೆಯ +ಗಳಿಗೆಗಳ
ಬಸೆಯ +ಹರವಿಯ +ಸಾಲ+ತೊರಳೆಗೆ
ಬೆಸಳಿಗೆಯ +ಕುರಿ+ತಲೆಯ+ ಹಂತಿಯ
ಕುಸುರಿದ್+ಎಲುವಿನ +ಕೋದ +ಮೀನಂಗಡಿಯಲ್+ಐತಂದ

ಅಚ್ಚರಿ:
(೧) ಬೇಡರ ಬೀದಿಯನ್ನು ವಿವರಿಸುವ ಪದ್ಯ – ತೊಗಲು, ಖಂಡ, ಕಾಳಿಜ, ಜಂಗಡೆ, ಕುರಿತಲೆ, ಹಂತಿ, ಮೀನು – ಪದಗಳ ಬಳಕೆ

ಪದ್ಯ ೭: ಬ್ರಾಹ್ಮಣನು ಯಾರ ಕೇರಿಗೆ ಬಂದನು?

ಹೆಸರು ಧರ್ಮವ್ಯಾಧನಾತನ
ದೆಸೆಯಲರಿ ಹೋಗೆನಲು ಬಂದನು
ವಸುಧೆಯಮರನು ನಗರಿಗಾಸತಿ ಕೊಟ್ಟ ಕುರುಹಿನಲಿ
ಹಸಿದು ಬೀದಿಗಳೊಳಗೆ ತೊಳಲುತ
ಘಸಣಿಗೊಳುತ ಪುರಾಂತದಲಿ ಕ
ರ್ಕಶ ಪುಳಿಂದರ ಕೇರಿಯಿರೆ ಕಂಡಲ್ಲಿಗೈ ತಂದ (ಅರಣ್ಯ ಪರ್ವ, ೧೬ ಸಂಧಿ, ೭ ಪದ್ಯ)

ತಾತ್ಪರ್ಯ:
ಅವನ ಹೆಸರು ಧರ್ಮವ್ಯಾಧ ಅವನಿಂದ ನೀನು ಧರ್ಮದ ಸಾರವನ್ನರಿಯಲು ಹೋಗು, ಎಂದು ಪತಿವ್ರತೆಯು ಹೇಳಲು ಆ ಬ್ರಾಹ್ಮಣನು ಅವಳು ಹೇಳಿದ ಗುರುತನ್ನು ತಿಳಿದು ಆ ಪಟ್ಟಣಕ್ಕೆ ಹೋದನು. ಅಲ್ಲಿ ಬೀದಿ ಬೀದಿಗಳನ್ನು ಹಸಿವಿನ ಬಾಧೆಯನ್ನು ಲೆಕ್ಕಿಸದೆ ಕಷ್ಟದಿಮ್ದ ಅಲೆದು ಊರಿನ ತುದಿಗೆ ಬೇಡರ ಕರ್ಕಶವಾದ ಕೇರಿಯನ್ನು ಕಂಡು ಅಲ್ಲಿಗೆ ಹೋದನು.

ಅರ್ಥ:
ಹೆಸರು: ನಾಮ; ದೆಸೆ: ದಿಕ್ಕು; ಅರಿ: ತಿಳಿ; ಹೋಗು: ತೆರಳು; ವಸುಧೆ: ಭೂಮಿ; ವಸುಧೆಯಮರ: ಬ್ರಾಹ್ಮಣ; ನಗರ: ಊರು; ಸತಿ: ಹೆಣ್ಣು, ಗರತಿ; ಕೊಟ್ಟ: ನೀಡಿದ; ಕುರುಹು: ಗುರುತು; ಹಸಿ: ಆಹಾರವನ್ನು ಬಯಸು; ಬೀದಿ: ರಸ್ತೆ; ತೊಳಲು: ಬವಣೆ, ಸಂಕಟ; ಘಸಣೆ: ತೊಂದರೆ; ಪುರ: ಊರು; ಅಂತ: ಕೊನೆ; ಕರ್ಕಶ: ಗಟ್ಟಿಯಾದ, ಕಠಿಣ; ಪುಳಿಂದರ: ಬೇಡ; ಕಂಡು: ನೋಡಿ; ಐತರು: ಬಂದು ಸೇರು;

ಪದವಿಂಗಡಣೆ:
ಹೆಸರು +ಧರ್ಮವ್ಯಾಧನ್+ಆತನ
ದೆಸೆಯಲ್+ಅರಿ+ ಹೋಗೆನಲು +ಬಂದನು
ವಸುಧೆಯಮರನು +ನಗರಿಗ್+ಆ+ಸತಿ+ ಕೊಟ್ಟ +ಕುರುಹಿನಲಿ
ಹಸಿದು +ಬೀದಿಗಳೊಳಗೆ +ತೊಳಲುತ
ಘಸಣಿಗೊಳುತ +ಪುರಾಂತದಲಿ +ಕ
ರ್ಕಶ +ಪುಳಿಂದರ +ಕೇರಿಯಿರೆ +ಕಂಡಲ್ಲಿಗೈ +ತಂದ

ಅಚ್ಚರಿ:
(೧) ವಸುಧೆಯಮರ – ಬ್ರಾಹ್ಮಣನಿಗೆ ಉಪಯೋಗಿಸಿದ ಪದ