ಪದ್ಯ ೩೪: ಭೂಮಿಗೆ ಅಧಿಪತಿಯಾರು?

ಆರಜೋಗುಣಕಬುಜಭವನ ವಿ
ಕಾರಿ ತನ್ನ ಶರೀರದರ್ಧವ
ನಾರಿಯನು ಮಾಡಿದನು ಶತರೂಪಾಭಿಧಾನದಲಿ
ಸೇರಿಸಿದನರ್ಧದಲಿ ಮನುವನು
ದಾರ ಚರಿತನು ಸಕಲ ಧರ್ಮದ
ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ (ಅರಣ್ಯ ಪರ್ವ, ೧೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ರಜೋಗುಣದ ಬ್ರಹ್ಮನು ತನ್ನ ಶರೀರದ ಅರ್ಧದಿಂದ ಶತರೂಪೆಯನ್ನು ಸೃಷ್ಟಿಸಿದನು. ಇನ್ನರ್ಧದಿಂದ ಮನುವನ್ನು ಸೃಷ್ಟಿಸಿದನು. ಮನುವು ಭೂಮಿಗೆ ಅಧಿಪತಿಯಾಗಿ ಧರ್ಮವನ್ನು ವಿಸ್ತರಿಸಿದನು.

ಅರ್ಥ:
ರಜಸ್ಸು: ಮೂರು ಗುಣಗಳಲ್ಲಿ ಒಂದು; ಗುಣ: ನಡತೆ, ಸ್ವಭಾವ; ಅಬುಜಭವ: ಬ್ರಹ್ಮ; ವಿಕಾರ: ಬದಲಾವಣೆ, ಮಾರ್ಪಾಟು; ಶರೀರ: ದೇಹ; ಅರ್ಧ: ಒಂದರ ಎರಡನೇ ಭಾಗ; ನಾರಿ: ಹೆಣ್ಣು; ಶತ: ನೂರು; ರೂಪ: ಆಕಾರ; ಅಭಿಧಾನ: ಹೆಸರು; ಸೇರಿಸು: ಜೋಡಿಸು; ಮನು:ಮನುಷ್ಯ ಕುಲದ ಮೂಲಪುರುಷ; ಉದಾರ: ತ್ಯಾಗ ಬುದ್ಧಿಯುಳ್ಳವನು; ಚರಿತ: ನಡೆದುದು; ಸಕಲ: ಎಲ್ಲಾ; ಧರ್ಮ: ಧಾರಣೆ ಮಾಡಿದುದು; ಸಾರ: ರಸ; ವಿಸ್ತರ: ಹಬ್ಬುಗೆ, ವಿಸ್ತಾರ; ಭುವನ: ಲೋಕ, ಜಗತ್ತು; ವಿಭು:ಒಡೆಯ, ಅರಸು;

ಪದವಿಂಗಡಣೆ:
ಆ+ರಜೋಗುಣಕ್+ಅಬುಜಭವನ+ ವಿ
ಕಾರಿ +ತನ್ನ +ಶರೀರ್+ಅರ್ಧವ
ನಾರಿಯನು +ಮಾಡಿದನು +ಶತರೂಪ+ಅಭಿಧಾನದಲಿ
ಸೇರಿಸಿದನ್+ಅರ್ಧದಲಿ +ಮನುವನ್
ಉದಾರ +ಚರಿತನು +ಸಕಲ +ಧರ್ಮದ
ಸಾರವನು +ವಿಸ್ತರಿಸಿದನು+ ಮನು +ಭುವನ +ವಿಭುವಾಗಿ

ಅಚ್ಚರಿ:
(೧) ಮನುವಿನ ಕಾರ್ಯ – ಸೇರಿಸಿದನರ್ಧದಲಿ ಮನುವನುದಾರ ಚರಿತನು ಸಕಲ ಧರ್ಮದ ಸಾರವನು ವಿಸ್ತರಿಸಿದನು ಮನು ಭುವನ ವಿಭುವಾಗಿ

ಪದ್ಯ ೩೩: ಯಾವುದು ಪರಬ್ರಹ್ಮನ ಲೀಲಾ ವಿನೋದ?

ಏಕಮೇವಾದ್ವಿತಿಯವೆಂಬ ನಿ
ರಾಕುಳಿತ ತೇಜೋನಿಧಿಗೆ ಮಾ
ಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ
ಆ ಕಮಲಭವನೀ ಮುಕುಂದ ಪಿ
ನಾಕಿಯೆಂಬಭಿದಾನದಲಿ ತ್ರಿಗು
ಣಾಕೃತಿಯ ಕೈಕೊಂಡನುರು ಲೀಲಾ ವಿನೋದದಲಿ (ಅರಣ್ಯ ಪರ್ವ, ೧೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ತನಗೆರಡೆಯದಿಲ್ಲದ ಒಂದೇ ಆದ ನಿಶ್ಚಿಂತನಾದ ತೇಜೋ ರೂಪಿಯಾದವನಿಗೆ ಮಾಯೆಯೆಂಬ ಪತ್ನಿಯಿಂದ ತ್ರಿಗುಣಗಳ ಭೇದವಾದಂತೆ ತೋರುತ್ತದೆ. ಆದುದರಿಂದ ಬ್ರಹ್ಮ, ವಿಷ್ಣು, ಶಿವರೆಂಬ ಹೆಸರಿನಿಂದ ತ್ರಿಗುಣಾಕೃತಿಯನ್ನು ಪಡೆದಂತೆ ತೋರುತ್ತದೆ. ಇದು ಆ ಪರಬ್ರಹ್ಮನ ಮಹಾಲೀಲಾ ವಿನೋದ.

ಅರ್ಥ:
ಏಕಮೇವ: ಒಂದೇ ಒಂದು; ಅದ್ವಿತೀಯ: ಎರಡನೆಯದಿಲ್ಲದ, ತನಗೆ ಸಮನಾದ ಬೇರೊಂದಿಲ್ಲದ; ನಿರಾಕುಳ: ನಿರಾತಂಕ; ತೇಜಸ್ಸು: ಕಾಂತಿ; ನಿಧಿ: ಐಶ್ವರ್ಯ; ಮಾಯಾ: ಗಾರುಡಿ; ಕಳತ್ರ: ಹೆಂಡತಿ; ನಿಜಗುಣ: ತನ್ನ ಸ್ವಭಾವ; ಭೇದ: ಮುರಿ, ಬಿರುಕು; ಕಮಲಭವ: ಬ್ರಹ್ಮ; ಮುಕುಂದ: ಕೃಷ್ಣ; ಪಿನಾಕಿ: ಶಿವ; ಅಭಿದಾನ: ಹೆಸರು; ತ್ರಿಗುಣ: ಮೂರು ಗುಣಗಳು; ಆಕೃತಿ: ರೂಪ; ಕೈಕೊಂಡು: ಜವಾಬ್ದಾರಿ ವಹಿಸು; ಉರು: ಹೆಚ್ಚಿನ; ಲೀಲಾ: ವಿಲಾಸ, ಬೆಡಗು; ವಿನೋದ: ಸಂತೋಷ, ಹಿಗ್ಗು;

ಪದವಿಂಗಡಣೆ:
ಏಕಮೇವ+ಅದ್ವಿತಿಯವೆಂಬ +ನಿ
ರಾಕುಳಿತ +ತೇಜೋನಿಧಿಗೆ+ ಮಾ
ಯಾ+ಕಳತ್ರದೊಳ್+ಆಯ್ತು +ನಿಜಗುಣ+ ಭೇದವ್+ಅದರಿಂದ
ಆ +ಕಮಲಭವನ್+ಈ+ ಮುಕುಂದ +ಪಿ
ನಾಕಿ+ಎಂವ್+ಅಭಿದಾನದಲಿ+ ತ್ರಿಗು
ಣಾಕೃತಿಯ +ಕೈಕೊಂಡನ್+ಉರು +ಲೀಲಾ +ವಿನೋದದಲಿ

ಅಚ್ಚರಿ:
(೧) ಸಂಸ್ಕೃತ ನುಡಿಯ ಬಳಕೆ – ಏಕಮೇವಾದ್ವಿತಿಯ
(೨) ಗುಣಗಳು ಹುಟ್ಟಿದ ಪರಿ – ನಿರಾಕುಳಿತ ತೇಜೋನಿಧಿಗೆ ಮಾಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ

ಪದ್ಯ ೩೨: ಅವಿದ್ಯಾ ಪ್ರಪಂಚವು ಹೇಗೆ ತೋರುತ್ತದೆ?

ಏಸುದಿನವೀ ಜಗದ ಬಾಳುವೆ
ಯೇಸುದಿನವೀ ಪ್ರಳಯಮಯ ಪರಿ
ಭಾಸಮಾನ ಬ್ರಹ್ಮತೇಜೋರೂಪವೇಸುದಿನ
ಆ ಸದಾನಂದೈಕರಸಕೆ ಪ್ರ
ಕಾಶಿತವವಿದ್ಯಾಪ್ರಪ್ರಂಚ ವಿ
ಲಾಸವಾಯ್ತು ವಿಭಾಗ ಸೃಷ್ಟಿ ವಿಧಾನ ಚಿಂತೆಯಲಿ (ಅರಣ್ಯ ಪರ್ವ, ೧೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಈ ಜಗತ್ತಿನ ಬಾಳ್ವಿಕೆಯು ಎಷ್ಟು ದಿನ, ನಾಶಕ್ಕೀಡಾಗುವ ಭ್ರಾಂತಿಯಿಂದ ತೋರುವ ಬ್ರಹ್ಮದ ತೇಜಸ್ಸಿನ ಕಲ್ಪಿತ ರೂಪ ಎಷ್ಟು ದಿನ? ಆ ಸದಾನಂದ ರಸವು ಅವಿದ್ಯೆಯಿಂದ ಪ್ರಪಂಚವಾಗಿ ತೋರಿಸು, ಬ್ರಹ್ಮವು ತಾನು ಬಹುವಾಗುವೆನೆಂದು ಯೋಚಿಸಿದುದರಿಂದ ಈ ಅವಿದ್ಯಾ ಪ್ರಪಂಚದ ವಿಭಾಗವು ತೋರುತ್ತದೆ ಎಂದು ಮುನಿಪನು ವಿವರಿಸಿದನು.

ಅರ್ಥ:
ಏಸು: ಎಷ್ಟು; ದಿನ: ವಾರ; ಜಗ: ಪ್ರಪಂಚ; ಬಾಳು: ಜೀವಿಸು; ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಪರಿಭಾಸಮಾನ: ವಿಶೇಷ ಪ್ರಕಾಶವಾದ; ಬ್ರಹ್ಮ: ವಿರಿಂಚಿ; ತೇಜ: ಪ್ರಕಾಶ; ರೂಪ: ಆಕೃತಿ; ಆನಂದ: ಸಂತಸ; ಐಕರಸ: ಒಂದಾಗುವಿಕೆ; ಪ್ರಕಾಶ: ಕಾಂತಿ; ವಿದ್ಯಾ: ಜ್ಞಾನ; ಪ್ರಪಂಚ: ಜಗತ್ತು; ವಿಲಾಸ: ಕ್ರೀಡೆ, ವಿಹಾರ; ವಿಭಾಗ: ವಿಂಗಡಣೆ, ಹಂಚಿಕೆ; ಸೃಷ್ಟಿ: ಹುಟ್ಟು; ವಿಧಾನ: ರೀತಿ, ಬಗೆ; ಚಿಂತೆ: ಯೋಚನೆ;

ಪದವಿಂಗಡಣೆ:
ಏಸುದಿನವ್+ಈ+ಜಗದ +ಬಾಳುವೆ
ಯೇಸು+ದಿನವ್+ಈ+ ಪ್ರಳಯಮಯ+ ಪರಿ
ಭಾಸಮಾನ+ ಬ್ರಹ್ಮ+ತೇಜೋರೂಪವ್+ಏಸುದಿನ
ಆ +ಸದಾನಂದೈಕರಸಕೆ+ ಪ್ರ
ಕಾಶಿತವ್+ಅವಿದ್ಯಾ+ಪ್ರಪ್ರಂಚ +ವಿ
ಲಾಸವಾಯ್ತು +ವಿಭಾಗ +ಸೃಷ್ಟಿ +ವಿಧಾನ +ಚಿಂತೆಯಲಿ

ಅಚ್ಚರಿ:
(೧) ಏಸುದಿನ – ೩ ಬಾರಿ ಪ್ರಯೋಗ

ಪದ್ಯ ೩೧: ಯಾವುದರಲ್ಲಿ ಯಾವುದು ಲೀನವಾಯಿತು?

ಆ ಮಹಾಜಲಕಗ್ನಿ ಮುಖದಲಿ
ಹೋಮವಾಯ್ತು ತದಗ್ನಿಯಡಗಿದು
ದಾಮರುತ್ತಿನಲಾ ಬಹಳ ಬಹಿರಾವರಣದಲಿ ಪವನ
ವ್ಯೋಮಕಾ ತದಹಂ ಮಹತ್ತು ವಿ
ರಾಮ ವಾ ಪ್ರಕೃತಿಯಲಿ ಮಾಯಾ
ಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ (ಅರಣ್ಯ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಂತರ ಆ ಮಹಾ ಜಲರಾಶಿಯು ಅಗ್ನಿಯಲ್ಲಿ ಹೋಮವಾಯಿತು, ಅಗ್ನಿಯು ವಾಯುವಿನಲ್ಲಿ, ವಾಯುವ ಆಕಾಶದಲ್ಲಿ, ಆಗಸವು ಅಹಂತತ್ತ್ವದಲ್ಲಿ, ಅಹಂ ತತ್ತ್ವವು ಮಹತತ್ತ್ವದಲ್ಲಿ ಮತ್ತು ಮಹತ್ತು ಮಾಯೆಯಲ್ಲಿ ಅಡಗಿತು, ಮಾಯೆಯು ಪರಮಾತ್ಮನಲ್ಲಿ ಲಯವಾಯಿತು ಎಂದು ಮಾರ್ಕಂಡೇಯ ಮುನಿಯು ವಿವರಿಸಿದನು.

ಅರ್ಥ:
ಮಹಾ: ದೊಡ್ಡ; ಜಲ: ನೀರು; ಅಗ್ನಿ: ಬೆಂಕಿ; ಮುಖ: ಆನನ; ಹೋಮ: ಯಜ್ಞ; ಅಡಗು: ಮರೆಯಾಗು, ಮುಚ್ಚು; ಮರುತ: ಗಾಳಿ; ಬಹಳ: ತುಂಬ; ಬಹಿರ: ಹೊರಗೆ; ಆವರಣ: ಮುಸುಕು, ಹೊದಿಕೆ; ಪವನ: ವಾಯು; ವ್ಯೋಮ: ಆಗಸ; ಅಹಂ: ಅಹಂಕಾರ; ಮಹತ್ತು: ಹಿರಿದು, ಶ್ರೇಷ್ಠವಾದುದು; ವಿರಾಮ: ಬಿಡುವು, ವಿಶ್ರಾಂತಿ; ಪ್ರಕೃತಿ: ನೈಜವಾದುದು; ಮಾಯ: ಗಾರುಡಿ, ಇಂದ್ರಜಾಲ;ಕಾಮಿನಿ: ಹೆಣ್ಣು; ಪರಮಾತ್ಮ: ಭಗವಮ್ತ; ಲಯ: ನಾಶ, ಲೀನ; ಮುನಿಪ: ಋಷಿ;

ಪದವಿಂಗಡಣೆ:
ಆ +ಮಹಾಜಲಕ್+ಅಗ್ನಿ+ ಮುಖದಲಿ
ಹೋಮವಾಯ್ತು +ತದಗ್ನಿ+ಅಡಗಿದುದ್
ಆ+ಮರುತ್ತಿನಲ್+ಆ+ಬಹಳ+ ಬಹಿರಾವರಣದಲಿ +ಪವನ
ವ್ಯೋಮಕ+ಆ+ ತದ್+ಅಹಂ+ ಮಹತ್ತು+ ವಿ
ರಾಮ+ ವಾ +ಪ್ರಕೃತಿಯಲಿ+ ಮಾಯಾ
ಕಾಮಿನಿಗೆ +ಪರಮಾತ್ಮನಲಿ+ ಲಯವೆಂದನಾ+ ಮುನಿಪ

ಅಚ್ಚರಿ:
(೧) ಮಾಯಯು ಅಡಗಿದ ಪರಿ – ಮಾಯಾಕಾಮಿನಿಗೆ ಪರಮಾತ್ಮನಲಿ ಲಯವೆಂದನಾ ಮುನಿಪ

ಪದ್ಯ ೩೦: ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರು ಹೇಗೆ ಬಂತು?

ಹಲವು ಯುಗ ಪರಿಯಂತವಲ್ಲಿಯೆ
ತೊಳಲಿ ಕಡೆಗಾಣದೆ ಕೃಪಾಳುವ
ನೊಲಿದು ಹೊಗಳಿದನಜನು ವೇದ ಸಹಸ್ರಸೂಕ್ತದ್ಲಿ
ಬಳಿಕ ಕಾರುಣ್ಯದಲಿ ನಾಭೀ
ನಳಿನದಲಿ ತೆಗೆದನು ವಿರಿಂಚಿಗೆ
ನಳಿನ ಸಂಭವನೆಂಬ ಹೆಸರಾಯ್ತಮ್ದು ಮೊದಲಾಗಿ (ಅರಣ್ಯ ಪರ್ವ, ೧೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಬ್ರಹ್ಮನು ವಿಷ್ಣುವಿನ ಹೊಟ್ಟೆಯೊಳ ಹೊಕ್ಕು ಬಹಳ ವರ್ಷಗಳಾಯಿತು, ಅವನು ದಾರಿಕಾಣದೆ, ಕೃಪಾಳುವಾದ ಶ್ರೀ ಹರಿಯನ್ನು ವೇದ ಸಹಸ್ರ ಸೂಕ್ತದಿಂದ ಹೊಗಳಿದನು, ಆಗ ವಿಷ್ಣುವು ಕರುಣೆಯಿಂದ ತನ್ನ ಹೊಕ್ಕಳಿನ ಕಮಲದಿಂದ ಬ್ರಹ್ಮನನ್ನು ಹೊರತೆಗೆದನು. ಅಂದಿನಿಂದ ಬ್ರಹ್ಮನಿಗೆ ನಳಿನಸಂಭವ ಎಂಬ ಹೆಸರಾಯಿತು.

ಅರ್ಥ:
ಹಲವು: ಬಹಳ; ಯುಗ: ಸಮಯ; ಪರಿಯಂತ: ಕಳೆದು, ಮುಗಿಸು; ತೊಳಲು: ಬವಣೆ, ಸಂಕಟ; ಕಡೆ: ಕೊನೆ; ಕಾಣು: ತೋರು; ಕೃಪಾಳು: ದಯೆತೋರುವ; ಒಲಿ: ಒಪ್ಪು, ಸಮ್ಮತಿಸು; ಹೊಗಳು: ಪ್ರಶಂಶಿಸು; ಅಜ: ಬ್ರಹ್ಮನು; ವೇದ: ಶೃತಿ; ಸಹಸ್ರ: ಸಾವಿರ; ಸೂಕ್ತ: ಹಿತವಚನ; ಬಳಿಕ: ನಂತರ; ಕಾರುಣ್ಯ: ದಯೆ; ನಾಭಿ: ಹೊಕ್ಕಳು; ನಳಿನ: ಕಮಲ; ತೆಗೆ: ಹೊರತರು; ವಿರಿಂಚಿ: ಬ್ರಹ್ಮ; ಸಂಭವ: ಹುಟ್ಟು; ಹೆಸರು: ನಾಮ; ಮೊದಲು: ಮುಂಚೆ;

ಪದವಿಂಗಡಣೆ:
ಹಲವು +ಯುಗ +ಪರಿಯಂತವ್+ಅಲ್ಲಿಯೆ
ತೊಳಲಿ +ಕಡೆ+ಕಾಣದೆ+ ಕೃಪಾಳುವನ್
ಒಲಿದು +ಹೊಗಳಿದನ್+ಅಜನು +ವೇದ +ಸಹಸ್ರ+ಸೂಕ್ತದಲಿ
ಬಳಿಕ +ಕಾರುಣ್ಯದಲಿ +ನಾಭೀ
ನಳಿನದಲಿ +ತೆಗೆದನು +ವಿರಿಂಚಿಗೆ
ನಳಿನ ಸಂಭವನೆಂಬ +ಹೆಸರಾಯ್ತಂದು+ ಮೊದಲಾಗಿ

ಅಚ್ಚರಿ:
(೧) ವಿರಿಂಚಿ, ಅಜ, ನಳಿನಸಂಭವ – ಸಮನಾರ್ಥಕ ಪದಗಳು