ಪದ್ಯ ೨೦: ಮತ್ಸ್ಯಾವತಾರದ ಲೀಲೆ ಎಂತಹುದು?

ಜಗದ ಜೀವರ ಕರ್ಮಬೀಜಾ
ಳಿಗಳ ಭೈತ್ರವ ತನ್ನ ಬಾಲಕೆ
ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ
ಬಗೆಯಲಾಹರಿ ಈತನೇ ದೃ
ಗ್ಯುಗಳ ಗೋಚರನಾದನರಸುವ
ನಿಗಮವೀತನ ಹೆಜ್ಜೆಗಾಣವು ಭೂಪ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೨೦ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ ರಾಜ, ಆಗ ಶ್ರೀಹರಿಯು ಜಗತ್ತಿನ ಎಲ್ಲಾ ಜೀವಿಗಳ ಕರ್ಮ ಬೀಜಗಳ ದೋಣಿಯನ್ನು ತನ್ನ ಬಾಲಕ್ಕೆ ಕಟ್ಟಿಕೊಂಡು, ಮತ್ಸ್ಯಾವತಾರದಲ್ಲಿ ನೀರನ್ನು ಹೊಕ್ಕನು. ವೇದಗಳು ಯಾರ ಹೆಜ್ಜೆಯನ್ನು ಕಂಡಿಲ್ಲವೋ ಅವನು ಕಣ್ಣಿಗೆ ಕಾಣಿಸಿಕೊಂಡನು.

ಅರ್ಥ:
ಜಗ: ಜಗತ್ತು, ಪ್ರಪಂಚ; ಜೀವ: ಉಸಿರಾಡುವ; ಕರ್ಮ: ಕಾರ್ಯ; ಬೀಜ: ಮೂಲವಸ್ತು; ಆಳಿ: ಗುಂಪು; ಭೈತ್ರ: ಹಡಗು; ಬಾಲ: ಪುಚ್ಛ; ಬಿಗಿ: ಬಂಧಿಸು; ನೀರು: ಜಲ; ನುಸುಳು: ತಪ್ಪಿಸಿಕೊಂಡು ಹೋಗು,ನುಣುಚಿಕೊಳ್ಳುವಿಕೆ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು; ಮತ್ಸ್ಯ: ಮೀನು; ಬಗೆ: ಆಲೋಚನೆ, ಅಭಿಪ್ರಾಯ; ದೃಗು: ದೃಕ್ಕು, ದೃಶ್ಯ; ಗೋಚರ: ಕಾಣಿಸಿಕೊಳ್ಳು; ಅರಸು: ಹುಡುಕು; ನಿಗಮ: ವೇದ; ಹೆಜ್ಜೆ: ಅಡಿ, ಪಾದ; ಕಾಣು: ತೋರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜಗದ +ಜೀವರ +ಕರ್ಮಬೀಜಾ
ಳಿಗಳ+ ಭೈತ್ರವ +ತನ್ನ +ಬಾಲಕೆ
ಬಿಗಿದು +ನೀರಲಿ +ನುಸುಳಿದನು +ಮತ್ಸ್ಯಾವತಾರದಲಿ
ಬಗೆಯಲಾ+ಹರಿ +ಈತನೇ +ದೃ
ಗ್ಯುಗಳ +ಗೋಚರನಾದನ್+ಅರಸುವ
ನಿಗಮವ್+ಈತನ +ಹೆಜ್ಜೆ+ಕಾಣವು +ಭೂಪ +ಕೇಳೆಂದ

ಅಚ್ಚರಿ:
(೧) ಮತ್ಸ್ಯಾವತಾರದ ಲೀಲೆ: ಕರ್ಮಬೀಜಾಳಿಗಳ ಭೈತ್ರವ ತನ್ನ ಬಾಲಕೆ ಬಿಗಿದು ನೀರಲಿ ನುಸುಳಿದನು ಮತ್ಸ್ಯಾವತಾರದಲಿ

ನಿಮ್ಮ ಟಿಪ್ಪಣಿ ಬರೆಯಿರಿ