ಪದ್ಯ ೧೪: ಕೃಷ್ಣನು ಧರ್ಮಜನಿಗೆ ಏನು ಹೇಳಿದನು?

ಏಳೆನುತ ತೆಗೆದಪ್ಪಿದನು ಕರು
ಣಾಳು ಕೇಳೈ ಭೂಪ ಸುರಪತಿ
ಯಾಲಯದೊಳೂರ್ವಶಿಯ ಶಾಪವು ಬಂದೊಡೇನಾಯ್ತು
ಲೀಲೆಯಿಂದೀ ಭೀಮ ದೈತ್ಯರ
ಭಾಲಲಿಪಿಯನು ತೊಡೆದ ನಿನ್ನಯ
ಬಾಳು ಬರಹವು ಮುಂದೆಯೆಂದನು ನಗುತ ಮುರವೈರಿ (ಅರಣ್ಯ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕರುಣಾಳವಾದ ಶ್ರೀಕೃಷ್ನನು ಧರ್ಮನಂದನನ್ನು ಏಳು ಎಂದು ಹೇಳಿ ಅವನನ್ನು ಆಲಂಗಿಸಿಕೊಂಡು ನಗುತ್ತಾ, ಅರ್ಜುನನಿಗೆ ಊರ್ವಶಿಯ ಶಾಪ ಬಂದರೇನಂತೆ? ಭೀಮನು ರಾಕ್ಷಸರನ್ನು ಸಂಹರಿಸಿದನಷ್ಟೇ, ಮುಂದೆ ನಿನ್ನ ಜೀವನಯನ್ನು ನೋಡು ಎಂದನು.

ಅರ್ಥ:
ಏಳು: ಮೇಲೆ ಬಾ; ಅಪ್ಪು: ಆಲಿಂಗಿಸು; ಕರುಣಾಳು: ದಯೆಯುಳ್ಳವನು; ಭೂಪ: ರಾಜ; ಸುರಪತಿ: ಇಂದ್ರ; ಆಲಯ: ಮನೆ; ಶಾಪ: ನಿಷ್ಠುರದ ನುಡಿ; ಲೀಲೆ: ಆಟ, ಕ್ರೀಡೆ; ದೈತ್ಯ: ರಾಕ್ಷಸ; ಭಾಳಲಿಪಿ: ಹಣೆಬರಹ; ತೊಡೆ: ಅಳಿಸು, ಒರಸು; ಬಾಳು: ಜೀವನ; ಬರಹ: ಲಿಖಿತ; ನಗು: ಸಂತಸ; ಮುರವೈರಿ: ಕೃಷ್ಣ;

ಪದವಿಂಗಡಣೆ:
ಏಳೆನುತ +ತೆಗೆದಪ್ಪಿದನು +ಕರು
ಣಾಳು +ಕೇಳೈ +ಭೂಪ +ಸುರಪತಿ
ಆಲಯದೊಳ್+ಊರ್ವಶಿಯ +ಶಾಪವು +ಬಂದೊಡೇನಾಯ್ತು
ಲೀಲೆಯಿಂದೀ+ ಭೀಮ +ದೈತ್ಯರ
ಭಾಳಲಿಪಿಯನು +ತೊಡೆದ +ನಿನ್ನಯ
ಬಾಳು +ಬರಹವು +ಮುಂದೆ+ಎಂದನು +ನಗುತ +ಮುರವೈರಿ

ಅಚ್ಚರಿ:
(೧) ಭಾಳಲಿಪಿ, ಬಾಳುಬರಹ – ಹಣೆಬರಹ, ಜೀವನ ಬರಹ – ಪದಗಳ ಬಳಕೆ

ಪದ್ಯ ೧೩: ಪಾಂಡವರ ಆಯಾಸ ಹೇಗೆ ದೂರವಾಯಿತು?

ಮರಳಿ ಕಾಮ್ಯಕವನದ ದಳ ಮಂ
ದಿರವನೇ ನೆಲೆ ಮಾಡಿದೆವು ವಿ
ಸ್ತರಣವಿದು ಹಿಂದಾದ ವಿಪಿನಾಂತರ ಪರಿಭ್ರಮದಿ
ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂ
ಪರೆಗೆ ಬಿಡುಗಡೆಯಾಯ್ತೆನುತ ಮೈಯಿಕ್ಕಿದನು ಭೂಪ (ಅರಣ್ಯ ಪರ್ವ, ೧೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನಾವು ಮತ್ತೆ ಕಾಮ್ಯಕವನದಲ್ಲೇ ಬೀಡು ಬಿಟ್ಟೆವು. ನಮ್ಮ ವನವಾಸದ ತಿರುಗಾಟದ ವಿವರವದು. ಎಲೈ ಕರುಣಾಶಾಲಿಯೇ, ನಿಮ್ಮ ಪಾದಕಮಲಗಳ ದರುಶನದಿಂದ ನಮ್ಮ ಆಯಾಸ ಪರಂಪರೆ ಕೊನೆಗೊಂಡಿತು ಎಂದು ಹೇಳಿ ಧರ್ಮಜನು ಶ್ರೀಕೃಷ್ಣನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಮರಳಿ: ಮತ್ತೆ, ಹಿಂದಿರುಗು; ವನ: ಕಾಡು; ದಳ: ಗುಂಪು; ಮಂದಿರ: ಆಲ್ಯ; ನೆಲೆ: ಸ್ಥಾನ; ವಿಸ್ತರಣ: ವಿಶಾಲ; ಹಿಂದೆ: ಪೂರ್ವ; ವಿಪಿನ: ಕಾಡು; ಪರಿಭ್ರಮಣ: ಸುತ್ತಾಡು, ಅಲೆದಾಟ; ಕರುಣಿ: ದಯೆ; ಅಡಿ: ಹೆಜ್ಜೆ, ತಳ; ಅಂಘ್ರಿ: ಪಾದ; ಕಮಲ: ತಾವರೆ; ದರುಶನ: ದೃಷ್ಟಿ, ಗೋಚರ; ಆಯಾಸ: ಬಳಲಿಕೆ, ಶ್ರಮ; ಪಾರಂಪರೆ: ಸಂಪ್ರದಾಯ; ಬಿಡುಗಡೆ: ಬಂಧನದಿಂದ ಪಾರಾಗುವಿಕೆ; ಮೈಯಿಕ್ಕು: ನಮಸ್ಕರಿಸು; ಭೂಪ: ರಾಜ;

ಪದವಿಂಗಡಣೆ:
ಮರಳಿ +ಕಾಮ್ಯಕವನದ+ ದಳ +ಮಂ
ದಿರವನೇ+ ನೆಲೆ +ಮಾಡಿದೆವು +ವಿ
ಸ್ತರಣವಿದು +ಹಿಂದಾದ +ವಿಪಿನಾಂತರ +ಪರಿಭ್ರಮದಿ
ಕರುಣಿ +ನಿಮ್ಮಡಿ+ಅಂಘ್ರಿ+ಕಮಲದ
ದರುಶನದಿನ್+ಆಯಾಸ +ಪಾರಂ
ಪರೆಗೆ +ಬಿಡುಗಡೆಯಾಯ್ತ್+ಎನುತ+ ಮೈಯಿಕ್ಕಿದನು +ಭೂಪ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸುವ ಪರಿ – ಕರುಣಿ ನಿಮ್ಮಡಿಯಂಘ್ರಿಕಮಲದ
ದರುಶನದಿನಾಯಾಸ ಪಾರಂಪರೆಗೆ ಬಿಡುಗಡೆಯಾಯ್ತೆ

ಪದ್ಯ ೧೨: ಧರ್ಮಜನು ಕೃಷ್ಣನಿಗೆ ನಹುಷನ ವೃತ್ತಾಂತವನ್ನು ಹೇಗೆ ವಿವರಿಸಿದನು?

ಇಂತು ತಲೆಯೊತ್ತುತ ಮಹಾವಿಪಿ
ನಾಂತರವ ತೊಳಲಿದೆವು ಬಳಿಕವ
ನಾಂತರದೊಳಗಿಂದಾದುದೂಳಿಗ ನಹುಷ ನೃಪತಿಯಲಿ
ಭ್ರಾಂತಿಯೈಸಲೆ ಭೀಮನುರಗಾ
ಕ್ರಾಂತನಾದನು ಧರ್ಮಕಥೆಯಲಿ
ಸಂತವಾಯ್ತು ವಿಶಾಪನಾದನು ನಹುಷನಾಕ್ಷಣಕೆ (ಅರಣ್ಯ ಪರ್ವ, ೧೫ ಸಂಧಿ, ೧೨ ಪದ್ಯ)

ತಾತ್ಪರ್ಯ:
ಹೀಗೆ ಹೋರಾಡುತ್ತಾ ಮಹಾ ಕಾಡುಗಳನ್ನು ದಾಟಿ ದಣಿದೆವು. ಅಲ್ಲಿ ನಹುಷನು ಹಾವಿನ ರೂಪದಿಂದ ಭೀಮನನ್ನು ಹಿಡಿದನು. ಧರ್ಮ ಸಂವಾದದಿಂದ ಅವನು ಶಾಪ ಮುಕ್ತನಾದನು ಮತ್ತು ಭೀಮನು ಬಿಡುಗಡೆ ಹೊಂದಿದನು.

ಅರ್ಥ:
ತಲೆ: ಶಿರ; ತಲೆಯೊತ್ತು: ಯುದ್ಧಮಾಡಿ; ಮಹಾ: ದೊಡ್ಡ; ವಿಪಿನ: ಕಾಡು; ಅಂತರ: ದೂರ; ತೊಳಲು: ಬವಣೆ, ಸಂಕಟ; ಬಳಿಕ: ನಂತರ; ಊಳಿಗ: ಕೆಲಸ, ಕಾರ್ಯ; ನೃಪತಿ: ರಾಜ; ಭ್ರಾಂತಿ: ತಿರುಗುವಿಕೆ, ಸಂಚಾರ, ಭ್ರಮೆ; ಐಸಲೆ: ಅಲ್ಲವೇ; ಉರಗ: ಹಾವು; ಆಕ್ರಾಂತ: ಆಕ್ರಮಿಸಲ್ಪಟ್ಟ; ಕಥೆ: ವಿವರಣೆ; ಸಂತ: ಸಂಧಾನ; ವಿಶಾಪ: ಶಾಪದಿಂದ ಮುಕ್ತ; ಕ್ಷಣ: ಸಮಯ;

ಪದವಿಂಗಡಣೆ:
ಇಂತು +ತಲೆಯೊತ್ತುತ+ ಮಹಾ+ವಿಪಿನ
ಅಂತರವ +ತೊಳಲಿದೆವು +ಬಳಿಕ+ವ
ನಾಂತರದೊಳಗಿಂದ್+ಆದುದ್+ಊಳಿಗ +ನಹುಷ +ನೃಪತಿಯಲಿ
ಭ್ರಾಂತಿ+ಐಸಲೆ +ಭೀಮನ್+ಉರಗ
ಆಕ್ರಾಂತನಾದನು +ಧರ್ಮಕಥೆಯಲಿ
ಸಂತವಾಯ್ತು +ವಿಶಾಪನಾದನು +ನಹುಷನ್+ಆ+ಕ್ಷಣಕೆ

ಅಚ್ಚರಿ:
(೧) ವಿಪಿನ, ವನ – ಸಮನಾರ್ಥಕ ಪದ

ಪದ್ಯ ೧೧: ಭೀಮಾರ್ಜುನರ ಸಾಹಸವನ್ನು ಧರ್ಮಜನು ಹೇಗೆ ತಿಳಿಸಿದನು?

ತೊಳಲಿದೆವಲಾ ಕೃಷ್ಣ ತಪ್ಪದೆ
ಹಳುವ ಹಳುವವನಮರಪುರದಲಿ
ಕೆಲವು ದಿನವಿರಲರ್ಜುನಂಗಾಯ್ತೂರ್ವಶಿಯ ಶಾಪ
ಖಳರನಲ್ಲಿ ನಿವಾತಕವಚರ
ಗೆಲಿದು ಬಂದನು ಪಾರ್ಥನದರೊಳು
ಕೆಲಬರಸುರರ ಕಾದಿಕೊಂದನು ಭೀಮನಡವಿಯಲಿ (ಅರಣ್ಯ ಪರ್ವ, ೧೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕೃಷ್ಣ ಒಂದಾದ ಮೇಲೊಂದು ಹಲವು ಕಾಡುಗಳಲ್ಲಿ ನಾವು ಅಲೆದೆವು. ಅರ್ಜುನನು ಪಾಶುಪತಾಸ್ತ್ರವನ್ನು ಪಡೆದ ಮೇಲೆ ಕಾಲಕೇಯನಿವಾತ ಕವಚರನ್ನು ಸಂಹರಿಸಿದನು. ಅವನಿಗೆ ಊರ್ವಶಿಯು ಶಾಪವನ್ನು ನೀಡಿದಳು, ಇಲ್ಲಿ ಭೀಮನು ಅನೇಕ ರಾಕ್ಷಸರನ್ನು ಸಂಹರಿಸಿದನು.

ಅರ್ಥ:
ತೊಳಲು: ಬವಣೆ, ಸಂಕಟ; ಹಳುವ: ಕಾಡು; ಅಮರಪುರ: ಸ್ವರ್ಗ; ಕೆಲವು: ಸ್ವಲ್ಪ; ದಿನ: ದಿವಸ; ಶಾಪ: ನಿಷ್ಠುರದ ನುಡಿ; ಖಳ: ದುಷ್ಟ; ಗೆಲುವು: ಜಯ; ಅಸುರ: ರಾಕ್ಷಸ; ಕಾದು: ಹೋರಾಡು; ಕೊಂದು: ಸಾಯಿಸು; ಅಡವಿ: ಕಾಡು;

ಪದವಿಂಗಡಣೆ:
ತೊಳಲಿದೆವಲಾ+ ಕೃಷ್ಣ +ತಪ್ಪದೆ
ಹಳುವ+ ಹಳುವ್+ಅವನ್+ಅಮರಪುರದಲಿ
ಕೆಲವು +ದಿನವಿರಲ್+ಅರ್ಜುನಂಗಾಯ್ತ್+ಊರ್ವಶಿಯ +ಶಾಪ
ಖಳರನಲ್ಲಿ +ನಿವಾತಕವಚರ
ಗೆಲಿದು +ಬಂದನು +ಪಾರ್ಥನ್+ಅದರೊಳು
ಕೆಲಬರ್+ಅಸುರರ +ಕಾದಿಕೊಂದನು+ ಭೀಮನ್+ಅಡವಿಯಲಿ

ಅಚ್ಚರಿ:
(೧) ಪದರಚನೆ – ಹಳುವವನಮರಪುರದಲಿ

ಪದ್ಯ ೧೦: ಧರ್ಮಜನು ಕೃಷ್ಣನನ್ನು ಹೇಗೆ ಹೊಗಳಿದನು?

ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದು
ದಾಗಲಿರ್ದುದು ಪಾಶುಪತಶರವದರ ಬಳಿವಿಡಿದು
ಈಗಲೊಸಗೆಯೆ ತಮ್ಮ ಪಂಚಕ
ದಾಗು ಹೋಗನು ಹೊತ್ತು ನಡಸಿದೊ
ಡಾಗ ನಮಗಾಯ್ತೊಸಗೆಯೆಂದನು ನೃಪತಿ ವಿನಯದಲಿ (ಅರಣ್ಯ ಪರ್ವ, ೧೫ ಸಂಧಿ, ೧೦ ಪದ್ಯ)

ತಾತ್ಪರ್ಯ:
ಧರ್ಮಜನು ಸರ್ವವ್ಯಾಪಿಯಾದ ನಿನ್ನ ರಕ್ಷಣೆ ನಮಗೆ ದೊರೆತುದರಿಂದ ಪಾಶುಪತಾಸ್ತ್ರವು ಅದರೊಡನೆಯೇ ನಮಗೆ ಸಿಕ್ಕಿತು. ನಮ್ಮ ಆಗುಹೋಗುಗಳನ್ನು ನೀನು ವಹಿಸಿಕೊಂಡಾಗಲೇ ನಮಗೆ ಶುಭವುಂಟಾದವು. ನಿನಗೆ ಈಗ ಶುಭವಾಗಿದಿಯೇ ಎಂದು ಧರ್ಮಜನು ಕೇಳಿದನು.

ಅರ್ಥ:
ತಾಗು: ಸಹವಾಸ, ಮುಟ್ತು; ಥಟ್ಟು: ಪಕ್ಕ, ಗುಂಪು; ರಕ್ಷೆ: ಕಾಪು, ರಕ್ಷಣೆ; ತೊಡಚು: ಕಟ್ಟು, ಬಂಧಿಸು; ಶರ: ಬಾಣ; ಬಳಿ: ಹತ್ತಿರ; ಒಸಗೆ: ಶುಭ, ಮಂಗಳಕಾರ್ಯ; ಪಂಚಕ: ಐದು; ಆಗುಹೋಗು: ವ್ಯವಹಾರ; ಹೊತ್ತು: ಧರಿಸು; ನಡಸು: ಮುನ್ನಡೆಸು, ಚಲಿಸು; ನೃಪತಿ: ರಾಜ; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ಆಗಲೀ +ವೈಷ್ಣವಕೆ +ನಮ್ಮಯ
ತಾಗು +ಥಟ್ಟಿನ +ರಕ್ಷೆ +ತೊಡಚಿದುದ್
ಆಗಲಿರ್ದುದು +ಪಾಶುಪತ+ಶರವ್+ಅದರ +ಬಳಿವಿಡಿದು
ಈಗಲ್+ಒಸಗೆಯೆ +ತಮ್ಮ +ಪಂಚಕದ್
ಆಗು ಹೋಗನು +ಹೊತ್ತು +ನಡಸಿದೊಡ್
ಆಗ +ನಮಗಾಯ್ತ್+ಒಸಗೆ+ಎಂದನು +ನೃಪತಿ +ವಿನಯದಲಿ

ಅಚ್ಚರಿ:
(೧) ಕೃಷ್ಣನ ಹಿರಿಮೆಯನ್ನು ವಿವರಿಸಿದ ಪರಿ – ಆಗಲೀ ವೈಷ್ಣವಕೆ ನಮ್ಮಯ
ತಾಗು ಥಟ್ಟಿನ ರಕ್ಷೆ ತೊಡಚಿದುದಾಗಲಿರ್ದುದು ಪಾಶುಪತಶರವದರ ಬಳಿವಿಡಿದು