ಪದ್ಯ ೪: ಯುಧಿಷ್ಠಿರನಿಗೆ ಯಾವ ಶಕುನವುಂಟಾಯಿತು?

ಆ ಶರತ್ಕಾಲವನು ತದ್ವನ
ವಾಸದಲಿ ನೂಕಿದನು ಘನ ಪರಿ
ತೋಷ ಸೂಚಕ ಶಕುನವಂಗಸ್ಫುರಣೆ ಮೊದಲಾದ
ಮೀಸಲಳಿಯದ ಹರುಷರಸದಾ
ವೇಶದಲಿ ಮನವುಕ್ಕಿ ಹಿಗ್ಗಿದ
ನೀ ಶಕುನ ಸುಮ್ಮಾನವಿದಕೇನಹುದು ಫಲವೆಂದ (ಅರಣ್ಯ ಪರ್ವ, ೧೫ ಸಂಧಿ, ೪ ಪದ್ಯ)

ತಾತ್ಪರ್ಯ:
ಕಾಮ್ಯಕವನದಲ್ಲೇ ಶರತ್ಕಾಲವು ಕಳೆಯಿತು. ಆಗ ಯುಧಿಷ್ಠಿರನಿಗೆ ಶುಭಶಕುನ ಅಂಗಸ್ಫುರಣೆ (ಬಲಭುಜ, ಬಲಗಣ್ಣು ಅದಿರುವುದು) ಗಳಾಗಲು ಅವನಿಗೆ ಅತೀವ ಸಂತೋಷವಾಯಿತು, ಈ ಶುಭ ಶಕುನಕ್ಕೇನು ಫಲ ಎಂದು ಯೋಚಿಸಿದನು.

ಅರ್ಥ:
ಕಾಲ: ಸಮಯ; ವನ: ಕಾಡು; ವಾಸ: ಸ್ಥಾನ; ನೂಕು: ತಳ್ಳು; ಘನ: ಶ್ರೇಷ್ಠ; ಪರಿತೋಷ: ಆಸೆಯಿಲ್ಲದಿರುವಿಕೆ, ವಿರಕ್ತಿ; ಸೂಚಕ: ಸುಳಿವು, ಸೂಚನೆ; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಅಂಗ: ದೇಹದ ಭಾಗ; ಸ್ಫುರಣ: ನಡುಗುವುದು; ಮೀಸಲು: ಮುಡಿಪು; ಅಳಿ:ನಾಶ; ಹರುಷ: ಸಂತಸ; ರಸ: ಸಾರ; ಆವೇಶ: ಆಗ್ರಹ; ಮನ: ಮನಸ್ಸು; ಉಕ್ಕು: ಹಿಗ್ಗುವಿಕೆ; ಸುಮ್ಮಾನ: ಸುಮನ, ಸಂತಸ; ಫಲ: ಪ್ರಯೋಜನ;

ಪದವಿಂಗಡಣೆ:
ಆ +ಶರತ್ಕಾಲವನು + ತದ್+ವನ
ವಾಸದಲಿ +ನೂಕಿದನು+ ಘನ +ಪರಿ
ತೋಷ +ಸೂಚಕ +ಶಕುನವ್+ಅಂಗಸ್ಫುರಣೆ+ ಮೊದಲಾದ
ಮೀಸಲ್+ಅಳಿಯದ +ಹರುಷ+ರಸದ್
ಆವೇಶದಲಿ +ಮನವುಕ್ಕಿ+ ಹಿಗ್ಗಿದನ್
ಈ +ಶಕುನ +ಸುಮ್ಮಾನವ್+ಇದಕೇನಹುದು+ ಫಲವೆಂದ

ಅಚ್ಚರಿ:
(೧) ಅತೀವ ಸಂತಸವಾಯಿತೆನಲು – ಅಳಿಯದ ಹರುಷರಸದಾವೇಶದಲಿ ಮನವುಕ್ಕಿ ಹಿಗ್ಗಿದನ್

ಪದ್ಯ ೩: ಧರ್ಮಜನು ಯಾವ ವನಕ್ಕೆ ಹೋಗಲು ತಿಳಿಸಿದನು?

ಸವೆದುದೀ ವನವಿಲ್ಲಿ ಫಲಮೃಗ
ನಿವಹ ಬೀತುದು ನಮ್ಮ ಕಾಲಾ
ಟವನು ಸೈರಿಸಿ ನಿಲುವ ವನವನು ಕಾಣೆನಾನೆನುತ
ನಮಗೆ ಮಗುಳಾ ಕಾಮ್ಯಕದ ವನ
ಭವನವೈಸಲೆಯೆನುತಲಾ ಮುನಿ
ನಿವಹ ಸಹಿತವನೀಶ ಕಾಮ್ಯಕವನಕೆ ನಡೆತಂದ (ಅರಣ್ಯ ಪರ್ವ, ೧೫ ಸಂಧಿ, ೩ ಪದ್ಯ)

ತಾತ್ಪರ್ಯ:
ಈ ವನದ ಫಲ, ಮೃಗಗಳು ಇಲ್ಲವಾದವು, ನಮ್ಮ ತುಳಿತವನ್ನು ಸೈರಿಸಿಕೊಳ್ಳುವ ವನವು ಎಲ್ಲಿದೆಯೋ ಕಾಣೆ, ಮತ್ತೆ ನಾವು ಕಾಮ್ಯಕವನದಲ್ಲೇ ವಾಸಿಸೋಣ ಎಂದು ಧರ್ಮಜನು ಮುನಿವೃಂದದೊಂದಿಗೆ ಕಾಮ್ಯಕವನಕ್ಕೆ ಹೋದನು.

ಅರ್ಥ:
ಸವೆದು: ಕಡಿಮೆಯಾಗು; ವನ: ಕಾಡು; ಫಲ: ಹಣ್ಣು; ಮೃಗ: ಪ್ರಾಣಿ; ನಿವಹ: ಗುಂಪು; ಬೀತು: ಕಳೆದುದು; ಕಾಲ: ಸಮಯ; ಆಟ: ವ್ಯವಹಾರ; ಕಾಣು: ತೋರು; ಮಗುಳು: ಮತ್ತೆ; ವನ: ಕಾಡು; ಭವನ: ಆಲ್ಯ; ಐಸಲೆ: ಅಲ್ಲವೆ; ಮುನಿ: ಋಷಿ; ನಿವಹ: ಗುಂಪು; ಸಹಿತ: ಜೊತೆ; ಅವನೀಶ: ರಾಜ; ನಡೆ: ಚಲಿಸು;

ಪದವಿಂಗಡಣೆ:
ಸವೆದುದ್+ಈ+ ವನವ್+ಇಲ್ಲಿ +ಫಲಮೃಗ
ನಿವಹ+ ಬೀತುದು +ನಮ್ಮ +ಕಾಲಾ
ಟವನು +ಸೈರಿಸಿ +ನಿಲುವ +ವನವನು +ಕಾಣೆನಾನ್+ಎನುತ
ನಮಗೆ +ಮಗುಳಾ +ಕಾಮ್ಯಕದ +ವನ
ಭವನವ್+ಐಸಲೆ+ಎನುತಲಾ +ಮುನಿ
ನಿವಹ+ ಸಹಿತ್+ಅವನೀಶ +ಕಾಮ್ಯಕ+ವನಕೆ+ ನಡೆತಂದ

ಅಚ್ಚರಿ:
(೧) ನಮಗೆ ಒಳಿತಾದ ಜಾಗಯಾವುದೆಂದು ತಿಳಿಸುವ ಪರಿ – ನಮ್ಮ ಕಾಲಾಟವನು ಸೈರಿಸಿ ನಿಲುವ ವನವನು ಕಾಣೆನಾನೆನುತ

ಪದ್ಯ ೨: ಶರತ್ಕಾಲವು ಹೇಗೆ ತೋರಿತು?

ಮುಗಿಲು ಬರತುದು ಬರಿಯ ಗಡಬಡೆ
ಗಗನಕುಳಿದುದು ಕೊಂಡ ನೆಲನನು
ತೆಗೆದು ನಿಂದುದು ಹೇಡಿಯಂದದಲಾ ನದೀನಿವಹ
ನಗುವ ಕೊಳನ ಚಕೋರಚಯ ಹಂ
ಸೆಗಳು ಮೆರೆದವು ನಗುವ ತುಂಬಿಯ
ಸುಗುಡತನ ತಾವರೆಯೊಳೆಸೆದುದು ಶರದ ಸಮಯದಲಿ (ಅರಣ್ಯ ಪರ್ವ, ೧೫ ಸಂಧಿ, ೨ ಪದ್ಯ)

ತಾತ್ಪರ್ಯ:
ಶರತ್ಕಾಲವು ಬರಲು ಆಕಾಶದ ಮೋಡಗಳು ಇಲ್ಲದಂತಾದವು. ಆಕಾಶದ ಆರ್ಭಟ ಮಾಯವಾಯಿತು, ಭೂಪ್ರದೇಶವನ್ನು ಆಕ್ರಮಿಸಿಕೊಂಡಿದ್ದ ನದಿಗಳ ನೀರು ಹಿಂದಕ್ಕೆ ಸರಿದು, ಹೇಡಿಯಂತೆ ವರ್ತಿಸಿತು. ಸರೋವರಗಳಲ್ಲಿ ಚಕೋರ, ಹಂಸ ಪಕ್ಷಿಗಳು ಶೋಭಿಸಿದವು. ದುಂಬಿಗಳು ತಾವರೆಹೂವುಗಳಲ್ಲಿ ಸಿಹಿಮಕರಂದವನ್ನು ಹೀರಿದವು.

ಅರ್ಥ:
ಮುಗಿಲು: ಆಗಸ; ಬರತು: ಇಲ್ಲದಂತಾಗು; ಬರಿ: ಕೇವಲ; ಗಡಬಡ: ಆರ್ಭಟ; ಗಗನ: ಆಗಸ; ಉಳಿ:ಹೊರತಾಗು, ಮಿಗು; ಕೊಂಡ: ಪಡೆದ; ನೆಲ: ಭೂಮಿ; ತೆಗೆ: ಹೊರತರು; ನಿಂದು: ನಿಲ್ಲು; ಹೇಡಿ: ಅಂಜುಕುಳಿ; ನದಿ: ಹೊಳೆ, ತೊರೆ; ನಗು: ಸಂತಸ; ಕೊಳ: ಹೊಂಡ; ಚಕೋರ: ಕಪಿಂಜಲ ಪಕ್ಷಿ; ಚಯ: ರಾಶಿ; ಹಂಸೆ: ಮರಾಲ; ಮೆರೆ: ಹೊಳೆ; ನಗು: ಸಂತಸ; ತುಂಬಿ: ದುಂಬಿ, ಭ್ರಮರ; ಸುಗುಡ: ಕಾಮುಕ; ತಾವರೆ: ಕಮಲ; ಎಸೆ: ತೋರು; ಸಮಯ: ಕಾಲ;

ಪದವಿಂಗಡಣೆ:
ಮುಗಿಲು +ಬರತುದು +ಬರಿಯ +ಗಡಬಡೆ
ಗಗನ+ಕುಳಿದುದು +ಕೊಂಡ +ನೆಲನನು
ತೆಗೆದು +ನಿಂದುದು +ಹೇಡಿಯಂದದಲಾ+ ನದೀನಿವಹ
ನಗುವ+ ಕೊಳನ+ ಚಕೋರ+ಚಯ +ಹಂ
ಸೆಗಳು +ಮೆರೆದವು +ನಗುವ +ತುಂಬಿಯ
ಸುಗುಡತನ +ತಾವರೆಯೊಳ್+ಎಸೆದುದು +ಶರದ +ಸಮಯದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೊಂಡ ನೆಲನನು ತೆಗೆದು ನಿಂದುದು ಹೇಡಿಯಂದದಲಾ ನದೀನಿವಹ

ಪದ್ಯ ೧: ಭೀಮನನ್ನು ಯಾರೆಲ್ಲ ಸಂತೈಸಿದರು?

ಚಿತ್ತವಿಸು ಜನಮೇಜಯ ಕ್ಷಿತಿ
ಪೋತ್ತಮನೆ ಧರ್ಮಜನು ಮುಖದಲಿ
ಕೆತ್ತದುಗುಡವ ಬಿಡಿಸಿ ಭೀಮನ ತಂದನಾಶ್ರಮಕೆ
ಮತ್ತಕಾಶಿನಿ ಧೌಮ್ಯನಿಖಿಲ ಮ
ಹೋತ್ತಮರು ಪೀಯೂಷ ಮಧುರರ
ಸ್ತೋತ್ಕರದ ನುಡಿಗಳಲಿ ನಾದಿದರನಿಲಜನ ಮನವ (ಅರಣ್ಯ ಪರ್ವ, ೧೫ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಆಲಿಸು, ಭೀಮನನ್ನು ಆಕ್ರಮಿಸಿದ ದುಃಖವನ್ನು ಹೋಗಲಾಡಿಸಿ ಧರ್ಮಜನು ಅವನನ್ನು ಆಶ್ರಮಕ್ಕೆ ಕರೆತಂದನು. ದ್ರೌಪದಿ, ಧೌಮ್ಯರು, ಋಷಿಗಳೆಲ್ಲರೂ ಅಮೃತೋಪಮವಾದ ಮಾತುಗಳಿಂದ ಭೀಮನ ಮನಸ್ಸನ್ನು ಹರ್ಷಗೊಳಿಸಿದರು.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ಕ್ಷಿತಿ: ಭೂಮಿ; ಕ್ಷಿತಿಪೋತ್ತಮ: ರಾಜಶ್ರೇಷ್ಠ; ಕ್ಷಿತಿಪ: ರಾಜ; ಮುಖ: ಆನನ; ಕೆತ್ತ: ತೋರಿದ; ದುಗುಡ: ದುಃಖ; ಬಿಡಿಸು: ಹೋಗಲಾಡಿಸು; ಆಶ್ರಮ: ಕುಟೀರ; ಮತ್ತಕಾಶಿನಿ: ಸುಂದರಿ; ನಿಖಿಲ: ಎಲ್ಲಾ; ಮಹೋತ್ತಮ: ಶ್ರೇಷ್ಠ; ಪೀಯೂಷ: ಅಮೃತ, ಸುಧೆ; ಮಧುರ: ಸವಿ; ರಸ: ಸಾರ; ಉತ್ಕರ: ರಾಶಿ; ನುಡಿ: ಮಾತು; ನಾದು: ಹದಮಾಡು; ಅನಿಲಜ: ವಾಯುಪುತ್ರ (ಭೀಮ); ಮನ: ಮನಸ್ಸು;

ಪದವಿಂಗಡಣೆ:
ಚಿತ್ತವಿಸು +ಜನಮೇಜಯ +ಕ್ಷಿತಿ
ಪೋತ್ತಮನೆ +ಧರ್ಮಜನು+ ಮುಖದಲಿ
ಕೆತ್ತ+ ದುಗುಡವ+ ಬಿಡಿಸಿ +ಭೀಮನ +ತಂದನ್+ಆಶ್ರಮಕೆ
ಮತ್ತಕಾಶಿನಿ +ಧೌಮ್ಯ+ ನಿಖಿಲ+ ಮ
ಹೋತ್ತಮರು +ಪೀಯೂಷ +ಮಧುರ+ರಸ
ಉತ್ಕರದ +ನುಡಿಗಳಲಿ +ನಾದಿದರ್+ಅನಿಲಜನ +ಮನವ

ಅಚ್ಚರಿ:
(೧) ದ್ರೌಪದಿಯನ್ನು ಮತ್ತಕಾಶಿನಿ (ಸುಂದರಿ) ಎಂದು ವರ್ಣಿಸಿರುವುದು
(೨) ರಾಜ ಎಂದು ಹೇಳಲು ಕ್ಷಿತಿಪೋತ್ತಮ ಪದದ ಬಳಕೆ
(೩) ಹದ ಮಾಡು ಎಂದು ಹೇಳಲು – ನಾದಿದರು ಪದದ ಬಳಕೆ

ನುಡಿಮುತ್ತುಗಳು: ಅರಣ್ಯ ಪರ್ವ ೧೫ ಸಂಧಿ

  • ಪೀಯೂಷ ಮಧುರರ ಸ್ತೋತ್ಕರದ ನುಡಿಗಳಲಿ ನಾದಿದರನಿಲಜನ ಮನವ – ಪದ್ಯ ೧
  • ಕೊಂಡ ನೆಲನನು ತೆಗೆದು ನಿಂದುದು ಹೇಡಿಯಂದದಲಾ ನದೀನಿವಹ – ಪದ್ಯ ೨
  • ನಮ್ಮ ಕಾಲಾಟವನು ಸೈರಿಸಿ ನಿಲುವ ವನವನು ಕಾಣೆನಾನೆನುತ – ಪದ್ಯ ೩
  • ಅಳಿಯದ ಹರುಷರಸದಾವೇಶದಲಿ ಮನವುಕ್ಕಿ ಹಿಗ್ಗಿದನ್ – ಪದ್ಯ ೪
  • ಕೃಪಾನಿಧಿಬಂದನಸುರಾಭ್ಯುದಯ ಘಾತಕ ಬಂದ ರಿಪುಬಲಮದನಮದಹರ ಬಂದನಿದೆಯೆಮ್ದನು ಮಹೀಪತಿಗೆ – ಪದ್ಯ ೫
  • ನಾಚಿದವು ನಿಗಮಂಗಳಾವನ ಸೂಚಿಸಲು – ಪದ್ಯ ೬
  • ತುಳುಕಿದವು ಸಂತೋಷಜಲ ನಿಟ್ಟೆಸಳುಗಂಗಳಲಿ ತಳಿತರೋಮಾಂಚದಲಿ ಸಮ್ಮುದ ಪುಳಕದಲಿ ಪೂರಾಯದುಬ್ಬಿನಲಿಳೆಯೊಡೆಯ ಮೈಯಿಕ್ಕುತೈದಿದನ – ಪದ್ಯ ೭
  • ಕರುಣಾಜಲಧಿ ಬಂದನು ಕಾಲುನಡೆಯಲಿ ಸೆಳೆದು ಬಿಗಿಯಪ್ಪಿದ ನಿದೇನಾಸುರವಿದೇನೆನುತ; ಸತಿಯಲೋಚನಜಲವ ಸೆರಗಿನೊಳೊರಸಿ ಸಂತೈಸಿದನು ಬಾಲಕಿಯ – ಪದ್ಯ ೮
  • ನಮಗಿಂದೊಸಗೆಯಾಯಿತು ಪುಣ್ಯವೆಂದನು ಹರಿ ಮಹೀಪತಿಗೆ – ಪದ್ಯ ೯
  • ತಾಯಿಕರುಗಳ ಬಿಡದವೊಲು ನಿರ್ದಾಯದಲಿ ನಿಜ ಭಕ್ತಸಂಗದಮಾಯೆ ಬಿಡದೈ – ಪದ್ಯ ೧೫
  • ತಪದಲುರಿದು; ಸಮಾಧಿಯೋಗದಲುಪಶಮದಲುಬ್ಬೆದ್ದು; ಹೋಮದ ಜಪದ ಜಂಜಡದೊಳಗೆ ಸಿಲುಕಿ; ಜನಾರ್ದನನ ಮರೆವ
  • ಅಪಸದರುನಾವ್ – ಪದ್ಯ ೧೬
  • ಸಾಗರದ ತೆರೆ ಮುಂಡಾಡುವೊಲು ಸಾಗರದ ಕೂಟಕೆ ಸಕಲ ಜಲಧಿಗಳೇಕರೂಪದಲಿ – ಪದ್ಯ ೧೯
  • ಹರಿವಿನೋದದೊಳಾಲದೆಲೆಯಲಿ ಸಿರಿಸಹಿತ ಪವಡಿಸಿದನಿನಶಶಿಕಿರಣವಿಲ್ಲ ಮಹಾಂಧಕಾರ ಸಭಾರವಾಯ್ತೆಂದ – ಪದ್ಯ ೨೨
  • ಈ ನೆಲನನೀ ಚಂದ್ರ ಸೂರ್ಯ ಕೃಶಾನು ತೇಜವನೀ ಸಮೀರಣ ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ – ಪದ್ಯ ೨೩
  • ಹೇಸಿ ತನ್ನನು ದೂರ ಬಿಸುಟಳು ಮೃತ್ಯು ಬಳಲಿದೆ ನಿಂತು ಹಲಕಾಲ – ಪದ್ಯ ೨೪
  • ಹಲುನೊರಜು ಸಾಗರದ ಸಲಿಲವನಳೆವವೊಲು ನೊಣಹಾರಿ ಗಗನದ ತಲೆಗಡೆಯ ಕಾಣಿಸುವದೆಂಬವೊಲಾಯ್ತು ಕೇಳೆಂದ – ಪದ್ಯ ೨೯
  • ನಿರಾಕುಳಿತ ತೇಜೋನಿಧಿಗೆ ಮಾಯಾಕಳತ್ರದೊಳಾಯ್ತು ನಿಜಗುಣ ಭೇದವದರಿಂದ – ಪದ್ಯ ೩೩
  • ಬೆಳಗಿತು ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ – ಪದ್ಯ ೩೬
  • ರಾಯ ಕೇಳೈ ದ್ವಾಪರದಲಿ ದೃಢಾಯದಲಿ ತಾ ಧರ್ಮವೆರಡಡಿ ಬೀಯವಾದುದು ನಿಂದುದೆನಿಸಿತು ನಿನ್ನ ದೆಸೆಯಿಂದ – ಪದ್ಯ ೩೭
  • ಲೋಕದಿ ಭಾನು ತೇಜದಲೆಸೆದುದಂದು ಮಹೀಸುರವ್ರಾತ – ಪದ್ಯ ೪೦
  • ವರಯವ್ವನದ ವಿಭ್ರಮ ನಿಜಸತೀಜನಕೆ – ಪದ್ಯ ೪೧
  • ಧರ್ಮಗತಿಯಲಿ ಮಜಡರಾದರೆ ಮನುಜರಾದವರಜನ ಪರಮಾಯುಷ್ಯ ಪರಿಯಂತಿಹರು ನರಕದಲಿ – ಪದ್ಯ ೪೩
  • ನಿಯತಮೌನವ್ರತದಸಂಗ ಪ್ರಿಯದ ಶೌಚಾಸ್ತೇಯದಿಂದ್ರಿಯ ಜಯದ ವಿಮಲ ಬ್ರಹ್ಮಚರ್ಯಾಶ್ರಮದಗತಿಯೆಂದ – ಪದ್ಯ ೪೪