ಪದ್ಯ ೪೬: ಸರ್ಪವು ಧರ್ಮಜನಿಗೆ ಏನು ಹೇಳಿತು?

ಆದೊಡೆಲೆ ಧರಣೀಶ ಧರ್ಮವ
ನಾದರಿಸುವೈ ಧರ್ಮವೆಂಬುದು
ವೇದಮಾರ್ಗವಲೈ ಸುಧರ್ಮದ ಸಾರಸಂಗತಿಯ
ಕೈದುವುಳ್ಳೊಡೆ ಕಾದು ನಿನ್ನಯ
ಸೋದರನ ಬಿಡುವೆನು ಮನಃಪರಿ
ಖೇದವನು ಬಿಸುಟೆನ್ನು ಧರ್ಮ ರಹಸ್ಯ ವಿಸ್ತರವ (ಅರಣ್ಯ ಪರ್ವ, ೧೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಸರ್ಪವು ಧರ್ಮಜನನ್ನು ಉದ್ದೇಶಿಸಿ, ಎಲೈ ರಾಜನೇ, ನಿನಗೆ ಧರ್ಮವನ್ನು ಕಂಡರೆ ಬಹಲ ಆದರವಲ್ಲವೇ? ಧರ್ಮವು ವೇದವು ತೋರಿದ ಮಾರ್ಗ, ಆದುದರಿಂದ ಧರ್ಮವನ್ನು ಕುರಿತು ಸಂವಾದ ಮಾದು. ನಿನಗೆ ಪರಾಕ್ರಮವಿದ್ದರೆ ಯುದ್ಧ ಮಾಡಿ ನಿನ್ನ ತಮ್ಮನನ್ನು ಬಿಡಿಸಿದ್ಕೋ. ಮನಸ್ಸಿನ ದುಃಖವನ್ನು ಬಿಟ್ಟು ಧರ್ಮ ರಹಸ್ಯವನ್ನು ಹೇಳು ಎಂದು ಹೇಳಿತು.

ಅರ್ಥ:
ಆದೊಡೆ: ಹಾಗಿದ್ದರೆ; ಧರಣೀಶ: ರಾಜ; ಧರ್ಮ: ಧಾರಣೆ ಮಾಡಿದುದು; ಆದರ: ಗೌರವ; ವೇದ: ಶೃತಿ; ಮಾರ್ಗ: ದಾರಿ; ಸಾರ: ಶ್ರೇಷ್ಠವಾದ, ತಿರುಳು; ಸಂಗತಿ: ಸಹವಾಸ; ಕೈದು: ಕತ್ತಿ, ಆಯುಧ; ಕಾದು: ಹೋರಾಡು; ಸೋದರ: ತಮ್ಮ; ಬಿಡು: ತ್ಯಜಿಸು, ತೊರೆ; ಮನ: ಮನಸ್ಸು; ಖೇದ: ದುಃಖ; ಬಿಸುಟು: ಹೊರಹಾಕು; ರಹಸ್ಯ: ಗುಟ್ಟು; ವಿಸ್ತರ: ಹಬ್ಬುಗೆ, ವಿಸ್ತಾರ;

ಪದವಿಂಗಡಣೆ:
ಆದ್+ಒಡೆಲೆ +ಧರಣೀಶ +ಧರ್ಮವನ್
ಆದರಿಸುವೈ +ಧರ್ಮವೆಂಬುದು
ವೇದಮಾರ್ಗವಲೈ+ ಸುಧರ್ಮದ +ಸಾರ+ಸಂಗತಿಯ
ಕೈದುವುಳ್ಳೊಡೆ+ ಕಾದು +ನಿನ್ನಯ
ಸೋದರನ+ ಬಿಡುವೆನು +ಮನಃ+ಪರಿ
ಖೇದವನು +ಬಿಸುಟೆನ್ನು+ ಧರ್ಮ+ ರಹಸ್ಯ+ ವಿಸ್ತರವ

ಅಚ್ಚರಿ:
(೧) ಧ ಕಾರದ ತ್ರಿವಳಿ ಪದ – ಧರಣೀಶ ಧರ್ಮವನಾದರಿಸುವೈ ಧರ್ಮವೆಂಬುದು

ಪದ್ಯ ೪೫: ಧರ್ಮಜನು ಹಾವಿಗೆ ಏನು ಹೇಳಿದನು?

ಬೀತುದಖಿಳೈಶ್ವರ್ಯ ಕಪಟ
ದ್ಯೂತದಲಿ ಕೌರವರು ಕೊಂಡರು
ಭೂತಳವನೆಮಗಾಯ್ತು ಬಳಿಕಟವೀ ಪರಿಭ್ರಮಣ
ಈತನೆನ್ನೊಡಹುಟ್ಟಿದನು ನೀ
ನೀತನನು ಬಿಡಬಹೊಡೆ ಬಿಡುವಿ
ಖ್ಯಾತರಿಗೆ ಪರಪೀಡೆ ಧರ್ಮವಿನಾಶಕರವೆಂದ (ಅರಣ್ಯ ಪರ್ವ, ೧೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಮೋಸದ ಪಗಡೆಯಾಟದಲ್ಲಿ ಕೌರವಉ ನಮ್ಮ ಸಮಸ್ತ ರಾಜ್ಯವನ್ನು ವಶಪಡಿಸಿಕೊಂಡರು. ನಮ್ಮ ಐಶ್ವರ್ಯವು ಬತ್ತಿಹೋಯಿತು. ನಾವು ಕಾಡಿನಲ್ಲಿ ಅಲಿಯುತ್ತಿದ್ದೇವೆ. ಇವನು ನನ್ನ ತಮ್ಮ. ಇವನನ್ನು ಬಿಡಬಹುದಾದರೆ ಬಿಡು, ಪರಪೀಡೆಯು ಧರ್ಮನಾಶಕ್ಕೆ ಕಾರಣವಾಗುತ್ತದೆ ಎಂದು ಧರ್ಮಜನು ಸರ್ಪಕ್ಕೆ ಹೇಳಿದನು.

ಅರ್ಥ:
ಬೀತುದು: ಕ್ಷಯವಾಯಿತು; ಅಖಿಳ: ಎಲ್ಲಾ; ಐಶ್ವರ್ಯ: ಸಂಪತ್ತು; ಕಪಟ: ಮೋಸ; ದ್ಯೂತ: ಪಗಡೆ; ಕೊಂಡರು: ತೆಗೆದುಕೋ; ಭೂತಳ: ಭೂಮಿ; ಬಳಿಕ: ನಂತರ; ಅಟವಿ: ಕಾಡು; ಪರಿಭ್ರಮಣ: ತಿರುಗಾಟ; ಒಡಹುಟ್ಟು: ತಮ್ಮ; ಬಿಡಬಹೊಡೆ: ಬಿಟ್ಟರೆ, ವಿಖ್ಯಾತ: ಪ್ರಸಿದ್ಧ; ಪರಪೀಡೆ: ಬೇರೆಯವರಿಗೆ ತೊಂದರೆ ಕೊಡುವ; ಧರ್ಮ: ಧಾರಣೆ ಮಾಡಿದುದು; ವಿನಾಶ: ಅಂತ್ಯ;

ಪದವಿಂಗಡಣೆ:
ಬೀತುದ್+ಅಖಿಳ+ಐಶ್ವರ್ಯ +ಕಪಟ
ದ್ಯೂತದಲಿ +ಕೌರವರು +ಕೊಂಡರು
ಭೂತಳವನ್+ಎಮಗಾಯ್ತು +ಬಳಿಕ್+ಅಟವೀ +ಪರಿಭ್ರಮಣ
ಈತನ್+ಎನ್+ಒಡಹುಟ್ಟಿದನು +ನೀನ್
ಈತನನು +ಬಿಡಬಹೊಡೆ+ ಬಿಡು+ವಿ
ಖ್ಯಾತರಿಗೆ +ಪರಪೀಡೆ +ಧರ್ಮ+ವಿನಾಶಕರವೆಂದ

ಅಚ್ಚರಿ:
(೧) ಧರ್ಮನಾಶದ ಮಾರ್ಗ – ವಿಖ್ಯಾತರಿಗೆ ಪರಪೀಡೆ ಧರ್ಮವಿನಾಶಕರವೆಂದ

ಪದ್ಯ ೪೪: ಯುಧಿಷ್ಠಿರನು ತನ್ನ ಪರಿಚಯವನ್ನು ಹೇಗೆ ಮಾಡಿದ?

ಸೋಮವಂಶ ಪರಂಪರೆಯಲು
ದ್ದಾಮ ಪಾಂಡುಕ್ಷಿತಿಪ ಜನಿಸಿದ
ನಾ ಮಹೀಶನ ಸುತ ಯುಧಿಷ್ಠಿರನೆಂಬುದಭಿಧಾನ
ಭೀಮನೀತನು ಪಾರ್ಥನಕುಲ ಸ
ನಾಮ ಸಹದೇವಾಖ್ಯ ಪಾಂಡವ
ನಾಮಧೇಯರು ನಾವೆಯೆಂದನು ಭೂಪನಾ ಫಣಿಗೆ (ಅರಣ್ಯ ಪರ್ವ, ೧೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಚಂದ್ರವಂಶದ ಪರಂಪರೆಯಲ್ಲಿ ಮಹಾಶ್ರೇಷ್ಠನಾದ ಪಾಂಡು ರಾಜನಿದ್ದನು. ಅವನಲ್ಲಿ ಜನಿಸಿದ ನಾನು ಯುಧಿಷ್ಠಿರನೆಂಬ ನಾಮವುಳ್ಳ ರಾಜನು. ನಿನ್ನ ಹಿಡಿತದಲ್ಲಿರುವವನು ಭೀಮ, ಅರ್ಜುನ, ನಕುಲ ಸಹದೇವರು ಸೇರಿ ನಾವೈವರು ಪಾಂಡವರು ಎಂದು ಧರ್ಮಜನು ಹೇಳಿದನು.

ಅರ್ಥ:
ಸೋಮ: ಚಂದ್ರ; ವಂಶ: ಕುಲ; ಪರಂಪರೆ: ಅನೂಚಾನವಾಗಿ ಬಂದಿರುವುದು, ಸಂಪ್ರದಾಯ; ಉದ್ದಾಮ: ಶ್ರೇಷ್ಠ; ಕ್ಷಿತಿಪ: ರಾಜ; ಜನಿಸು: ಹುಟ್ಟು; ಮಹೀಶ: ರಾಜ; ಸುತ: ಮಗ; ಅಭಿಧಾನ: ಹೆಸರು; ನಾಮ: ಹೆಸರು; ಭೂಪ: ರಾಜ; ಫಣಿ: ಹಾವು;

ಪದವಿಂಗಡಣೆ:
ಸೋಮವಂಶ+ ಪರಂಪರೆಯಲ್
ಉದ್ದಾಮ +ಪಾಂಡು+ಕ್ಷಿತಿಪ +ಜನಿಸಿದ
ನಾ +ಮಹೀಶನ+ ಸುತ+ ಯುಧಿಷ್ಠಿರನೆಂಬುದ್+ಅಭಿಧಾನ
ಭೀಮನೀತನು+ ಪಾರ್ಥ+ನಕುಲ+ ಸ
ನಾಮ +ಸಹದೇವಾಖ್ಯ +ಪಾಂಡವ
ನಾಮಧೇಯರು +ನಾವೆ+ಎಂದನು +ಭೂಪನಾ +ಫಣಿಗೆ

ಅಚ್ಚರಿ:
(೧) ಕ್ಷಿತಿಪ, ಮಹೀಶ, ಭೂಪ – ಸಮನಾರ್ಥಕ ಪದ

ಪದ್ಯ ೪೩: ಸರ್ಪವು ಧರ್ಮಜನಿಗೆ ಯಾವ ಪ್ರಶ್ನೆಯನ್ನು ಕೇಳಿತು?

ಏನಹನು ನಿನಗೀತ ನೀನಾ
ರೇನು ನಿನ್ನಭಿಧಾನ ವಿಪ್ರನ
ಸೂನುವೋ ಕ್ಷತ್ರಿಯನೊ ವೈಶ್ಯನೊ ಶೂದ್ರಸಂಭವನೊ
ಏನು ನಿನಗೀ ಬನಕೆ ಬರವು ನಿ
ದಾನವನು ಹೇಳೆನಲು ಕುಂತಿಯ
ಸೂನು ನುಡಿದನು ತನ್ನ ಪೂರ್ವಾಪರದ ಸಂಗತಿಯ (ಅರಣ್ಯ ಪರ್ವ, ೧೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಧರ್ಮಜನ ಮಾತನ್ನು ಕೇಳಿ ಸರ್ಪವು, ನಿನಗೆ ಇವನು ಏನಾಗಬೇಕು? ನೀನಾರು? ನಿನ್ನ ಹೆಸರೇನು, ನೀನು ಬ್ರಾಹ್ಮಣನೋ, ಕ್ಷತ್ರಿಯನೋ, ವೈಶ್ಯನೋ, ಶೂದ್ರನೋ? ಈ ಕಾಡಿಗೇಕೆ ಬಂದೆ ಎಂದು ಕೇಳಲು, ಧರ್ಮರಾಯನು ತನ್ನ ವೃತ್ತಾಂತವನ್ನು ಸರ್ಪಕ್ಕೆ ಹೇಳಿದನು.

ಅರ್ಥ:
ಏನಹನು: ಏನಾಗಬೇಕು; ಅಭಿಧಾನ: ಹೆಸರು; ವಿಪ್ರ: ಬ್ರಾಹ್ಮಣ; ಬನ: ಕಾದು; ಬರವು: ಆಗಮನ್; ನಿದಾನ: ಮೂಲಕಾರಣ; ಹೇಳು: ತಿಳಿಸು; ಸೂನು: ಮಗ; ನುಡಿ: ಮಾತಾಡು; ಪೂರ್ವಾಪರ: ಹಿಂದಿನ ಮತ್ತು ಮುಂದಿನ; ಸಂಗತಿ: ಸಮಾಚಾರ; ಸಂಭವ: ಹುಟ್ಟು;

ಪದವಿಂಗಡಣೆ:
ಏನಹನು +ನಿನಗೀತ+ ನೀನಾರ್
ಏನು+ ನಿನ್+ಅಭಿಧಾನ +ವಿಪ್ರನ
ಸೂನುವೋ+ ಕ್ಷತ್ರಿಯನೊ +ವೈಶ್ಯನೊ +ಶೂದ್ರ+ಸಂಭವನೊ
ಏನು+ ನಿನಗೀ+ ಬನಕೆ +ಬರವು +ನಿ
ದಾನವನು +ಹೇಳೆನಲು+ ಕುಂತಿಯ
ಸೂನು +ನುಡಿದನು +ತನ್ನ +ಪೂರ್ವಾಪರದ +ಸಂಗತಿಯ

ಅಚ್ಚರಿ:
(೧) ನಾಲ್ಕು ವರ್ಣಗಳನ್ನು ಹೆಸರಿಸುವ ಪದ್ಯ

ಪದ್ಯ ೪೨: ಹಾವು ಭೀಮನನ್ನು ಹೇಗೆ ಆವರಿಸಿತ್ತು?

ಕೇಳಿದನು ಫಣಿ ಭೀಮಸೇನನ
ಮೌಳಿತಲ್ಪದ ತಲೆಯ ಹೊಳಹಿನ
ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ
ಮೇಲು ಮೊಗದಲಿ ನೃಪನ ನುಡಿಗಳ
ನಾಲಿಸುತ ನುಡಿದನು ಕರಾಳಾ
ಭೀಳ ದಂಷ್ಟ್ರಾಂತರವಿಸಂಸ್ಥುಳ ಜಿಹ್ವೆಗಳ ಜಡಿದು (ಅರಣ್ಯ ಪರ್ವ, ೧೪ ಸಂಧಿ, ೪೨ ಪದ್ಯ)

ತಾತ್ಪರ್ಯ:
ಆ ಹೆಬ್ಬಾವು ಧರ್ಮಜನ ಮಾತನ್ನು ಕೇಳಿತು. ಅದರ ಹೆಡೆಯು ಭೀಮನ ತಲೆಯ ಮೇಲಿತ್ತು. ನಲಿಗೆಯನ್ನು ಅಲುಗಾಡಿಸುವಾಗ, ಅದರ ಕಣ್ಣುಗಳು ಹೊಳೆಯುತ್ತಿದ್ದವು. ಭಯಂಕರವಾದ ತನ್ನ ಹಲ್ಲುಗಳ ಮೇಲೆ ನಾಲಿಗೆಯನ್ನಾಡಿಸುತ್ತಾ ಆ ಹಾವು ಮಾತನಾಡಿತು.

ಅರ್ಥ:
ಕೇಳು: ಆಲಿಸು; ಫಣಿ: ಹಾವು; ಮೌಳಿ: ತಲೆ; ತಲ್ಪ:ಸುಪ್ಪತ್ತಿಗೆ; ಹೊಳಹು: ಬೆಳಗು, ಪ್ರಕಾಶ; ನಾಲಗೆ: ಜಿಹ್ವೆ; ಚೂರಣ: ತಿರುಗಿಸುವಿಕೆ; ಝಡಿತ: ವೇಗ; ಚಲಿಸು: ನಡೆ; ಆಲಿ: ಕಣ್ಣು; ಮೇಲು: ಮುಂದೆ, ಎತ್ತರ; ಮೊಗ: ಮುಖ; ನೃಪ: ರಾಜ; ನುಡಿ: ಮಾತು; ಆಲಿಸು: ಕೇಳು; ನುಡಿ: ಮಾತಾಡು; ಕರಾಳ: ಭಯಂಕರ; ದಂಷ್ಟ್ರ: ದಂತ; ಸಂಸ್ಥುಳ: ದಪ್ಪ; ಜಿಹ್ವೆ: ನಾಲಗೆ; ಜಡಿ: ಕೂಗು;

ಪದವಿಂಗಡಣೆ:
ಕೇಳಿದನು +ಫಣಿ+ ಭೀಮಸೇನನ
ಮೌಳಿತಲ್ಪದ +ತಲೆಯ +ಹೊಳಹಿನ
ನಾಲಗೆಯ +ಚೂರಣದ+ ಝಡಿತೆಗೆ+ ಚಲಿಸುವ್+ಆಲಿಗಳ
ಮೇಲು +ಮೊಗದಲಿ +ನೃಪನ +ನುಡಿಗಳ
ನಾಲಿಸುತ+ ನುಡಿದನು+ ಕರಾಳಾ
ಭೀಳ +ದಂಷ್ಟ್ರಾಂತರವಿ+ಸಂಸ್ಥುಳ +ಜಿಹ್ವೆಗಳ +ಜಡಿದು

ಅಚ್ಚರಿ:
(೧) ನ ಕಾರದ ಸಾಲು ಪದಗಳು – ನೃಪನ ನುಡಿಗಳನಾಲಿಸುತ ನುಡಿದನು
(೨) ಹಾವು ತೋರಿದ ಪರಿ – ಮೌಳಿತಲ್ಪದ ತಲೆಯ ಹೊಳಹಿನ ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ
(೩) ನಾಲಗೆ, ಜಿಹ್ವೆ; ಮೌಳಿ, ತಲೆ – ಸಮನಾರ್ಥಕ ಪದ