ಪದ್ಯ ೪೧: ಧರ್ಮಜನು ಹಾವಿನ ಪರಿಚಯವನ್ನು ಹೇಗೆ ಕೇಳಿದನು?

ಅನಿಲ ಸುತನಪರಾಧಿಯೋ ನೀ
ವಿನಯ ಹೀನನೋ ಮೇಣು ಪರಪೀ
ಡನ ವೃಥಾ ದುಷ್ಕರ್ಮ ಸಂಗ್ರಹ ಬೇಹುದೇ ನಿನಗೆ
ದನುಜನೋ ಗಂಧರ್ವನೋ ಯ
ಕ್ಷನೊ ಸರೀಸೃಪರೂಪದಿವಿಜೇಂ
ದ್ರನೊ ನಿಧಾನಿಸಲರಿಯೆ ನೀನಾರೆಂದನವನೀಶ (ಅರಣ್ಯ ಪರ್ವ, ೧೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ಧರ್ಮಜನು ಹಾವನ್ನು ಮಾತನಾಡಿಸುತ್ತಾ, ಭೀಮನು ತಪ್ಪಿತಸ್ಥನೋ, ಅಥವಾ ನೀನು ನಯವನ್ನು ಮೀರಿ ಹೀಗೆ ಮಾಡಿದೆಯೋ? ಪರರನ್ನು ಪೀಡಿಸುವ ದುಷ್ಕರ್ಮದ ಪಾಪವು ನಿನಗೆ ಇಷ್ಟವೋ? ನೀನು ರಾಕ್ಷಸನೋ, ಗಂಧರ್ವನೋ, ಯಕ್ಷನೋ, ಅಥವಾ ಹಾವಿನರೂಪದಲ್ಲಿರುವ ದೇವೇಂದ್ರನೋ, ನನಗೆ ತಿಳಿಯದಾಗಿದೆ, ನೀನು ಯಾರು ಎಂದು ಹಾವನ್ನು ಕೇಳಿದನು.

ಅರ್ಥ:
ಅನಿಲಸುತ: ವಾಯುಪುತ್ರ (ಭೀಮ); ಅಪರಾಧಿ: ತಪ್ಪಿತಸ್ಥ; ವಿನಯ: ಒಳ್ಳೆಯತನ, ಸೌಜನ್ಯ; ಹೀನ: ಕೀಳು; ಮೇಣ್: ಅಥವಾ; ಪರ: ಬೇರೆ,ಅನ್ಯ; ಪೀಡನ: ತೊಂದರೆ; ವೃಥ: ಸುಮ್ಮನೆ; ದುಷ್ಕರ್ಮ: ಕೆಟ್ಟ ಕೆಲಸ; ಸಂಗ್ರಹ: ಹಿಡಿತ, ವಶ; ಬೇಹು: ಬೇಕು; ದನುಜ: ರಾಕ್ಷಸ; ಗಂಧರ್ವ: ದೇವಲೋಕದ ಸಂಗೀತಗಾರ; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ಸರೀಸೃಪ: ತೆವಳಿಕೊಂಡು ಹೋಗುವ ಪ್ರಾಣಿ, ಹಾವು; ರೂಪ: ಆಕಾರ; ವಿಜೇಂದ್ರ: ಇಂದ್ರ; ನಿಧಾನಿಸು: ಪರೀಕ್ಷಿಸು, ವಿಚಾರಮಾಡು; ಅರಿ: ತಿಳಿ; ಅವನೀಶ: ರಾಜ;

ಪದವಿಂಗಡಣೆ:
ಅನಿಲ+ ಸುತನ್+ಅಪರಾಧಿಯೋ +ನೀ
ವಿನಯ+ ಹೀನನೋ +ಮೇಣು +ಪರಪೀ
ಡನ +ವೃಥಾ +ದುಷ್ಕರ್ಮ +ಸಂಗ್ರಹ +ಬೇಹುದೇ +ನಿನಗೆ
ದನುಜನೋ +ಗಂಧರ್ವನೋ +ಯ
ಕ್ಷನೊ +ಸರೀಸೃಪ+ರೂಪದಿ+ವಿಜೇಂ
ದ್ರನೊ +ನಿಧಾನಿಸಲ್+ಅರಿಯೆ +ನೀನ್+ಆರೆಂದನ್+ಅವನೀಶ

ಅಚ್ಚರಿ:
(೧) ಹಾವನ್ನು ಯಾರೆಂದು ಕೇಳುವ ಪರಿ – ವಿನಯಹೀನನೋ, ದನುಜನೋ, ಗಂಧರ್ವನೋ, ಯಕ್ಷನೊ, ಸರೀಸೃಪರೂಪದಿ ವಿಜೇಂದ್ರನೊ

ಪದ್ಯ ೪೦: ಭೀಮನು ಅಣ್ಣನಿಗೆ ಹೇಗೆ ಉತ್ತರಿಸಿದನು?

ನೋಡಿದನು ಕಂದೆರೆದು ಕಂಠಕೆ
ಹೂಡಿದುರಗನ ಘೋರ ಬಂಧದ
ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
ಖೇಡನಾದನಜಾತರಿಪು ಮಾ
ತಾಡಿಸಿದನಹಿಪತಿಯ ನೆಲೆ ನಾ
ಡಾಡಿಗಳ ನಾಟಕದ ಫಣಿಯಲ್ಲಾರು ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೪೦ ಪದ್ಯ)

ತಾತ್ಪರ್ಯ:
ಕಣ್ಣು ತೆರೆದು ಭೀಮನು ಅಣ್ಣನನ್ನು ನೋಡಿದನು, ಹಾವು ಅವನ ಕಂಠವನ್ನು ಭದ್ರವಾಗಿ ಬಂಧಿಸಿದ್ದುದರಿಂದ ಅವನು ಮಾತನಾಡಲಾರದೆ ಕೇವಲ ಬೆರಳ ಸನ್ನೆಯನ್ನು ಮಾಡಿದನು. ಅಜಾತಶತ್ರುವಾದ ಧರ್ಮಜನು ಹೆದರಿ ಹಾವನ್ನುದೇಶಿಸಿ, ನೀನು ಸಾಮಾನ್ಯ ಹಾವಲ್ಲ, ನೀನಾರು ಎಂದು ಕೇಳಿದನು.

ಅರ್ಥ:
ನೋಡು: ವೀಕ್ಷಿಸು; ಕಂದೆರೆದು: ಕಣ್ಣು ಬಿಟ್ಟು; ಕಂಠ: ಕೊರಳು
ಹೂಡು: ಅಣಿಗೊಳಿಸು, ಕಟ್ಟು; ಉರಗ: ಹಾವು; ಘೋರ: ಉಗ್ರ, ಭಯಂಕರ; ಬಂಧ: ಕಟ್ಟು, ಬಂಧನ; ಗಾಢ: ಹೆಚ್ಚಳ, ಅತಿಶಯ; ನುಡಿ: ಮಾತಾಡು; ನೆಗ್ಗು: ಕುಗ್ಗು, ಕುಸಿ; ಬೆರಳು: ಅಂಗುಲಿ; ಸನ್ನೆ: ಗುರುತು; ಖೇಡ: ಹೆದರಿದವನು; ಅಜಾತಶತ್ರು: ಧರ್ಮರಾಯ, ಶತ್ರುವೇ ಇಲ್ಲದವ; ಮಾತಾಡಿಸು: ನುಡಿ; ಅಹಿಪತಿ: ಸರ್ಪರಾಜ; ನೆಲೆ: ಸ್ಥಾನ; ನಾಡಾಡಿ: ಸಾಮಾನ್ಯವಾದುದು; ನಾಟಕ: ಲೀಲೆ, ತೋರಿಕೆ; ಫಣಿ: ಹಾವು; ಹೇಳು: ತಿಳಿಸು; ರಿಪು: ಶತ್ರು, ವೈರಿ;

ಪದವಿಂಗಡಣೆ:
ನೋಡಿದನು +ಕಂದೆರೆದು +ಕಂಠಕೆ
ಹೂಡಿದ್+ಉರಗನ +ಘೋರ +ಬಂಧದ
ಗಾಢದಲಿ +ನುಡಿ +ನೆಗ್ಗಿ+ ನುಡಿದನು +ಬೆರಳ +ಸನ್ನೆಯಲಿ
ಖೇಡನಾದನ್+ಅಜಾತರಿಪು+ ಮಾ
ತಾಡಿಸಿದನ್+ಅಹಿಪತಿಯ +ನೆಲೆ +ನಾ
ಡಾಡಿಗಳ +ನಾಟಕದ +ಫಣಿಯಲ್ಲ್+ಆರು +ಹೇಳೆಂದ

ಅಚ್ಚರಿ:
(೧) ಭೀಮನ ಸ್ಥಿತಿ – ಉರಗನ ಘೋರ ಬಂಧದ ಗಾಢದಲಿ ನುಡಿ ನೆಗ್ಗಿ ನುಡಿದನು ಬೆರಳ ಸನ್ನೆಯಲಿ
(೨) ನೆಗ್ಗಿ ನುಡಿದನು; ನೆಲೆ ನಾಡಾಡಿಗಳ ನಾಟಕದ – ನ ಕಾರದ ಪದಗಳು

ಪದ್ಯ ೩೯: ಧರ್ಮಜನು ಭೀಮನನ್ನು ಹೇಗೆ ವಿಚಾರಿಸಿದನು?

ಏನು ಕುಂತೀಸುತನಪಾಯವ
ದೇನು ಫಣಿ ಬಂಧದ ವಿಧಾನವಿ
ದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ
ಏನಿದಕೆ ಕರ್ತವ್ಯ ನಮಗೀ
ಹೀನ ದೆಸೆಗೆ ನಿಮಿತ್ತ ದುಷ್ಕೃತ
ವೇನು ಶಿವಶಿವಯೆನುತ ನುಡಿಸಿದನನಿಲ ನಂದನನ (ಅರಣ್ಯ ಪರ್ವ, ೧೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನನ್ನು ನೋಡಿ, ಏನು ಭೀಮ ಇದೇನು ಅಪಾಯಕ್ಕೆ ಸಿಲುಕಿದೆ, ಹಾವಿನ ಹಿಡಿತದಲ್ಲಿ ವಿನೋದದಿಂದ ಸಿಕ್ಕಿದೆಯೋ, ಮನುಷ್ಯರ ಬಲವನ್ನಡಗಿಸುವ ವಿಧಿಯ ಲೀಲೆಯೋ? ನಮಗಿಂತಹ ಹೀನದೆಸೆ ಬರಲು ಕಾರಣವೇನು? ಯಾವ ಪಾಪದಿಂದ ನಿನಗೀ ಗತಿಯು ಬಂದಿತು ಎಂದು ಭೀಮನನ್ನು ಕೇಳಿದನು.

ಅರ್ಥ:
ಸುತ: ಮಗ; ಅಪಾಯ: ತೊಂದರೆ; ಫಣಿ: ಹಾವು; ಬಂಧ: ಕಟ್ಟು, ಪಾಶ; ವಿಧಾನ: ರೀತಿ; ವಿನೋದ: ಸಂತಸ; ತ್ರಾಣಾಪಚಯ: ಶಕ್ತಿಕುಂದುವಿಕೆ; ವಿಧಿ: ನಿಯಮ; ಕರ್ತವ್ಯ: ಕಾಯಕ, ಕೆಲಸ; ಹೀನ: ಅಲ್ಪ, ಕ್ಷುದ್ರ; ದೆಸೆ: ಸ್ಥಿತಿ; ನಿಮಿತ್ತ: ನೆಪ, ಕಾರಣ; ದುಷ್ಕೃತ: ಕೆಟ್ಟ ಕೆಲಸ; ನುಡಿಸು: ಮಾತಾಡಿಸು; ಅನಿಲನಂದನ: ವಾಯುಪುತ್ರ (ಭೀಮ);

ಪದವಿಂಗಡಣೆ:
ಏನು +ಕುಂತೀಸುತನ್+ಅಪಾಯವದ್
ಏನು+ ಫಣಿ +ಬಂಧದ +ವಿಧಾನವ್
ಇದೇನು +ನಿನಗೆ +ವಿನೋದವೋ +ತ್ರಾಣಾಪಚಯ+ ವಿಧಿಯೊ
ಏನಿದಕೆ+ ಕರ್ತವ್ಯ +ನಮಗೀ
ಹೀನ +ದೆಸೆಗೆ +ನಿಮಿತ್ತ +ದುಷ್ಕೃತ
ವೇನು+ ಶಿವಶಿವಯೆನುತ +ನುಡಿಸಿದನ್+ಅನಿಲನಂದನನ

ಅಚ್ಚರಿ:
(೧) ಕುಂತೀಸುತ, ಅನಿಲನಂದನ – ಭೀಮನನ್ನು ಕರೆದ ಪರಿ
(೨) ಭೀಮನ ಬಲದ ಬಗ್ಗೆ ಹೇಳುವ ಪರಿ – ಇದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ

ಪದ್ಯ ೩೮: ಧರ್ಮಜನು ಯಾವುದರ ಬಗ್ಗೆ ಚಿಂತಿಸಿದನು?

ಅಕಟ ಹಿಂದನುಭವಿಸಿದೆವು ಕಂ
ಟಕ ಹಲವನೀಪರಿಯ ಬಲು ಕಂ
ಟಕ ಮಹಾಕರ್ದಮದೊಳದ್ದಿತೆ ವಿಧಿ ಮಹಾದೇವ
ವಿಕಟಮದನಾಗಾಯುತ ತ್ರಾ
ಣಕನ ಸಾಹಸವಡಗಿತೇ ವನ
ವಿಕಟ ಭುಜಗಾಟೋಪ ಠೌಳಿಯೊಳೆಂದು ಚಿಂತಿಸಿದ (ಅರಣ್ಯ ಪರ್ವ, ೧೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅಯ್ಯೋ, ನಾವು ಹಿಂದೆ ಅನೇಕ ತೊಂದರೆಗಳಿಗೆ ಸಿಕ್ಕಿಹಾಕಿಕೊಂಡಿದ್ದೆವು, ಇಂತಹ ದೊಡ್ಡ ಕಂಟಕದ ಕಪ್ಪು ಕೆಸರಿನಲ್ಲಿ ನಮ್ಮನ್ನು ವಿಧಿಯು ಅದ್ದಿತೇ? ಹಲವು ಆನೆಗಳ ಭುಜಬಲಕ್ಕೆ ಸಮಾನನಾದ ಭೀಮನ ಸತ್ವವು ಅಡಗಿತೇ? ಕಾಡಿನ ಹೆಬ್ಬಾವು ಮೋಸದಿಂದ ಇವನನ್ನು ನಿಗ್ರಹಿಸಿತೇ ಎಂದು ಚಿಂತಿಸಿದನು.

ಅರ್ಥ:
ಅಕಟ: ಅಯ್ಯೋ; ಹಿಂದೆ: ಪುರಾತನ, ಪೂರ್ವ; ಅನುಭವಿಸು: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಕಂಟಕ: ತೊಂದರೆ; ಹಲವು: ಬಹಳ; ಪರಿ: ರೀತಿ; ಬಲು: ಬಹಳ ಮಹಾ: ದೊಡ್ಡ; ಕರ್ದಮ: ಕೆಸರು, ಪಂಕ; ಅದ್ದು: ಮುಳುಗು; ವಿಧಿ: ನಿಯಮ; ವಿಕಟ: ಭೀಕರವಾದ, ಕ್ರೂರವಾದ; ಮದ: ಅಹಂಕಾರ; ನಾಗ: ಆನೆ; ಆಯುತ: ಒಂದುಸಾವಿರ; ತ್ರಾಣ: ಶಕ್ತಿ, ಬಲ; ಸಾಹಸ: ಪರಾಕ್ರಮ; ಅಡಗು: ಮುಚ್ಚು; ವನ: ಕಾಡು; ವಿಕಟ: ಭಾರಿಯಾದ, ಸೊಕ್ಕಿದ; ಭುಜಗ: ಹಾವು; ಆಟೋಪ: ಆವೇಶ, ದರ್ಪ; ಠೌಳಿ: ಮೋಸ, ವಂಚನೆ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಅಕಟ +ಹಿಂದ್+ಅನುಭವಿಸಿದೆವು +ಕಂ
ಟಕ +ಹಲವನ್+ಈ+ಪರಿಯ +ಬಲು +ಕಂ
ಟಕ +ಮಹಾಕರ್ದಮದೊಳ್+ಅದ್ದಿತೆ +ವಿಧಿ +ಮಹಾದೇವ
ವಿಕಟ+ಮದ+ನಾಗ+ಆಯುತ +ತ್ರಾ
ಣಕನ +ಸಾಹಸವ್+ಅಡಗಿತೇ +ವನ
ವಿಕಟ +ಭುಜಗ+ಆಟೋಪ+ ಠೌಳಿಯೊಳ್+ಎಂದು +ಚಿಂತಿಸಿದ

ಅಚ್ಚರಿ:
(೧) ಅಕಟ, ವಿಕಟ; ಕಂಟಕ, ತ್ರಾಣಕ – ಪ್ರಾಸ ಪದಗಳು
(೨) ಭೀಮನ ಬಲ – ವಿಕಟಮದನಾಗಾಯುತ ತ್ರಾಣಕನ ಸಾಹಸವಡಗಿತೇ

ಪದ್ಯ ೩೭: ಧರ್ಮಜನು ಭೀಮನನ್ನು ಯಾವ ಸ್ಥಿತಿಯಲ್ಲಿ ನೋಡಿದನು?

ಹುದುಗಿದಗ್ಗದ ಸತ್ವದುತ್ಸಾ
ಹದ ನಿರೂಢಶ್ವಾಸದಲಿ ಗದ
ಗದಿಪಕಂಠದ ತಳಿತ ಭಂಗದ ತಿರುಗುವಾಲಿಗಳ
ಹೆದರೆದೆಯ ಹೇರಾಳ ಶೋಕದ
ಕೆದರುಗೇಶದ ಕೆಳಕೆ ಜೋಲಿದ
ಗದೆಯ ಗರುವಾಯಳಿದ ಭೀಮನ ಕಂಡನವನೀಶ (ಅರಣ್ಯ ಪರ್ವ, ೧೪ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸರ್ಪದ ಹಿಡಿತದಲ್ಲಿದ್ದ ಭೀಮನು ದೀರ್ಘಶ್ವಾಸವನ್ನು ಬಿಡುತ್ತಾ, ಸತ್ವ ಉತ್ಸಾಹಗಳನ್ನು ಕಳೆದುಕೊಂಡು ಕಂಠವು ಗದ್ಗದಿಸುತ್ತಿರಲು, ಅಪಮಾನಗೊಂಡು ಕಣ್ಗುಡ್ಡೆಗಳು ತಿರುಗುತ್ತಿರಲು, ಧೈರ್ಯವನ್ನು ಕಳೆದುಕೊಂಡುದನ್ನು ಯುಧಿಷ್ಠಿರನು ನೋಡಿದನು. ಮುಖದಲ್ಲಿ ಶೋಕ ವ್ಯಕ್ತವಾಗುತ್ತಿತ್ತು. ಕೂದಲುಗಳು ಕೆದರಿದ್ದವು, ಗದೆ ಜೋಲಾಡುತ್ತಿತ್ತು, ಸ್ಥೈರ್ಯವು ಮಾಯವಾಗಿತ್ತು.

ಅರ್ಥ:
ಹುದುಗು: ಅಡಗು, ಮರೆಯಾಗು; ಅಗ್ಗ: ಶ್ರೇಷ್ಠ; ಸತ್ವ: ಶಕ್ತಿ, ಬಲ; ಉತ್ಸಾಹ: ಹುರುಪು, ಆಸಕ್ತಿ; ನಿರೂಢಿ: ಸಾಮಾನ್ಯ; ಶ್ವಾಸ: ಉಸಿರಾಟ, ಗಾಳಿ; ಗದಗದಿಪ: ನಡುಗು; ಕಂಠ: ಕೊರಳು; ತಳಿತ: ಚಿಗುರಿದ; ಭಂಗ: ತುಂಡು, ಕಷ್ಟ; ತಿರುಗು: ಚಲಿಸುವ, ಸುತ್ತಾಡು; ಆಲಿ: ಕಣ್ಣು; ಹೆದರು: ಭಯಪಡು; ಹೇರಾಳ: ದೊಡ್ಡ, ವಿಶೇಷ; ಶೋಕ: ದುಃಖ; ಕೆದರು: ಹರಡಿದ; ಕೇಶ: ಕೂದಲು; ಕೆಳಕೆ: ಜೋಲು: ಇಳಿಬೀಳು; ಗದೆ: ಮುದ್ಗರ; ಗರುವ: ಬಲಶಾಲಿ; ಅಳಿ: ನಾಶ; ಕಂಡು: ನೋಡು; ಅವನೀಶ: ರಾಜ;

ಪದವಿಂಗಡಣೆ:
ಹುದುಗಿದ್+ಅಗ್ಗದ +ಸತ್ವದ್+ಉತ್ಸಾ
ಹದ +ನಿರೂಢ+ಶ್ವಾಸದಲಿ +ಗದ
ಗದಿಪ+ಕಂಠದ +ತಳಿತ +ಭಂಗದ +ತಿರುಗುವ್+ಆಲಿಗಳ
ಹೆದರೆದೆಯ +ಹೇರಾಳ +ಶೋಕದ
ಕೆದರು+ಕೇಶದ +ಕೆಳಕೆ +ಜೋಲಿದ
ಗದೆಯ +ಗರುವಾಯಳಿದ+ ಭೀಮನ+ ಕಂಡನ್+ಅವನೀಶ

ಅಚ್ಚರಿ:
(೧) ಭೀಮನ ಸ್ಥಿತಿ – ಹುದುಗಿದಗ್ಗದ ಸತ್ವದುತ್ಸಾಹದ ನಿರೂಢಶ್ವಾಸದಲಿ ಗದಗದಿಪಕಂಠದ ತಳಿತ ಭಂಗದ ತಿರುಗುವಾಲಿಗಳ