ಪದ್ಯ ೩೬: ಧರ್ಮಜನು ಭೀಮನನ್ನು ಹುಡುಕಿಕೊಂಡು ಎಲ್ಲಿಗೆ ಹೋದನು?

ಭೀಮನಾವೆಡೆಯೆನೆ ಕಿರಾತ
ಸ್ತೋಮ ಸಹಿತ ಮೃಗವ್ಯಕೇಳೀ
ಕಾಮನೈದಿದನೆನಲು ನೃಪಹೊರವಂಟನಾ ಕ್ಷಣಕೆ
ಭೂಮಿಸುರರೊಡನೈದಿಬರೆ ಸಂ
ಗ್ರಾಮಧೀರನ ಹೆಜ್ಜೆವಿಡಿದು ಮ
ಹೀಮನೋಹರನರಸಿಹೊಕ್ಕನು ಘೋರಕಾನನವ (ಅರಣ್ಯ ಪರ್ವ, ೧೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನೆಲ್ಲಿದ್ದಾನೆ ಎಂದು ಕೇಳಲು, ಬೇಟೆಗಾಗಿ ಬೇಡರೊಡನೆ ಹೋಗಿದ್ದಾನೆ ಎಂದು ಉಳಿದವರು ಹೇಳಲು, ಧರ್ಮಜನು ಕಾರ್ಯಪ್ರವೃತ್ತನಾಗಿ ಕೆಲ ಬ್ರಾಹ್ಮಣರೊಡನೆ ಹೊರಟು, ಭೀಮನ ಹೆಜ್ಜೆಗಳಿಂದ ಅವನ ದಾರಿಯನ್ನು ಹಿಡಿದು ನಡೆದು ಘೋರವಾದ ಅರಣ್ಯವನ್ನು ಪ್ರವೇಶಿಸಿದನು.

ಅರ್ಥ:
ಆವೆಡೆ: ಎಲ್ಲಿ,ಯಾವ ಕಡೆ; ಕಿರಾತ: ಬೇಡ; ಸ್ತೋಮ: ಗುಂಪು; ಸಹಿತ: ಜೊತೆ; ಮೃಗ: ಪ್ರಾಣಿ; ಮೃಗವ್ಯ: ಬೇಟೆ; ಕೇಳು: ಆಲಿಸು; ಕಾಮ: ಆಸೆ; ಐದು: ಬಂದು ಸೇರು; ನೃಪ: ರಾಜ; ಹೊರವಂಟ: ತೆರಳು; ಕ್ಷಣಕೆ: ತಕ್ಷಣ; ಭೂಮಿಸುರ: ಬ್ರಾಹ್ಮಣ; ಸಂಗ್ರಾಮ: ಯುದ್ಧ; ಧೀರ: ಪರಾಕ್ರಮಿ; ಹೆಜ್ಜೆ: ಪಾದ; ಮಹೀಮನೋಹರ: ರಾಜ; ಮಹೀ: ಭೂಮಿ; ಮನೋಹರ: ಸೊಗಸಾದುದು; ಅರಸಿ: ಹುಡುಕು; ಹೊಕ್ಕು: ಸೇರು; ಘೋರ: ಭಯಂಕರವಾದ; ಕಾನನ: ಕಾಡು;

ಪದವಿಂಗಡಣೆ:
ಭೀಮನ್+ಆವೆಡೆ+ಎನೆ +ಕಿರಾತ
ಸ್ತೋಮ +ಸಹಿತ ಮೃಗವ್ಯಕೇಳೀ
ಕಾಮನೈದಿದನ್+ಎನಲು +ನೃಪಹೊರವಂಟನಾ +ಕ್ಷಣಕೆ
ಭೂಮಿಸುರರೊಡನ್+ಐದಿಬರೆ+ ಸಂ
ಗ್ರಾಮ+ಧೀರನ+ ಹೆಜ್ಜೆವಿಡಿದು +ಮ
ಹೀಮನೋಹರನ್+ಅರಸಿ+ಹೊಕ್ಕನು +ಘೋರ+ಕಾನನವ

ಅಚ್ಚರಿ:
(೧) ಧರ್ಮಜನನ್ನು ಮಹೀಮನೋಹರ, ಭೀಮನನ್ನು ಸಂಗ್ರಾಮಧೀರ ಎಂದು ಕರೆದಿರುವುದು

ಪದ್ಯ ೩೫: ಧರ್ಮಜನು ಯಾವುದರ ಬಗ್ಗೆ ಚಿಂತಿಸಿದ?

ಅರಸ ಕೇಳಿತ್ತಲು ಮಹೀಶನ
ಹೊರೆಯಲಾಯ್ತುತ್ಪಾತಶತ ನಿ
ಷ್ಠುರವಿದೇನೋ ದೈವಕೃತ ಫಲವಾವುದಿದಕೆನುತ
ಕರೆಸಿ ಧೌಮ್ಯಂಗರುಹಲಿದು ನ
ಮ್ಮರುಸುಗಳಿಗಪಘಾತಸೂಚಕ
ವರಿದಿದರ ನಿರ್ವಾಹವೆಂದರೆ ನೃಪತಿ ಚಿಂತಿಸಿದ (ಅರಣ್ಯ ಪರ್ವ, ೧೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಇತ್ತ ಧರ್ಮಜನು ನೂರು ಉತ್ಪಾತಕಗಳನ್ನು ನೋದಿ, ಧೌಮ್ಯರನ್ನು ಬರೆಮಾಡಿ, ಈ ನಿಷ್ಠುರದ ಉತ್ಪಾತಗಳು ಏಕೆ ದೈವವಶದಿಂದ ಕಂಡವು, ಇದಕ್ಕೇನು ಫಲ ಎಂದು ಕೇಳಲು, ಧೌಮ್ಯರು ನಮ್ಮ ರಾಜರಿಗೆ ಅಪಘಾತವನ್ನು ಸೂಚಿಸುತ್ತದೆ ಇದಕ್ಕೆ ಪರಿಹಾರ ಬಲುಕಷ್ಟ ಎಂದು ತಿಳಿಸಲು, ಧರ್ಮಜನು ಚಿಂತೆಗೊಳಗಾದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮಹೀಶ: ರಾಜ; ಹೊರೆ: ಭಾರ; ಉತ್ಪಾತ: ಅಪಶಕುನ; ಶತ: ನೂರು; ನಿಷ್ಠುರ: ಕಠಿಣವಾದುದು; ದೈವ: ಭಗವಂತ; ಕೃತ: ಮಾಡಿದ; ಫಲ: ಪ್ರಯೊಜನ; ಕರೆಸು: ಬರೆಮಾಡು; ಅರುಹು: ಹೇಳು; ಅರುಸು: ರಾಜ; ಅಪಘಾತ: ತೊಂದರೆ; ಸೂಚಕ: ಸುಳಿವು, ಸೂಚನೆ; ಅರಿ: ತಿಳಿ; ನಿರ್ವಾಹ: ನಿವಾರಣೋಪಾಯ; ನೃಪತಿ: ರಾಜ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಅರಸ +ಕೇಳ್+ಇತ್ತಲು+ ಮಹೀಶನ
ಹೊರೆಯಲಾಯ್ತ್+ಉತ್ಪಾತ+ಶತ+ ನಿ
ಷ್ಠುರವ್+ಇದೇನೋ +ದೈವಕೃತ+ ಫಲವಾವುದ್+ಇದಕೆನುತ
ಕರೆಸಿ +ಧೌಮ್ಯಂಗ್+ಅರುಹಲ್+ಇದು +ನಮ್ಮ್
ಅರುಸುಗಳಿಗ್+ಅಪಘಾತ+ಸೂಚಕವ್
ಅರಿದಿದರ +ನಿರ್ವಾಹವೆಂದರೆ+ ನೃಪತಿ +ಚಿಂತಿಸಿದ

ಅಚ್ಚರಿ:
(೧) ಅರಸ, ನೃಪತಿ, ಮಹೀಶ – ಸಮನಾರ್ಥಕ ಪದ

ಪದ್ಯ ೩೪: ಹಾವು ಭೀಮನನ್ನು ಹೇಗೆ ಬಿಗಿಯಿತು?

ಭಟ ಮರಳಿ ಸಂತೈಸಿಕೊಂಡಟ
ಮಟಿಸಿ ಗದೆಯಲಿ ಹೊಯ್ದು ಬಿಗುಹಿನ
ಕಟಕವನು ಬಿಚ್ಚಿದನು ಹೆಚ್ಚಿದನುಬ್ಬಿ ಬೊಬ್ಬಿಡುತ
ಪುಟದ ಕಂತುಕದಂತೆ ಫಣಿ ಲಟ
ಕಟಿಸಲೌಕಿತು ಮತ್ತೆ ಗಿಡಗನ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ (ಅರಣ್ಯ ಪರ್ವ, ೧೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಭೀಮನು ಸುಧಾರಿಸಿಕೊಂಡು ಉಪಾಯದಿಂದ ಗದಾಪ್ರಹಾರ ಮಾಡಿ ಹಾವಿನ ಬಿಗಿತವನ್ನು ತಪ್ಪಿಸಿಕೊಂಡು ಗರ್ಜಿಸಿದನು. ಆದರೆ ಹೆಬ್ಬಾವು ನೆಗೆದ ಚಂಡಿನಂತೆ ಭೀಮನನ್ನು ತನ್ನ ಹಿಡಿತದಲ್ಲಿ ಸಿಕ್ಕಿಸಿಕೊಂಡು ಬಿಗಿಯಿತು. ಗಿಡಗನ ಹಿಡಿತದಲ್ಲಿ ಸಿಕ್ಕ ಗಿಣಿಯಂತೆ ಭೀಮನು ಆಯಾಸಗೊಂಡು ಗಿರಿಗುಟ್ಟಿದನು.

ಅರ್ಥ:
ಭಟ: ಬಲಶಾಲಿ; ಮರಳಿ: ಪುನಃ; ಸಂತೈಸು: ಸಮಾಧಾನಿಸು; ಅಟಮಟಿಸು: ಮೋಸ ಮಾಡು; ಗದೆ: ಮುದ್ಗರ; ಹೊಯ್ದು: ಹೊಡೆ; ಬಿಗುಹು: ಬಿಗಿ, ಗಟ್ತಿ; ಕಟಕ: ಕೈಬಳೆ; ಬಿಚ್ಚು: ಸಡಲಿಸು; ಹೆಚ್ಚು: ಅಧಿಕ; ಉಬ್ಬು: ಹಿಗ್ಗು; ಬೊಬ್ಬಿಡು: ಜೋರಾಗಿ ಕೂಗು; ಪುಟ: ನೆಗೆತ; ಕಂದುಕ:ಚೆಂಡು; ಫಣಿ: ಹಾವು; ಲಟಕಟಿಸು: ಚಕಿತನಾಗು; ಔಕು: ಒತ್ತು, ನೂಕು; ಗಿಡಗ: ಹದ್ದಿನ ಜಾತಿಯ ಹಕ್ಕಿ; ಗಿಳಿ: ಶುಕ; ಗಿರಿಗಿರಿಗುಟ್ಟು: ಗರಗರ ತಿರುಗು;

ಪದವಿಂಗಡಣೆ:
ಭಟ +ಮರಳಿ +ಸಂತೈಸಿಕೊಂಡ್+ಅಟ
ಮಟಿಸಿ+ ಗದೆಯಲಿ +ಹೊಯ್ದು +ಬಿಗುಹಿನ
ಕಟಕವನು +ಬಿಚ್ಚಿದನು +ಹೆಚ್ಚಿದನ್+ಉಬ್ಬಿ +ಬೊಬ್ಬಿಡುತ
ಪುಟದ +ಕಂತುಕದಂತೆ +ಫಣಿ +ಲಟ
ಕಟಿಸಲ್+ಔಕಿತು +ಮತ್ತೆ +ಗಿಡಗನ
ಪುಟದ +ಗಿಳಿಯಂದದಲಿ+ ಗಿರಿಗಿರಿಗುಟ್ಟಿದನು +ಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪುಟದ ಕಂತುಕದಂತೆ ಫಣಿ ಲಟಕಟಿಸಲೌಕಿತು ಮತ್ತೆ ಗಿಡಗನ
ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ

ಪದ್ಯ ೩೩: ಭೀಮನ ದೇಹವು ಹೇಗೆ ತೋರುತ್ತಿತ್ತು?

ಝಾಡಿಸಲು ಝಾಡಿಸಲು ಬಿಗುಹತಿ
ಗಾಢಿಸಿತು ಕೊಡಹಿದೊಡೆ ಮಿಗೆ ಮೈ
ಗೂಡಿ ಬಿಗಿದುದು ಭುಜಗವಳಯದ ಮಂದರಾದ್ರಿಯೆನೆ
ರೂಢಿಸಿದ ಭುಜಬಲದ ಸಿರಿಯ
ಕ್ಕಾಡಿತೇ ತನಗೆನುತ ಖಾಡಾ
ಖಾಡಿಯಲಿ ಕಾತರಿಸಿ ಕಳವಳಿಸಿದನು ಕಲಿಭೀಮ (ಅರಣ್ಯ ಪರ್ವ, ೧೪ ಸಂಧಿ, ೩೩ ಪದ್ಯ)

ತಾತ್ಪರ್ಯ:
ಭೀಮನು ಹಾವನ್ನು ಝಾಡಿಸಿದ ಹಾಗೆಲ್ಲಾ ಅದರ ಬಿಗಿತವು ಹೆಚ್ಚಿತು. ಹಾವು ಸುತ್ತಿದ ಮಂದರಪರ್ವತದಂತೆ ಭೀಮನ ದೇಹವು ತೋರುತ್ತಿತ್ತು. ಅಮಿತ ಭುಜಬಲವು ತನ್ನನ್ನು ಬಿಟ್ಟು ಹೋಯಿತೇ, ಶಿಥಿಲವಾಯಿತೇ ಎಂದು ಭೀಮನು ಕಳವಳಿಸಿದನು.

ಅರ್ಥ:
ಝಾಡಿಸು: ಕೊಡಹು, ಒದರು; ಬಿಗುಹು: ಗಟ್ಟಿ, ಬಿಗಿತ; ಗಾಢಿಸು: ಹೆಚ್ಚಾಗು; ಕೊಡಹು: ಒದರು; ಮಿಗೆ: ಮತ್ತು, ಅಧಿಕ; ಮೈ: ತನು; ಕೂಡು: ಜೋಡಿಸು; ಭುಜಗ: ಹಾವು; ಭುಜಗವಳಯ: ಈಶ್ವರ; ಅದ್ರಿ: ಬೆಟ್ಟ; ರೂಢಿಸು: ಹೆಚ್ಚಾಗು; ಭುಜಬಲ: ಬಾಹುಬಲ; ಸಿರಿ: ಐಶ್ವರ್ಯ; ಕಾಡು: ಪೀಡಿಸು; ಖಾಡಾಖಾಡಿ: ಮಲ್ಲಯುದ್ಧ; ಕಾತರಿಸು: ತವಕಗೊಳ್ಳು; ಕಳವಳ: ಗೊಂದಲ; ಕಲಿ: ಶೂರ;

ಪದವಿಂಗಡಣೆ:
ಝಾಡಿಸಲು +ಝಾಡಿಸಲು +ಬಿಗುಹತಿ
ಗಾಢಿಸಿತು +ಕೊಡಹಿದೊಡೆ+ ಮಿಗೆ+ ಮೈ
ಗೂಡಿ +ಬಿಗಿದುದು +ಭುಜಗವಳಯದ +ಮಂದರಾದ್ರಿಯೆನೆ
ರೂಢಿಸಿದ +ಭುಜಬಲದ +ಸಿರಿಯ
ಕ್ಕಾಡಿತೇ+ ತನಗೆನುತ +ಖಾಡಾ
ಖಾಡಿಯಲಿ +ಕಾತರಿಸಿ+ ಕಳವಳಿಸಿದನು +ಕಲಿಭೀಮ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮೈಗೂಡಿ ಬಿಗಿದುದು ಭುಜಗವಳಯದ ಮಂದರಾದ್ರಿಯೆನೆ
(೨) ಭುಜಗವಳಯ, ಭುಜಬಲ – ಭುಜ ಪದದ ಬಳಕೆ

ಪದ್ಯ ೩೨: ಭೀಮನ ಎದೆಯನ್ನು ಯಾರು ಸುತ್ತಿದರು?

ತೆಕ್ಕೆ ಸಡಲಿತು ತರಗೆಲೆಯ ಹೊದ
ರಿಕ್ಕಲಿಸೆ ಮೈಮುರಿಯಲನಿಲಜ
ನೆಕ್ಕತುಳದಲಿ ಮೇಲೆ ಹಾಯ್ದನು ಕಾಣದಹಿಪತಿಯ
ಸಿಕ್ಕಿದವು ಹೆದ್ದೊಡೆಗಳುರಗನ
ತೆಕ್ಕೆಯಲಿ ಡೆಂಢಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಹೇರುರವ (ಅರಣ್ಯ ಪರ್ವ, ೧೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಹೆಬ್ಬಾವು ತನ್ನ ಮೈಸಡಲಿಸಲು, ಸುತ್ತಲೂ ಇದ್ದ ತರಗೆಲೆಗಳು ಪಕ್ಕಕ್ಕೆ ಸರಿದವು. ಆ ಹಾವನ್ನು ನೋಡದೆ ಭೀಮನು ಅದರ ಮೇಲೆ ಕಾಲಿಟ್ಟನು. ಹಾವು ಅವನೆರಡು ತೋಳುಗಳನ್ನು ಸುತ್ತಿ ಬಿಗಿಯಲು, ಭೀಮನ ತಲೆ ತಿರುಗಿತು, ಆ ಹೆಬ್ಬಾವು ಭೀಮನ ಎದೆಯನ್ನು ಸುತ್ತಿತು.

ಅರ್ಥ:
ತೆಕ್ಕೆ:ಸುರುಳಿಯಾಗಿರುವಿಕೆ; ಸಡಲ:ಕಳಚು, ಬಿಚ್ಚು; ತರಗೆಲೆ: ಒಣಗಿದ ಎಲೆ; ಹೊದರು: ಪೊಟರೆ, ಪೊದೆ; ಮೈ: ತನು, ದೇಹ; ಮೈಮುರಿ: ಸಡಲಿಸು; ಅನಿಲಜ: ವಾಯು ಪುತ್ರ (ಭೀಮ); ಅತುಳ: ಹೋಲಿಕೆಯಿಲ್ಲದ; ಹಾಯು: ನೆಗೆ, ಹೊರಸೂಸು; ಕಾಣು: ತೋರು; ಅಹಿಪತಿ: ನಾಗರಾಜ; ಸಿಕ್ಕು: ಬಂಧಿಸು; ಹೆದ್ದೊಡೆ: ದೊಡ್ಡದಾದ ತೊಡೆ; ಉರಗ: ಹಾವು; ಡೆಂಢಣಿಸು: ಕಂಪಿಸು, ಕೊರಗು; ಫಣಿಪತಿ: ನಾಗರಾಜ; ಡೊಕ್ಕರ: ಗುದ್ದು; ಹಬ್ಬು: ಹರಡು; ಬಿಗಿ: ಬಂಧಿಸು; ಭಟ: ಶೂರ; ಹೇರುರ: ದೊಡ್ಡದಾದ ಎದೆ;

ಪದವಿಂಗಡಣೆ:
ತೆಕ್ಕೆ+ ಸಡಲಿತು +ತರಗೆಲೆಯ +ಹೊದ
ರಿಕ್ಕಲಿಸೆ +ಮೈಮುರಿಯಲ್+ಅನಿಲಜನ್
ಇಕ್ಕತುಳದಲಿ +ಮೇಲೆ +ಹಾಯ್ದನು +ಕಾಣದ್+ಅಹಿಪತಿಯ
ಸಿಕ್ಕಿದವು +ಹೆದ್ದೊಡೆಗಳ್+ಉರಗನ
ತೆಕ್ಕೆಯಲಿ +ಡೆಂಢಣಿಸಿ+ ಫಣಿಪತಿ
ಡೊಕ್ಕರಕೆ+ ಹಬ್ಬಿದನು +ಬಿಗಿದನು +ಭಟನ +ಹೇರುರವ

ಅಚ್ಚರಿ:
(೧) ಅಹಿಪತಿ, ಫಣಿಪತಿ, ಉರಗ – ಸಮಾನಾರ್ಥಕ ಪದ
(೨) ಹಾವು ಸುತ್ತಿದ ಪರಿ – ಸಿಕ್ಕಿದವು ಹೆದ್ದೊಡೆಗಳುರಗನ ತೆಕ್ಕೆಯಲಿ ಡೆಂಢಣಿಸಿ ಫಣಿಪತಿ
ಡೊಕ್ಕರಕೆ ಹಬ್ಬಿದನು ಬಿಗಿದನು ಭಟನ ಹೇರುರವ
(೩) ಭೀಮನ ಅಂಗವನ್ನು ವಿವರಿಸುವ ಪರಿ – ಹೇರುರವ, ಹೆದ್ದೊಡೆ