ಪದ್ಯ ೩೧: ಭೀಮನ ಕೂಗಿಗೆ ಯಾವುದು ಎದ್ದಿತು?

ಮುಡುಹು ಸೋಂಕಲಿಕುಲಿದು ಹೆಮ್ಮರ
ನುಡಿದು ಬಿದ್ದವು ಪಾದಘಾತದೊ
ಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ
ಜಡಿದುದಬುಜಭವಾಂಡವೆನಲವ
ಗಡೆಯ ಭೀಮನ ಕಳಕಳಕೆ ಕಿವಿ
ಯೊಡೆಯೆ ತೀದುದು ನಿದ್ರೆ ಮುರಿದಿಕ್ಕೆಯ ಮಹೋರಗನ (ಅರಣ್ಯ ಪರ್ವ, ೧೪ ಸಂಧಿ, ೩೧ ಪದ್ಯ)

ತಾತ್ಪರ್ಯ:
ಭೀಮನ ಭುಜವು ಸೋಕಿದೊಡನೆಯೇ ದೊಡ್ಡ ಮರಗಳು ಸದ್ದು ಮಾಡುತ್ತಾ ಉದುರಿ ಬಿದ್ದವು. ಅವನ ಪಾದದ ತುಳಿತಕ್ಕೆ ಭೂಮಿ ಕುಗ್ಗಿತು. ಅವನ ಗರ್ಜನೆ ಬ್ರಹ್ಮಾಂಡವನ್ನು ತುಂಬಿತು. ಭೀಮನ ಆರ್ಭಟಕ್ಕೆ ಕಿವಿಗಳೊಡೆದವು. ಆ ಸದ್ದಿಗೆ ಬೆಟ್ಟದ ತಪ್ಪಲಿನಲ್ಲಿ ಮಲಗಿದ್ದ ಒಂದು ಹೆಬ್ಬಾವಿನ ನಿದ್ರೆಯು ಕದಡಿತು.

ಅರ್ಥ:
ಮುಡುಹು: ಹೆಗಲು, ಭುಜಾಗ್ರ; ಸೋಂಕು: ತಗಲು, ಮುಟ್ಟು; ಉಲಿ: ಧ್ವನಿ ಮಾಡು; ಹೆಮ್ಮರ: ದೊಡ್ಡ ಮರ; ಉಡಿ: ಮುರಿ, ತುಂಡು ಮಾಡು; ಬಿದ್ದವು: ಬೀಳು; ಪಾದ: ಚರಣ; ಘಾತ: ಹೊಡೆತ, ಪೆಟ್ಟು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ನೆಗ್ಗು: ಕುಗ್ಗು, ಕುಸಿ; ನೆಲ: ಭೂಮಿ; ಅಬ್ಬರ: ಆರ್ಭಟ; ಬೊಬ್ಬೆ: ಕೂಗು; ಜಡಿ: ಬೆದರಿಕೆ, ಹೆದರಿಕೆ; ಅಬುಜ: ಕಮಲ; ಅಬುಜಭವಾಂಡ: ಬ್ರಹ್ಮಾಂಡ; ಅವಗಡ: ಅಸಡ್ಡೆ; ಕಳಕಳ: ಗೊಂದಲ; ಕಿವಿ: ಕರ್ಣ; ಒಡೆ: ಸೀಳು; ತೀದು: ತುಂಬಿ, ಮುಗಿಸಿ; ಬೀಸು; ನಿದ್ರೆ: ಶಯನ; ಮುರಿ: ಸೀಳು; ಇಕ್ಕೆ:ವಾಸಸ್ಥಾನ, ಆಶ್ರಯ; ಮಹೋರಗ: ದೊಡ್ಡದಾದ ಹಾವು, ಹೆಬ್ಬಾವು;

ಪದವಿಂಗಡಣೆ:
ಮುಡುಹು +ಸೋಂಕಲಿಕ್+ಉಲಿದು +ಹೆಮ್ಮರನ್
ಉಡಿದು +ಬಿದ್ದವು +ಪಾದ+ಘಾತದೊಳ್
ಅಡಿಗಡಿಗೆ+ ನೆಗ್ಗಿದುದು+ ನೆಲನ್+ಉಬ್ಬರದ+ ಬೊಬ್ಬೆಯಲಿ
ಜಡಿದುದ್+ಅಬುಜಭವಾಂಡವೆನಲ್+ಅವ
ಗಡೆಯ+ ಭೀಮನ+ ಕಳಕಳಕೆ+ ಕಿವಿ
ಯೊಡೆಯೆ+ ತೀದುದು +ನಿದ್ರೆ +ಮುರಿದ್+ಇಕ್ಕೆಯ +ಮಹಾ+ಉರಗನ

ಅಚ್ಚರಿ:
(೧) ಭೀಮನ ಶೌರ್ಯ – ಮುಡುಹು ಸೋಂಕಲಿಕುಲಿದು ಹೆಮ್ಮರನುಡಿದು ಬಿದ್ದವು ಪಾದಘಾತದೊ
ಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ
(೨) ೪ ಸಾಲು ಒಂದೇ ಪದವಾಗಿ ರಚಿತವಾಗಿರುವುದು

ಪದ್ಯ ೩೦: ಭೀಮನಿಗೆ ಹೆದರಿ ಹಂದಿಯು ಎಲ್ಲಿ ಅಡಗಿಕೊಂಡಿತು?

ಈತನುರುಬೆಗೆ ಬೆದರಿತುರು ಸಂ
ಘಾತದಲಿ ಹೆಬ್ಬಂದಿಯೊಂದು ವಿ
ಘಾತದಲಿ ಹಾಯ್ದುದು ಕಿರಾತವ್ರಜವನೊಡೆತುಳಿದು
ಈತನರೆಯಟ್ಟಿದನು ಶಬರ
ವ್ರಾತವುಳಿದುದು ಹಿಂದೆ ಭೀಮನ
ಭೀತಿಯಲಿ ಹೊಕ್ಕುದು ಮಹಾಗಿರಿಗಹನ ಗಹ್ವರವ (ಅರಣ್ಯ ಪರ್ವ, ೧೪ ಸಂಧಿ, ೩೦ ಪದ್ಯ)

ತಾತ್ಪರ್ಯ:
ಮೃಗಗಳ ಗುಂಪಿನಲ್ಲಿದ್ದ ದೊಡ್ಡ ಹಂದಿಯೊಂದು ಭೀಮನು ಮೇಲೆ ಬೀಳುವುದನ್ನು ಕಂಡು, ಬೇಡರನ್ನು ತುಳಿದು ಓಡಿ ಹೋಯಿತು. ಭೀಮನು ಅದನ್ನು ಹಿಂಬಾಲಿಸಿ ಮುಂದೆ ಹೋದನು, ಬೇಡರ ಗುಂಪು ಹಿಂದೆಯೇ ಉಳಿಯಿತು. ಆ ಹಂದಿಯು ಭೀಮನಿಗೆ ಹೆದರಿ ಬೆಟ್ಟದ ತಪ್ಪಲಿನಲ್ಲಿದ್ದ ದಟ್ಟವಾದ ಕಾಡನ್ನು ಸೇರಿತು.

ಅರ್ಥ:
ಉರುಬೆ: ಅಬ್ಬರ; ಬೆದರು: ಹೆದರು; ಉರು: ಹೆಚ್ಚಾದ; ಸಂಘಾತ: ಗುಂಪು, ಸಮೂಹ; ಹೆಬ್ಬಂದಿ: ದೊಡ್ಡ ಹಂದಿ; ವಿಘಾತ: ಏಟು, ಹೊಡೆತ; ಹಾಯ್ದು: ಹೊಡೆತ; ಕಿರಾತ: ಬೇಡ; ವ್ರಜ: ಗುಂಪು; ಒಡೆ:ಸೀಳು, ಬಿರಿ; ತುಳಿ: ಮೆಟ್ಟು; ಅರೆ: ಅರ್ಧಭಾಗ; ಅಟ್ಟು: ಹಿಂಬಾಲಿಸು; ಶಬರ: ಬೇಡ; ವ್ರಾತ: ಗುಂಪು; ಉಳಿ: ಹೊರತಾಗು; ಹಿಂದೆ: ಹಿಂಭಾಗ; ಭೀತಿ: ಭಯ; ಹೊಕ್ಕು: ಸೇರು; ಮಹಾ: ದೊಡ್ಡ; ಗಿರಿ: ಬೆಟ್ಟ; ಗಹನ: ಕಾಡು, ಅಡವಿ; ಗಹ್ವರ: ಗವಿ, ಗುಹೆ;

ಪದವಿಂಗಡಣೆ:
ಈತನ್+ಉರುಬೆಗೆ +ಬೆದರಿತ್+ಉರು +ಸಂ
ಘಾತದಲಿ +ಹೆಬ್+ಹಂದಿಯೊಂದು +ವಿ
ಘಾತದಲಿ+ ಹಾಯ್ದುದು +ಕಿರಾತ+ವ್ರಜವನ್+ಒಡೆ+ತುಳಿದು
ಈತನ್+ಅರೆ+ಅಟ್ಟಿದನು +ಶಬರ
ವ್ರಾತವ್+ಉಳಿದುದು + ಹಿಂದೆ+ ಭೀಮನ
ಭೀತಿಯಲಿ +ಹೊಕ್ಕುದು +ಮಹಾಗಿರಿ+ಗಹನ+ ಗಹ್ವರವ

ಅಚ್ಚರಿ:
(೧) ಸಂಘಾತ, ವಿಘಾತ – ಪ್ರಾಸ ಪದ
(೨) ವ್ರಜ, ವ್ರಾತ; ಕಿರಾತ, ಶಬರ – ಸಮನಾರ್ಥಕ ಪದ

ಪದ್ಯ ೨೯: ಭೀಮನು ಹೇಗೆ ಎಲ್ಲಾ ಪ್ರಾಣಿಗಳನ್ನು ಕೊಂದನು?

ಪಡೆ ಬೆದರೆ ಪಡಿತಳಿಸಿ ಪವನಜ
ಹಿಡಿದು ಬೀಸಿದ ನಾನೆಗಳನವ
ಗಡಿಸಿ ಸಿಂಹವ ಸೀಳಿದನು ಹೊಯ್ದೆತ್ತುವೆಕ್ಕಲನ
ಮಡದಲುರೆ ಘಟ್ಟಿಸಿದ ಮುಷ್ಟಿಯೊ
ಳಡಸಿ ತಿವಿದನು ಹುಲಿಯ ಕರಡಿಯ
ಕೊಡಹಿದನು ಕೊಂದನು ವನಾಂತದೊಳಖಿಳಮೃಗಕುಲವ (ಅರಣ್ಯ ಪರ್ವ, ೧೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬೇಟೆಗಾರರ ಹಿಂಡು ಮೃಗಗಳ ಪ್ರತಿರೋಧಕ್ಕೆ ಹೆದರಿದುದನ್ನು ಕಂಡ ಭೀಮನು ಆನೆಗಳನ್ನು ಹಿಡಿದು ಬೀಸಿ ಎಸೆದನು. ಸಿಂಹಗಳನ್ನು ಸೀಳಿದನು, ಹಂದಿಗಳ ಪಾದಗಳನ್ನು ಹಿಡಿದು ಬಡಿದನು, ಮುಷ್ಟಿಯಿಂದ ಹುಲಿಗಳನ್ನು ತಿವಿದನು. ಕರಡಿಗಳನ್ನು ಕೊಡವಿದನು. ಎಲ್ಲಾ ಮೃಗಗಳನ್ನೂ ಕೊಂದನು.

ಅರ್ಥ:
ಪಡೆ: ಸೈನ್ಯ, ಗುಂಪು; ಬೆದರು: ಅಂಜಿಕೆ, ಹೆದರು; ಪಡಿತಳ: ಆಕ್ರಮಣ; ಪವನಜ: ವಾಯುಪುತ್ರ (ಭೀಮ); ಹಿಡಿ: ಬಂಧಿಸು; ಬೀಸು: ತೂಗುವಿಕೆ; ಆನೆ: ಕರಿ, ಗಜ; ಅವಗಡಿಸು: ಕಡೆಗಣಿಸು; ಸಿಂಹ: ಕೇಸರಿ; ಸೀಳು: ಚೂರು; ಹೊಯ್ದು: ಹೊಡೆ; ಎತ್ತು: ಮೇಲಕ್ಕೆ ತರು; ಇಕ್ಕೆಲ: ಎರಡೂ ಬದಿ; ಮಡ: ಪಾದದ ಹಿಂಭಾಗ, ಹರಡು, ಹಿಮ್ಮಡಿ; ಉರೆ: ಹೆಚ್ಚು, ಅಧಿಕ; ಘಟ್ಟಿಸು: ಹೊಡೆ, ಅಪ್ಪಳಿಸು; ಮುಷ್ಟಿ: ಮುಚ್ಚಿದ ಅಂಗೈ; ಅಡಸು: ಬಿಗಿಯಾಗಿ ಒತ್ತು; ತಿವಿ: ಚುಚ್ಚು; ಹುಲಿ: ವ್ಯಾಘ್ರ; ಕೊಡಹು: ಒದರು, ಜಾಡಿಸು; ಕೊಂದನು: ಕೊಲ್ಲು, ಸಾಯಿಸು; ವನ: ಕಾಡು; ಅಖಿಳ: ಎಲ್ಲಾ; ಮೃಗ: ಪ್ರಾಣಿ; ಕುಲ: ವಂಶ;

ಪದವಿಂಗಡಣೆ:
ಪಡೆ +ಬೆದರೆ +ಪಡಿತಳಿಸಿ+ ಪವನಜ
ಹಿಡಿದು +ಬೀಸಿದನ್ +ಆನೆಗಳನ್+ಅವ
ಗಡಿಸಿ+ ಸಿಂಹವ +ಸೀಳಿದನು +ಹೊಯ್ದ್+ಎತ್ತುವ್+ಇಕ್ಕಲನ
ಮಡದಲುರೆ+ ಘಟ್ಟಿಸಿದ+ ಮುಷ್ಟಿಯೊಳ್
ಅಡಸಿ +ತಿವಿದನು +ಹುಲಿಯ +ಕರಡಿಯ
ಕೊಡಹಿದನು+ ಕೊಂದನು +ವನಾಂತದೊಳ್+ಅಖಿಳ+ಮೃಗ+ಕುಲವ

ಅಚ್ಚರಿ:
(೧) ಭೀಮನ ಸಾಹಸ – ಪವನಜ ಹಿಡಿದು ಬೀಸಿದನಾನೆಗಳನ್, ಅವಗಡಿಸಿ ಸಿಂಹವ ಸೀಳಿದನು ಹೊಯ್ದೆತ್ತುವೆಕ್ಕಲನ, ಮಡದಲುರೆ ಘಟ್ಟಿಸಿದ ಮುಷ್ಟಿಯೊಳಡಸಿ ತಿವಿದನು ಹುಲಿಯ, ಕರಡಿಯ
ಕೊಡಹಿದನು

ಪದ್ಯ ೨೮: ಬೇಟೆಗಾರರನ್ನು ಯಾರು ಹಿಂದಕ್ಕೆ ನೂಕಿದರು?

ಮುಳುದೊಡಕಿನೊಳು ಕೂದಲೊಂದೇ
ಸಿಲುಕಿನಿಂದವು ಚಮರಿಮೃಗ ಮರಿ
ಗಳಿಗೆ ಮೊಲೆಗೊಡುತಿರುಕಿನಲಿ ಹುದುಗಿದವು ಹುಲ್ಲೆಗಳು
ಎಳೆವರಿಯನಡಗಲಿಸಿ ನಿಂದವು
ಮಲೆತು ಸಿಂಹದ ಮಿಥುನ ಹಿಂಡಿನ
ಕಳಭವನು ಹಿಂದಿಕ್ಕಿ ವನಕರಿ ತೂಳಿದವು ಪಡೆಯ (ಅರಣ್ಯ ಪರ್ವ, ೧೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಮುಳ್ಳುಗಳಿಗೆ ಕೂದಲು ಸಿಕ್ಕಿಹಾಕಿಕೊಂಡಹಾಗೆ ಚಮರೀ ಮೃಗಗಳು ನಿಂತವು. ಜಿಂಕೆಗಳು ಸಂದಿನಲ್ಲಿ ಸೇರಿಕೊಂಡು ಮರಿಗಳಿಗೆ ಹಾಲುಣಿಸಿದವು. ಚಿಕ್ಕ ಮರಿಗಳಿಗೆ ಅಡ್ಡವಾಗಿ ಹೆಣ್ಣು ಗಂಡು ಸಿಂಹಗಳು ಬೇಟೆಗಾರರನ್ನು ಎದುರಿಸಿದವು. ತಮ್ಮ ಮರಿಗಳನ್ನು ಹಿಂದಿಟ್ಟು ಕಾಡಾನೆಗಳು ಬೇಟೆಗಾರರನ್ನು ಹಿಂದಕ್ಕೆಸೆದವು.

ಅರ್ಥ:
ಮುಳು: ಮುಳ್ಳು; ಒಡಕು: ಬಿರುಕು; ಕೂದಲು: ರೊಮ; ಸಿಲುಕು: ಬಂಧಿಸು; ನಿಂದವು: ನಿಲ್ಲು; ಮೃಗ: ಪ್ರಾಣಿ; ಮರಿ: ಎಳೆಯದು; ಮೊಲೆಗೊಡು: ಹಾಲನ್ನು ಉಣಿಸು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಹುದುಗು: ಅಡಗು, ಮರೆಯಾಗು; ಹುಲ್ಲೆ: ಜಿಂಕೆ, ಚಿಗುರೆ; ಎಳೆ: ಚಿಕ್ಕ; ಎಳೆವರಿ: ಚಿಕ್ಕ ಮರಿ; ಅಡಗು: ಅವಿತುಕೊಳ್ಳು, ಮರೆಯಾಗು; ಮಲೆ: ಎದುರಿಸು, ಪ್ರತಿಭಟಿಸು; ಸಿಂಹ: ಕೇಸರಿ; ಮಿಥುನ: ಜೋಡಿ; ಹಿಂಡು: ಗುಂಪು; ಕಳಭ: ಆನೆಮರಿ; ಹಿಂದಿಕ್ಕು: ಹಿಂದೆ ಸರಿಸು; ವನಕರಿ: ಕಾಡಾನೆ; ತೂಳು: ಸೋಲಿಸು, ಓಡಿಸು; ಪಡೆ: ಸೈನ್ಯ, ಗುಂಪು;

ಪದವಿಂಗಡಣೆ:
ಮುಳುದೊಡಕಿನೊಳು+ ಕೂದಲೊಂದೇ
ಸಿಲುಕಿನಿಂದವು+ ಚಮರಿಮೃಗ +ಮರಿ
ಗಳಿಗೆ+ ಮೊಲೆಗೊಡುತ್+ಇರುಕಿನಲಿ+ ಹುದುಗಿದವು +ಹುಲ್ಲೆಗಳು
ಎಳೆವರಿಯನ್+ಅಡಗಲಿಸಿ +ನಿಂದವು
ಮಲೆತು+ ಸಿಂಹದ +ಮಿಥುನ +ಹಿಂಡಿನ
ಕಳಭವನು +ಹಿಂದಿಕ್ಕಿ+ ವನಕರಿ+ ತೂಳಿದವು +ಪಡೆಯ

ಅಚ್ಚರಿ:
(೧) ಚಮರೀಮೃಗ ನಿಲ್ಲುವ ಸ್ಥಿತಿಯನ್ನು ಹೇಳುವ ಪರಿ – ಮುಳುದೊಡಕಿನೊಳು ಕೂದಲೊಂದೇ
ಸಿಲುಕಿನಿಂದವು ಚಮರಿಮೃಗ

ಪದ್ಯ ೨೭: ಯಾರ ಕೂಗು ಆಕಾಶವನ್ನು ವ್ಯಾಪಿಸಿದವು?

ಗಾಯವಡೆದೆಕ್ಕಲನ ರಭಸದ
ಜಾಯಿಲನ ಗಳಗರ್ಜನೆಯ ಪೂ
ರಾಯದೇರಿನ ಕರಡಿ ಕಾಡಾನೆಗಳ ಕಳಕಳದ
ನೋಯಲೊರಲುವ ಶರಭ ಸಿಂಹ ಲು
ಲಾಯ ವೃಕ ಶಾರ್ದೂಲ ಶಶ ಗೋ
ಮಾಯು ಮೊದಲಾದಖಿಳ ಮೃಗರವ ತುಂಬಿತಂಬರವ (ಅರಣ್ಯ ಪರ್ವ, ೧೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಗಾಯಗೊಂಡ ಹಂದಿ, ಬೇಟೆನಾಯಿ, ಆಯುಧಗಳಿಂದ ನೊಂದ ಕರಡಿ, ಕಾಡಾನೆಗಳು, ನೋವಿನಿಂದ ಒರಲುವ ಶರಭ, ಸಿಂಹ, ಕಾಡುಕೋಣ, ತೋಳ, ಹುಲಿ, ಮೊಲ ನರಿಗಳ ಕೂಗುಗಳು ಆಕಾಶವನ್ನೆಲ್ಲಾ ವ್ಯಾಪಿಸಿದವು.

ಅರ್ಥ:
ಗಾಯ: ಪೆಟ್ಟು; ಇಕ್ಕೆಲ: ಎರಡೂ ಕಡೆ; ರಭಸ: ವೇಗ; ಜಾಯಿಲ: ನಾಯಿ; ಗಳ: ಕಂಠ; ಗರ್ಜನೆ: ಜೋರಾದ ಕೂಗು; ಪೂರಾಯ: ಪರಿಪೂರ್ಣ; ಪೂರಾಯದೇರು: ವಿಶೇಷವಾದ ಗಾಯ; ಆನೆ: ಗಜ; ಕಳಕಳ: ಗೊಂದಲ; ನೋವು: ಬೇನೆ; ಒರಲು: ಅರಚು; ಶರಭ: ಎಂಟು ಕಾಲುಗಳುಳ್ಳ ಒಂದು ಕಾಲ್ಪನಿಕ ಪ್ರಾಣಿ ; ಸಿಂಹ: ಕೇಸರಿ; ಲುಲಾಯ: ಕೋಣ; ವೃಕ: ತೋಳ; ಶಾರ್ದೂಲ: ಹುಲಿ; ಶಶ: ಮೊಲ; ಗೋಮಾಯ: ಜಂಬುಕ, ನರಿ; ಮೊದಲಾದ: ಮುಂತಾದ; ಅಖಿಳ: ಎಲ್ಲಾ; ಮೃಗ: ಪ್ರಾಣಿ; ರವ: ಶಬ್ದ; ತುಂಬು: ಆವರಿಸು; ಅಂಬರ: ಆಗಸ;

ಪದವಿಂಗಡಣೆ:
ಗಾಯವಡೆದ್+ಇಕ್ಕಲನ +ರಭಸದ
ಜಾಯಿಲನ +ಗಳ+ಗರ್ಜನೆಯ +ಪೂ
ರಾಯದೇರಿನ +ಕರಡಿ+ ಕಾಡಾನೆಗಳ+ ಕಳಕಳದ
ನೋಯಲ್+ಒರಲುವ +ಶರಭ +ಸಿಂಹ +ಲು
ಲಾಯ +ವೃಕ +ಶಾರ್ದೂಲ +ಶಶ+ ಗೋ
ಮಾಯು +ಮೊದಲಾದ್+ಅಖಿಳ +ಮೃಗರವ+ ತುಂಬಿತ್+ಅಂಬರವ

ಅಚ್ಚರಿ:
(೧) ಪ್ರಾಣಿಗಳ ಹೆಸರನ್ನು ತಿಳಿಸುವ ಪದ್ಯ – ಜಾಯಿಲ, ಗೋಮಾಯ, ಲುಲಾಯ, ವೃಕ, ಶಾರ್ದೂಲ, ಶಶ, ಸಿಂಹ, ಕರಡಿ, ಕಾಡಾನೆ, ಶರಭ