ಪದ್ಯ ೨೬: ಪ್ರಾಣಿಗಳು ಹೇಗೆ ಪತನಗೊಂಡವು?

ಬೊಬ್ಬೆಗಳ ಪಟಹದ ಮೃದಂಗದ
ಸಬ್ಬಲಗ್ಗೆಯ ಸೋಹಿನಲಿ ಸುಳಿ
ವಬ್ಬರಕೆ ಹಿಂಡೊಡೆದು ಹಾಯ್ದವು ಸೂಸಿ ದೆಸೆದೆಸೆಗೆ
ತೆಬ್ಬಿದವು ಬೆಳ್ಳಾರವಲೆ ಹರಿ
ದುಬ್ಬಿಹಾಯ್ದರೆ ವೇಡೆಯವರಿಗೆ
ಹಬ್ಬವಾಯ್ತೇನೆಂಬೆನಗಣಿತ ಮೃಗನಿಪಾತನವು (ಅರಣ್ಯ ಪರ್ವ, ೧೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಕೇಕೆ, ತಮಟೆ, ಭೇರಿ ಮೊದಲಾದವುಗಳಿಂದ ಅಡಗಿದ್ದ ಮೃಗಗಳನ್ನು ಎಬ್ಬಿಸಿ ಹೊರಕ್ಕೆಳೆದರು. ಈ ವಾದ್ಯಗಳ ಸದ್ದಿಗೆ ಮೃಗಗಳು ಹಿಂಡನ್ನು ಬಿಟ್ಟು ದಿಕ್ಕು ಪಾಲಾಗಿ ಓಡಿದವು. ಮೃಗಗಳು ಚದುರಿ ಓಡಿ ಬೆಳ್ಳಾರ ಬಲೆಗಳನ್ನು ಹರಿದು ನುಗ್ಗಿದಾಗ ಬೇಟೆಗಾರರು ಅವನ್ನು ಕೊಂದು ಕೆಡವಿದರು. ಅಸಂಖ್ಯಾತ ಪ್ರಾಣಿಗಳು ಸತ್ತು ಬಿದ್ದವು.

ಅರ್ಥ:
ಬೊಬ್ಬೆ: ಆರ್ಭಟ; ಪಟಹ: ನಗಾರಿ; ಸಬ್ಬಲ: ಸರ್ವಬಲ; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ಸುಳಿ: ಆವರಿಸು; ಅಬ್ಬರ: ಕೂಗು; ಹಿಂಡು: ಗುಂಪು; ಒಡೆ: ಸೀಳು; ಹಾಯ್ದು: ನೆಗೆ, ಹಾರು; ಸೂಸು: ಎರಚು, ಚಲ್ಲು; ದೆಸೆ: ದಿಕ್ಕು; ತೆಬ್ಬು: ಬಿಲ್ಲಿನ ತಿರುವು; ಬೆಳ್ಳಾರವಲೆ: ಒಂದು ಬಗೆಯ ಬಲೆ; ಹರಿ:ದಾಳಿ ಮಾಡು, ಮುತ್ತಿಗೆ ಹಾಕು; ಉಬ್ಬು: ಮೇಲೇಳು; ವೇಡೆ: ಬಲೆ, ಜಾಲ; ಹಬ್ಬ: ಸಂಭ್ರಮ; ಅಗಣಿತ: ಅಸಂಖ್ಯಾತ; ಮೃಗ: ಪ್ರಾಣಿ; ನಿಪಾತ: ಸಾವು, ಪತನ;

ಪದವಿಂಗಡಣೆ:
ಬೊಬ್ಬೆಗಳ +ಪಟಹದ +ಮೃದಂಗದ
ಸಬ್ಬಲ್+ಅಗ್ಗೆಯ+ ಸೋಹಿನಲಿ +ಸುಳಿವ್
ಅಬ್ಬರಕೆ+ ಹಿಂಡೊಡೆದು+ ಹಾಯ್ದವು +ಸೂಸಿ +ದೆಸೆದೆಸೆಗೆ
ತೆಬ್ಬಿದವು+ ಬೆಳ್ಳಾರವಲೆ+ ಹರಿದ್
ಉಬ್ಬಿ+ಹಾಯ್ದರೆ +ವೇಡೆಯವರಿಗೆ
ಹಬ್ಬವಾಯ್ತ್+ಏನೆಂಬೆನ್+ಅಗಣಿತ+ ಮೃಗ+ನಿಪಾತನವು

ಅಚ್ಚರಿ:
(೧) ಪಟಹ, ಮೃದಂಗ, ಸಬ್ಬಲ – ವಾದ್ಯಗಳ ಹೆಸರು
(೨) ಬೇಟೆಗಾರರಿಗೆ ಹೆಚ್ಚಿನ ಪ್ರಾಣಿಗಳು ಸಿಕ್ಕವು ಎಂದು ಹೇಳುವ ಪರಿ – ವೇಡೆಯವರಿಗೆ
ಹಬ್ಬವಾಯ್ತೇನೆಂಬೆನಗಣಿತ ಮೃಗನಿಪಾತನವು

ನಿಮ್ಮ ಟಿಪ್ಪಣಿ ಬರೆಯಿರಿ